ಕನ್ನಡ ಸುದ್ದಿ  /  Cricket  /  Reserve Day For Semi Finals And Final Of T20 World Cup 10 Over Mark For Rain Affected Knockouts Icc New Rule Jra

ಟಿ20 ವಿಶ್ವಕಪ್‌ ಸೆಮೀಸ್-ಫೈನಲ್‌‌ ಪಂದ್ಯಗಳಿಗೆ ಮೀಸಲು ದಿನ; ಮಳೆಬಾಧಿತ ನಾಕೌಟ್‌ ಪಂದ್ಯದಲ್ಲಿ 10 ಓವರ್ ಬೌಲಿಂಗ್ ಕಡ್ಡಾಯ

ಟಿ20 ವಿಶ್ವಕಪ್‌ನ ಸೆಮಿಫೈನಲ್ ಮತ್ತು ಫೈನಲ್‌ ಪಂದ್ಯಗಳಿಗೆ ಮೀಸಲು ದಿನ ನಿಗದಿಪಡಿಸಲಾಗಿದೆ. ಇದೇ ವೇಳೆ ನಾಕೌಟ್ ಹಂತದ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದರೆ, ಅಲ್ಲಿ ಕನಿಷ್ಠ ಹತ್ತು ಓವರ್‌ಗಳನ್ನು ಬೌಲ್ ಮಾಡಬೇಕಾಗುತ್ತದೆ. ಗುಂಪು ಹಂತ ಮತ್ತು ಸೂಪರ್ ಎಂಟರ ಹಂತದಲ್ಲಿ, ಪಂದ್ಯವೊಂದು ಮುಗಿಯಲು ಚೇಸಿಂಗ್‌ ಮಾಡುವ ತಂಡಕ್ಕೆ ಕನಿಷ್ಠ ಐದು ಓವರ್‌ ಬೌಲಿಂಗ್ ಮಾಡಬೇಕು.

ಟಿ20 ವಿಶ್ವಕಪ್‌ ಸೆಮೀಸ್-ಫೈನಲ್‌‌ ಪಂದ್ಯಗಳಿಗೆ ಮೀಸಲು ದಿನ
ಟಿ20 ವಿಶ್ವಕಪ್‌ ಸೆಮೀಸ್-ಫೈನಲ್‌‌ ಪಂದ್ಯಗಳಿಗೆ ಮೀಸಲು ದಿನ (PTI)

ಟಿ20 ವಿಶ್ವಕಪ್‌ ಪಂದ್ಯಾವಳಿಗೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯು ಕೆಲವೊಂದು ಹೊಸ ನಿಯಮಗಳನ್ನು ಪರಿಚಯಿಸಿದೆ. ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಸ್ಟಾಪ್‌ ಕ್ಲಾಕ್‌ ಕಡ್ಡಾಯಗೊಳಿಸಿರುವುದು ಒಂದೆಡೆಯಾದರೆ, ಚುಟುಕು ವಿಶ್ವಕಪ್‌ ವೇಳೆ ಮಳೆ ಬಾಧಿತ ಪಂದ್ಯಗಳಿಗೆ ಮೀಸಲು ದಿನದ ಕುರಿತಾಗಿಯೂ ಕೆಲವು ನಿಯಮಗಳನ್ನು ಪ್ರಕಟಿಸಿದೆ.

ಟಿ20 ವಿಶ್ವಕಪ್‌ನ ಸೆಮಿಫೈನಲ್ ಮತ್ತು ಫೈನಲ್‌ ಪಂದ್ಯಗಳಿಗೆ ಮೀಸಲು ದಿನ (reserve days) ನಿಗದಿಪಡಿಸಲಾಗಿದೆ. ಇದೇ ವೇಳೆ, ಗುಂಪು ಹಂತ ಮತ್ತು ಸೂಪರ್ ಎಂಟರ ಹಂತದಲ್ಲಿ, ಪಂದ್ಯವೊಂದನ್ನುಪೂರ್ಣಗೊಳಿಸಲು ಎರಡನೇ ಬಾರಿಗೆ ಬ್ಯಾಟಿಂಗ್ ಮಾಡುವ ತಂಡಕ್ಕೆ ಕನಿಷ್ಠ ಐದು ಓವರ್‌ಗಳನ್ನು ಬೌಲ್ ಮಾಡಬೇಕು. ಇದೇ ನಿಯಮ ನಾಕೌಟ್ ಹಂತಕ್ಕೆ ಬದಲಾಗುತ್ತದೆ. ಅಲ್ಲಿ ಕನಿಷ್ಠ ಹತ್ತು ಓವರ್‌ಗಳನ್ನು ಬೌಲ್ ಮಾಡಬೇಕಾಗುತ್ತದೆ.

