ರಾಜಸ್ಥಾನ vs ಲಕ್ನೋ ಐಪಿಎಲ್‌ ಹಣಾಹಣಿ; ಜೈಪುರ ಪಿಚ್‌, ಹವಾಮಾನ ವರದಿ ಹಾಗೂ ಲೈವ್‌ ಸ್ಟ್ರೀಮಿಂಗ್‌ ವಿವರ-ipl 2024 rajasthan royals vs lucknow super giants weather report rr vs lsg pitch report jaipur stadium sanju samson jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ರಾಜಸ್ಥಾನ Vs ಲಕ್ನೋ ಐಪಿಎಲ್‌ ಹಣಾಹಣಿ; ಜೈಪುರ ಪಿಚ್‌, ಹವಾಮಾನ ವರದಿ ಹಾಗೂ ಲೈವ್‌ ಸ್ಟ್ರೀಮಿಂಗ್‌ ವಿವರ

ರಾಜಸ್ಥಾನ vs ಲಕ್ನೋ ಐಪಿಎಲ್‌ ಹಣಾಹಣಿ; ಜೈಪುರ ಪಿಚ್‌, ಹವಾಮಾನ ವರದಿ ಹಾಗೂ ಲೈವ್‌ ಸ್ಟ್ರೀಮಿಂಗ್‌ ವಿವರ

RR vs LSG: ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಪ್ರಸಕ್ತ ಆವೃತ್ತಿಯ ಐಪಿಎಲ್‌ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿಯುತ್ತಿವೆ. ಜೈಪುರದ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ, ಗೆಲುವಿನ ಆರಂಭಕ್ಕೆ ಉಭಯ ತಂಡಗಳು ಎದುರು ನೋಡುತ್ತಿವೆ.

ರಾಜಸ್ಥಾನ vs ಲಕ್ನೋ ಐಪಿಎಲ್‌ ಹಣಾಹಣಿ; ಜೈಪುರ ಪಿಚ್‌, ಹವಾಮಾನ ವರದಿ
ರಾಜಸ್ಥಾನ vs ಲಕ್ನೋ ಐಪಿಎಲ್‌ ಹಣಾಹಣಿ; ಜೈಪುರ ಪಿಚ್‌, ಹವಾಮಾನ ವರದಿ

ಐಪಿಎಲ್‌ 2024ರ ಪಂದ್ಯಾವಳಿಯಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (Rajasthan Royals vs Lucknow Super Giants) ತಂಡಗಳು ಮಾರ್ಚ್‌ 24ರ ಭಾನುವಾರ ತಮ್ಮ ಅಭಿಯಾನ ಆರಂಭಿಸುತ್ತಿವೆ. ರಾಜಸ್ಥಾನ ತಂಡದ ತವರು ಮೈದಾನ ಜೈಪುರದ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಈ ತಂಡಗಳು ಮುಖಾಮುಖಿಯಾಗುತ್ತಿವೆ. ಹರಾಜಿನ ನಂತರ ಉಭಯ ತಂಡಗಳು ಮತ್ತಷ್ಟು ಬಲಿಷ್ಠವಾಗಿದ್ದು, ಟೂರ್ನಿಯಲ್ಲಿ ಮೊದಲ ಗೆಲುವಿಗೆ ಹವಣಿಸುತ್ತಿವೆ. ಪ್ರಸಕ್ತ ಆವೃತ್ತಿಯ ನಾಲ್ಕನೇ ಪಂದ್ಯ ಇದಾಗಿದ್ದು, ಭಾನುವಾರದ ಡಬಲ್‌ ಹೆಡರ್‌ ಪಂದ್ಯಗಳಲ್ಲಿ ಮೊದಲ ಪಂದ್ಯವು ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ.

ಟೂರ್ನಿಯ ಆರಂಭಕ್ಕೂ ಮುನ್ನವೇ ಇಬ್ಬರು ಪ್ರಮುಖ ಬೌಲರ್‌ಗಳ ಸೇವೆಯನ್ನು ಸಂಜು ಸ್ಯಾಮ್ಸನ್‌ ನೇತೃತ್ವದ ರಾಜಸ್ಥಾನ್‌ ರಾಯಲ್ಸ್‌ ಕಳೆದುಕೊಳ್ಳಲಿದೆ. ಗಾಯದಿಂದಾಗಿ ಪ್ರಸಿದ್ಧ್ ಕೃಷ್ಣ ಟೂರ್ನಿಯಿಂದ ಹೊರಬಿದ್ದಿದ್ದು, ಆಸೀಸ್‌ ಸ್ಪಿನ್ನರ್‌ ಆಡಮ್ ಜಂಪಾ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇದು ತಂಡದ ಬೌಲಿಂಗ್‌ ಲೈನಲ್‌ ಮೇಲೆ ಪ್ರಭಾವ ಬಿದ್ದರೂ, ಅಷ್ಟೇ ಬಲಿಷ್ಠ ಬದಲಿ ಆಯ್ಕೆಗ‌ಳು ತಂಡದ ಬತ್ತಳಿಕೆಯಲ್ಲಿವೆ. ರಾಜಸ್ಥಾನವು ಕಳೆದ ಆವೃತ್ತಿಯಲ್ಲಿ ಅಂಕಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿತ್ತು. ಅತ್ತ ಕೆಎಲ್‌ ರಾಹುಲ್‌ ನೇತೃತ್ವದ ಲಕ್ನೋ ತಂಡಕ್ಕೆ ದೊಟ್ಟ ಮಟ್ಟದ ಗಾಯದ ದೊಡ್ಡ ಹೊಡೆತ ಬಿದ್ದಿಲ್ಲ. ಕಳೆದ ಆವೃತ್ತಿಯಲ್ಲಿ ಪ್ಲೇಆಫ್‌ ಹಂತಕ್ಕೆ ಪ್ರವೇಶಿಸಿದ್ದ ತಂಡವು, ಎಲಿಮಿನೇಟರ್‌ನಲ್ಲಿ ನಿರ್ಗಮಿಸಿತ್ತು.‌

