Video: ಮೈದಾನಕ್ಕೆ ನುಗ್ಗಿ ಕೊಹ್ಲಿ ಪಾದ ಮುಟ್ಟಿ ತಬ್ಬಿಕೊಂಡ ಅಭಿಮಾನಿ; ಭದ್ರತೆ ಉಲ್ಲಂಘಿಸಿದ ಫ್ಯಾನ್ ಅರೆಸ್ಟ್
Virat Kohli: ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆದ ಭಾರತ vs ಅಫ್ಘಾನಿಸ್ತಾನ ನಡುವಿನ ಟಿ20 ಪಂದ್ಯದ ವೇಳೆ ವಿರಾಟ್ ಕೊಹ್ಲಿಯನ್ನು ಭೇಟಿಯಾಗಲು ಯುವಕನೊಬ್ಬ ಭದ್ರತೆ ಉಲ್ಲಂಘಿಸಿದ್ದಾನೆ. ಅಭಿಮಾನಿಯನ್ನು ಬಳಿಕ ಪೊಲೀಸರು ಬಂದಿದ್ದಾರೆ.
ಭಾರತದ ಅತ್ಯಂತ ಸ್ವಚ್ಛಂದ ನಗರಿ ಇಂದೋರ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತವು (India vs Afghanistan) ಆರು ವಿಕೆಟ್‌ಗಳ ಸುಲಭ ಜಯ ಸಾಧಿಸಿತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅಬ್ಬರಿಸಿದ ರೋಹಿತ್ ಶರ್ಮಾ ಬಳಗವು ಸರಣಿಯನ್ನು ತನ್ನದಾಗಿಸಿಕೊಂಡಿತು.
ಈ ಪಂದ್ಯದ ಮೂಲಕ ಅನುಭವಿ ಆಟಗಾರ ವಿರಾಟ್ ಕೊಹ್ಲಿ ವರ್ಷದ ಬಳಿಕ ಟಿ20 ಕ್ರಿಕೆಟ್‌ಗೆ ಮರಳಿದರು. 2022ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಆಡಿದ್ದ ಕಿಂಗ್, ನವೆಂಬರ್ ತಿಂಗಳ ಬಳಿಕ ಚುಟುಕು ಸ್ವರೂಪದಲ್ಲಿ ಆಡಿರಲಿಲ್ಲ. ಇಂದೋರ್‌ನಲ್ಲಿ ನೆಚ್ಚಿನ ಕ್ರಿಕೆಟಿಗನನ್ನು ಕಂಡು ಅಭಿಮಾನಿಗಳು ಪುಳಕಿತರಾದರು. ಪಂದ್ಯದುದ್ದಕ್ಕೂ ಅಭಿಮಾನಿಗಳು ಕೊಹ್ಲಿ ಹೆಸರನ್ನು ಆಗಾಗ ಜಪಿಸುತ್ತಿದ್ದರು.
ಈ ನಡುವೆ ಅಫ್ಘಾನಿಸ್ತಾನದ ಇನ್ನಿಂಗ್ಸ್ ವೇಳೆ ಕೊಹ್ಲಿಯ ಅಪ್ಪಟ ಅಭಿಮಾನಿಯೊಬ್ಬ ಭದ್ರತೆಯನ್ನು ಮೀರಿ ಮೈದಾನಕ್ಕೆ ಹಾರಿಬಂದು ಕೊಹ್ಲಿಯನ್ನು ಭೇಟಿಯಾಗಿದ್ದಾನೆ. ಬೌಂಡರಿ ಲೈನ್ ಬಳಿ ನಿಂತು ಫೀಲ್ಡಿಂಗ್ ಮಾಡುತ್ತಿದ್ದ ಕೊಹ್ಲಿಯ ಪಾದಗಳನ್ನು ಮುಟ್ಟಿ ಅಪ್ಪಿಕೊಂಡು ತನ್ನ ಜೀವನ ಮಹತ್ವದ ಆಸೆಯನ್ನು ತೀರಿಸಿಕೊಂಡಿದ್ದಾನೆ.