ಐಸಿಸಿ ಬೋರ್ಡ್ ಕೂಡ ಪುರುಷರ ಟಿ20 ವಿಶ್ವಕಪ್ 2026ರಕ್ಕಾಗಿ ಅರ್ಹತಾ ಪ್ರಕ್ರಿಯೆಯನ್ನು ಅನುಮೋದಿಸಿದೆ. ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಮುಂದಿನ ಆವೃತ್ತಿಗಾಗಿ, 12 ತಂಡಗಳು ಸ್ವಯಂಚಾಲಿತವಾಗಿ ಅರ್ಹತೆ ಪಡೆಯುತ್ತವೆ. ಇವುಗಳಲ್ಲಿ ಎರಡು ತಂಡಗಳು ಆತಿಥ್ಯ ರಾಷ್ಟ್ರಗಳು. ಮತ್ತೊಂದೆಡೆ ಐಸಿಸಿ ಪುರುಷರ ಟ20 ವಿಶ್ವಕಪ್ 2024ರ ಅಗ್ರ ಎಂಟು ತಂಡಗಳು ಕೂಡಾ ನೇರವಾಗಿ ಅರ್ಹತೆ ಪಡೆಯುತ್ತವೆ. ಉಳಿದ ಸ್ಥಾನಗಳನ್ನು ಐಸಿಸಿ ಪುರುಷರ ಟಿ20 ಪಂದ್ಯಗಳಲ್ಲಿ ಉನ್ನತ ಶ್ರೇಯಾಂಕ ಪಡೆದ ತಂಡಗಳು ಪಡೆಯುತ್ತವೆ. ಇನ್ನುಳಿದ ಎಂಟು ತಂಡಗಳನ್ನು ಪ್ರಾದೇಶಿಕ ಅರ್ಹತಾ ಪಂದ್ಯಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ : Explainer: ಟಿ20 ವಿಶ್ವಕಪ್‌ನಿಂದ ಹೊಸ ನಿಯಮ; ಪ್ರತಿ ಪಂದ್ಯಕ್ಕೂ ಸ್ಟಾಪ್ ಕ್ಲಾಕ್ ಕಡ್ಡಾಯ, ಏನಿದು ಸ್ಟಾಪ್ ಕ್ಲಾಕ್ ರೂಲ್?

ಜೂನ್‌ ತಿಂಗಳಲ್ಲಿ ಆರಂಭವಾಗುವ ಟಿ20 ವಿಶ್ವಕಪ್ 2024 ಸೇರಿದಂತೆ, ಜೂನ್ 1ರಿಂದಲೇ ಸ್ಟಾಪ್ ಕ್ಲಾಕ್‌ ನಿಯಮವನ್ನು ಐಸಿಸಿ ಕಡ್ಡಾಯಗೊಳಿಸಿದೆ. ಪೂರ್ಣ ಸದಸ್ಯ ರಾಷ್ಟ್ರಗಳ ನಡುವೆ ನಡೆಯುವ ಪುರುಷರ ಎಲ್ಲಾ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಸ್ಟಾಪ್‌ ಕ್ಲಾಕ್‌ ಕಾರ್ಯನಿರ್ವಹಿಸಲಿದೆ. ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ 60 ಸೆಕೆಂಡುಗಳ ಸ್ಟಾಪ್ ಕ್ಲಾಕ್‌ ನಿಯಮವು ಕಾಯಂ ಆಗಲಿದೆ. ಫೀಲ್ಡಿಂಗ್ ಮಾಡುತ್ತಿರುವ ತಂಡವು ಒಂದು ಓವರ್ ಪೂರ್ಣಗೊಳಿಸಿದ ತಕ್ಷಣವೇ ಈ ಸ್ಟಾಪ್‌ ಕ್ಲಾಕ್‌ ಆನ್‌ ಆಗುತ್ತದೆ. 60 ಸೆಕೆಂಡುಗಳ ಒಳಗೆ ಮುಂದಿನ ಓವರ್ ಪ್ರಾರಂಭಿಸಬೇಕು ಎನ್ನುವ ಸಲುವಾಗಿ ಇದನ್ನು ಜಾರಿಗೆ ತರಲಾಗುತ್ತಿದೆ.

ಕೆಲವೊಂದು ಸಂದರ್ಭಗಳು ತಂಡಗಳ ಕೈಮೀರಿರುತ್ತದೆ. ಅಂತಹ ಸಂದರ್ಭಗಳಲ್ಲಿ ಈ ಸ್ಟಾಪ್‌ ಕ್ಲಾಕ್‌ ನಿಯಮ ಅನ್ವಯವಾಗುವುದಿಲ್ಲ. ಒಂದು ಓವರ್‌ ಬಳಿಕ ಮತ್ತೊಂದು ಓವರ್‌ ನಡುವೆ ಹೊಸ ಬ್ಯಾಟರ್‌ ಮೈದಾನಕ್ಕೆ ಬಂದಾಗ, ಪಾನೀಯ ವಿರಾಮದ ಸಂದರ್ಭ, ಯಾವುದೇ ಆಟಗಾರನಿಗೆ ಗಾಯವಾಗಿ ಆನ್‌ಫೀಲ್ಡ್ ಅಂಪೈರ್‌ಗಳು ಚಿಕಿತ್ಸೆಗೆ ಅನುಮೋದನೆ ನೀಡಿದಾಗ ಸೇರಿದಂತೆ ಫೀಲ್ಡಿಂಗ್ ತಂಡದ ಕೈಮೀರಿ ಯಾವುದೇ ಸಂದರ್ಭಗಳು ನಡೆದಾಗ ಈ ನಿಯಮ ಅನ್ವಯವಾಗುವುದಿಲ್ಲ.

ಟಿ20 ವಿಶ್ವಕಪ್‌ ಪಂದ್ಯಾವಳಿಯು ಜೂನ್‌ 01ರಂದು ಆರಂಭವಾಗಲಿದೆ. ಭಾರತ ತಂಡವು ಜೂನ್ 5ರಂದು ತನ್ನ ಅಭಿಯಾನ ಆರಂಭಿಸಲಿದೆ. ನ್ಯೂಯಾರ್ಕ್‌ಲ್ಲಿ ಐರ್ಲೆಂಡ್ ವಿರುದ್ಧ ಮೊದಲ ಪಂದ್ಯ ನಡೆಯಲಿದ್ದು, ಆ ಬಳಿಕ ಜೂನ್ 9ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ.