ಆಸೀಸ್ ವಿರುದ್ಧ ಪಾಕ್​ಗೆ 360 ರನ್​ಗಳ ಹೀನಾಯ ಸೋಲು; ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಭಾರತ
ಕನ್ನಡ ಸುದ್ದಿ  /  ಕ್ರಿಕೆಟ್  /  ಆಸೀಸ್ ವಿರುದ್ಧ ಪಾಕ್​ಗೆ 360 ರನ್​ಗಳ ಹೀನಾಯ ಸೋಲು; ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಭಾರತ

ಆಸೀಸ್ ವಿರುದ್ಧ ಪಾಕ್​ಗೆ 360 ರನ್​ಗಳ ಹೀನಾಯ ಸೋಲು; ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಭಾರತ

Australia vs Pakistan 1st Test: ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 360 ರನ್​ಗಳ ಭರ್ಜರಿ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1-0ರಲ್ಲಿ ಮುನ್ನಡೆ ಸಾಧಿಸಿದೆ.

ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ತಂಡಕ್ಕೆ ಭರ್ಜರಿ ಜಯ.
ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ತಂಡಕ್ಕೆ ಭರ್ಜರಿ ಜಯ.

ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಮೊದಲ ಟೆಸ್ಟ್​ ಪಂದ್ಯ 4ನೇ ದಿನಕ್ಕೆ (Australia vs Pakistan 1st Test) ಮುಕ್ತಾಯಗೊಂಡಿದೆ. ಪರ್ತ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ ಪ್ರವಾಸಿ ಪಾಕ್, 360 ರನ್​ಗಳ ಅಂತರದಿಂದ ಹೀನಾಯ ಸೋಲಿಗೆ ಶರಣಾಗಿದೆ. ಇದರೊಂದಿಗೆ 3 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಆಸೀಸ್​ 1-0ರಲ್ಲಿ ಮುನ್ನಡೆ ಸಾಧಿಸಿದೆ. ಡೇವಿಡ್ ವಾರ್ನರ್​ ಭರ್ಜರಿ ಶತಕ (164) ಮತ್ತು ಮಿಚೆಲ್ ಮಾರ್ಷ್​ ಖಡಕ್ ಆಲ್​ರೌಂಡ್​ ಪ್ರದರ್ಶನದಿಂದ ಪಾಕಿಸ್ತಾನ, ಘೋರ ಪರಾಭವಗೊಂಡಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್​​ನಲ್ಲಿ 487 ರನ್​ಗಳ ಬೃಹತ್ ಮೊತ್ತ ಕಲೆ ಹಾಕಿತು. ಇದಕ್ಕೆ ಉತ್ತರವಾಗಿ ಪ್ರಥಮ ಇನ್ನಿಂಗ್ಸ್​​​ನಲ್ಲಿ ಪಾಕಿಸ್ತಾನ 271 ರನ್​ಗಳಿಗೆ ಸರ್ವಪತನ ಕಂಡಿತು. 216 ರನ್​ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್​ ಆರಂಭಿಸಿದ ಆಸೀಸ್, 5 ವಿಕೆಟ್ ನಷ್ಟಕ್ಕೆ 233 ರನ್ ಕಲೆ ಹಾಕಿ ಡಿಕ್ಲೇರ್​ ಘೋಷಿಸಿತು. ಹಾಗಾಗಿ, 450 ರನ್​ಗಳ ಬೃಹತ್ ಗುರಿ ಪಡೆದ ಪಾಕ್​, ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 89ಕ್ಕೆ ಆಲೌಟ್​​ ಆಗಿ 360 ರನ್​ಗಳಿಂದ ಶರಣಾಯಿತು.

ಮಿಚೆಲ್ ಮಾರ್ಷ್ ಆಲ್​ರೌಂಡ್ ಆಟ

ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಮಿಂಚಿದ ಮಿಚೆಲ್ ಮಾರ್ಷ್, ಪಾಕ್ ಪಾಲಿಗೆ ಮುಳುವಾದರು. ಮೊದಲ ಇನ್ನಿಂಗ್ಸ್​​ನಲ್ಲಿ 90 ರನ್ ಗಳಿಸಿ 1 ವಿಕೆಟ್ ಉರುಳಿಸಿದ್ದ ಮಾರ್ಷ್, ಎರಡನೇ ಇನ್ನಿಂಗ್ಸ್​​ನಲ್ಲಿ ಅಜೇಯ 63 ರನ್ ಚಚ್ಚಿದರು. ಅವರ ಈ ಅದ್ಭುತ ಆಟಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂತು. ಮಾರ್ಷ್ ಮಾತ್ರವಲ್ಲ, ವಾರ್ನರ್ 164 ರನ್​ಗಳ ಶತಕದ ಇನ್ನಿಂಗ್ಸ್​​ ಕೂಡ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಉಸ್ಮಾನ್ ಖವಾಜ 2ನೇ ಇನ್ನಿಂಗ್ಸ್​ 90 ರನ್ ಗಳಿಸಿ ಶತಕ ವಂಚಿರಾದರು.