ಜೈಪುರ ಪಿಚ್ ವರದಿ

ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂ ಪಿಚ್ ಬ್ಯಾಟರ್‌ಗಳಿಗೆ ನೆರವಾಗುವ ನಿರೀಕ್ಷೆ ಇದೆ. ಪಂದ್ಯವು ಮಧ್ಯಾಹ್ನದ ವೇಳೆ ನಡೆಯುತ್ತಿರುವುದರಿಂದ, ಬಿಸಿಲಿನಿಂದಾಗಿ ಇಬ್ಬನಿಯ ಸಮಸ್ಯೆ ಇರುವುದಿಲ್ಲ. ಪಿಚ್ ಒಣಗಿದ್ದಾಗ ಪಂದ್ಯದಲ್ಲಿ ಸ್ಪಿನ್ನರ್‌ಗಳು ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ.

ಇದನ್ನೂ ಓದಿ | RR vs LSG: ಆವೇಶ್‌, ಪೊವೆಲ್‌ ಪದಾರ್ಪಣೆ; ಲಕ್ನೋ ವಿರುದ್ಧದ ಪಂದ್ಯಕ್ಕೆ ರಾಜಸ್ಥಾನ್‌ ರಾಯಲ್ಸ್‌ ಸಂಭಾವ್ಯ ತಂಡ ಹೀಗಿದೆ

ಗುರಿ 200 ಇದ್ದರೂ ಅದನ್ನು ಈ ಪಿಚ್‌ನಲ್ಲಿ ಬೆನ್ನಟ್ಟುವ ಅವಕಾಶವಿದೆ. ಕಳೆದ ವರ್ಷ ರಾಜಸ್ಥಾನ ನೀಡಿದ್ದ 214 ರನ್‌ ಗುರಿಯನ್ನು ಸನ್‌ರೈಸರ್ಸ್‌ ತಂಡವು‌ ಯಶಸ್ವಿಯಾಗಿ ಕೊನೆಯ ಎಸೆತದಲ್ಲಿ ಬೆನ್ನಟ್ಟಿತ್ತು. ಒಟ್ಟಾರೆಯಾಗಿ ಈ ಮೈದಾನದಲ್ಲಿ 52 ಐಪಿಎಲ್ ಪಂದ್ಯಗಳು ನಡೆದಿದ್ದು, 34 ಪಂದ್ಯಗಳಲ್ಲಿ ಚೇಸಿಂಗ್ ಮಾಡಿದ ತಂಡವೇ ಗೆದ್ದಿದೆ.

ಹವಾಮಾನ ವರದಿ

ಪಂದ್ಯ ನಡೆಯುವ ದಿನವಾದ ಮಾರ್ಚ್ 24ರಂದು, ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ. ಪಂದ್ಯದ ಸಮಯದಲ್ಲಿ ತಾಪಮಾನವು 33 ರಿಂದ 35 ಡಿಗ್ರಿ ಸೆಲ್ಸಿಯಸ್‌ವರೆಗೆ ಇರುತ್ತದೆ. ಪಂದ್ಯಕ್ಕೆ ಯಾವುದೇ ಅಡಚಣೆಗಳಿಲ್ಲ ಎಂಬುದನ್ನು ಹವಾಮಾನ ವರದಿ ಹೇಳುತ್ತಿದೆ.

ಲೈವ್‌ ಸ್ಟ್ರೀಮಿಂಗ್‌ ವಿವರ

ಲಕ್ನೋ ಮತ್ತು ರಾಜಸ್ತಾನ ನಡುವಿನ ಪಂದಯವು ಜಿಯೋ ಸಿನಿಮಾ ಅಪ್ಲಿಕೇಶನ್‌ ಹಾಗೂ ವೆಬ್‌ಸೈಟ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು. ಟಿವಿ ಮೂಲಕ ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಯಲ್ಲಿ ಪಂದ್ಯವನ್ನು ವೀಕ್ಷಿಸಬಹುದು.

ಲಕ್ನೋ ಸೂಪರ್‌ ಜೈಂಟ್ಸ್‌ ಸಂಭಾವ್ಯ ಆಡುವ ಬಳಗ

ಕ್ವಿಂಟನ್ ಡಿ ಕಾಕ್ (ವಿಕೆಟ್‌ ಕೀಪರ್), ದೇವದತ್ ಪಡಿಕ್ಕಲ್, ದೀಪಕ್ ಹೂಡಾ, ಕೆಎಲ್ ರಾಹುಲ್ (ನಾಯಕ), ನಿಕೋಲಸ್ ಪೂರನ್, ಆಯುಷ್ ಬದೋನಿ, ಮಾರ್ಕಸ್ ಸ್ಟೋಯ್ನಿಸ್, ಕೃನಾಲ್ ಪಾಂಡ್ಯ, ನವೀನ್ ಉಲ್ ಹಕ್, ಯಶ್ ಠಾಕೂರ್, ರವಿ ಬಿಷ್ಣೋಯ್.

ರಾಜಸ್ಥಾನ್‌ ರಾಯಲ್ಸ್‌ ಸಂಭಾವ್ಯ ತಂಡ

ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆಟ್‌ ಕೀಪರ್), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ಧ್ರುವ್ ಜುರೆಲ್, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಆವೇಶ್ ಖಾನ್, ಟ್ರೆಂಟ್ ಬೋಲ್ಟ್.