ವಿರಾಟ್ ಆಟ ನೋಡಲೆಂದೇ ಬಂದಿದ್ದೆ, ಕೊಹ್ಲಿ ಔಟಾದಾಗ ಹೃದಯ ಚೂರಾಯ್ತು; ಪಾಕ್ ಬ್ಯೂಟಿಯ ಬ್ಯೂಟಿಫುಲ್ ಮಾತಿಗೆ ಫ್ಯಾನ್ಸ್ ಫಿದಾ, VIDEO
Virat Kohli fan from Pakistan: ನಾನು ಕಿಂಗ್ ಕೊಹ್ಲಿಗೆ ದೊಡ್ಡ ಅಭಿಮಾನಿ. ಕೊಹ್ಲಿ ಆಟ ನೋಡುವುದಕ್ಕಾಗಿ ಇಲ್ಲಿಗೆ ಬಂದಿದ್ದೆ. ಅವರು ಸೆಂಚುರಿ ಸಿಡಿಸುತ್ತಾರೆ ಎಂದು ನಿರೀಕ್ಷಿಸಿದ್ದೆ. ಆದರೆ ನಿರಾಸೆಯಾಯಿತು ಎಂದು ಪಾಕಿಸ್ತಾನದ ವಿರಾಟ್ ಕೊಹ್ಲಿ ಅಭಿಮಾನಿ ಬೇಸರ ವ್ಯಕ್ತಪಡಿಸಿದ್ದಾರೆ.
ಏಷ್ಯಾಕಪ್ ಟೂರ್ನಿಯಲ್ಲಿ (Asia Cup 2023) ಸೆಪ್ಟೆಂಬರ್ 2ರಂದು ನಡೆದ ಭಾರತ-ಪಾಕಿಸ್ತಾನ (India vs Pakistan) ನಡುವಿನ ಹೈವೋಲ್ಟೇಜ್ ಕದನವು ಫಲಿತಾಂಶ ಕಾಣದೆ ಅಂತ್ಯಗೊಂಡಿದ್ದು, ಕೋಟ್ಯಂತರ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿತು. ಮಳೆ ಅಡ್ಡಿಪಡಿಸದೇ ಇದ್ದಿದ್ದರೆ, ಪಂದ್ಯ ಮತ್ತಷ್ಟು ರೋಚಕತೆಯಿಂದ ಕೂಡಿರುತ್ತಿತ್ತು ಎಂಬುದು ಅಷ್ಟೇ ಸತ್ಯ. ಇದರ ನಡುವೆಯೂ ಪಂದ್ಯವು ಕೆಲವು ರೋಚಕ ಘಟನೆಗಳಿಗೆ ಸಾಕ್ಷಿಯಾಯಿತು.
ರೋಹಿತ್ ಪಡೆಯ ಬ್ಯಾಟಿಂಗ್ ನೋಡಿದರೂ, ಮಳೆಯಿಂದ ಬೌಲಿಂಗ್ ಕಣ್ತುಂಬಿಕೊಳ್ಳಲು ಸಾಧ್ಯವಾಗಲಿಲ್ಲ. ಭಾರತ ಗೆಲ್ಲುವ ವಿಶ್ವಾಸ ಇತ್ತು ಎಂಬುದು ಭಾರತೀಯ ಅಭಿಮಾನಿಗಳ ಮಾತು. ಆದರೆ ಪಂದ್ಯಕ್ಕೂ ಮುನ್ನ ಭಾರಿ ನಿರೀಕ್ಷೆ ಹುಟ್ಟಿಸಿದ್ದ ವಿರಾಟ್ ಕೊಹ್ಲಿ (Virat Kohli), 4 ರನ್ ಗಳಿಸಿ ಇನ್ಸೈಡ್ ಎಡ್ಜ್ನಿಂದ ಔಟಾಗಿದ್ದು, ಪಂದ್ಯದ ಫಲಿತಾಂಶಕ್ಕಿಂತ ಹೆಚ್ಚು ನಿರಾಸೆ ಮೂಡಿಸಿತು. ಕೊಹ್ಲಿ ಬ್ಯಾಟಿಂಗ್ ನೋಡಲೆಂದೇ ಮೈದಾನಕ್ಕೆ ಬಂದಿದ್ದ ಅಭಿಮಾನಿಗಳ ಹೃದಯ ಚೂರಾಯಿತು.
ಇದು ಭಾರತದ ಅಭಿಮಾನಿಗಳಿಗೆ ಮಾತ್ರವಲ್ಲ, ಪಾಕಿಸ್ತಾನದ ಕೊಹ್ಲಿ ಅಭಿಮಾನಿಗಳಿಗೂ ನಿರಾಸೆ ಮೂಡಿಸಿದೆ. ಅದಕ್ಕೆ ಸಾಕ್ಷಿ ಈ ಮಹಿಳಾ ಅಭಿಮಾನಿ. ಅವರು ಕಿಂಗ್ ಕೊಹ್ಲಿ ಬ್ಯಾಟಿಂಗ್ ನೋಡುವ ಸಲುವಾಗಿಯೇ ಪಾಕಿಸ್ತಾನದಿಂದ ಲಂಕಾಗೆ ಬಂದಿದ್ದರು. ಆದರೆ ವಿರಾಟ್ ಬೇಗನೇ ಔಟಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಆಕೆ ದಾಖಲೆಗಳ ಸರದಾರನ ಕುರಿತು ಆಡಿದ ಮಾತುಗಳು ಭಾರತೀಯರ ಹೃದಯ ಗೆದ್ದಿವೆ.
ಪಾಕ್ ಮಹಿಳಾ ಅಭಿಮಾನಿ ಹೇಳಿದ್ದೇನು?
ಮಳೆಯಿಂದ ಪಂದ್ಯ ರದ್ದಾದ ಬಳಿಕ ಪಾಕಿಸ್ತಾನದ ಮಹಿಳೆ, ನಾನು ಕಿಂಗ್ ಕೊಹ್ಲಿಗೆ ದೊಡ್ಡ ಅಭಿಮಾನಿ. ಕೊಹ್ಲಿ ಆಟ ನೋಡುವುದಕ್ಕಾಗಿ ಇಲ್ಲಿಗೆ ಬಂದಿದ್ದೆ. ಅವರು ಸೆಂಚುರಿ ಸಿಡಿಸುತ್ತಾರೆ ಎಂದು ನಿರೀಕ್ಷಿಸಿದ್ದೆ. ಆದರೆ ನಿರಾಸೆಯಾಯಿತು. ವಿರಾಟ್ ಬೇಗನೇ ವಿಕೆಟ್ ಒಪ್ಪಿಸಿದ ತಕ್ಷಣವೇ ಹೃದಯ ಚೂರಾದಂತಾಯಿತು ಎಂದಿದ್ದಾರೆ. ಇದೇ ವೇಳೆ ನೀವು ಬಾಬರ್ ಅಜಮ್ ಮತ್ತು ವಿರಾಟ್ ಕೊಹ್ಲಿ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡುತ್ತೀರಿ ಎಂಬ ಪ್ರಶ್ನೆಯನ್ನು ಎದುರಿಸಿದರು. ಅದಕ್ಕೆ ಉತ್ತರಿಸಿದ ಅವರು, ನಗುತ್ತಾ ತಮ್ಮ ಕೈ ಬೆರಳುಗಳಿಂದ ವಿ ಚಿಹ್ನೆ ತೋರಿಸಿ, ವಿರಾಟ್ ಕೊಹ್ಲಿ ಎಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
4 ರನ್ ಗಳಿಸಿ ಅಫ್ರಿದಿಗೆ ವಿಕೆಟ್ ಒಪ್ಪಿಸಿದ ಕೊಹ್ಲಿ
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಔಟಾದ ಬೆನ್ನಲ್ಲೇ ಕಣಕ್ಕಿಳಿದ ವಿರಾಟ್ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಪಾಕಿಸ್ತಾನದ ವಿರುದ್ಧ ಅಬ್ಬರಿಸುತ್ತಾರೆ ಎಂದು ವಿಶ್ವಾಸ ಇಡಲಾಗಿತ್ತು. ಆದರೆ ಕವರ್ ಡ್ರೈವ್ನಲ್ಲಿ ಸೊಗಸಾದ ಬೌಂಡರಿ ಸಿಡಿಸಿದ ಕೊಹ್ಲಿ, ಶಾಹೀನ್ ಅಫ್ರಿದಿ ಬೌಲಿಂಗ್ನಲ್ಲಿ ಇನ್ ಸೈಡ್ ಎಡ್ಜ್ ಆಗಿ ಬೋಲ್ಡ್ ಆದರು. 4 ರನ್ ಗಳಿಸಿ ಮೈದಾನ ತೊರೆದರು. ಇದು ಕೋಟ್ಯಂತರ ಅಭಿಮಾನಿಗಳಿಗೆ ಭಾರಿ ನಿರಾಸೆ ಉಂಟು ಮಾಡಿತು.