ಕನ್ನಡ ಸುದ್ದಿ  /  Cricket  /  Kolkata Knight Riders Pip Sunrisers Hyderabad By 4 Runs In Last-ball Thriller Andre Russell Ramandeep Harshit Rana Prs

ರಸೆಲ್ ಮಸ್ಸಲ್ ಪವರ್​​ ಮುಂದೆ ಶರಣಾದ ಹೈದರಾಬಾದ್, ಕೆಕೆಆರ್​ಗೆ ರೋಚಕ ಗೆಲುವು; ಐಪಿಎಲ್​ ದುಬಾರಿ ಕ್ಯಾಪ್ಟನ್​ಗೆ ಮೊದಲ ಸೋಲು

KKR vs SRH : ಐಪಿಎಲ್​ 3ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​​ ತಂಡದ ವಿರುದ್ಧ ಕೋಲ್ಕತ್ತಾ ನೈಟ್​ ರೈಡರ್ಸ್​​ 4 ರನ್​ಗಳ ರೋಚಕ ಗೆಲುವು ಸಾಧಿಸಿದೆ. ಕೊನೆಯ ಓವರ್​​​ನಲ್ಲಿ ಎಸ್​ಆರ್​​ಹೆಚ್​ ಪಂದ್ಯವನ್ನು ಕೈಚೆಲ್ಲಿತು.

ರಸೆಲ್ ಮಸ್ಸಲ್ ಪವರ್​​ ಮುಂದೆ ಶರಣಾದ ಹೈದರಾಬಾದ್
ರಸೆಲ್ ಮಸ್ಸಲ್ ಪವರ್​​ ಮುಂದೆ ಶರಣಾದ ಹೈದರಾಬಾದ್ (PTI)

ಆ್ಯಂಡ್ರೆ ರಸೆಲ್ (65* ಮತ್ತು 25/2) ಅವರ ಆಲ್​ರೌಂಡರ್​ ಆಟದ ನೆರವಿನಿಂದ ಸನ್​ರೈಸರ್ಸ್​ ಹೈದರಾಬಾದ್/ಕೋಲ್ಕತ್ತಾ ನೈಟ್​ ರೈಡರ್ಸ್ 17ನೇ ಆವೃತ್ತಿಯ ಐಪಿಎಲ್​ನ ಮೂರನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ 4 ರನ್​​ಗಳಿಂದ ರೋಚಕ ಗೆಲುವು ದಾಖಲಿಸಿದೆ. ಕೋಲ್ಕತ್ತಾದ ಈಡನ್ ಗಾರ್ಡನ್​ ಮೈದಾನದಲ್ಲಿ ಕೆಕೆಆರ್​​ ಶುಭಾರಂಭ ಕಂಡಿದೆ. ಆದರೆ ಏಕದಿನ ವಿಶ್ವಕಪ್ ಗೆದ್ದ ನಾಯಕ ಹಾಗೂ ಐಪಿಎಲ್​ನ ದುಬಾರಿ ಕ್ಯಾಪ್ಟನ್ ಎನಿಸಿಕೊಂಡ ಪ್ಯಾಟ್​ ಕಮಿನ್ಸ್ ಮೊದಲ ಸೋಲು ಕಂಡಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೋಲ್ಕತ್ತಾ, ಬಿರುಸಿನ ಆರಂಭ ಮತ್ತು ಆ್ಯಂಡ್ರೆ ರಸೆಲ್-ಫಿಲ್ ಸಾಲ್ಟ್ ಅವರ ಭರ್ಜರಿ ಅರ್ಧಶತಕಗಳ ಬಲದಿಂದ ಬೃಹತ್​ ಮೊತ್ತವನ್ನು ಕಲೆ ಹಾಕಿತು. 20 ಓವರ್​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಈ ಗುರಿ ಬೆನ್ನಟ್ಟಿದ ಹೈದರಾಬಾದ್, 20 ಓವರ್​​ಗಳಲ್ಲಿ7 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತು. ಘಟಾನುಘಟಿ ಬ್ಯಾಟರ್​ಗಳ ದಂಡೇ ಇದ್ದರೂ ಕ್ರೀಸ್​ ನಿಂತು ಅಬ್ಬರಿಸುವ ಸಾಹಸಕ್ಕೆ ಕೈ ಹಾಕಲಿಲ್ಲ. ಕ್ಲಾಸೆನ್​ ಮಾತ್ರ ಕೊನೆಯವರೆಗೂ ಹೋರಾಟ ನಡೆಸಿದರೂ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

ಗುರಿ ಬೆನ್ನಟ್ಟಿದ ವೇಳೆ ಮಯಾಂಕ್ ಅಗರ್ವಾಲ್ ಮತ್ತು ಅಭಿಷೇಕ್ ಶರ್ಮಾ ಉತ್ತಮ ಭದ್ರ ಬುನಾದಿ ಹಾಕಿಕೊಟ್ಟರು. ಮೊದಲ ವಿಕೆಟ್​ಗೆ 5.3 ಓವರ್​ಗಳಲ್ಲಿ 60 ರನ್​ಗಳು ಹರಿದು ಬಂದವು. ಆರಂಭಿಕರಿಬ್ಬರು ತಲಾ 32 ರನ್ ಸಿಡಿಸಿ ಔಟಾದರು. ಆದರೆ ಆ ಬಳಿಕ ಬಂದ ಬ್ಯಾಟರ್​​ಗಳು ಆಕ್ರಮಣಕಾರಿ ಆಟದ ಕಡೆ ಗಮನ ಕೊಡಲಿಲ್ಲ. ರಾಹುಲ್ ತ್ರಿಪಾಠಿ 20, ಏಡನ್ ಮಾರ್ಕ್ರಮ್ 18, ಅಬ್ದುಲ್ ಸಮದ್ 15 ರನ್​ಗಳಿಗೆ ಸುಸ್ತಾದರು. ಆದರೆ ಕೊನೆಯಲ್ಲಿ ಹೆನ್ರಿಚ್​ ಕ್ಲಾಸೆನ್​ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು.

ಕೊನೆಯಲ್ಲಿ ಕ್ಲಾಸೆನ್ ಅಬ್ಬರ

ಕೊನೆಯ ಐದು ಓವರ್​​​ಗಳಿಗೆ 80+ ರನ್ ಬೇಕಿದ್ದಾಗ ಹೆನ್ರಿಚ್​ ಕ್ಲಾಸ್ ಬೆಂಕಿ-ಬಿರುಗಾಳಿ ಆಟಕ್ಕೆ ಕೈಹಾಕಿದರು. ಸಿಕ್ಸರ್​​ಗಳ ಸುರಿಮಳೆಗೈದರು. ಪರಿಣಾಮ ಕೊನೆಯ ಎರಡು ಓವರ್​​ಗಳಲ್ಲಿ ತಂಡ ಗೆಲ್ಲಲು 39 ರನ್​ಗಳ ಬೇಕಾಯಿತು. 19ನೇ ಓವರ್​​​ನಲ್ಲಿ ಮಿಚೆಲ್ ಸ್ಟಾರ್ಕ್​ ಬೌಲಿಂಗ್​​ನಲ್ಲಿ ಕ್ಲಾಸೆನ್ 3 ಸಿಕ್ಸರ್​ ಮತ್ತು ಶಹಬಾಜ್ 1 ಸಿಕ್ಸರ್​ ಸಹಿತ 26 ರನ್ ಗಳಿಸಿದರು. ಇದೇ ವೇಳೆ ಕ್ಲಾಸೆನ್ ಕೇವಲ 25 ಎಸೆತಗಳಲ್ಲಿ ಅರ್ಧಶತಕವನ್ನೂ ಪೂರೈಸಿದರು. ಇದರೊಂದಿಗೆ ಕೊನೆಯ ಓವರ್​​ನಲ್ಲಿ ಗೆಲುವಿಗೆ 13 ರನ್ ಬೇಕಾಯಿತು.

ಆದರೆ ಹರ್ಷಿತ್ ರಾಣಾ ಎಸೆದ ಅಂತಿಮ ಓವರ್​​ನ ಮೊದಲ ಎಸೆತವನ್ನು ಸಿಕ್ಸರ್​​ಗಟ್ಟಿದ ಕ್ಲಾಸೆನ್​ ಎರಡನೇ ಎಸೆತದಲ್ಲಿ ಸಿಂಗಲ್ ಪಡೆದರು. ಆದರೆ ಮೂರನೇ ಎಸೆತದಲ್ಲಿ ಶಹಬಾಜ್ ಅಹ್ಮದ್ ಔಟಾದರೆ, ಕ್ರೀಸ್​ಗೆ ಬಂದ ಮಾರ್ಕೊ ಜಾನ್ಸನ್​ ಸಿಂಗಲ್ ಪಡೆದು ಕ್ಲಾಸೆನ್​ಗೆ ಸ್ಟ್ರೈಕ್​ ಕೊಟ್ಟರು. ಆದರೆ, ಸೌತ್ ಆಫ್ರಿಕಾ ಆಟಗಾರ ಕ್ಯಾಚ್​ ನೀಡಿ ಗೆಲುವಿನ ಅಂಚಿನಲ್ಲಿ ಎಡವಿದರು. ಕೊನೆಯ ಎಸೆತಕ್ಕೆ 5 ರನ್ ಬೇಕಿದ್ದ ವೇಳೆ ಸ್ಟ್ರೈಕ್​ನಲ್ಲಿದ್ದ ಪ್ಯಾಟ್ ಕಮಿನ್ಸ್, ರನ್ ಗಳಿಸಲು ವಿಫಲರಾದರು. ಇದರೊಂದಿಗೆ ರೋಚಕ ಕದನದಲ್ಲಿ ಕೆಕೆಆರ್​​​ಗೆ 4 ರನ್​ಗಳ ರೋಚಕ ಗೆಲುವು ದಾಖಲಿಸಿತು. ಕೊನೆಯ ಓವರ್​​ನಲ್ಲಿ 13 ರನ್ ರಕ್ಷಿಸಿಕೊಂಡ ರಾಣಾ ಹೀರೋ ಆದರು.

