ಬುಮ್ರಾ, ಹಾರ್ದಿಕ್ ಮಾರಕ ಬೌಲಿಂಗ್ ದಾಳಿ; ಐರ್ಲೆಂಡ್ ವಿರುದ್ಧ ಸತತ 8ನೇ ಗೆಲುವು ದಾಖಲಿಸಿದ ಭಾರತ
India vs Ireland Higlights: ಟೀಮ್ ಇಂಡಿಯಾ ತನ್ನ ಆರಂಭಿಕ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಭಿಯಾನ ಆರಂಭಿಸಿದೆ.

ಬಹುನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲೇ ಭಾರತ ತಂಡ ಸುಲಭ ಗೆಲುವು ದಾಖಲಿಸಿದೆ. ಕಳಪೆ ಪಿಚ್ನಲ್ಲಿ ಕ್ರಿಕೆಟ್ ಶಿಶು ಐರ್ಲೆಂಡ್ ತಂಡಕ್ಕೆ ಆಘಾತವಿಕ್ಕಿದ ಟೀಮ್ ಇಂಡಿಯಾ, ಮಿನಿ ಸಮರದಲ್ಲಿ ಗೆಲುವಿನ ಅಭಿಯಾನ ಆರಂಭಿಸಿದೆ. ಬೌಲರ್ಗಳ ಮಾರಕ ದಾಳಿಯ ಮುಂದೆ ಮಂಕಾದ ಐರಿಷ್ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು. 8 ವಿಕೆಟ್ಗಳ ಅಂತರದಿಂದ ಸೋತ ಐರಿಷ್ ತಂಡವು ಸೋಲಿನೊಂದಿಗೆ ಟೂರ್ನಿ ಪ್ರಾರಂಭಿಸಿತು. ಒಟ್ಟಾರೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಐರ್ಲೆಂಡ್ ವಿರುದ್ಧ ಭಾರತ ಸತತ 8ನೇ ಗೆಲುವು ಸಾಧಿಸಿತು.
ನ್ಯೂಯಾರ್ಕ್ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ಪರ ಏಕೈಕ ಬ್ಯಾಟರ್ ಮಾತ್ರ 20 ರನ್ಗಳ ಗಡಿ ದಾಟಿದ್ದಾರೆ. ಇತ್ತ ತಂಡ ಮೂರಂಕಿ ದಾಟಲು ವಿಫಲವಾಯಿತು. ನಿಧಾನಗತಿಯ ಪಿಚ್ನಲ್ಲಿ ಭಾರತೀಯ ಬೌಲರ್ಗಳು ಪಾರಮ್ಯ ಮೆರೆದರೆ, ಐರ್ಲೆಂಡ್ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು. 16 ಓವರ್ಗಳಲ್ಲಿ 96 ರನ್ಗಳಿಗೆ ಆಲೌಟ್ ಆಯಿತು. ನಿಧಾನವಾಗಿ ಆಡಿದ್ದರೆ ಉಳಿದ 4 ಓವರ್ಗಳಲ್ಲಿ 25-30 ರನ್ ಗಳಿಸುವ ಅವಕಾಶ ಇತ್ತು.
ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ, ಆರಂಭದಲ್ಲೇ ವಿರಾಟ್ ಕೊಹ್ಲಿ ಅವರನ್ನು ಕಳೆದುಕೊಂಡಿತು. ಭಾರಿ ನಿರೀಕ್ಷೆ ಹುಟ್ಟಿಸಿದ್ದ ಕೊಹ್ಲಿ 5 ಎಸೆತಗಳಲ್ಲಿ ಕೇವಲ 1 ರನ್ನಷ್ಟೇ ಸಿಡಿಸಿ ನಿರಾಸೆ ಮೂಡಿಸಿದರು. ಆ ಬಳಿಕ ರೋಹಿತ್ ಶರ್ಮಾ ಮತ್ತು ರಿಷಭ್ ಪಂತ್ ಉತ್ತಮ ಪ್ರದರ್ಶನ ತೋರಿಸಿದರು. ಸ್ಲೋ ಪಿಚ್ನಲ್ಲಿ ಅತ್ಯುತ್ತಮ ಜವಾಬ್ದಾರಿಯುತ ಆಟವಾಡಿದ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕ ಸಿಡಿಸಿದರು. ಮತ್ತೊಂದೆಡೆ ರಿಷಭ್ ಪಂತ್ ಉತ್ತಮ ಸಾಥ್ ನೀಡಿದರು.
ರೋಹಿತ್ ಶರ್ಮಾ 36 ಎಸೆತಗಳಲ್ಲಿ 50ರ ಗಡಿ ದಾಟಿದರು. ಆದರೆ ಭುಜದ ಗಾಯದ ಸಮಸ್ಯೆಗೆ ಸಿಲುಕಿ ರಿಟೈರ್ಡ್ ಹರ್ಟ್ ಆದರು. ಅಲ್ಲದೆ, ರೋಹಿತ್-ಪಂತ್ ಅರ್ಧಶತಕದ ಜೊತೆಯಾಟವನ್ನೂ ಆಡಿದರು. ರಿಟೈರ್ಡ್ ಹರ್ಟ್ ಆದರೂ ಅದಾಗಲೇ ಗೆಲುವು ಭಾರತದ ಪರ ವಾಲಿತ್ತು. ಆದರೆ ಈ ವೇಳೆ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ 2 ರನ್ ಗಳಿಸಲಷ್ಟೇ ಶಕ್ತವಾದರು. ಈ ವೇಳೆ ಭಾರತದ ಗೆಲುವಿಗೆ 6 ರನ್ ಬೇಕಿತ್ತು. ಆಗ ಪಂತ್ ಸಿಕ್ಸರ್ ಸಿಡಿಸಿ ಗೆಲುವು ತಂದುಕೊಟ್ಟರು. ಇನ್ನೂ 46 ಎಸೆತಗಳು ಬಾಕಿ ಉಳಿಸಿಯೇ ಭಾರತ ಗೆದ್ದು ಬೀಗಿದೆ. ಪಂತ್ ಅಜೇಯ 36 ರನ್ ಸಿಡಿಸಿದರು.
ವೇಗದ ಬೌಲರ್ಗಳು ಮಿಂಚು
ಮೊದಲು ಬ್ಯಾಟಿಂಗ್ ಆರಂಭಿಸಿದ ಐರ್ಲೆಂಡ್, ಬಲಿಷ್ಠ ಟೀಮ್ ಇಂಡಿಯಾಗೆ ಬೃಹತ್ ಗುರಿ ನೀಡುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಿತು. ಆದರೆ, ನಿಧಾನಗತಿಯ ಪಿಚ್ನಲ್ಲಿ ಐರ್ಲೆಂಡ್ ಬ್ಯಾಟರ್ಗಳ ಆಟ ನಡೆಯಲಿಲ್ಲ. ಟೀಮ್ ಇಂಡಿಯಾ ಬೌಲರ್ಗಳು ಆರಂಭದಿಂದಲೇ ತಮ್ಮ ಪ್ರಾಬಲ್ಯ ಮುಂದುವರೆಸಿದರು. ಆಕ್ರಮಣಕಾರಿ ಬ್ಯಾಟರ್ಗಳಾದ ಪಾಲ್ ಸ್ಟಿರ್ಲಿಂಗ್ (2) ಮತ್ತು ಆಂಡ್ರೂ ಬಾಲ್ಬಿರ್ನಿ (5) ಅವರನ್ನು ಒಂದೇ ಓವರ್ನಲ್ಲಿ ಅರ್ಷದೀಪ್ ಸಿಂಗ್ ಹೊರಹಾಕಿದರು. ಆರಂಭಿಕ ಆಘಾತದ ನಂತರವೂ ಚೇತರಿಕೆ ಕಾಣದ ಐರ್ಲೆಂಡ್, ಸತತ ವಿಕೆಟ್ ಕಳೆದುಕೊಂಡಿತು.
ಅರ್ಷದೀಪ್ ಬಳಿಕ ದಾಳಿಗಿಳಿದ ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮಿಂಚಿನ ಬೌಲಿಂಗ್ ನಡೆಸಿದರು. ಲೋರ್ಕನ್ ಟಕರ್ (10), ಕರ್ಟಿಸ್ ಕ್ಯಾಂಫರ್ (12) ಮತ್ತು ಮಾರ್ಕ್ ಅಡೇರ್ (3) ಅವರಿಗೆ ಹಾರ್ದಿಕ್ ಗೇಟ್ ಪಾಸ್ ನೀಡಿದರು. ಹ್ಯಾರಿ ಟೆಕ್ಟರ್ (4) ಮತ್ತು ಜೋಶುವಾ ಲಿಟಲ್ (12) ಅವರನ್ನು ಬುಮ್ರಾ ಔಟ್ ಮಾಡಿದರು. ಈ ಮಧ್ಯೆ ಬ್ಯಾರಿ ಮೆಕಾರ್ಥಿ (0), ಜಾರ್ಜ್ ಡಾಕ್ರೆಲ್ (3) ಅವರನ್ನು ಕ್ರಮವಾಗಿ ಅಕ್ಷರ್ ಪಟೇಲ್ ಮತ್ತು ಸಿರಾಜ್ ಔಟ್ ಮಾಡಿದರು. ಆದರೆ ಕೊನೆಯಲ್ಲಿ ಗೆರಾಥ್ ಡೆಲಾನಿ ಕೊನೆಯಲ್ಲಿ ಮಿಂಚಿದರು. 14 ಎಸೆತಗಳಲ್ಲಿ 2 ಸಿಕ್ಸರ್, 2 ಬೌಂಡರಿ ಸಹಿತ 26 ರನ್ ಬಾರಿಸಿದರು.