ದಕ್ಷಿಣ ಆಫ್ರಿಕಾ ಟೆಸ್ಟ್‌ಗೆ ಕನ್ನಡಿಗ ಕೆಎಲ್ ರಾಹುಲ್ ವಿಕೆಟ್ ಕೀಪರ್; ಕೋಚ್ ದ್ರಾವಿಡ್ ಸ್ಪಷ್ಟನೆ
South Africa vs India 1st Test: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ಗೆ (South Africa vs India) ಕ್ಷಣಗಣನೆ ಆರಂಭವಾಗಿದೆ. ಈ ವರ್ಷದ ಜುಲೈ ತಿಂಗಳ ನಂತರ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯ ಆಡುತ್ತಿದೆ. ಡಿಸೆಂಬರ್ 26ರಂದು ಸೆಂಚುರಿಯನ್‌ನಲ್ಲಿ ಇಂಡೋ-ಆಫ್ರಿಕಾ ತಂಡಗಳು ಮುಖಾಮುಖಿಯಗುತ್ತಿದ್ದು, ಹರಿಣಗಳ ನಾಡಿನಲ್ಲಿ ಮೊದಲ ಟೆಸ್ಟ್ ಸರಣಿ ಗೆಲ್ಲುವುದೇ ಭಾರತದ ಸದ್ಯದ ಗುರಿ.
ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ಇದುವರೆಗೂ ಒಂದೇ ಒಂದು ಟೆಸ್ಟ್ ಸರಣಿ ಗೆದ್ದಿಲ್ಲ. ಸುದೀರ್ಘ 31 ವರ್ಷಗಳಿಂದ ಉಭಯ ತಂಡಗಳು ಸುದೀರ್ಘ ಸ್ವರೂಪದ ಕ್ರಿಕೆಟ್ ಆಡುತ್ತಿದ್ದರೂ, ದಕ್ಷಿಣ ಆಫ್ರಿಕಾದಲ್ಲಿ ಒಂದು ಕನಿಷ್ಠ ಒಂದು ಟೆಸ್ಟ್ ಸರಣಿ ಗೆಲ್ಲಲು ಭಾರತದಿಂದ ಸಾಧ್ಯವಾಗಿಲ್ಲ.
ಇದನ್ನೂ ಓದಿ | ಭಾರತ-ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಭೀತಿ; ಮೊದಲ 2 ದಿನ ಆಟ ನಡೆಯುವುದೇ ಅನುಮಾನ
ಮಹತ್ವದ ಸರಣಿಗೆ ಟೀಮ್ ಇಂಡಿಯಾ ಸಂಪೂರ್ಣ ಬಲದೊಂದಿಗೆ ಕಣಕ್ಕಿಳಿಯಲಿದೆ. ವಿಶ್ವಕಪ್ ಸೋಲಿನ ಬಳಿಕ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮಹತ್ವದ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಆಡುವುದು ಖಚಿತವಾಗಿದೆ. ಸುದೀರ್ಘ ಅವಧಿಗೆ ಗಾಯಾಳುವಾಗಿದ್ದ ಕೆಎಲ್, ಈ ವರ್ಷದ ಆರಂಭದಲ್ಲಿ ನಡೆದ ಏಷ್ಯಾಕಪ್ ಮೂಲಕ ಏಕದಿನ ಸ್ವರೂಪಕ್ಕೆ ಮರಳಿದ್ದರು. 2023ರ ಐಪಿಎಲ್ ವೇಳೆ ಗಾಯಗೊಂಡ ನಂತರ ಕಳೆದ ಜೂನ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸೇರಿದಂತೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಹೊರಬಿದ್ದಿದ್ದರು.
ಟೆಸ್ಟ್ ಸರಣಿಯಲ್ಲಿ ಕೆಎಲ್ ವಿಕೆಟ್ ಕೀಪರ್
ಏಕದಿನ ವಿಶ್ವಕಪ್‌ನಲ್ಲಿ ವಿಕೆಟ್ ಕೀಪಿಂಗ್ ಮಾಡಿದ್ದ ರಾಹುಲ್, ಇದೀಗ ಟೆಸ್ಟ್ ಸರಣಿಯಲ್ಲಿ ಕೀಪರ್ ಪಾತ್ರ ನಿಭಾಯಿಸಲಿದ್ದಾರೆ. ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಟೆಸ್ಟ್ ಸರಣಿಯಲ್ಲಿ ರಾಹುಲ್ ತಮ್ಮ ಪಾತ್ರ ಮುಂದುವರೆಸಲಿದ್ದಾರೆ ಎಂಬುದನ್ನು ಖಚಿತಪಡಿಸಿದ್ದಾರೆ.
ಭಾನುವಾರ ನಡೆಸಿದ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದ್ರಾವಿಡ್, ರಾಹುಲ್ ಅವರು ಸುದೀರ್ಘ ಸ್ವರೂಪದಲ್ಲಿ ವಿಕೆಟ್ ಕೀಪಿಂಗ್ ಮಾಡುವ ವಿಶ್ವಾಸ ಹೊಂದಿದ್ದಾರೆ ಎಂದು ಹೇಳಿದ್ದಾರೆ.
“ಇದು ಒಂದು ಸವಾಲು. ವಿಭಿನ್ನವಾಗಿ ಏನನ್ನಾದರೂ ಮಾಡಲು ಇದು ರಾಹುಲ್‌ಗೆ ಒಂದು ಅವಕಾಶ. ಸದ್ಯ ಇಶಾನ್ ಲಭ್ಯವಿಲ್ಲದ ಕಾರಣ, ನಮ್ಮ ಮುಂದೆ ಒಂದಿಬ್ಬರು ವಿಕೆಟ್ ಕೀಪರ್‌ಗಳು ಆಯ್ಕೆಗೆ ಲಭ್ಯವಿದ್ದಾರೆ. ರಾಹುಲ್ ತುಂಬಾ ವಿಶ್ವಾಸ ಹೊಂದಿದ್ದಾರೆ. ಸುದೀರ್ಘ ಸ್ವರೂಪದ ಕ್ರಿಕೆಟ್‌ನಲ್ಲಿ ಅವರು ಸಾಕಷ್ಟು ಬಾರಿ ಕೀಪಿಂಗ್ ಮಾಡಿಲ್ಲ ಹೌದು. ಆದರೆ ಅವರು ಏಕದಿನ ಸ್ವರೂಪದಲ್ಲಿ ಸಾಕಷ್ಟು ಬಾರಿ ಸ್ಟಂಪ್ಸ್ ಹಿಂದೆ ನಿಂತಿದ್ದಾರೆ. ಅದು ಇದಕ್ಕಿಂತ ಕಠಿಣ” ಎಂದು ದ್ರಾವಿಡ್ ಹೇಳಿದ್ದಾರೆ.
ಇದನ್ನೂ ಓದಿ | ಬಾಕ್ಸಿಂಗ್ ಡೇ ಟೆಸ್ಟ್ ಇತಿಹಾಸದಲ್ಲಿ ಭಾರತದ್ದು ಕಳಪೆ ದಾಖಲೆ; ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು!
“ರಾಹುಲ್ ಕಳೆದ ಐದು-ಆರು ತಿಂಗಳಲ್ಲಿ ಸಾಕಷ್ಟು ಬಾರಿ ವಿಕೆಟ್ ಕೀಪಿಂಗ್ ಮಾಡಿದ್ದಾರೆ. ಇಲ್ಲಿ ಒಂದು ವಿಷಯವೆಂದರೆ ಸ್ಪಿನ್‌ಗಿಂತ ಹೆಚ್ಚು ವೇಗದ ಬೌಲಿಂಗ್ ಇದೆ. ಇದು ಅವರ ಕೆಲಸವನ್ನು ಸುಲಭಗೊಳಿಸುತ್ತದೆ. ಬ್ಯಾಟ್ ಮತ್ತು ಕೀಪಿಂಗ್ ಎರಡೂ ಮಾಡಬಲ್ಲ ಸಾಮರ್ಥ್ಯ ಹೊಂದಿರುವವರು ಇರುವುದು ಸಂತೋಷವಾಗಿದೆ,” ಎಂದು ಕನ್ನಡಿಗನ ಬಗ್ಗೆ ಕನ್ನಡಿಗ ದ್ರಾವಿಡ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿಗೆ ಭಾರತ ಟೆಸ್ಟ್ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಭಿಮನ್ಯು ಈಶ್ವರನ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್. ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಪ್ರಸಿದ್ಧ್ ಕೃಷ್ಣ, ಕೆಎಸ್ ಭರತ್ (ವಿಕೆಟ್ ಕೀಪರ್).