ಇಂಗ್ಲೆಂಡ್ ಬಜ್ಬಾಲ್ಗೆ ಭಾರತ ಸ್ಪಿನ್ ಮಂತ್ರ; ಕುಸಿದ ತಂಡಕ್ಕೆ ರೂಟ್-ಬೈರ್‌ಸ್ಟೋ ಆಸರೆ, ಮೊದಲ ಸೆಷನ್ಗೆ 108/3
India vs England 1st Test: ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ನಡೆಯುತ್ತಿರುವ ಮೊದಲ ಟೆಸ್ಟ್ನಲ್ಲಿ ಮೊದಲ ಸೆಷನ್ ಅಂತ್ಯಗೊಂಡಿದ್ದು, ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸಮಬಲದ ಹೋರಾಟ ನಡೆಸುತ್ತಿವೆ.
ಇಂಗ್ಲೆಂಡ್ ತಂಡದ ಬಜ್ಬಾಲ್ ಕಾರ್ಯತಂತ್ರಕ್ಕೆ ಭಾರತದ ಸ್ಪಿನ್ ಮಂತ್ರ ಹಾಕಿದೆ. ಹೊಡಿಬಡಿ ಆಟಕ್ಕೆ ಮುಂದಾದ ಪ್ರವಾಸಿ ತಂಡಕ್ಕೆ ಸ್ಪಿನ್ನರ್ಗಳು ಕಡಿವಾಣ ಹಾಕಿದರು. ಉಭಯ ತಂಡಗಳು ಭೋಜನ ವಿರಾಮದ ಅಂತ್ಯಕ್ಕೆ ಸಮಬಲದ ಹೋರಾಟ ನಡೆಸಿವೆ. ವೇಗಿಗಳ ದರ್ಬಾರ್ ನಡೆಯದ ಸ್ಪಿನ್ ಟ್ರ್ಯಾಕ್ನಲ್ಲಿ ಅಶ್ವಿನ್, ಮತ್ತೆ ಮಿಂಚಿದ್ದಾರೆ.
ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, ಇನ್ನಿಂಗ್ಸ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿತು. ವೇಗಿಗಳ ಎದುರು ಪ್ರವಾಸಿ ತಂಡದ ಆರಂಭಿಕ ಆಟಗಾರರು ಬೌಂಡರಿಗಳ ಸುರಿಮಳೆಗೈದರು.
ಬ್ಯಾಟಿಂಗ್ ವೇಗಕ್ಕೆ ನಿಯಂತ್ರಣ ಹೇರಿದ ಸ್ಪಿನ್ನರ್ಸ್
ಪ್ರತಿ ಓವರ್ಗೆ 5ರ ಸರಾಸರಿಯಲ್ಲಿ ರನ್ ಕಲೆ ಹಾಕಿದ ಜಾಕ್ ಕ್ರಾವ್ಲಿ ಮತ್ತು ಬೆನ್ ಡಕೆಟ್, ಮೊದಲ ವಿಕೆಟ್ಗೆ ವೇಗವಾಗಿ 50 ರನ್ ಕಲೆ ಹಾಕಿದರು. ಆ ಬಳಿಕ ಕಣಕ್ಕಿಳಿದ ಸ್ಪಿನ್ನರ್ಗಳಾದ ಜಡೇಜಾ ಮತ್ತು ಅಶ್ವಿನ್, ವೇಗದ ಬ್ಯಾಟಿಂಗ್ಗೆ ನಿಯಂತ್ರಣ ಹೇರಿದರು. 11.5ನೇ ಓವರ್ನಲ್ಲಿ 55 ರನ್ ಗಳಿಸಿದ್ದ ಇಂಗ್ಲೆಂಡ್ ಮೊದಲ ವಿಕೆಟ್ ಕಳೆದುಕೊಂಡಿತು.
39 ಎಸೆತಗಳಲ್ಲಿ 7 ಬೌಂಡರಿ ಸಹಿತ 35 ರನ್ ಚಚ್ಚಿದ್ದ ಡಕೆಟ್, ಅಶ್ವಿನ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು. ಬಳಿಕ ಮೂರು ರನ್ಗಳ ಅಂತರದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಓಲ್ಲಿ ಪೋಪ್ ಅವರಿಗೆ ಜಡೇಜಾ ಗೇಟ್ಪಾಸ್ ನೀಡಿದರು. 1 ರನ್ ಗಳಿಸಿ ಪೋಪ್ ಔಟಾಗಿ ನಿರ್ಗಮಿಸಿದರು.
ಮತ್ತೆ ಎರಡು ರನ್ಗಳ ಅಂತರದಲ್ಲಿ ಅಶ್ವಿನ್ ಮತ್ತೊಂದು ಬಲಿ ಪಡೆದರು. ತಂಡದ ಮೊತ್ತ 60 ಆಗಿದ್ದಾಗ ಮತ್ತೊಬ್ಬ ಆರಂಭಿಕ ಆಟಗಾರ ಜಾಕ್ ಕ್ರಾವ್ಲಿ, ಅಶ್ವಿನ್ ಬೌಲಿಂಗ್ನಲ್ಲಿ ಸಿರಾಜ್ಗೆ ಕ್ಯಾಚ್ ನೀಗಿ ಹೊರ ನಡೆದರು. ಅವರು 20 ರನ್ ಗಳಿಸಿ ಔಟಾದರು. 60ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ರೂಟ್ ಮತ್ತು ಬೇರ್ಸ್ಟೋ ಆಸರೆಯಾಗುತ್ತಿದ್ದಾರೆ.
ಅಜೇಯ 48 ರನ್ಗಳ ಜೊತೆಯಾಟ
ಸತತ ವಿಕೆಟ್ಗಳ ಜೊತೆಯಾದ ಜೋ ರೂಟ್ ಮತ್ತು ಜಾನಿ ಬೈರ್‌ಸ್ಟೋ ಅವರು ಉತ್ತಮ ಇನ್ನಿಂಗ್ಸ್ ಕಟ್ಟುತ್ತಿದ್ದಾರೆ. ಈ ಜೋಡಿ ಅಜೇಯರಾಗಿದ್ದು, ಭೋಜನ ವಿರಾಮಕ್ಕೆ 77 ಎಸೆತಗಳಲ್ಲಿ 48 ರನ್ಗಳ ಪಾಲುದಾರಿಕೆ ನೀಡಿದ್ದಾರೆ. ಸದ್ಯ ಮೊದಲ ಸೆಷನ್ ಅಂತ್ಯಕ್ಕೆ ಇಂಗ್ಲೆಂಡ್ 28 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 108 ರನ್ ಕಲೆ ಹಾಕಿದೆ. ಅಶ್ವಿನ್ 2, ಜಡೇಜಾ 1 ವಿಕೆಟ್ ಪಡೆದಿದ್ದಾರೆ.
ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್
ಝಾಕ್ ಕ್ರಾಲಿ, ಬೆನ್ ಡಕೆಟ್, ಒಲ್ಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋ, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಮಾರ್ಕ್ ವುಡ್, ಜ್ಯಾಕ್ ಲೀಚ್.
ಭಾರತ ಪ್ಲೇಯಿಂಗ್ ಇಲೆವೆನ್
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಶ್ರೀಕರ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ನೇರ ಪ್ರಸಾರ
ಸ್ಪೋರ್ಟ್ಸ್ 18 ನೆಟ್ವರ್ಕ್ ಚಾನೆಲ್ನಲ್ಲಿ ನೇರ ಪ್ರಸಾರ ಇರಲಿದೆ. ಹಾಗೆಯೇ ಮೊಬೈಲ್ ಅಪ್ಲಿಕೇಷನ್ ಜಿಯೋ ಸಿನಿಮಾದಲ್ಲೂ ಲೈವ್ಸ್ಟ್ರೀಮಿಂಗ್ ನೋಡಬಹುದು.
ಉಭಯ ತಂಡಗಳ ನಡುವಿನ ಇತ್ತೀಚಿನ ಟೆಸ್ಟ್ ಫಲಿತಾಂಶ
2021ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್, ಪರಾಭವಗೊಂಡಿತ್ತು. 3-1ರಲ್ಲಿ ಸರಣಿಯನ್ನು ಭಾರತ ಗೆದ್ದುಕೊಂಡಿತ್ತು. ಇನ್ನು ಅದೇ ವರ್ಷ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ಐದು ಪಂದ್ಯಗಳನ್ನು 2-2ರಲ್ಲಿ ಡ್ರಾಗೊಳಿಸಿತ್ತು. ಇದೀಗ ನಾಯಕ ಬೆನ್ ಸ್ಟೋಕ್ಸ್ ಮತ್ತು ಕೋಚ್ ಬ್ರೆಂಡನ್ ಮೆಕಲಮ್ ಅವರ ನೇತೃತ್ವದಲ್ಲಿ ಬಜ್ಬಾಲ್ ಮೂಲಕ ಭಾರತ ತಂಡಕ್ಕೆ ಆಘಾತ ನೀಡಲು ಭರ್ಜರಿ ತಯಾರಿ ನಡೆಸಿದೆ.
ಟೆಸ್ಟ್ ಕ್ರಿಕೆಟ್ನಲ್ಲಿ ಮುಖಾಮುಖಿ ದಾಖಲೆ
ಒಟ್ಟು ಪಂದ್ಯಗಳು - 131
ಭಾರತ ಗೆಲುವು - 31
ಇಂಗ್ಲೆಂಡ್ ಗೆಲುವು - 50
ಡ್ರಾ ಪಂದ್ಯಗಳು - 50