ಅನಾನುಭವಿ ಬೌಲರ್ಸ್ ಎದುರು ತತ್ತರಿಸಿದ ಘಟಾನುಘಟಿ ಬ್ಯಾಟರ್ಸ್; ಭಾರತದ ವಿರುದ್ಧ ಸೌತ್ ಆಫ್ರಿಕಾ 116ಕ್ಕೆ ಆಲೌಟ್
ಕನ್ನಡ ಸುದ್ದಿ  /  ಕ್ರಿಕೆಟ್  /  ಅನಾನುಭವಿ ಬೌಲರ್ಸ್ ಎದುರು ತತ್ತರಿಸಿದ ಘಟಾನುಘಟಿ ಬ್ಯಾಟರ್ಸ್; ಭಾರತದ ವಿರುದ್ಧ ಸೌತ್ ಆಫ್ರಿಕಾ 116ಕ್ಕೆ ಆಲೌಟ್

ಅನಾನುಭವಿ ಬೌಲರ್ಸ್ ಎದುರು ತತ್ತರಿಸಿದ ಘಟಾನುಘಟಿ ಬ್ಯಾಟರ್ಸ್; ಭಾರತದ ವಿರುದ್ಧ ಸೌತ್ ಆಫ್ರಿಕಾ 116ಕ್ಕೆ ಆಲೌಟ್

India vs South Africa 1st ODI: ಬ್ಯಾಟಿಂಗ್​​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಸೌತ್ ಆಫ್ರಿಕಾ, ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 117 ರನ್​ಗಳ ಅಲ್ಪ ಮೊತ್ತಕ್ಕೆ ಕುಸಿತ ಕಂಡಿದೆ.

ಅರ್ಷದೀಪ್ ಸಿಂಗ್ ವಿಕೆಟ್ ಪಡೆದ ಸಂದರ್ಭ.
ಅರ್ಷದೀಪ್ ಸಿಂಗ್ ವಿಕೆಟ್ ಪಡೆದ ಸಂದರ್ಭ. (BCCI)

ಜೋಹಾನ್ಸ್​ಬರ್ಗ್​ನ ನ್ಯೂ ವಾಂಡರರ್ಸ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತೀಯ ಬೌಲರ್​​ಗಳ ದಾಳಿಗೆ ದಕ್ಷಿಣ ಆಫ್ರಿಕಾ ಅಕ್ಷರಶಃ ನಲುಗಿತು. ಅನಾನುಭವಿ ವೇಗಿಗಳಾದ ಅರ್ಷದೀಪ್ ಸಿಂಗ್ ಮತ್ತು ಆವೇಶ್ ಖಾನ್ ಬೌಲಿಂಗ್ ದಾಳಿಗೆ ಬಹುತೇಕ ಅನುಭವಿ ಬ್ಯಾಟರ್​​ಗಳಿಂದಲೇ ತುಂಬಿದ್ದ ಆಫ್ರಿಕಾ ತತ್ತರಿಸಿತು. ಇದರೊಂದಿಗೆ ಬಹುನಿರೀಕ್ಷಿತ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿತ ಕಂಡಿದ್ದು, ಟೀಮ್ ಇಂಡಿಯಾಗೆ 117 ರನ್​ಗಳ ಗುರಿ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ, ಬೃಹತ್ ಮೊತ್ತ ಕಲೆ ಹಾಕುವ ಗುರಿಯೊಂದಿಗೆ ಕಣಕ್ಕಿಳಿಯಿತು. ಆದರೆ ಭಾರತದ ಬೌಲರ್​​ಗಳು ಹರಿಣಗಳ ಲೆಕ್ಕಾಚಾರ ತಲೆಕೆಳಗೆ ಮಾಡಿಬಿಟ್ಟರು. ಆರಂಭಿಕ ಓವರ್​​ನಿಂದಲೇ ಮಾರಕ ಬೌಲಿಂಗ್ ನಡೆಸಿ ಆಫ್ರಿಕನ್ನರನ್ನು ಕಟ್ಟಿ ಹಾಕಿದರು. ಘಟಾನುಘಟಿ ಬ್ಯಾಟರ್​​ಗಳೇ ಅನಾನುಭವಿ ಬೌಲರ್​​ಗಳ ದಾಳಿ ಎದುರಿಸಲು ಪರದಾಡಿ ಪೆವಿಲಿಯನ್ ಪರೇಡ್ ನಡೆಸಿದರು.

ಕುಸಿತಕ್ಕೆ ಕಾರಣರಾದ ಅರ್ಷದೀಪ್​ಗೆ 5 ವಿಕೆಟ್

ವೇಗಿ ಅರ್ಷದೀಪ್ ಇನ್ನಿಂಗ್ಸ್​​ 2ನೇ ಓವರ್​ನ 4ನೇ ಎಸೆತದಲ್ಲೇ ರೀಜಾ ಹೆಂಡ್ರಿಕ್ಸ್​ರನ್ನು ಕ್ಲೀನ್​ ಬೋಲ್ಡ್ ಮಾಡಿ ಭಾರತಕ್ಕೆ ಮುನ್ನಡೆ ತಂದರು. ಇದರ ಮರು ಎಸೆತದಲ್ಲೇ ವಾನ್ ಡರ್ ಡುಸೆನ್ ಅವರನ್ನು ಎಲ್​​ಬಿಡಬ್ಲ್ಯು ಬಲೆಗೆ ಕೆಡವಿ ಶೂನ್ಯಕ್ಕೆ ಔಟ್ ಮಾಡಿದರು. ಆರಂಭಿಕ ಡಬಲ್ ಆಘಾತ ಅನುಭವಿಸಿದ್ದ ಆಫ್ರಿಕಾಗೆ ಆಸರೆಯಾಗುತ್ತಿದ್ದ ಟೋನಿ ಡಿ ಜೋರ್ಜಿ 28 ರನ್​ಗಳಿಸಿ ಅರ್ಷದೀಪ್​ ಬೌಲಿಂಗ್​ನಲ್ಲಿ ಹೊರ ನಡೆದರು.