ಬಾಬರ್​ ಅಜಮ್ ಕಳಪೆಯಾಟ

ಏಕದಿನ ವಿಶ್ವಕಪ್​ನಲ್ಲಿ ನಾಯಕನಾಗಿ ಮತ್ತು ಬ್ಯಾಟ್ಸ್​​​ಮನ್​ ಆಗಿ ಕಳಪೆ ಪ್ರದರ್ಶನ ನೀಡಿದ ಬಾಬರ್​ ಅಜಮ್, ಟೂರ್ನಿ ಮುಗಿದ ಕೆಲವೇ ದಿನಗಳಲ್ಲಿ 3 ಮಾದರಿ ನಾಯಕತ್ವ ತ್ಯಜಿಸಿದರು. ಹಾಗಾಗಿ ಕ್ಯಾಪ್ಟನ್ಸಿಯ ಒತ್ತಡ ಇಲ್ಲದೆ, ಮುಕ್ತವಾಗಿ ಬ್ಯಾಟಿಂಗ್ ನಡೆಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವರು ಎರಡೂ ಇನ್ನಿಂಗ್ಸ್​ಗಳಲ್ಲಿ ಕ್ರಮವಾಗಿ 21 ಮತ್ತು 14 ರನ್ ಗಳಿಸಿ ನಿರಾಸೆ ಮೂಡಿಸಿದರು. ಅಲ್ಲದೆ, ಶಾನ್ ಮಸೂದ್ ನಾಯಕತ್ವದ ಮೊದಲ ಪಂದ್ಯದಲ್ಲೇ ಪಾಕ್​ ಮುಗ್ಗರಿಸಿದೆ.

ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಭಾರತ

ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಅಂಕಪಟ್ಟಿಯಲ್ಲಿ ಶೇಕಡವಾರು 41.67 ಗೆಲುವಿನೊಂದಿಗೆ 5ನೇ ಸ್ಥಾನದಲ್ಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಅಗ್ರಸ್ಥಾನದಲ್ಲಿದ್ದ ಪಾಕಿಸ್ತಾನ, ಸೋತ ಬಳಿಕ ಎರಡನೇ ಸ್ಥಾನಕ್ಕೆ ಕುಸಿದಿದೆ. ಇದರಿಂದ ಟೀಮ್ ಇಂಡಿಯಾ ಅಗ್ರಸ್ಥಾನಕ್ಕೆ ಪ್ರವೇಶಿಸಿದೆ. ಪಾಕ್ ಆಡಿದ 3 ಟೆಸ್ಟ್​ಗಳಲ್ಲಿ 2 ಗೆಲುವು 1 ಸೋಲಿನೊಂದಿಗೆ 66.67ರಷ್ಟು ಗೆಲುವಿನ ಶೇಕಡದೊಂದಿಗೆ 2ನೇ ಸ್ಥಾನದಲ್ಲಿದೆ.

ಆದರೆ ಭಾರತ 2 ಟೆಸ್ಟ್​ಗಳಲ್ಲಿ 1 ಗೆಲುವು, 1 ಡ್ರಾನೊಂದಿಗೆ 66.67ರಷ್ಟು ಗೆಲುವಿನ ಶೇಕಡ ಪಡೆದು ಮೊದಲ ಸ್ಥಾನಕ್ಕೆ ಜಿಗಿತ ಕಂಡಿದೆ. ಎರಡೂ ತಂಡಗಳು ಒಂದೇ ಶೇಕಡವಾರು ಅಂಕಿ ಪಡದಿದ್ದರೂ ಭಾರತ ಸೋಲದ ಕಾರಣ ಮೊದಲ ಸ್ಥಾನಕ್ಕೇರಿದೆ. ಸದ್ಯ ಭಾರತ ತಂಡ ಡಿಸೆಂಬರ್ 26ರಿಂದ ಸೌತ್ ಆಫ್ರಿಕಾ ಎದುರು ಎರಡು ಪಂದ್ಯಗಳ ಟೆಸ್ಟ್​ ಸರಣಿಯನ್ನು ಆಡಲಿದೆ. ಇಲ್ಲೂ ಗೆದ್ದರೆ ಭಾರತ ಅಗ್ರಸ್ಥಾನದಲ್ಲಿ ಮುಂದುವರಿಯಲಿದೆ.

Whats_app_banner