ಹರ್ಲೀನ್ ಡಿಯೋಲ್ ಶತಕ; ವೆಸ್ಟ್ ಇಂಡೀಸ್ ವಿರುದ್ಧ ಭಾರತ ವನಿತೆಯರಿಗೆ 115 ರನ್ಗಳ ಜಯ, ಟಿ20 ಜತೆಗೆ ಏಕದಿನ ಸರಣಿಯೂ ಕೈವಶ
India Women vs West Indies Women: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ 115 ರನ್ಗಳ ಭರ್ಜರಿ ಗೆಲುವು 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ.
ವಡೋದರಾದ ಕೊಟಂಬಿ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ಮಹಿಳಾ ತಂಡದ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲೂ ಭಾರತದ ವನಿತೆಯರು ಜಯಭೇರಿ ಬಾರಿಸಿದ್ದಾರೆ. ಮೊದಲ ಪಂದ್ಯವನ್ನು 211 ರನ್ಗಳ ಅಂತರದಿಂದ ಗೆದ್ದಿದ್ದ ಹರ್ಮನ್ ಪಡೆ, ದ್ವಿತೀಯ ಏಕದಿನ ಪಂದ್ಯದಲ್ಲಿ 115ರನ್ಗಳ ಅಂತರದಿಂದ ಗೆದ್ದು ಒಂದು ಪಂದ್ಯ ಬಾಕಿ ಇರುವಂತೆ ವಶಪಡಿಸಿಕೊಂಡಿದೆ. ಹರ್ಲೀನ್ ಡಿಯೋಲ್ (115) ಆಕರ್ಷಕ ಶತಕ, ಸ್ಮೃತಿ ಮಂಧಾನ (53), ಪ್ರತಿಕಾ ರಾವಲ್ (73) ಮತ್ತು ಜೆಮಿಮಾ ರೋಡ್ರಿಗಸ್ (52) ಅವರ ಸೊಗಸಾದ ಬ್ಯಾಟಿಂಗ್ ನೆರವಿನಿಂದ ಭಾರತ ತವರಿನಲ್ಲಿ ಸರಣಿ ಜಯದ ನಗೆ ಬೀರಿದೆ. ಉಳಿದ ಪಂದ್ಯವನ್ನೂ ಜಯಿಸಿ ಸರಣಿ ಕ್ವೀನ್ ಸ್ವೀಪ್ ಮಾಡುವ ಗುರಿ ಹೊಂದಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 385 ರನ್ ಬಾರಿಸಿತು. ತನ್ನ ಏಕದಿನ ಕ್ರಿಕೆಟ್ ಚರಿತ್ರೆಯಲ್ಲಿ ಜಂಟಿ ಅತ್ಯಧಿಕ ಮೊತ್ತವನ್ನು ದಾಖಲಿಸಿದೆ. ಬೃಹತ್ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್, 46.2 ಓವರ್ಗಳಲ್ಲಿ 243 ರನ್ಗಳಿಗೆ ಆಲೌಟ್ ಆಯಿತು. ಹೀಲಿ ಮ್ಯಾಥ್ಯೂಸ್ (106) ಅವರ ಶತಕದಾಟದ ಹೊರತಾಗಿಯೂ ನಿರಾಸೆ ಅನುಭವಿಸಿದೆ. ಸರಣಿ ಉಳಿಸಿಕೊಳ್ಳುವ ಲೆಕ್ಕಾಚಾರ ಹಾಕಿದ್ದ ವೆಸ್ಟ್ ಇಂಡೀಸ್, ಎರಡು ಪಂದ್ಯಗಳಲ್ಲೂ ಕಳಪೆ ಪ್ರದರ್ಶನ ನೀಡಿ ಬೆಲೆ ತೆತ್ತಿದೆ. ಇದರೊಂದಿಗೆ ಟಿ20 ಸರಣಿಯ ಬಳಿಕ ಏಕದಿನ ಸರಣಿಯನ್ನೂ ಕಳೆದುಕೊಂಡಿದೆ. ಭಾರತ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಾಂಘಿಕ ಪ್ರದರ್ಶನ ನೀಡಿದೆ.
ನಾಲ್ವರು 50+ ಸ್ಕೋರ್, ತಂಡದ ಮೊತ್ತ 358
ವಡೋದರಾದ ಕೊಟಂಬಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಅತ್ಯದ್ಭುತ ಪ್ರದರ್ಶನ ನೀಡಿತು. ಆರಂಭಿಕ ವಿಕೆಟ್ಗೆ ಸ್ಮೃತಿ ಮಂಧಾನ ಮತ್ತು ಪ್ರತಿಕಾ ರಾವಲ್ ಶತಕದ (99 ಎಸೆತಗಳಲ್ಲಿ 110 ರನ್) ಜೊತೆಯಾಟವಾಡಿದರು. ಸ್ಮೃತಿ ಮಂಧಾನ ಸತತ 6ನೇ ಅರ್ಧಶತಕ ಸಿಡಿಸಿ ಔಟಾದರು. ಬಳಿಕ ಪ್ರತಿಕಾ ತನ್ನ 2ನೇ ಏಕದಿನ ಪಂದ್ಯದಲ್ಲೇ ಅರ್ಧಶತಕ (76) ಸಿಡಿಸಿ ಮಿಂಚಿದರು. ಹರ್ಲೀನ್ ಡಿಯೋಲ್ ಶತಕ ಬಾರಿಸಿದರೆ, ಕೊನೆಯಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ ಜೆಮಿಮಾ ರೋಡ್ರಿಗಸ್ 52 ರನ್ ಚಚ್ಚಿದರು. ಆ ಮೂಲಕ ಒಟ್ಟು ನಾಲ್ವರು 50 ಪ್ಲಸ್ ಸ್ಕೋರ್ ಮಾಡುವ ಮೂಲಕ ತಂಡದ ಮೊತ್ತವನ್ನು 358 ರನ್ಗಳ ಬೃಹತ್ ಮೊತ್ತಕ್ಕೆ ಸೇರಿಸಲು ನೆರವಾದರು. ಉಳಿದಂತೆ ಹರ್ಮನ್ 22, ರಿಚಾ 13*, ದೀಪ್ತಿ ಶರ್ಮಾ 4* ರನ್ ಗಳಿಸಿದರು. ಆದರೆ ವೆಸ್ಟ್ ಇಂಡೀಸ್ ಬೌಲರ್ಗಳು ವಿಕೆಟ್ ಪಡೆಯಲು ಹೆಣಗಾಡಿದರು.
ಹೀಲಿ ಮ್ಯಾಥ್ಯೂಸ್ ಹೋರಾಟ ವ್ಯರ್ಥ
359 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಉತ್ತರ ಆರಂಭ ಪಡೆಯಲಿಲ್ಲ. 16.5 ಓವರ್ಗಳಲ್ಲಿ ತಂಡದ ಮೊತ್ತ 69 ಆಗುವಷ್ಟರಲ್ಲಿ ಪ್ರಮುಖ 4 ವಿಕೆಟ್ಗಳನ್ನು ಕಳೆದುಕೊಂಡಿತು. ಇದರ ನಡುವೆಯೂ ಹೀಲಿ ಮ್ಯಾಥ್ಯೂಸ್ ಅವರು ಹೋರಾಟ ನಡೆಸಿದರು. 5ನೇ ವಿಕೆಟ್ಗೆ ಶೆಮೈನ್ ಕ್ಯಾಂಪ್ಬೆಲ್ಲೆ ಜೊತೆಗೂಡಿ ಶತಕದ (115) ಜೊತೆಯಾಟ ಆಡಿದರು. ಕ್ಯಾಂಪ್ಬೆಲ್ಲೆ 38 ರನ್ ಸಿಡಿಸಿ ಔಟಾದ ಬಳಿಕ ಯಾರೂ ಸಹ ಹೀಲಿ ಅವರಿಗೆ ಸಾಥ್ ಕೊಡಲಿಲ್ಲ. ಇದರ ನಡುವೆಯೂ 109 ಎಸೆತಗಳಲ್ಲಿ 106 ರನ್ ಸಿಡಿಸಿ ಔಟಾದರು. ಭಾರತೀಯ ಬೌಲರ್ಗಳು ಸಹ ಅದ್ಭುತ ಪ್ರದರ್ಶನ ನೀಡಿದರು. ಪ್ರಿಯಾ ಮಿಶ್ರಾ 3 ವಿಕೆಟ್, ದೀಪ್ತಿ ಶರ್ಮಾ, ಟಿಟಾಸ್ ಸಧು, ಪ್ರತಿಕಾ ಪಾವಲ್ ತಲಾ 2 ವಿಕೆಟ್ ಪಡೆದರೆ, ರೇಣುಕಾ ಸಿಂಗ್ 1 ವಿಕೆಟ್ ಪಡೆದರು.