8ನೇ ಓವರ್​​​ನಲ್ಲಿ ದಾಳಿಗಿಳಿದು ಆಫ್ರಿಕಾಗೆ ಮತ್ತೊಮ್ಮೆ ಆಘಾತ ಕೊಟ್ಟರು. ಆ ಬಳಿಕ ಹೆನ್ರಿಚ್ ಕ್ಲಾಸೆನ್ ಕೇವಲ 6 ರನ್ ಗಳಿಸಿ ನಿರ್ಗಮಿಸಿದರು. ಇದರೊಂದಿಗೆ ಆಫ್ರಿಕಾ ಸಂಕಷ್ಟಕ್ಕೆ ಸಿಲುಕಿತು. ಕೇವಲ 52 ರನ್​ಗಳಲ್ಲಿ ಪ್ರಮುಖ 4 ವಿಕೆಟ್​ಗಳನ್ನು ಕಳೆದುಕೊಂಡಿತು. ಅರ್ಷದೀಪ್ ಬಳಿಕ ಕಣಕ್ಕಿಳಿದ ಅವೇಶ್​ ಖಾನ್ ಮತ್ತೆ ಬಿಗಿ ದಾಳಿ ನಡೆಸಿ ತಂಡಕ್ಕೆ ಮೇಲುಗೈ ತಂದರು. ಅಲ್ಲದೆ, ಕೊನೆಯಲ್ಲೂ ವಿಕೆಟ್ ಉರುಳಿಸಿದರು.

ಆವೇಶ್ ಖಾನ್ ಅಬ್ಬರದ ಬೌಲಿಂಗ್​

ಸಂಕಷ್ಟದಲ್ಲಿದ್ದ ವೇಳೆ ಬ್ಯಾಟಿಂಗ್ ನಡೆಸುತ್ತಿದ್ದ ನಾಯಕ ಮಾರ್ಕ್ರಮ್ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. 12 ರನ್ ಗಳಿಸಿ ಆವೇಶ್​ಗೆ ಕ್ಲೀನ್ ಬೋಲ್ಡ್ ಆದರು. ಮಾರ್ಕ್ರಮ್ ಔಟಾದ ಮರು ಎಸೆತದಲ್ಲೇ ವಿಯಾನ್ ಮುಲ್ಡರ್ (0), ಎಲ್​ಬಿ ಬಲೆಗೆ ಬಿದ್ದರು. ಅಲ್ಲದೆ, ಡೇವಿಡ್ ಮಿಲ್ಲರ್ 2, ಕೇಶವ್ ಮಹಾರಾಜ್ ಸಹ 4 ರನ್ ಗಳಿಸಿ ಆವೇಶ್​ಗೆ 3 ಮತ್ತು 4ನೇ ಬಲಿಯಾದರು. ಇದರೊಂದಿಗೆ 73 ರನ್​ಗಳಿಗೆ 8 ವಿಕೆಟ್​ ಕಳೆದುಕೊಂಡಿತು.

116 ರನ್​ಗಳಿಗೆ ಆಲೌಟ್

8 ವಿಕೆಟ್​ ಪತನಗೊಂಡಿದ್ದ ವೇಳೆ ಕೊನೆಯಲ್ಲಿ ಮಿಂಚಿದ ಆಂಡಿಲೆ ಫೆಹ್ಲುಕ್ವಾಯೊ 49 ಎಸೆತಗಳಲ್ಲಿ 33 ರನ್ ಸಿಡಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಈ ವೇಳೆ ದಾಳಿ ನಡೆಸಿದ ಅರ್ಷದೀಪ್, ಫೆಹ್ಲುಕ್ವಾಯೊಗೆ ಗೇಟ್ ಪಾಸ್ ನೀಡಿ 5ನೇ ವಿಕೆಟ್ ಪಡೆದರು. ಕೊನೆಯಲ್ಲಿ ಕುಲ್ದೀಪ್ ಯಾದವ್, ಬರ್ಗರ್ ಅವರನ್ನು ಬೋಲ್ಡ್ ಮಾಡಿದರು. ಪರಿಣಾಮ ಸೌತ್ ಆಫ್ರಿಕಾ 27.3 ಓವರ್​​ಗಳಲ್ಲಿ 116 ರನ್​ಗಳಿಗೆ ಆಲೌಟ್​ ಆಯಿತು. ಅರ್ಷದೀಪ್ 10 ಓವರ್​ಗಳಲ್ಲಿ 37 ರನ್ ನೀಡಿ 5 ವಿಕೆಟ್ ಪಡೆದರು. ಆವೇಶ್ 8 ಓವರ್​​ಗಳಲ್ಲಿ 27 ರನ್ ನೀಡಿ 4 ವಿಕೆಟ್ ಉರುಳಿಸಿದರು.

Whats_app_banner