ಈತ ಕೊಹ್ಲಿಯಂತೆ ಸಸ್ಯಾಹಾರಿ; ಗಂಟೆಗೆ 156 ಕಿಮೀ ವೇಗದಲ್ಲಿ ಬೌಲಿಂಗ್, ಟೀಮ್ ಇಂಡಿಯಾಕ್ಕೆ ಸ್ಫೋಟಕ ಬೌಲರ್ ಎಂಟ್ರಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಈತ ಕೊಹ್ಲಿಯಂತೆ ಸಸ್ಯಾಹಾರಿ; ಗಂಟೆಗೆ 156 ಕಿಮೀ ವೇಗದಲ್ಲಿ ಬೌಲಿಂಗ್, ಟೀಮ್ ಇಂಡಿಯಾಕ್ಕೆ ಸ್ಫೋಟಕ ಬೌಲರ್ ಎಂಟ್ರಿ

ಈತ ಕೊಹ್ಲಿಯಂತೆ ಸಸ್ಯಾಹಾರಿ; ಗಂಟೆಗೆ 156 ಕಿಮೀ ವೇಗದಲ್ಲಿ ಬೌಲಿಂಗ್, ಟೀಮ್ ಇಂಡಿಯಾಕ್ಕೆ ಸ್ಫೋಟಕ ಬೌಲರ್ ಎಂಟ್ರಿ

Mayank Yadav: ವೇಗದ ಬೌಲರ್ ಮಯಾಂಕ್ ಯಾದವ್‌ ಕ್ರಿಕೆಟ್‌ನ ಪ್ರವೇಶವು ತುಂಬಾ ಆಸಕ್ತಿದಾಯಕವಾಗಿದೆ. ಅವರ ತಂದೆ ತಾನೂ ಕ್ರಿಕೆಟಿಗನಾಗಬೇಕೆಂದು ಬಯಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಇದೀಗ ಅವರ ಪುತ್ರ ಮಯಾಂಕ್ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. (ವರದಿ: ವಿನಯ್ ಭಟ್)

ಗಂಟೆಗೆ 156 ಕಿಮೀ ವೇಗದಲ್ಲಿ ಬೌಲಿಂಗ್, ಟೀಮ್ ಇಂಡಿಯಾಕ್ಕೆ ಸ್ಫೋಟಕ ವೇಗಿ ಮಯಾಂಕ್ ಯಾದವ್‌ ಎಂಟ್ರಿ
ಗಂಟೆಗೆ 156 ಕಿಮೀ ವೇಗದಲ್ಲಿ ಬೌಲಿಂಗ್, ಟೀಮ್ ಇಂಡಿಯಾಕ್ಕೆ ಸ್ಫೋಟಕ ವೇಗಿ ಮಯಾಂಕ್ ಯಾದವ್‌ ಎಂಟ್ರಿ

ಭಾರತ ತಂಡವು ಅಕ್ಟೋಬರ್ 6ರಿಂದ ಬಾಂಗ್ಲಾದೇಶ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಇದಕ್ಕಾಗಿ ಟೀಮ್ ಇಂಡಿಯಾ ಕೂಡ ಪ್ರಕಟವಾಗಿದ್ದು, ಬಿಸಿಸಿಐ 15 ಸದಸ್ಯರ ತಂಡ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ವೇಗದ ಬೌಲರ್ ಮಯಾಂಕ್ ಯಾದವ್‌ಗೂ ಅವಕಾಶ ನೀಡಲಾಗಿದೆ. ಗಂಟೆಗೆ 156.7 ಕಿಲೋಮೀಟರ್ ವೇಗದಲ್ಲಿ ಚೆಂಡನ್ನು ಎಸೆದು ಐಪಿಎಲ್‌ನಲ್ಲಿ ಸಂಚಲನ ಮೂಡಿಸಿದ್ದ ಮಯಾಂಕ್, ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಯಾಂಕ್ ಯಾದವ್‌ ಕ್ರಿಕೆಟ್‌ನ ಪ್ರವೇಶವು ತುಂಬಾ ಆಸಕ್ತಿದಾಯಕವಾಗಿದೆ. ಅವರ ತಂದೆ ತಾನೂ ಕ್ರಿಕೆಟಿಗನಾಗಬೇಕೆಂದು ಬಯಸಿದ್ದರು. ಆದರೆ, ಕಠಿಣ ಸಂದರ್ಭಗಳಿಂದಾಗಿ ಅವರಿಗೆ ಸಾಧ್ಯವಾಗಲಿಲ್ಲ. ಇದೀಗ ಅವರ ಪುತ್ರ ಮಯಾಂಕ್ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

ಮಯಾಂಕ್ ಯಾದವ್ ಅವರ ತಂದೆ ಪ್ರಭು ಯಾದವ್ ಅವರ ಹುಟ್ಟೂರು ಬಿಹಾರದ ಸುಪಾಲ್ ಜಿಲ್ಲೆ. ಆದರೆ, ಮಯಾಂಕ್ ಹುಟ್ಟಿ ಬೆಳೆದದ್ದು ದೆಹಲಿಯಲ್ಲಿ. ಪ್ರಭು ಯಾದವ್ ಅವರಿಗೆ ನಾಲ್ವರು ಸಹೋದರರು ಮತ್ತು ಇಬ್ಬರು ಸಹೋದರಿಯರಿದ್ದಾರೆ. ಮಯಾಂಕ್ ತಂದೆಗೆ ಕ್ರಿಕೆಟ್ ಎಂದರೆ ಅಚ್ಚುಮೆಚ್ಚು. ಆದರೆ, ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರಿಂದ ಹಣ ಸಂಪಾದಿಸಲು 18ನೇ ವಯಸ್ಸಿನಲ್ಲಿ ದೆಹಲಿಗೆ ಬರಬೇಕಾಯಿತು. ಇದರಿಂದಾಗಿ ಅವರಿಂದ ಕ್ರಿಕೆಟ್ ದೂರವಾಯಿತು. ಆದರೆ, ದೆಹಲಿಯಲ್ಲಿ ವಾಸಿಸುತ್ತಿರುವಾಗ, ಮಯಾಂಕ್ ಜನಿಸಿದರು. ಮಗನ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಪ್ರಯತ್ನಿಸಿದರು.

ಮಾಯಾಂಕ್​ಗೆ 4 ವರ್ಷ ಇರುವಾಗ ಅವರ ತಂದೆ ಒಮ್ಮೆ ಪಾರ್ಕ್‌ಗೆ ವಾಕ್ ಮಾಡಲು ಕರೆದೊಯ್ದರು. ಈ ವೇಳೆ ಮಕ್ಕಳು ಕ್ರಿಕೆಟ್ ಆಡುತ್ತಿರುವುದನ್ನು ಕಂಡು ಅವರ ಕನಸು ನೆನಪಾಯಿತು. ನಂತರ ಅವರು ತಮ್ಮ ಮಗನನ್ನು ಕೇಳಿದರು- “ನೀನು ಕ್ರಿಕೆಟ್ ಆಡುತ್ತೀಯಾ?” ಆಗ ಮಯಾಂಕ್ ಹೇಳಿದ್ದು- “ನಿಮ್ಮ ಇಚ್ಛೆಯಂತೆ ನಾನು ಮಾಡುತ್ತೇನೆ”. ಹೀಗಾಗಿಯೇ ಅವರು ಕ್ರಿಕೆಟ್ ಆಡಲು ನಿರ್ಧರಿಸಿದ್ದಾರೆ.

ಇದಾದ ನಂತರ ಮಯಾಂಕ್ ಜಿಮ್ಖಾನಾ ಕ್ರಿಕೆಟ್ ಕ್ಲಬ್‌ಗೆ ಪ್ರವೇಶ ಪಡೆದರು. ಆಟವಾಡುವುದರೊಂದಿಗೆ ಕ್ರಮೇಣ ವೇಗದ ಬೌಲಿಂಗ್ ನಲ್ಲಿಯೂ ಮಯಾಂಕ್ ಮಗ್ನರಾದರು. 16 ನೇ ವಯಸ್ಸಿನಲ್ಲಿ, ಮಯಾಂಕ್ ಸಾನೆಟ್ ಕ್ಲಬ್‌ಗೆ ಸೇರಿದರು. ಅಲ್ಲಿ ಕೋಚ್ ತಾರಕ್ ಸಿನ್ಹಾ ಅವರು, ಮಯಾಂಕ್ ಪ್ರತಿಭೆಯನ್ನು ಬೆಳಗುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಅಭ್ಯಾಸ ನಿರಾಕರಿಸಿದ್ದ ಕೋಚ್

ಮಯಾಂಕ್ ಅವರ ವೇಗ ಮತ್ತು ಲೈನ್-ಲೆಂತ್ ನೋಡಿ ಕೋಚ್ ಆಶ್ಚರ್ಯಚಕಿತರಾದರು. ಮಯಾಂಕ್ ಯಾದವ್ 6 ಅಡಿ 1 ಇಂಚು ಎತ್ತರವಿದ್ದಾರೆ. ಅವರು ಐಪಿಎಲ್ ಆಡುವ ಮೊದಲು ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿ ಪರ ಆಡುತ್ತಿದ್ದರು. ಇವರು ವೇಗ ಮತ್ತು ಅಪಾಯಕಾರಿ ಬೌನ್ಸರ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಡೆಲ್ಲಿ ಬ್ಯಾಟ್ಸ್‌ಮನ್‌ಗಳು ಇವರನ್ನು ಕಂಡರೆ ಹೆದರುತ್ತಿದ್ದರಂತೆ. ಇದೇ ಕಾರಣಕ್ಕೆ ಮಯಾಂಕ್ 14 ವರ್ಷದವರಾಗಿದ್ದಾಗ ಅವರ ಕೋಚ್ ತಾರಕ್ ಸಿನ್ಹಾ ತಮ್ಮ ವಯಸ್ಸಿನ ಹುಡುಗರೊಂದಿಗೆ ಅಭ್ಯಾಸ ಮಾಡಲು ನಿರಾಕರಿಸಿದ್ದರಂತೆ.‌

ಐಪಿಎಲ್‌ ಪದಾರ್ಪಣೆ

ಮಯಾಂಕ್ ಅವರನ್ನು ಐಪಿಎಲ್‌ಗೆ ಕರೆತಂದಿದ್ದು ವಿಜಯ್ ದಹಿಯಾ. ಲಕ್ನೋ ಸೂಪರ್‌ಜೈಂಟ್ಸ್‌ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಅವರು ಇದೀಗ ಟೀಮ್ ಇಂಡಿಯಾ ಪರ ಆಡಲು ಸಜ್ಜಾಗಿದ್ದಾರೆ. ಗಂಟೆಗೆ 156.7 ಕಿಲೋ ಮೀಟರ್ ವೇಗದಲ್ಲಿ ಚೆಂಡನ್ನು ಎಸೆಯುವ ಮಯಾಂಕ್, ಟೀಮ್ ಇಂಡಿಯಾದ ದಿಗ್ಗಜ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯಂತೆ ಸಸ್ಯಾಹಾರಿ. ನಾಲ್ಕು ವರ್ಷಗಳ ಹಿಂದೆ ನಾನ್ ವೆಜ್ ನಿಲ್ಲಿಸಿದ್ದ ಎಂದು ತಂದೆ ಪ್ರಭು ಯಾದವ್ ಹೇಳಿದ್ದಾರೆ. ತಮ್ಮ ಕರಿಯರ್‌ಗಾಗಿ ಶಿಸ್ತುಬದ್ಧ ಡಯೆಟ್‌ ಆರಂಭಿಸಲು ಮಯಾಂಕ್‌ ನಿರ್ಧರಿಸಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಭಾರತ ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಮಯಾಂಕ್ ಯಾದವ್.

Whats_app_banner