RCB Team Analysis: ಅತ್ಯುತ್ತಮ ಪಡೆಯನ್ನೇ ಖರೀದಿಸಿದ ತೃಪ್ತಿ ಜೊತೆಗೆ ಅಷ್ಟೇ ಉತ್ತಮ ಆಟಗಾರರನ್ನು ಕೈಬಿಟ್ಟ ಅತೃಪ್ತಿಯೂ ಇದೆ!
ಕನ್ನಡ ಸುದ್ದಿ  /  ಕ್ರಿಕೆಟ್  /  Rcb Team Analysis: ಅತ್ಯುತ್ತಮ ಪಡೆಯನ್ನೇ ಖರೀದಿಸಿದ ತೃಪ್ತಿ ಜೊತೆಗೆ ಅಷ್ಟೇ ಉತ್ತಮ ಆಟಗಾರರನ್ನು ಕೈಬಿಟ್ಟ ಅತೃಪ್ತಿಯೂ ಇದೆ!

RCB Team Analysis: ಅತ್ಯುತ್ತಮ ಪಡೆಯನ್ನೇ ಖರೀದಿಸಿದ ತೃಪ್ತಿ ಜೊತೆಗೆ ಅಷ್ಟೇ ಉತ್ತಮ ಆಟಗಾರರನ್ನು ಕೈಬಿಟ್ಟ ಅತೃಪ್ತಿಯೂ ಇದೆ!

IPL Auction 2025: ಐಪಿಎಲ್ 2025 ಮೆಗಾ ಹರಾಜಿನಲ್ಲಿ ಆರ್​ಸಿಬಿ ಅತ್ಯುತ್ತಮ ಪಡೆಯನ್ನೇ ಖರೀದಿಸಿದ ತೃಪ್ತಿಯ ಜೊತೆಗೆ ಅಷ್ಟೇ ಉತ್ತಮ ಆಟಗಾರರನ್ನು ಕೈಬಿಟ್ಟ ಅತೃಪ್ತಿಯೂ ಇದೆ. ಇಲ್ಲಿದೆ ವಿವರಣೆ.

ಅತ್ಯುತ್ತಮ ಪಡೆಯನ್ನೇ ಖರೀದಿಸಿದ ತೃಪ್ತಿ ಜೊತೆಗೆ ಅಷ್ಟೇ ಉತ್ತಮ ಆಟಗಾರರನ್ನು ಕೈಬಿಟ್ಟ ಅತೃಪ್ತಿಯೂ ಇದೆ!
ಅತ್ಯುತ್ತಮ ಪಡೆಯನ್ನೇ ಖರೀದಿಸಿದ ತೃಪ್ತಿ ಜೊತೆಗೆ ಅಷ್ಟೇ ಉತ್ತಮ ಆಟಗಾರರನ್ನು ಕೈಬಿಟ್ಟ ಅತೃಪ್ತಿಯೂ ಇದೆ!

ಐಪಿಎಲ್​​ 2025 ಮೆಗಾ ಹರಾಜಿನಲ್ಲಿ (IPL Mega Auction 2025) ಆರ್​​ಸಿಬಿ ಉತ್ತಮ ಆಟಗಾರರ ಖರೀದಿಸಿ ಸಮತೋಲಿತ ತಂಡವನ್ನು ಕಟ್ಟಿದೆ. ಯಾವುದೇ ಗೊಂದಲಕ್ಕೆ ಒಳಗಾಗದೆ ಅಳೆದು ತೂಗಿ ಬೆಲೆ ಬಾಳುವ ಆಟಗಾರರಿಗೆ ಮಣೆ ಹಾಕಿದೆ. ಈ ಹಿಂದಿನ ಹರಾಜುಗಳಿಗೆ ಹೋಲಿಸಿದರೆ, ಈ ಸಲ ಅತ್ಯಂತ ಜಾಣತನ ತೋರಿದೆ. ಹೆಚ್ಚು ಉತ್ಸಾಹಕ್ಕೆ ಒಳಗಾಗದೆ, ತಾಳ್ಮೆಯಿಂದ ತಂತ್ರಗಳನ್ನು ಹೆಣೆಯಿತು. ಆಟಗಾರನ ಯೋಗ್ಯತೆ ಮೀರಿ ಪಾವತಿಸಲು ಜಿಪುಣತನ ತೋರಿಸಿದ್ದೂ ಕಂಡು ಬಂತು. ಬಹುತೇಕ ಆಟಗಾರರಿಗೆ ಅತ್ತ ಹೆಚ್ಚೂ ಇಲ್ಲ, ಇತ್ತ ಕಡಿಮೆಯೂ ಇಲ್ಲ ಎನ್ನುವ ರೀತಿ ಬಂಡವಾಳ ಹೂಡಿದೆ. ಹರಾಜು ಮೊದಲ ದಿನ ಟೀಕೆಗೆ ಗುರಿಯಾಗಿದ್ದ ಆರ್​ಸಿಬಿ (RCB), ಎರಡನೇ ದಿನದಂದು ಶಹಬ್ಬಾಸ್​ಗಿರಿ ಪಡೆದುಕೊಂಡಿತು.

ಹಿಂದಿನ ಐಪಿಎಲ್ ಹರಾಜುಗಳಲ್ಲಿ ಸ್ಟಾರ್​​ಗಳನ್ನೇ ಟಾರ್ಗೆಟ್ ಮಾಡುತ್ತಿತ್ತು. ಈ ಸಲ ಹಾಗೆ ಮಾಡಲಿಲ್ಲ, ಆಟಗಾರರನ್ನು ಬ್ಯಾಲೆನ್ಸ್​ ಮಾಡಲು ಚಿಂತನೆ ನಡೆಸಿತು. ಹಾಗಂತ 100ಕ್ಕೆ ನೂರರಷ್ಟು ಉತ್ತಮವಾಗಿ ಬಿಡ್ ಮಾಡಿದೆ ಎಂದರ್ಥವಲ್ಲ, ಕೆಲವೊಂದಿಷ್ಟು ಎಡವಟ್ಟುಗಳನ್ನೂ ಮಾಡಿತು. ಏಕೆಂದರೆ ತಾನು ಖರೀದಿಸಿದ ಆಟಗಾರರು ಪಡೆದ ಮೊತ್ತಕ್ಕೆ, ಕೈಬಿಟ್ಟ ಅತ್ಯುತ್ತಮ ಆಟಗಾರರು ಸಹ ಬಿಕರಿಯಾಗಿದ್ದಾರೆ. ಕೆಎಲ್ ರಾಹುಲ್​ಗೆ 10.75 ಕೋಟಿಯ ತನಕ ಬಿಡ್ ಸಲ್ಲಿಸಿ, ನಂತರ ಸುಮ್ಮನಾಯಿತು. ಆದರೆ ಆತ ಖರೀದಿಯಾಗಿದ್ದು 14 ಕೋಟಿಗೆ. ಮಿಚೆಲ್ ಸ್ಟಾರ್ಕ್​​ಗೆ 9 ಕೋಟಿ ತನಕ ಬಿಡ್ ಸಲ್ಲಿಸಿತು. ಆದರೆ ಸೇಲ್ ಆಗಿದ್ದು 11.75 ಕೋಟಿಗೆ. ಫಿನಿಷರ್ ಡೇವಿಡ್​ ಮಿಲ್ಲರ್​ ಮಧ್ಯದಲ್ಲಿ ಬಿಡ್ ಸಲ್ಲಿಸಿ ಸುಮ್ಮನಾಯಿತು. ಅವರು ಸಹ 7.5 ಕೋಟಿ ಬಿಕರಿಯಾದರು.

ಆರ್​ಸಿಬಿ ಉತ್ತಮ ಖರೀದಿಗಳು

ಆರ್​​ಸಿಬಿಯ ಉತ್ತಮ ಖರೀದಿ ಅಂದರೆ ಭುವನೇಶ್ವರ್ ಕುಮಾರ್​. ಸ್ವಿಂಗ್ ಕಿಂಗ್ ಭುವಿ ತನ್ನ ಐಪಿಎಲ್ ವೃತ್ತಿಜೀವನ ಆರಂಭಿಸಿದ್ದ ಆರ್​​ಸಿಬಿ ತಂಡದೊಂದಿಗೆ. ಇದೀಗ ಮತ್ತೆ ಅದೇ ತಂಡಕ್ಕೆ ಮರಳಿದ್ದಾರೆ. ಭುವಿ ಬೌಲಿಂಗ್ ಬಗ್ಗೆ ಹೊಸದಾಗಿ ಬಿಡಿಸಿ ಹೇಳುವುದೇನಿಲ್ಲ. ಪವರ್​​ಪ್ಲೇ ಮತ್ತು ಡೆತ್​ ಓವರ್​ಗಳಲ್ಲಿ ವಿಕೆಟ್ ಟೇಕಿಂಗ್ ಬೌಲರ್. ತನ್ನ ಸ್ವಿಂಗ್ ಬೌಲಿಂಗ್​ ಮೂಲಕ ಎದುರಾಳಿಗಳ ದಿಕ್ಕು ತಪ್ಪಿಸುತ್ತಾರೆ. ಮತ್ತೆರಡು ಉತ್ತಮ ಖರೀದಿ ಅಂದರೆ ಜೋಶ್ ಹೇಜಲ್​ವುಡ್ ಮತ್ತು ಲಿಯಾಮ್ ಲಿವಿಂಗ್​​ಸ್ಟನ್. ವಿಶ್ವಶ್ರೇಷ್ಠ ಬೌಲರ್ ಎಂದೇ ಗುರುತಿಸಿಕೊಂಡಿರುವ ಜೋಶ್ ಸಹ ಪವರ್​​ಪ್ಲೇ, ಡೆತ್ ಓವರ್​​ಗಳಲ್ಲಿ ಜಾದೂ ಮಾಡಲಿದ್ದಾರೆ. ಲಿವಿಂಗಸ್ಟನ್​ ಹೊಡಿಬಿಡಿ ಆಟಗಾರ. ಕಡಿಮೆ ಎಸೆತಗಳಲ್ಲಿ ದೊಡ್ಡ ಗುರಿ ಇದ್ದರೂ ಅದನ್ನು ಮುಟ್ಟುವ ತಾಕತ್ತು ಇವರಿಗಿದೆ.

ಫಿಲ್ ಸಾಲ್ಟ್​ ವಿದೇಶಿ ಆಯ್ಕೆಗಳಲ್ಲಿ ಅತ್ಯುತ್ತಮ ಖರೀದಿಯಾಗಿದೆ. ಆರಂಭಿಕನಾಗಿ ಬ್ಯಾಟಿಂಗ್ ಮಾಡುವುದಲ್ಲದೆ, ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ. ಅಲ್ಲದೆ, ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ತಂಡವನ್ನು ರಕ್ಷಿಸುತ್ತಾರೆ. ಟಿಮ್ ಡೇವಿಡ್ ಸಹ ಹೊಡಿಬಡಿ ದಾಂಡಿಗನೇ. ಕೊನೆಯಲ್ಲಿ ಕಡಿಮೆ ಎಸೆತಗಳಿಗೆ ಹೆಚ್ಚು ರನ್ ಗಳಿದ್ದರೂ ಗೆಲ್ಲಿಸಿಕೊಡಬಲ್ಲ ತಾಕತ್ತು ಹೊಂದಿದ್ದಾರೆ. ಜಿತೇಶ್ ಶರ್ಮಾ ಉತ್ತಮ ಪಿಕ್ ಆಗಿದ್ದರೂ 11 ಕೋಟಿ ಬಾಳುವ ಆಟಗಾರನಲ್ಲ. ಏಕೆಂದರೆ ಆತನ ಹಿಂದಿನ ಪ್ರದರ್ಶನಗಳು ಇದನ್ನೇ ಹೇಳುತ್ತವೆ. ಜೇಕಬ್ ಬೆಥೆಲ್ ಆಲ್​ರೌಂಡರ್​ ಆಗಿದ್ದು, ಮಧ್ಯಮ ಕ್ರಮಾಂಕದ ಆಟಗಾರ. ಸುಯಾಶ್ ಶರ್ಮಾ, ಸ್ವಪ್ನಿಲ್ ಸಿಂಗ್, ಕೃನಾಲ್ ಪಾಂಡ್ಯ ಸ್ಪಿನ್ ಜೋಡಿಯೂ ಉತ್ತಮವಾಗಿದೆ. ಮೂವರು ಸಹ ಅಗತ್ಯವಿದ್ದಾಗೆಲ್ಲಾ ವಿಕೆಟ್ ಕೀಳುವ ಪ್ರತಿಭಾವಂತರು.

ರೊಮಾರಿಯೋ ಶೆಫರ್ಡ್ ಅಮವಾಸ್ಯೆ ಹುಣ್ಣಿಮೆಗೊಂದು ಅದ್ಭುತ ಇನ್ನಿಂಗ್ಸ್​ ಆಡುತ್ತಾರಷ್ಟೆ. ಅವರ ವೃತ್ತಿಜೀವನವನ್ನು ಒಮ್ಮೆ ಕೆದಕಿ ನೋಡಿದ ಬಳಿಕ ಇದು ಗೊತ್ತಾಯಿತು. ಥೇಟ್ ಲಸಿತ್ ಮಾಲಿಂಗನಂತೆ ಬೌಲಿಂಗ್ ಮಾಡುವ ನುವಾನ್ ತುಷಾರ ತನ್ನ ಬೌಲಿಂಗ್​ನಲ್ಲಿ ಆಗೊಮ್ಮೆ ಹೀಗೊಮ್ಮೆ ಉತ್ತಮ ಬೌಲಿಂಗ್ ನಡೆಸುತ್ತಾರೆ. ಕಳೆದ ವರ್ಷ ಮುಂಬೈ ಪರ ಆಡಿದ್ದರೂ ಗಮನ ಸೆಳೆಯುವ ಪ್ರದರ್ಶನ ನೀಡಿರಲಿಲ್ಲ. ಮಹಾರಾಜ ಟ್ರೋಫಿಯಲ್ಲಿ ಸಿಡಿದೆದ್ದಿದ್ದ ಕರ್ನಾಟಕದ ಮನೋಜ್ ಭಾಂಡಗೆ ತಂಡದಲ್ಲಿದ್ದರೂ ಅವಕಾಶ ನೀಡುವುದಿಲ್ಲ. ದೇವದತ್ ಪಡಿಕ್ಕಲ್ ಇತ್ತೀಚೆಗೆ ವೈಫಲ್ಯದ ಸುಳಿಯಲ್ಲಿ ಸಿಲುಕಿ ರನ್ ಗಳಿಲು ಪರದಾಡ್ತಿದ್ದಾರೆ. ಆದರೆ ಐಪಿಎಲ್​ ಶುರುವಾಗುವುದರೊಳಗೆ ಫಾರ್ಮ್​ಗೆ ಬಂದರೆ ಉತ್ತಮ. ಸ್ವಸ್ತಿಕ್ ಚಿಕಾರ್, ಅಭಿನಂದನ್ ಸಿಂಗ್, ಮೋಹಿತ್ ರಾಠಿ ದೇಶೀಯ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಅವಕಾಶ ಸಿಗುವುದು ಭಾರಿ ಕಷ್ಟ. ಲುಂಗಿ ಎನ್​ಗಿಡಿಯದ್ದೂ ಇದೇ ಕಥೆ.

ಆರ್​ಸಿಬಿ ಮಾಡಿದ ತಪ್ಪುಗಳು

ಕನ್ನಡಿಗ ಕೆಎಲ್ ರಾಹುಲ್ ಖರೀದಿಗೆ ಒಲವು ತೋರದ ಆರ್​​ಸಿಬಿ, ಮಿಚೆಲ್ ಸ್ಟಾರ್ಕ್​ ಅವರನ್ನೂ ಕೈಬಿಟ್ಟಿತು. ಗ್ಲೆನ್ ಮ್ಯಾಕ್ಸ್​ವೆಲ್ ಕಳೆದ ಸೀಸನ್​​ನಲ್ಲಿ ಉತ್ತಮವಾಗಿ ಆಡಿಲ್ಲ ಎಂಬ ಕಾರಣಕ್ಕೆ ಅತಿ ಕಡಿಮೆ ಬೆಲೆಗೆ (4.20 ಕೋಟಿ) ಸಿಕ್ಕರೂ ಆರ್​​ಟಿಎಂ ಕಾರ್ಡ್​ ಬಳಸಲಿಲ್ಲ. ಅಲ್ಲದೆ, ವಿಲ್​ ಜಾಕ್ಸ್ (5.25 ಕೋಟಿ)​ ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ ಆತನಿಗಾಗಿ ಬಿಡ್ ಮಾಡಲು ಆರ್​​ಸಿಬಿ ಹಿಂದೆ ಮುಂದೆ ನೋಡಿದ್ದು ವಿಪರ್ಯಾಸ. ಟಿಮ್ ಡೇವಿಡ್​ ಖರೀದಿಸುವ ಬದಲಿಗೆ ವಿಲ್ ಜಾಕ್ಸ್ ಖರೀದಿಸಿದ್ದರೆ ಇನ್ನೂ ಉತ್ತಮವಾಗಿರುತ್ತಿತ್ತು. ಫಿನಿಷಿಂಗ್ ಸ್ಥಾನಕ್ಕೆ ಡೇವಿಡ್ ಮಿಲ್ಲರ್ ಅವರು 7.50 ಕೋಟಿಗೆ ಸೇಲಾದರೂ ಖರೀದಿಸಿಲ್ಲ. ಮೊಹಮ್ಮದ್ ಸಿರಾಜ್ ಖರೀದಿಗೂ ಪ್ರಯತ್ನಿಸಲಿಲ್ಲ. ಇವರನ್ನೆಲ್ಲಾ ಬಿಟ್ಟು ವೆಂಕಟೇಶ್​ ಅಯ್ಯರ್​ಗಾಗಿ 23.50 ಕೋಟಿಯ ತನಕ ಬಿಡ್​ ಮಾಡಿದ್ದು ಅಚ್ಚರಿ ಎನಿಸಿತು. ಒಟ್ಟಿನಲ್ಲಿ ಎಷ್ಟು ಉತ್ತಮ ಆಟಗಾರರನ್ನು ಖರೀದಿಸಿತೋ, ಅಷ್ಟೇ ಉತ್ತಮ ಆಟಗಾರರನ್ನು ಕೈಬಿಟ್ಟಿತು.

Whats_app_banner