ಕೆಕೆಆರ್​​ಗೆ ಸಾಲ್ಟ್​-ರಸೆಲ್​ ಆಸರೆ

ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್​​, ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು. ಫಿಲ್ ಸಾಲ್ಟ್​ ಭರ್ಜರಿ ಆರಂಭದ ಭರವಸೆ ನೀಡಿದರೂ ಉಳಿದ ಆಟಗಾರರು ದಿಢೀರ್​ ಕುಸಿತ ಕಂಡರು. ಆರಂಭಿಕನಾಗಿ ಬಡ್ತಿ ಪಡೆದ ಸುನಿಲ್ ನರೇನ್ (2), ವೆಂಕಟೇಶ್ ಅಯ್ಯರ್ (7), ನಿತೀಶ್ ರಾಣಾ (9) ಬೇಗನೇ ಔಟಾದರು. ನಾಯಕ ಶ್ರೇಯಸ್ ಅಯ್ಯರ್ ಖಾತೆ ತೆರೆಯದೆ ಪೆವಿಲಿಯನ್ ಸೇರಿದರು.

ಭಾರಿ ಕುಸಿತ ಕಂಡು ಸಂಕಷ್ಟದಲ್ಲಿದ್ದ ಕೋಲ್ಕತ್ತಾಗೆ ರಮಣ್​ದೀಪ್ ಸಿಂಗ್​ ಭರ್ಜರಿ ಬ್ಯಾಟಿಂಗ್ ನಡೆಸಿದರು. ಆರಂಭಿಕನಾಗಿ ಆಡುತ್ತಿದ್ದ ಸಾಲ್ಟ್​ ಇದೇ ವೇಳೆ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಈ ಜೋಡಿ ಅರ್ಧಶತಕದ ಜೊತೆಯಾಟವಾಡಿತು. ರಮಣ್​ದೀಪ್ 17 ಎಸೆತಗಳಲ್ಲಿ 4 ಸಿಕ್ಸರ್, 1 ಬೌಂಡರಿ ಸಹಿತ 35 ರನ್ ಗಳಿಸಿದರು. ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಸಾಲ್ಟ್ 40 ಎಸೆತಗಳಲ್ಲಿ ತಲಾ 3 ಬೌಂಡರಿ, ಸಿಕ್ಸರ್​ ಸಿಡಿಸಿ 54 ರನ್ ಗಳಿಸಿ ಔಟಾದರು.

119ಕ್ಕೆ 6 ವಿಕೆಟ್ ಕಳೆದುಕೊಂಡಿದ್ದ ವೇಳೆ ಆರ್ಭಟಿಸಿದ ಆ್ಯಂಡ್ರೆ ರಸೆಲ್, ಸಿಕ್ಸರ್​ಗಳ ಸುರಿಮಳೆಗೈದರು. ಕೇವಲ 20 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದರು. ಎಸ್​ಆರ್​ಎಚ್​ ಬೌಲರ್​ಗಳಿಗೆ ಬೆಂಡೆತ್ತಿದ ರಸೆಲ್, ಕೇವಲ 25 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸರ್ ನೆರವಿನಿಂದ ಅಜೇಯ 64 ರನ್ ಬಾರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಈ ವೇಳೆ ರಿಂಕು ಸಿಂಗ್ 23 ರನ್ ಚಚ್ಚಿ ಸಾಥ್ ನೀಡಿದರು. ಮಿಚೆಲ್ ಸ್ಟಾರ್ಕ್ ಅಜೇಯ 6 ರನ್ ಗಳಿಸಿದರು.

IPL_Entry_Point