ಅಂದು ಬ್ಯೂನಸ್ ಐರಿಸ್, ಇಂದು ಮುಂಬೈ; ಅರ್ಜೆಂಟೀನಾ ಫಿಫಾ ವಿಶ್ವಕಪ್ ಗೆಲುವಿನ ಐತಿಹಾಸಿಕ ಸಂಭ್ರಮ ನೆನಪಿಸಿದ ಭಾರತ ತಂಡ
ಕನ್ನಡ ಸುದ್ದಿ  /  ಕ್ರಿಕೆಟ್  /  ಅಂದು ಬ್ಯೂನಸ್ ಐರಿಸ್, ಇಂದು ಮುಂಬೈ; ಅರ್ಜೆಂಟೀನಾ ಫಿಫಾ ವಿಶ್ವಕಪ್ ಗೆಲುವಿನ ಐತಿಹಾಸಿಕ ಸಂಭ್ರಮ ನೆನಪಿಸಿದ ಭಾರತ ತಂಡ

ಅಂದು ಬ್ಯೂನಸ್ ಐರಿಸ್, ಇಂದು ಮುಂಬೈ; ಅರ್ಜೆಂಟೀನಾ ಫಿಫಾ ವಿಶ್ವಕಪ್ ಗೆಲುವಿನ ಐತಿಹಾಸಿಕ ಸಂಭ್ರಮ ನೆನಪಿಸಿದ ಭಾರತ ತಂಡ

ಭಾರತ ಟಿ20 ವಿಶ್ವಕಪ್‌ ಗೆಲುವಿನ ಸಂಭ್ರಮವನ್ನು ಮುಂಬೈ ಜನರು ಅದ್ಧೂರಿಯಾಗಿ ಆಚರಿಸಿದ್ದಾರೆ. ಮರೈನ್‌ ಡ್ರೈವ್‌ನಲ್ಲಿ ಭಾರತದ ವಿಜಯ ಯಾತ್ರೆಗೆ ಸಾವಿರಾರು ಸೇರಿದ್ದರು. ಈ ಸಂಭ್ರಮವು ಅರ್ಜೆಂಟೀನಾ ಫುಟ್ಬಾಲ್‌ ತಂಡದ ಫಿಫಾ ವಿಶ್ವಕಪ್‌ ಗೆಲುವಿನ ಸಂಭ್ರಮನ್ನು ನೆನಪಿಸಿತು.

ಅರ್ಜೆಂಟೀನಾ ಫಿಫಾ ವಿಶ್ವಕಪ್ ಗೆಲುವಿನ ಐತಿಹಾಸಿಕ ಸಂಭ್ರಮ ನೆನಪಿಸಿದ ಭಾರತ ತಂಡ
ಅರ್ಜೆಂಟೀನಾ ಫಿಫಾ ವಿಶ್ವಕಪ್ ಗೆಲುವಿನ ಐತಿಹಾಸಿಕ ಸಂಭ್ರಮ ನೆನಪಿಸಿದ ಭಾರತ ತಂಡ (Reuters, X)

ಇದು ಅನಿರೀಕ್ಷಿತವಂತೂ ಅಲ್ಲವೇ ಅಲ್ಲ. ಭಾರತ ಕ್ರಿಕೆಟ್ ತಂಡ ವಿಶ್ವಚಾಂಪಿಯನ್ ಆಗಿರುವುದಕ್ಕೆ ವಿಶ್ವವೇ ಹೆಮ್ಮೆ ಪಟ್ಟಿದೆ. ಇನ್ನು ಭಾರತೀಯರ ಸಂಭ್ರಮ ಹೇಗಿರಬೇಡ? ಭಾರತದ ವಾಣಿಜ್ಯ ನಗರಿ ಮುಂಬೈನ ಮರೈನ್‌ ಡ್ರೈವ್‌ ಬೀದಿಯಲ್ಲಿ ಗುರುವಾರ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಫ್ಯಾನ್ಸ್, ವಿಶ್ವವಿಜೇತರನ್ನು ಅದ್ಧೂರಿಯಾಗಿ ಸ್ವಾಗತಿಸಿ ಸಂಭ್ರಮದಲ್ಲಿ ಮಿಂದೆದ್ದರು. ಮುಂಬೈ ನಗರದ ಬೀದಿಯು ಪಕ್ಷಿನೋಟಕ್ಕೆ ಜೇನುಗೂಡಿನಂತೆ ಕಾಣುತ್ತಿತ್ತು. ಈ ದೃಶ್ಯಗಳು 2022ರಲ್ಲಿ ಅರ್ಜೆಂಟೀನಾದ ಸಂಭ್ರಮವನ್ನು ನೆನಪಿಸಿತು. ಭಾರತದ ಟಿ20 ವಿಶ್ವಕಪ್ ವಿಜಯದ ಆಚರಣೆಯು, 2022ರಲ್ಲಿ ಫಿಫಾ ವಿಶ್ವಕಪ್ ಗೆದ್ದ ಅರ್ಜೆಂಟೀನಾ ಸಂಭ್ರಮಾಚರಣೆಯ ದೃಶ್ಯವೇ ಮರುಕಳಿಸಿದಂತಿದೆ. ಅದಕ್ಕೆ ಈ ದೃಶ್ಯಗಳೇ ಸಾಕ್ಷಿಯಾಗಿದೆ.

