Fitness Tips: ಮೊದಲ ಬಾರಿ ಜಿಮ್‌ಗೆ ಹೋಗುತ್ತೀದ್ದೀರಾ; ಮಹಿಳೆಯರೇ, ಈ ವಿಚಾರಗಳು ತಿಳಿದಿರಲಿ
ಕನ್ನಡ ಸುದ್ದಿ  /  ಜೀವನಶೈಲಿ  /  Fitness Tips: ಮೊದಲ ಬಾರಿ ಜಿಮ್‌ಗೆ ಹೋಗುತ್ತೀದ್ದೀರಾ; ಮಹಿಳೆಯರೇ, ಈ ವಿಚಾರಗಳು ತಿಳಿದಿರಲಿ

Fitness Tips: ಮೊದಲ ಬಾರಿ ಜಿಮ್‌ಗೆ ಹೋಗುತ್ತೀದ್ದೀರಾ; ಮಹಿಳೆಯರೇ, ಈ ವಿಚಾರಗಳು ತಿಳಿದಿರಲಿ

ಮಹಿಳೆಯರು ಅಥವಾ ಹೆಣ್ಣುಮಕ್ಕಳು ಮೊದಲ ಬಾರಿಗೆ ಜಿಮ್‌ಗೆ ಸೇರಿಕೊಳ್ಳುವಾಗ ಅವರಲ್ಲಿ ನಾನಾ ಆಲೋಚನೆಗಳು ಬರುವುದು ಸಹಜ. ಭಯ,ಅನುಮಾನಗಳನ್ನು ಹೊತ್ತು ವ್ಯಾಯಾಮ ಮಾಡಲು ಹೋದರೆ ಫಿಟ್ನೆಸ್‌ ಕಾಪಾಡುವುದು ಕಷ್ಟವಾಗುತ್ತದೆ. ಆದ್ದರಿಂದ ಮೊದಲ ಬಾರಿಗೆ ಜಿಮ್‌ಗೆ ಸೇರಿಕೊಳ್ಳುವಾಗ ಯಾವ ವಿಷಯಗಳನ್ನು ಮುಂಚಿತವಾಗಿ ತಿಳಿದುಕೊಳ್ಳಬೇಕು ಎಂಬುದು ಇಲ್ಲಿದೆ.

ಮೊದಲ ಬಾರಿ ಜಿಮ್‌ಗೆ ಹೋಗುತ್ತೀದ್ದೀರಾ; ಮಹಿಳೆಯರೇ, ಈ ವಿಚಾರಗಳು ತಿಳಿದಿರಲಿ
ಮೊದಲ ಬಾರಿ ಜಿಮ್‌ಗೆ ಹೋಗುತ್ತೀದ್ದೀರಾ; ಮಹಿಳೆಯರೇ, ಈ ವಿಚಾರಗಳು ತಿಳಿದಿರಲಿ (PC: Freepik)

ಜಿಮ್‌ಗೆ ಹೋಗುವುದು ಮತ್ತು ವ್ಯಾಯಾಮ ಮಾಡುವುದು ಇತ್ತೀಚಿನ ದಿನಗಳಲ್ಲಿ ದೊಡ್ಡ ವಿಷಯವಲ್ಲ. ಮಹಿಳೆಯರೂ ಇದಕ್ಕೆ ಹೊರತಾಗಿಲ್ಲ. ಆದರೆ, ಕೆಲವು ಮಹಿಳೆಯರಲ್ಲಿ ಜಿಮ್‌ಗೆ ಹೋಗಲು ಸ್ವಲ್ಪ ಭಯ, ಹಿಂಜರಿಕೆ ಮತ್ತು ಅನೇಕ ಗೊಂದಲಗಳಿರುವುದನ್ನು ಕಾಣಬಹುದಾಗಿದೆ. ಆದರೂ ಜಿಮ್‌ಗೆ ಹೋಗುವ ಆಸಕ್ತಿ ಹಲವು ಮಹಿಳೆಯರಲ್ಲಿ ಕಂಡುಬಂದರೂ ಅದರಿಂದ ದೂರವಿರಲು ಯೋಚಿಸುತ್ತಾರೆ. ಆದರೆ, ಇಂದಿನ ಬಿಡುವಿಲ್ಲದ ದಿನಚರಿ, ಅನಾರೋಗ್ಯಕರ ಆಹಾರ ಪದ್ಧತಿಯಿಂದ ಆರೋಗ್ಯವಾಗಿರುವುದು ಕಷ್ಟಕರವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಫಿಟ್ನೆಸ್ ಬಗ್ಗೆ ಕಾಳಜಿಯನ್ನು ವಹಿಸಲೇಬೇಕಾಗಿದೆ. ಅದರಲ್ಲೂ ಮಹಿಳೆಯರ ಆರೋಗ್ಯ ಹದಗೆಟ್ಟರೆ ಇಡೀ ಕುಟುಂಬವೇ ಅಪಾಯಕ್ಕೆ ಸಿಲುಕುತ್ತದೆ. ಆದ್ದರಿಂದ ನಿಯಮಿತವಾಗಿ ವ್ಯಾಯಾಮ ಮಾಡುವುದು ಅಗತ್ಯವಾಗಿದೆ. ನೀವು ಕೂಡ ಜಿಮ್‌ಗೆ ಸೇರಿಕೊಳ್ಳಬೇಕೆಂದುಕೊಂಡಿದ್ದರೆ ಮೊದಲ ಬಾರಿಗೆ ಜಿಮ್‌ಗೆ ಹೋಗುವಾಗ, ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಬೇಕು. ಇದರಿಂದ ನಿಮ್ಮ ಭಯ, ಹಿಂಜರಿಕೆ ದೂರವಾಗುತ್ತದೆ. ಹಾಗೆಯೇ ಫಿಟ್ನೆಸ್‌ ಪ್ರಯಾಣ ಯಾವುದೇ ಅಡೆತಡೆಗಳಿಲ್ಲದೆ ಮುಂದೆ ಸಾಗುತ್ತದೆ. ಹಾಗಾದರೆ ನೀವು ಮೊದಲ ಬಾರಿಗೆ ಜಿಮ್‌ಗೆ ಹೋಗುತ್ತಿದ್ದರೆ ಯಾವ ವಿಷಯ ಗಮನದಲ್ಲಿಡಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಮೊದಲ ಬಾರಿ ಜಿಮ್‌ಗೆ ಹೋಗುತ್ತಿರುವ ಮಹಿಳೆಯರಿಗೆ ಇಲ್ಲಿದೆ ಟಿಪ್ಸ್

ಹೀಗಿರಲಿ ಉಡುಪು: ಜಿಮ್‌ಗೆ ಹೋಗುವಾಗ ಮಹಿಳೆಯರು ಗಮನದಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯವೆಂದರೆ ಅದು ಉಡುಪು. ಜಿಮ್‌ನಲ್ಲಿ ಉಂಟಾಗುವ ಅಹಿತಕರ ಪರಿಸ್ಥಿತಿಯು ಉಡುಗೆಯ ಬಗ್ಗೆ ಇರಬಹುದು. ಆದ್ದರಿಂದ ಹೆಚ್ಚು ಆರಾಮದಾಯಕ, ಸೂಕ್ತವಾದ ಜಿಮ್ ವೇರ್ ಅನ್ನು ಆಯ್ಕೆ ಮಾಡಿ. ಇವು ತುಂಬಾ ಬಿಗಿಯಾಗಿಯೂ ಅಥವಾ ತುಂಬಾ ಸಡಿಲವಾಗಿಯೂ ಇರಬಾರದು. ಏಕೆಂದರೆ ಕೆಲವು ವ್ಯಾಯಾಮಗಳನ್ನು ಮಾಡುವಾಗ ಸಡಿಲವಾದ ಬಟ್ಟೆಗಳನ್ನು ತೊಡುವುದರಿಂದ ಅನಾನುಕೂಲವನ್ನು ಎದುರಿಸಬೇಕಾಗುತ್ತದೆ. ಇದು ಅಸ್ವಸ್ಥತೆಯನ್ನು ಸಹ ಉಂಟುಮಾಡಬಹುದು. ಹಾಗೆಯೇ, ಬಿಗಿಯಾದ ಬಟ್ಟೆ ಕೆಲವೊಮ್ಮೆ ಅಹಿತಕರ ಪರಿಸ್ಥಿತಿಯನ್ನು ಉಂಟುಮಾಡಬಹುದು.

ಸ್ಪೋರ್ಟ್ಸ್ ಬ್ರಾ ಆರಿಸಿ: ಸರಿಯಾದ, ಆರಾಮದಾಯಕವಾದ, ಫಿಟ್ ಎನಿಸುವ ಸ್ಪೋರ್ಟ್ಸ್ ಬ್ರಾ ಆಯ್ಕೆಮಾಡಿ. ಅದರಲ್ಲೂ ಪ್ಯಾಡೆಡ್ ