ಕನ್ನಡ ಸುದ್ದಿ  /  Cricket  /  Matthew Hayden Says Greatness Of Virat Kohli Reduced Rcb Vs Csk Ipl 2024 Clash Royal Challengers Bangalore Chepauk Jra

ವಿರಾಟ್ ಕೊಹ್ಲಿ ಶ್ರೇಷ್ಠತೆ ಕುಂದಿದೆ; ಐಪಿಎಲ್ ಆರಂಭಕ್ಕೂ ಮುನ್ನ ಆರ್‌ಸಿಬಿ ಆಟಗಾರನ ಕುರಿತು ಮ್ಯಾಥ್ಯೂ ಹೇಡನ್ ಹೇಳಿಕೆ

Virat Kohli: ಐಪಿಎಲ್ 2024ರ ಉದ್ಘಾಟನಾ ಪಂದ್ಯಕ್ಕೆ ಮುನ್ನ ಸಿಎಸ್‌ಕೆ ವಿರುದ್ಧ ವಿರಾಟ್ ಕೊಹ್ಲಿ ದಾಖಲೆಯ ಕುರಿತಾಗಿ ದಿಗ್ಗಜ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಮಾತನಾಡಿದ್ದಾರೆ. ಚೆಪಾಕ್‌ನಲ್ಲಿ ವಿರಾಟ್‌ ಬ್ಯಾಟ್‌ ಸದ್ದು ಮಾಡಿಲ್ಲ ಎಂದು ಆಸೀಸ್‌ ಮಾಜಿ ಕ್ರಿಕೆಟಿಗ ಎತ್ತಿ ತೋರಿಸಿದ್ದಾರೆ.

ಐಪಿಎಲ್ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಕುರಿತು ಮ್ಯಾಥ್ಯೂ ಹೇಡನ್ ಹೇಳಿಕೆ
ಐಪಿಎಲ್ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಕುರಿತು ಮ್ಯಾಥ್ಯೂ ಹೇಡನ್ ಹೇಳಿಕೆ (AFP-IPL)

ಐಪಿಎಲ್‌ 2024ರ ಅದ್ಧೂರಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (Chennai Super Kings and Royal Challengers Bangalore) ಸಾವಲೆಸೆಯಲು ಸಜ್ಜಾಗಿದೆ. ಮಾರ್ಚ್ 22ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಸ್ಟಾರ್‌ ಆಟಗಾರ ವಿರಾಟ್ ಕೊಹ್ಲಿ ದಿಗ್ಗಜ ಕ್ರಿಕೆಟಿಗ ಎಂಎಸ್ ಧೋನಿ ಅವರೊಂದಿಗೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲಿದ್ದಾರೆ. ಸಿಎಸ್‌ಕೆ ಮತ್ತು ಆರ್‌ಸಿಬಿ ತಂಡಗಳ ಮುಖಾಮುಖಿಯು ಇಂಡೋ-ಪಾಕ್‌ ಕದನದಷ್ಟೇ ರೋಚಕವಾಗಿರಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಬಾರಿ ಮೊದಲ ಪಂದ್ಯವು ಸಿಎಸ್‌ಕೆ ತವರು ಚೆನ್ನೈನ ಚೆಪಾಕ್‌ ಅಂಗಳದಲ್ಲಿ ನಡೆಯುತ್ತಿರುವುದರಿಂದ ಆರ್‌ಸಿಬಿಗೆ ಸವಾಲು ಹೆಚ್ಚಿದೆ.

ಐಪಿಎಲ್‌ ಇತಿಹಾಸದಲ್ಲಿ‌ ಇದುವರೆಗೆ ಏಕೈಕ ಫ್ರಾಂಚೈಸಿ ಪರ ಆಡಿರುವ ವಿರಾಟ್‌ ಕೊಹ್ಲಿ ಹೆಸರಿನಲ್ಲಿ ಹಲವಾರು ದಾಖಲೆಗಳಿವೆ. ಐಪಿಎಲ್‌ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿರುವ ಕೊಹ್ಲಿ, ಸಿಎಸ್‌ಕೆ ವಿರುದ್ಧವೂ ಹಲವು ದಾಖಲೆಯ ಇನ್ನಿಂಗ್ಸ್‌ ಆಡಿದ್ದಾರೆ. ಆದರೆ, 2021ರಿಂದ ಧೋನಿ ಬಳಗದ ತವರಿನಲ್ಲಿ ಸಮರ್ಥವಾಗಿ ಬ್ಯಾಟ್‌ ಬೀಸಲು ಕಿಂಗ್‌ ಕೊಹ್ಲಿ ಹೆಣಗಾಡುತ್ತಿದ್ದಾರೆ. ಆರ್‌ಸಿಬಿ ತಂಡದ ನಾಯಕ ಚೆಪಾಕ್‌ ಅಂಗಳದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಡಿಮೆ ಸರಾಸರಿ ಹೊಂದಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಹಾಗೂ ಸೂಪರ್ ಕಿಂಗ್ಸ್‌ ತಂಡದ ಮಾಜಿ ಸ್ಟಾರ್ ಮ್ಯಾಥ್ಯೂ ಹೇಡನ್ ಪ್ರಕಾರ, ಚೆನ್ನೈನಲ್ಲಿ ಕೊಹ್ಲಿಯ ಬ್ಯಾಟಿಂಗ್ ಶ್ರೇಷ್ಠತೆ ಕಡಿಮೆಯಾಗಿದೆಯಂತೆ. ಚಿದಂಬರಂ ಸ್ಟೇಡಿಯಂನಲ್ಲಿ ಕೊಹ್ಲಿಯ ಫಾರ್ಮ್ ಕುಸಿತದ ಬಗ್ಗೆ ಮಾತನಾಡಿದ ಹೇಡನ್, ಆರ್‌ಸಿಬಿ ಮಾಜಿ ನಾಯಕ ಪವರ್‌ಪ್ಲೇ ಅವಧಿಯಲ್ಲಿ ಐದು ಇನ್ನಿಂಗ್ಸ್‌ಗಳಲ್ಲಿ ಮೂರು ಬಾರಿ ಔಟ್ ಆಗಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | ಐಪಿಎಲ್ ವಿಶ್ವದ ಎರಡನೇ ಶ್ರೀಮಂತ ಕ್ರೀಡಾ ಲೀಗ್; ಇದು ಕ್ರಿಕೆಟ್‌ನ ಎಲ್ಲಾ ಸ್ವರೂಪಗಳನ್ನು ಸ್ಪರ್ಧಾತ್ಮಕವಾಗಿಸಿದೆ: ಅರುಣ್‌ ಧುಮಾಲ್

“ಸಿಎಸ್‌ಕೆ ವಿರುದ್ಧ ವಿರಾಟ್ ಕೊಹ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಆದರೆ 2021ರಿಂದ ಪವರ್ ಪ್ಲೇನಲ್ಲಿ ಎಂಎಸ್ ಧೋನಿ ಚಾಣಾಕ್ಷತನ ತೋರಿದ್ದಾರೆ. ಚೆಪಾಕ್‌ನಲ್ಲಿ ಆಡಿದ ಕಳೆದ ಐದು ಇನ್ನಿಂಗ್ಸ್‌ಗಳಲ್ಲಿ ಮೂರು ಬಾರಿ ಕೊಹ್ಲಿ ಪವರ್ ಪ್ಲೇ ವೇಳೆ ಔಟ್ ಆಗಿದ್ದಾರೆ. ಚೆಪಾಕ್ ಕ್ರೀಡಾಂಗಣದಲ್ಲಿ ಅವರ ಸರಾಸರಿ 30 ಆಗಿದ್ದು, ಸ್ಟ್ರೈಕ್ ರೇಟ್ 111 ಇದೆ” ಎಂದು ಹೇಡನ್ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಶ್ರೇಷ್ಠತೆ ಕಡಿಮೆಯಾಗಿದೆ

ಚೆನ್ನೈನಲ್ಲಿ ಕೊಹ್ಲಿಯ ಒಟ್ಟಾರೆ ಪ್ರದರ್ಶನದ ದೃಷ್ಟಿಯಿಂದ ವಿರಾಟ್ ಅವರ ಶ್ರೇಷ್ಠತೆ ಕಡಿಮೆಯಾಗಿದೆ ಎಂದು ನೇರವಾಗಿ ತೋರಿಸುತ್ತದೆ. ಇದು ಬ್ಯಾಟಿಂಗ್ ಮಾಡಲು ಒಂದು ಕ್ಲಿಷ್ಟಕರ ಮೈದಾನವಾಗಿದೆ. ವಿಶೇಷವಾಗಿ ಆರಂಭಿಕ ಬ್ಯಾಟರ್‌ ಆಗಿ, ಒಂದು ರೀತಿಯ ವಿಲಕ್ಷಣ ಬೌನ್ಸ್ ವಿರುದ್ಧ ಆಡಲು ಕೊಹ್ಲಿ ಹೆಣಗಾಡಿದ್ದಾರೆ. ಇದು ತುಂಬಾ ನಿಧಾನ ಮತ್ತು ಆಡಲು ಕಷ್ಟಕರವಾದ ಮೈದಾನ," ಎಂದು ಹೇಡನ್ ಹೇಳಿದ್ದಾರೆ.

ಐಪಿಎಲ್ 2023ರ ಆವೃತ್ತಿಯಲ್ಲಿ ಒಟ್ಟು 14 ಪಂದ್ಯಗಳನ್ನಾಡಿರುವ ಕೊಹ್ಲಿ, 639 ರನ್ ಗಳಿಸಿದ್ದಾರೆ. ಇದರಲ್ಲಿ ಆರು ಅರ್ಧಶತಕಗಳು ಮತ್ತು ಎರಡು ಶತಕಗಳು ಸೇರಿವೆ. ಸಿಎಸ್‌ಕೆ ವಿರುದ್ಧದ ಕೊನೆಯ ಮುಖಾಮುಖಿಯಲ್ಲಿ ಕೊಹ್ಲಿ 4 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿದ್ದರು.

ಇದನ್ನೂ ಓದಿ | ಆರ್‌ಸಿಬಿ ಅನ್‌ಬಾಕ್ಸ್‌ ಈವೆಂಟ್‌; ಫ್ಯಾನ್ಸ್‌ಗೆ ವಿರಾಟ್‌ ಸರ್‌ಪ್ರೈಸ್‌ ನಿರೀಕ್ಷೆ, ಟಿಕೆಟ್‌ ಖರೀದಿಸಲು ಹೀಗೆ ಮಾಡಿ

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point