2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ, ಬರೋಬ್ಬರಿ 11 ವರ್ಷಗಳ ಬಳಿಕ ಭಾರತ ತಂಡ ಮೊದಲ ಐಸಿಸಿ ಪ್ರಶಸ್ತಿ ಗೆದ್ದು ಬೀಗಿತು. ಹೀಗಾಗಿ ಈ ಸಂಭ್ರಮವನ್ನು ಮುಂಬೈ ಜನರು ಅದ್ಧೂರಿಯಾಗಿ ಆಚರಿಸಿದರು. ಭಾರತದ ವಿಜಯ ಯಾತ್ರೆಗಾಗಿ ನಿಮಿಷದಿಂದ ನಿಮಿಷಕ್ಕೆ ಜನಸಂಖ್ಯೆ ಬೆಳೆಯುತ್ತಿತ್ತು. ತ್ರಿವರ್ಣ ಧ್ವಜ ಹಿಡಿದು ಸಾವಿರಾರು ಅಭಿಮಾನಿಗಳು ಜಯಘೋಷ ಮೊಳಗಿಸಿದರು. ಕಿಲೋಮೀಟರ್‌ಗಟ್ಟಲೆ ರಸ್ತೆ ತುಂಬಾ ಜನರೇ ಕಾಣಿಸಿದರು.

ನಿಮಗೆ ನೆನಪಿರಬಹುದು. 2022ರ ಡಿಸೆಂಬರ್‌ನಲ್ಲಿ ನಡೆದ ಫಿಫಾ ವಿಶ್ವಕಪ್‌ ಫೈನಲ್‌ನಲ್ಲಿ, ಫ್ರಾನ್ಸ್‌ ವಿರುದ್ಧ ರೋಚಕವಾಗಿ ಗೆದ್ದ ಅರ್ಜೆಂಟೀನಾ ವಿಶ್ವಚಾಂಪಿಯನ್‌ ಆಗಿ ಹೊರಹೊಮ್ಮಿತು. ಫುಟ್ಬಾಲ್‌ ಕ್ರೇಜ್‌ ಹೆಚ್ಚಿರುವ ಅರ್ಜೆಂಟೀನಾದಲ್ಲೂ ಅದ್ಧೂರಿ ಸಂಭ್ರಮ ಮನೆ ಮಾಡಿತ್ತು. ಭಾರತದಲ್ಲಿ ಈಗ ನಡೆಯುತ್ತಿರುವ ಸಂಭ್ರಮದಂತೆಯೇ ಅರ್ಜೆಂಟೀನಾ ರಾಜಧಾನಿ ಬ್ಯೂನಸ್ ಐರಿಸ್‌ ನಗರದ ಬೀದಿಯಲ್ಲೂ ಲಕ್ಷಾಂತರ ಅಭಿಮಾನಿಗಳು ಸೇರಿದ್ದರು. ಲಿಯೋನೆಲ್‌ ಮೆಸ್ಸಿ ಹಾಗೂ ಅವರ ತಂಡದ ವಿಜಯವನ್ನು ಇಡೀ ರಾಷ್ಟ್ರವೇ ಸಂಭ್ರಮಿಸಿತ್ತು. ಮೆಸ್ಸಿ ವಿಶ್ವಕಪ್ ಟ್ರೋಫಿ ಹಿಡಿದು ನಗರದ ಬೀದಿಗಳಲ್ಲಿ ವಿಜಯ ಯಾತ್ರ ಕೈಕೊಂಡಿದ್ದರು. ಆಗ ಬ್ಯೂನಸ್ ಐರಿಸ್‌ನಲ್ಲಿ ಕಾಣಿಸಿಕೊಂಡಿದ್ದ ದೃಶ್ಯ ಈಗ ಮುಂಬೈನಲ್ಲಿ ಕಾಣಿಸಿದೆ. ಅದು ಫುಟ್ಬಾಲ್‌ ಸಂಭ್ರಮವಾಗಿದ್ದರೆ ಇದು ಕ್ರಿಕೆಟ್‌ ವಿಜಯೋತ್ವವಾಗಿದೆ.

ಮುಂಬೈ ಬೀದಿಯಲ್ಲಿ ವಿಜಯದ ಮೆರವಣಿಗೆಯ ನಂತರ, ಮುಂಬೈನ ಐತಿಹಾಸಿಕ ವಾಂಖೆಡೆ ಸ್ಟೇಡಿಯಂನಲ್ಲಿ ತಂಡಕ್ಕೆ ಗೌರವ ಸಲ್ಲಿಕೆ ನಡೆಯಿತು. ಮೈದಾನದಲ್ಲೂ ಸಾವಿರಾರು ಅಭಿಮಾನಿಗಳು ಸೇರಿದ್ದರು. ತೆರೆದ ಬಸ್‌ನಲ್ಲಿ ಕುಳಿದ ಆಟಗಾರರು ಅಭಿಮಾನಿಗಳತ್ತ ಕೈಬೀಸಿ ವಂದಿಸಿದರು. ಎನ್‌ಸಿಪಿಎ (ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್)ನಿಂದ ವಿಜಯ ಯಾತ್ರೆ ಕೈಗೊಂಡ ಆಟಗಾರರು ವಾಂಖೆಡೆ ಸ್ಟೇಡಿಯಂವರೆಗೆ ಸುಮಾರು ಒಂದೂವರೆ ಕಿಲೋಮೀಟರ್ ಪ್ರಯಾಣಿಸಿದರು.

Whats_app_banner