ಇದನ್ನೂ ಓದಿ | ಜೈಸ್ವಾಲ್, ಶಿವಂ ದುಬೆ ಅಬ್ಬರ; ಅಫ್ಘಾನಿಸ್ತಾನ ವಿರುದ್ಧ 2ನೇ ಟಿ20ಯಲ್ಲೂ ಭಾರತಕ್ಕೆ ಗೆಲುವು, ಸರಣಿ ಕೈವಶ
ಮೈದಾನಕ್ಕೆ ನುಗ್ಗಿದ ಅಭಿಮಾನಿಯನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಯುವಕನನ್ನು ತುಕೋಗಂಜ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ
ಯುವಕನು ಟಿಕೆಟ್ ಖರೀದಿಸಿ ಪಂದ್ಯ ನೋಡಲು ಬಂದಿದ್ದು, ನರೇಂದ್ರ ಹಿರ್ವಾನಿ ಗೇಟ್ ಮೂಲಕ ಹೋಳ್ಕರ್ ಕ್ರೀಡಾಂಗಣಕ್ಕೆ ಪ್ರವೇಶಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯುವಕನು ಕೊಹ್ಲಿಯ ಕಟ್ಟಾ ಅಭಿಮಾನಿಯಾಗಿದ್ದು, ಹಿರಿಯ ಆಟಗಾರನನ್ನು ಭೇಟಿಯಾಗಬೇಕೆಂಬ ಆಸೆಯಿಂದ ಪ್ರೇಕ್ಷಕರ ಗ್ಯಾಲರಿಯ ಬೇಲಿ ಏರಿ ನೇವರವಾಗಿ ಮೈದಾನ ಪ್ರವೇಶಿಸಿದ್ದಾಗಿ ಅವರು ಹೇಳಿದ್ದಾರೆ. ಸದ್ಯ ಯುವಕನ ವಿಚಾರಣೆ ನಡೆಸಲಾಗುತ್ತಿದ್ದು, ವಿಚಾರಣೆ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ನಡುವೆ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಅಭಿಮಾನಿಯೊಬ್ಬ, ಕೊಹ್ಲಿಯನ್ನು ತಬ್ಬಿಕೊಳ್ಳಲು ಭದ್ರತೆ ಉಲ್ಲಂಘಿಸಿದ ವ್ಯಕ್ತಿ ತಾನೇ ಎಂದು ಹೇಳಿಕೊಂಡಿದ್ದಾನೆ. @sigma__male_ ಎಂಬ ಹೆಸರಿನ ಎಕ್ಸ್ ಖಾತೆ ಬಳಸುವ ಆರವ್ ಎಂಬ ವ್ಯಕ್ತಿಯು, ಇದು ತನ್ನ ಜೀವನದ ಅತಿ ದೊಡ್ಡ ಸಾಧನೆ ಎಂದು ಹೇಳಿಕೊಂಡಿದ್ದಾನೆ. ಆದರೆ ಈ ವ್ಯಕ್ತಿಯ ಕುರಿತು ಪೊಲೀಸರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ಇಂದೋರ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ, ಅಫ್ಘನ್ ತಂಡಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿದರು. ಅದರಂತೆ ಇನ್ನಿಂಗ್ಸ್ ಆರಂಭಿಸಿದ ಪ್ರವಾಸಿ ತಂಡ, ಗುಲ್ಬದೀನ್ ನಯೀಬ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 172 ರನ್ಗಳಿಗೆ ಆಲೌಟ್ ಆಯಿತು. ಅರ್ಷದೀಪ್ 3, ಅಕ್ಷರ್ ಪಟೇಲ್, ರವಿ ಬಿಷ್ಣೋಯ್ ತಲಾ 2 ವಿಕೆಟ್ ಪಡೆದು ಮಿಂಚಿದರು. 173 ರನ್ಗಳ ಗುರಿ ಬೆನ್ನಟ್ಟಿದ ಭಾರತ, 15.4 ಓವರ್ಗಳಲ್ಲಿ ಭಾರತ ಗೆದ್ದು ಬೀಗಿತು.