ಪಿಕೆಎಲ್-ಡಬ್ಲ್ಯುಪಿಎಲ್ ಬಳಿಕ ಐಪಿಎಲ್; ಮೆಗಾ ಹರಾಜು ನಡೆಸಿಕೊಡುವ ಮಲ್ಲಿಕಾ ಸಾಗರ್ ಯಾರು, ವಯಸ್ಸೆಷ್ಟು?
ಕನ್ನಡ ಸುದ್ದಿ  /  ಕ್ರಿಕೆಟ್  /  ಪಿಕೆಎಲ್-ಡಬ್ಲ್ಯುಪಿಎಲ್ ಬಳಿಕ ಐಪಿಎಲ್; ಮೆಗಾ ಹರಾಜು ನಡೆಸಿಕೊಡುವ ಮಲ್ಲಿಕಾ ಸಾಗರ್ ಯಾರು, ವಯಸ್ಸೆಷ್ಟು?

ಪಿಕೆಎಲ್-ಡಬ್ಲ್ಯುಪಿಎಲ್ ಬಳಿಕ ಐಪಿಎಲ್; ಮೆಗಾ ಹರಾಜು ನಡೆಸಿಕೊಡುವ ಮಲ್ಲಿಕಾ ಸಾಗರ್ ಯಾರು, ವಯಸ್ಸೆಷ್ಟು?

ಕಳೆದ ವರ್ಷ ದುಬೈನಲ್ಲಿ ನಡೆದ ಐಪಿಎಲ್‌ ಹರಾಜು ಪ್ರಕ್ರಿಯೆ ನಡೆಸಿಕೊಟ್ಟವರು ಮಲ್ಲಿಕಾ ಸಾಗರ್. ಈ ಬಾರಿ ಐಪಿಎಲ್‌ 2025ರ ಮೆಗಾ ಹರಾಜು ನಡೆಸಿಕೊಡಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊದಲ ಮಹಿಳಾ ಹರಾಜುಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿರುವ ಮಲ್ಲಿಕಾ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ.

ಪಿಕೆಎಲ್-ಡಬ್ಲ್ಯುಪಿಎಲ್ ಬಳಿಕ ಐಪಿಎಲ್; ಮೆಗಾ ಹರಾಜು ನಡೆಸಿಕೊಡುವ ಮಲ್ಲಿಕಾ ಸಾಗರ್ ಯಾರು?
ಪಿಕೆಎಲ್-ಡಬ್ಲ್ಯುಪಿಎಲ್ ಬಳಿಕ ಐಪಿಎಲ್; ಮೆಗಾ ಹರಾಜು ನಡೆಸಿಕೊಡುವ ಮಲ್ಲಿಕಾ ಸಾಗರ್ ಯಾರು?

ಸೌದಿ ಅರೇಬಿಯಾದ ಜೆದ್ದಾದಲ್ಲಿ ಇಂದು ಮತ್ತು ನಾಳೆ (ನವೆಂಬರ್ 24 ಮತ್ತು 25) ನಡೆಯಲಿರುವ ಐಪಿಎಲ್ 2025ರ ಮೆಗಾ ಹರಾಜು ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ಲೋಕದ ಆಕರ್ಷಣೆಗೆ ಕಾರಣವಾಗಿದೆ. ಈ ಬಾರಿ ಮತ್ತೊಮ್ಮೆ ಮಲ್ಲಿಕಾ ಸಾಗರ್ (Mallika Sagar) ಅವರು ಹರಾಜು ಪ್ರಕ್ರಿಯೆ ನಡೆಸಿಕೊಡಲಿದ್ದಾರೆ. ಹಾಗಂತಾ, 47ರ ಹರೆಯದ ಸಾಗರ್‌ ಅವರಿಗೆ ಇದು ಮೊದಲ ಐಪಿಎಲ್‌ ಹರಾಜು ಪ್ರಕ್ರಿಯೆ ಅಲ್ಲ. ಸತತ ಎರಡನೇ ಬಾರಿಗೆ ಐಪಿಎಲ್ ಹರಾಜನ್ನು ಮುನ್ನಡೆಸಲು ಅವರು ಸಜ್ಜಾಗಿದ್ದಾರೆ. ಈ ಬಾರಿಯ ವಿಶೇಷವೆಂದರೆ, ಇದು ಅವರ ವೃತ್ತಿಜೀವನದ ಮೊದಲ ಮೆಗಾ ಹರಾಜು ಆಗಿದೆ.

ಕ್ರೀಡಾ ಕ್ಷೇತ್ರದಲ್ಲಿ ಹರಾಜು ಉದ್ಯಮಕ್ಕೆ ಮಲ್ಲಿಕಾ ಸಾಗರ್ ಹೊಸ ಹೆಸರೇನೂ ಅಲ್ಲ. ಕ್ರಿಕೆಟ್ ಹರಾಜಿಗೆ ಕಾಲಿಡುವ ಮೊದಲು, ಅವರು 2021ರಲ್ಲಿ ಪ್ರೊ ಕಬಡ್ಡಿ ಲೀಗ್ ಹರಾಜನ್ನು ನಡೆಸಿಕೊಟ್ಟ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅತ್ಯಂತ ಯಶಸ್ವಿಯಾಗಿ ಮತ್ತು ಆಕರ್ಷಕವಾಗಿ ಪಿಕೆಎಲ್‌ ಹರಾಜು ನಡೆಸಿಕೊಟ್ಟಿದ್ದ ಸಾಗರ್‌, ಆ ಬಳಿಕ ಮಹಿಳಾ ಪ್ರೀಮಿಯರ್ ಲೀಗ್‌ನ ಚೊಚ್ಚಲ ಆವೃತ್ತಿಯಲ್ಲೇ ಹರಾಜು ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಹೆಚ್ಚು ಗುರುತಿಸಿಕೊಂಡರು.

ಡಬ್ಲ್ಯುಪಿಎಲ್ ಹರಾಜಿನಲ್ಲಿ ಭಾರಿ ಯಶಸ್ಸು ಕಂಡ ಮಲ್ಲಿಕಾ ಸಾಗರ್, 2022ರ ಐಪಿಎಲ್ ಹರಾಜಿನ ಸಮಯದಲ್ಲಿ ಸ್ಟ್ಯಾಂಡ್‌ಬೈ ಆಕ್ಷನೀರ್‌ ಆಗಿ ಕಾಣಿಸಿಕೊಂಡರು. ಮುಂದಿನ ವರ್ಷ, ಅಂದರೆ 2023ರಲ್ಲಿ ಸಾಗರ್ ಅವರು ಐಪಿಎಲ್ ಹರಾಜನ್ನು ನಡೆಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದೀಗ ಐಪಿಎಲ್ 2025ರ ಹರಾಜಿನಲ್ಲಿ, ಸಾಗರ್ ಅವರು ಎರಡು ದಿನಗಳ ಕಾಲ ಹರಾಜು ಕೂಗಲಿದ್ದಾರೆ. ಒಟ್ಟು 577 ಹೆಸರುಗಳನ್ನು ಕೂಗಲಿದ್ದಾರೆ. ತೀಕ್ಷ್ಣ ಬುದ್ಧಿ, ಶಾಂತ ಸ್ವಭಾವ ಹಾಗೂ ಒತ್ತಡದ ಸಂದರ್ಭವನ್ನು ಸುಲಲಿತವಾಗಿ ನಡೆಸುವ ಹಾಗೂ ನಿಭಾಯಿಸುವ ಸಾಗರ್, ಐಪಿಎಲ್‌ ಹರಾಜಿಗೆ ಬೇಡಿಕೆಯ ವ್ಯಕ್ತಿಯಾಗಿದ್ದಾರೆ.

ಹರಾಜುದಾರರಾಗಿ ಮಲ್ಲಿಕಾ ಸಾಗರ್ ಅವರ ಹಿನ್ನೆಲೆ ಏನು?

ಮಲ್ಲಿಕಾ ಸಾಗರ್‌ ಭಾರತದವರೇ. ವಾಣಿಜ್ಯ ನಗರಿ ಮುಂಬೈನ ಉದ್ಯಮ ಕುಟುಂಬದಲ್ಲಿ ಜನಿಸಿದ ಸಾಗರ್, ಓದಿದ್ದು ವಿದೇಶದಲ್ಲಿ. ಫಿಲಾಡೆಫಿಯಾದ ಬ್ರೈನ್ ಮಾವರ್ ಕಾಲೇಜಿನಿಂದ ಕಲಾ ಇತಿಹಾಸದಲ್ಲಿ (art history) ಪದವಿ ಪಡೆದರು.

ಪದವಿಯ ನಂತರ, ಸಾಗರ್ ಹರಾಜಿನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು 2001ರಲ್ಲಿ. ನ್ಯೂಯಾರ್ಕ್ ನಗರದ ಪ್ರಮುಖ ಅಂತಾರಾಷ್ಟ್ರೀಯ ಹರಾಜು ಸಂಸ್ಥೆಗಳಲ್ಲಿ ಒಂದಾದ ಕ್ರಿಸ್ಟೀಸ್‌ನಲ್ಲಿ ಸಾಗರ್‌ ಕಾಣಿಸಿಕೊಂಡರು.

26ನೇ ವಯಸ್ಸಿನಲ್ಲಿ, ಸಾಗರ್ ಅವರಿಗೆ ಕ್ರಿಸ್ಟೀಸ್‌ನಲ್ಲಿ ಅಂತಾರಾಷ್ಟ್ರೀಯ ಕಲೆ ಮತ್ತು ಐಷಾರಾಮಿ ವ್ಯವಹಾರ ಕೆಲಸದ ಪಾತ್ರ ನೀಡಲಾಯಿತು. ಈ ಕೆಲಸ ನಿರ್ವಹಿಸಿದ ಮೊದಲ ಭಾರತೀಯ ಮಹಿಳಾ ಹರಾಜುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆ ನಂತರ ಅವರು ಮುಂಬೈನ ಪುಂಡೋಲೆಸ್ ಆರ್ಟ್ ಗ್ಯಾಲರಿ ಸೇರಿದಂತೆ ವಿವಿಧ ಹರಾಜು ಸಂಸ್ಥೆಗಳಲ್ಲಿ ಹರಾಜುದಾರರಾಗಿ ಭಾಗಿಯಾಗಿದ್ದಾರೆ. ಮಲ್ಲಿಕಾ ಅವರು ಹರಾಜುಗಾರ್ತಿಯಾಗಿ 25 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದಾರೆ.

ಮಲ್ಲಿಕಾ ಸಾಗರ್ ಅವರನ್ನು ಕಳೆದ ವರ್ಷ ಐಪಿಎಲ್ ಹರಾಜುದಾರರಾಗಿ ನೇಮಕ ಮಾಡಿರುವುದು, ಐಪಿಎಲ್ ಇತಿಹಾಸದಲ್ಲಿ ಮಹತ್ವದ ನಿರ್ಧಾರವಾಗಿದೆ. ಇದು ಕ್ರೀಡಾ ನಿರ್ವಹಣೆಗೆ ಹೊಸ ಆಯಾಮ ತಂದಿತು. ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಂಪ್ರದಾಯಿಕವಾಗಿ ಪುರುಷ ಪ್ರಾಬಲ್ಯದ ನಡುವೆ, ವೃತ್ತಿಜೀವನವನ್ನು ಮುಂದುವರಿಸಲು ಮಹಿಳೆಯರನ್ನು ಪ್ರೇರೇಪಿಸುತ್ತದೆ.

Whats_app_banner