ಅಯ್ಯೋ ದೇವರೆ; ಇಂಡೋ-ಆಸೀಸ್‌ ಫೈನಲ್‌ ಪಂದ್ಯಕ್ಕೆ ಕೆಟಲ್‌ಬರೋ ಅಂಪೈರ್‌, ನಿದ್ದೆಗೆಟ್ಟ ಅಭಿಮಾನಿಗಳು
ಕನ್ನಡ ಸುದ್ದಿ  /  ಕ್ರಿಕೆಟ್  /  ಅಯ್ಯೋ ದೇವರೆ; ಇಂಡೋ-ಆಸೀಸ್‌ ಫೈನಲ್‌ ಪಂದ್ಯಕ್ಕೆ ಕೆಟಲ್‌ಬರೋ ಅಂಪೈರ್‌, ನಿದ್ದೆಗೆಟ್ಟ ಅಭಿಮಾನಿಗಳು

ಅಯ್ಯೋ ದೇವರೆ; ಇಂಡೋ-ಆಸೀಸ್‌ ಫೈನಲ್‌ ಪಂದ್ಯಕ್ಕೆ ಕೆಟಲ್‌ಬರೋ ಅಂಪೈರ್‌, ನಿದ್ದೆಗೆಟ್ಟ ಅಭಿಮಾನಿಗಳು

IND vs AUS Final: ಕೆಟಲ್‌ಬರೋ ಮತ್ತು ಇಲ್ಲಿಂಗ್‌ವರ್ತ್ ಅವರು ಇಂಡೋ-ಆಸೀಸ್‌ ಏಕದಿನ ವಿಶ್ವಕಪ್ 2023ರ ಫೈನಲ್‌ ಪಂದ್ಯದ ಆನ್-ಫೀಲ್ಡ್ ಅಂಪೈರ್‌ಗಳಾಗಿ ನೇಮಕಗೊಂಡಿದ್ದಾರೆ. ಇದು ಭಾರತದ ಅಭಿಮಾನಿಗಳನ್ನು ಚಿಂತೆಗೀಡುಮಾಡಿದೆ. ಇದಕ್ಕೆ ಕಾರಣಗಳು ಹೀಗಿವೆ.

ಮೈದಾನದಲ್ಲಿ ಆನ್‌ಫೀಲ್ಡ್‌ ಅಂಪೈರ್‌ಗಳತ್ತ ನೋಡುತ್ತಿರುವ ರವೀಂದ್ರ ಜಡೇಜಾ
ಮೈದಾನದಲ್ಲಿ ಆನ್‌ಫೀಲ್ಡ್‌ ಅಂಪೈರ್‌ಗಳತ್ತ ನೋಡುತ್ತಿರುವ ರವೀಂದ್ರ ಜಡೇಜಾ (REUTERS)

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಡೋ-ಆಸೀಸ್‌ ವಿಶ್ವಕಪ್ 2023ರ ಫೈನಲ್‌ ಪಂದ್ಯಕ್ಕೆ ಅಂಪೈರ್‌ಗಳು ಯಾರು ಎಂಬುದನ್ನು ಐಸಿಸಿ ಘೋಷಣೆ ಮಾಡಿದೆ. ಅಂಪೈರ್‌ಗಳು ಯಾರು ಎಂಬುದು ತಿಳಿಯುತ್ತಿದ್ದಂತೆಯೇ ಭಾರತೀಯ ಅಭಿಮಾನಿಗಳಿಗೆ ಚಿಂತೆ ಶುರುವಾಗಿದೆ.

ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ರಿಚರ್ಡ್ ಕೆಟಲ್‌ಬರೋ ಅವರು ವಿಶ್ವಕಪ್‌ ಫೈನಲ್‌ ಪಂದ್ಯಕ್ಕೆ ಆನ್-ಫೀಲ್ಡ್ ಅಂಪೈರ್‌ಗಳಾಗಿ ಇರಲಿದ್ದಾರೆ. ಹೀಗಾಗಿ ಭಾರತೀಯ ಅಭಿಮಾನಿಗಳಿಗೆ ದೊಡ್ಡ ಚಿಂತೆ ಆರಂಭವಾಗಿದೆ. ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಕೆಟಲ್‌ಬರೋ ಅವರು ಅಂಪೈರಿಂಗ್‌ ಮಾಡುತ್ತಿರುವುದು ಇದು ಎರಡನೇ ಬಾರಿ. 50 ವರ್ಷ ವಯಸ್ಸಿನ ಅನುಭವಿ ಅಂಪೈರ್‌ ಈ ಹಿಂದೆ 2015ರ ವಿಶ್ವಕಪ್‌ ಫೈನಲ್‌ ಪಂದ್ಯದ ವೇಳೆ ಶ್ರೀಲಂಕಾದ ಕುಮಾರ್ ಧರ್ಮಸೇನಾ ಅವರೊಂದಿಗೆ ಅಂಪೈರಿಂಗ್‌ ಮಾಡಿದ್ದರು. ಆ ಪಂದ್ಯದಲ್ಲಿ

ಭಾರತದ ಆಡುತ್ತಿರುವ ನಾಕೌಟ್ ಪಂದ್ಯದಲ್ಲಿ ಕೆಟಲ್‌ಬರೋ ಅಂಪೈರ್‌ ಆಗಿದ್ದ ಪಂದ್ಯದಲ್ಲಿ ಟೀಮ್‌ ಇಂಡಿಯಾಗೆ ಸೋಲು ಖಚಿತ ಎಂಬುದು ಅಭಿಮಾನಿಗಳ ವಾದ. ಭಾರತ ಆಡುತ್ತಿರುವ ಐಸಿಸಿ ಟೂರ್ನಮೆಂಟ್ ನಾಕೌಟ್ ಪಂದ್ಯಗಳಲ್ಲಿ ಅವರು ಅಂಪೈರಿಂಗ್‌ ಮಾಡುತ್ತಿರುವುದು ಇದೇ ಮೊದಲಲ್ಲ. 2013ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಳಿಕ, ಭಾರತವು ಭಾಗಿಯಾದ ವಿವಿಧ ಐಸಿಸಿ ಟೂರ್ನಿಯ ಎಂಟು ನಾಕೌಟ್ ಪಂದ್ಯಗಳಲ್ಲಿ ಕೆಟೆಲ್‌ಬರೋ ಅವರು ಏಳರಲ್ಲಿ ಅಂಪೈರಿಂಗ್‌ ಮಾಡಿದ್ದಾರೆ.

ಅವುಗಳಲ್ಲಿ ಭಾರತವೇ ಆಡಿದ ಐದು ನಾಕೌಟ್ ಪಂದ್ಯಗಳಲ್ಲಿ ಕೆಟಲ್‌ಬರೋ ಆನ್ ಫೀಲ್ಡ್ ಅಂಪೈರ್ ಆಗಿದ್ದರು. ಆ ಎಲ್ಲಾ ಪಂದ್ಯಗಳಲ್ಲಿ ನಾಕೌಟ್‌ ಹಂತದಲ್ಲಿ ಭಾರತ ಸೋತಿದೆ. ಅವುಗಳೆಂದರೆ…

  • 2014ರಲ್ಲಿ ಶ್ರೀಲಂಕಾ ವಿರುದ್ಧ ಟಿ20 ವಿಶ್ವಕಪ್ ಫೈನಲ್
  • 2015ರಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ ಸೆಮಿಫೈನಲ್
  • 2017ರಲ್ಲಿ ಪಾಕಿಸ್ತಾನ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಫೈನಲ್
  • 2019ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ವಿಶ್ವಕಪ್ ಸೆಮಿಫೈನಲ್

ಅತ್ತ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತ ಎರಡು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಗಳಲ್ಲಿ ಅವರು ಟಿವಿ ಅಂಪೈರ್ ಆಗಿದ್ದರು. ಈ ಎರಡು ಪಂದ್ಯಗಳಲ್ಲಿಯೂ ಭಾರತ ಸೋಲಿಗೆ ಶರಣಾಗಿದೆ. ಮತ್ತೊಂದೆಡೆ 2022ರ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯದಲ್ಲಿ ಕೆಟಲ್‌ಬರೋ ಅಂಪೈರ್‌ ಆಗಿರಲಿಲ್ಲ. ದುರದೃಷ್ಟವೆಂದರೆ ಇಂಗ್ಲೆಂಡ್‌ ವಿರುದ್ಧದ ಆ ಪಂದ್ಯದಲ್ಲೂ ಭಾರತ 10 ವಿಕೆಟ್‌ಗಳಿಂದ ಸೋತಿತ್ತು.

ಸದ್ಯ ಮತ್ತೆ ಇದೇ ಅಂಪೈರ್‌ ಭಾರತದ ಫೈನಲ್‌ ಪಂದ್ಯದಲ್ಲಿ ಅಂಪೈರಿಂಗ್‌ ಮಾಡುತ್ತಿರುವುದರಿಂದ ಅಭಿಮಾನಿಗಳಿಗೆ ಚಿಂತೆಯಾಗಿದೆ. ಸೋಷಿಯಲ್‌ ಮೀಡಿಯಾದಲ್ಲೀ ಈ ಕುರಿತು ಬೇಸರ ಹಾಗೂ ಆಕ್ರೋಶದ ಮೀಮ್ಸ್‌ ಹಂಚಿಕೊಳ್ಳುತ್ತಿದ್ದಾರೆ.

ಏಕದಿನ ವಿಶ್ವಕಪ್ 2023ರ ಫೈನಲ್ ಪಂದ್ಯದ ಅಧಿಕಾರಿಗಳು

ಆನ್-ಫೀಲ್ಡ್ ಅಂಪೈರ್‌ಗಳು: ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ರಿಚರ್ಡ್ ಕೆಟಲ್‌ಬರೋ

ಥರ್ಡ್ ಅಂಪೈರ್: ಜೋಯಲ್ ವಿಲ್ಸನ್

ನಾಲ್ಕನೇ ಅಂಪೈರ್: ಕ್ರಿಸ್ ಗಫಾನಿ

ಮ್ಯಾಚ್ ರೆಫರಿ: ಆಂಡಿ ಪೈಕ್ರಾಫ್ಟ್‌

Whats_app_banner