ಇಂದಿನ ಕ್ರಿಕೆಟ್ ನಿಯಮಗಳು ಅಂದು ಇದ್ದಿದ್ದರೆ ಸಚಿನ್ 200 ಶತಕ ಸಿಡಿಸುತ್ತಿದ್ರು; ಸನತ್ ಜಯಸೂರ್ಯ
Sanath Jayasuriya: ಸಚಿನ್ ತೆಂಡೂಲ್ಕರ್ ಆಡುತ್ತಿದ್ದ ಅವಧಿಯಲ್ಲಿ ಈಗಿರುವ ನಿಯಮಗಳು ಇದ್ದಿದ್ದರೆ, ಇನ್ನಷ್ಟು ರನ್, ಶತಕಗಳನ್ನು ಸಿಡಿಸುತ್ತಿದ್ದರು ಎಂದು ಶ್ರೀಲಂಕಾದ ದಿಗ್ಗಜ ಆಟಗಾರ ಸನತ್ ಜಯಸೂರ್ಯ ಹೇಳಿದ್ದಾರೆ.
ಪ್ರಸ್ತುತ ವಿಶ್ವ ಕ್ರಿಕೆಟ್ನಲ್ಲಿ ಇರುವ ಐಸಿಸಿ ನಿಯಮಗಳು (ICC Rules in Cricket) ಅಂದು ಇದ್ದಿದ್ದರೆ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) 200 ಶತಕಗಳನ್ನು ಸಿಡಿಸುತ್ತಿದ್ದರು ಎಂದು ಶ್ರೀಲಂಕಾ ತಂಡದ ಲೆಜೆಂಡರಿ ಆಟಗಾರ ಸನತ್ ಜಯಸೂರ್ಯ (Sanath Jayasuriya) ಹೇಳಿಕೆ ನೀಡಿದ್ದಾರೆ. ಎಕ್ಸ್ ಖಾತೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಜಯಸೂರ್ಯ, ಐಸಿಸಿ ನಿಯಮಗಳ ಬದಲಾವಣೆಗೆ ಕರೆ ನೀಡಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ಎರಡು ಚೆಂಡುಗಳ ಬಳಕೆಯ ಕುರಿತು ಹೇಳಿರುವ ಜಯಸೂರ್ಯ, ಇದು ಈಗಿನ ಬ್ಯಾಟರ್ಗಳಿಗೆ ಹೆಚ್ಚಿನ ಅವಕಾಶ ನೀಡುತ್ತದೆ. ತಂಡದ ಪರ ಎರಡು ರಿವಿವ್ಯೂ ತೆಗೆದುಕೊಳ್ಳುವ ಅವಕಾಶ ಇದೆ. ಆದರೆ, ಸಚಿನ್ ತೆಂಡೂಲ್ಕರ್ ಆಡುತ್ತಿದ್ದ ಅವಧಿಯಲ್ಲಿ ಈ ನಿಯಮಗಳು ಇದ್ದಿದ್ದರೆ ಇನ್ನಷ್ಟು ರನ್, ಶತಕಗಳನ್ನು ಸಿಡಿಸುತ್ತಿದ್ದರು ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದಿದ್ದಾರೆ.
ಬ್ಯಾಟರ್ಗಳಿಗೆ ಸಹಾಯಕಾರಿ
2011ರಲ್ಲಿ ಈ ನಿಯಮಗಳನ್ನು ಐಸಿಸಿ ಪರಿಚಯ ಮಾಡಿತ್ತು. ಎರಡು ಚೆಂಡುಗಳನ್ನು ನೀಡುವ ನಿಯಮವನ್ನು ಪರಿಚಯಿಸಿತ್ತು. ಒಂದು ಚೆಂಡನ್ನು ಮೊದಲ 25 ಓವರ್ಗಳಿಗೆ ಬಳಸಲಾಗುತ್ತಿದೆ. ಚೆಂಡಿನ ಹೊಳಪು, ಅದರ ಆಕಾರ ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತಿದೆ. ಇದು ಬ್ಯಾಟ್ಸ್ಮನ್ಗಳಿಗೆ ಸಂಪೂರ್ಣ ಪ್ರಯೋಜನ ನೀಡುತ್ತಿದೆ. ಹೀಗಾಗಿ ಏಕದಿನ ಕ್ರಿಕೆಟ್ನಲ್ಲಿ ರನ್ ಮಳೆ ಹರಿಯಲು ಕಾರಣವಾಗುತ್ತಿದೆ ಎಂದು ಹೇಳಿದ್ದಾರೆ.
ವಕಾರ್ ಯೂನಿಸ್ ಪೋಸ್ಟ್
ಪಾಕಿಸ್ತಾನ ತಂಡದ ಮಾಜಿ ಆಟಗಾರ ವಕಾರ್ ಯೂನಿಸ್ ಎಕ್ಸ್ ಖಾತೆಯಲ್ಲಿ ಮಾಡಿದ್ದ ಪೋಸ್ಟ್ನಲ್ಲಿ ಏಕದಿನ ಕ್ರಿಕೆಟ್ ಬ್ಯಾಟರ್ಗಳಿಗೆ ತುಂಬಾ ಸ್ನೇಹಿಯಾಗಿದೆ. ಹಾಗಾಗಿ ಐಸಿಸಿ ನಿಮಯಗಳಲ್ಲಿ ಬದಲಾವಣೆ ಮಾಡಿದರೆ ಉತ್ತಮ. 30 ಓವರ್‌ಗಳ ನಂತರ ಎರಡನೇ ಚೆಂಡು ನೀಡಬೇಕು. ರಿವರ್ಸ್‌ಸ್ವಿಂಗ್ ಕಲೆ ಉಳಿಸುವಂತೆ ಐಸಿಸಿಗೆ ಮನವಿ ಮಾಡಿದ್ದರು. ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಜಯಸೂರ್ಯ, ಬದಲಾವಣೆಗೆ ಸೂಚಿಸಿದ್ದಾರೆ.
ವಕಾರ್ ಪೋಸ್ಟ್ಗೆ ಜಯಸೂರ್ಯ ಪ್ರತಿಕ್ರಿಯೆ
ವಕಾರ್ ಯೂನಿಸ್ ಸೂಚಿಸಿರುವಂತೆ ನಾನು ಕೂಡ ಕೆಲವು ಬದಲಾವಣೆ ಮಾಡಲು ಮನವಿ ಮಾಡುತ್ತೇನೆ. ಪ್ರಸ್ತುತ ವಿಶ್ವ ಕ್ರಿಕೆಟ್ನಲ್ಲಿರುವ ಐಸಿಸಿ ನಿಯಮಗಳು ಸಚಿನ್ ಆಡುತ್ತಿದ್ದ ಅವಧಿಯಲ್ಲಿ ಇದ್ದಿದ್ದರೆ, ಅವರ ರನ್, ಶತಕಗಳು ದ್ವಿಗುಣಗೊಳ್ಳುತ್ತಿದ್ದವು ಎಂದು ಜಯಸೂರ್ಯ ಎಕ್ಸ್ನಲ್ಲಿ ಮಾಡಿರುವ ಪೋಸ್ಟ್ನಲ್ಲಿ ಹೇಳಿದ್ದಾರೆ.
ಸಚಿನ್ ತೆಂಡೂಲ್ಕರ್ ಪ್ರದರ್ಶನ
ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಇತಿಹಾಸದಲ್ಲಿ ನೂರಾರು ದಾಖಲೆಗಳ ಒಡೆಯನಾಗಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 200 ಪಂದ್ಯಗಳನ್ನಾಡಿದ್ದು, 51 ಶತಕಗಳ ಸಹಿತ 15921 ರನ್ ಗಳಿಸಿದ್ದಾರೆ. ಇನ್ನು ಏಕದಿನ ಕ್ರಿಕೆಟ್ನಲ್ಲಿ 463 ಪಂದ್ಯಗಳಲ್ಲಿ 49 ಶತಕಗಳ ಸಹಿತ 18426 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 100 ಶತಕಗಳನ್ನು ಸಿಡಿಸಿದ್ದಾರೆ. ಅತಿ ಹೆಚ್ಚು ರನ್, ಶತಕಗಳು, ಅರ್ಧಶತಕಗಳು ಹೀಗೆ ಪ್ರತಿಯೊಂದರಲ್ಲೂ ದಾಖಲೆ ಬರೆದಿದ್ದಾರೆ.
ಪದಾರ್ಪಣೆ ಮಾಡಿದ್ದು ನವೆಂಬರ್ 15ರಂದು
ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು ನವೆಂಬರ್ 15ರಂದು, 1989ರಲ್ಲಿ. ಪಾಕಿಸ್ತಾನ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಕಣಕ್ಕಿಳಿದಿದ್ದರು. ಕರಾಚಿಯಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಮಾತ್ರ ಬ್ಯಾಟಿಂಗ್ ನಡೆಸಿದ್ದರು. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿ 15 ರನ್ ಸಿಡಿಸಿದ್ದರು. ಅಂದಿನಿಂದ ಒಟ್ಟು 24 ವರ್ಷಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಇಂದು ಕೋಟ್ಯಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ.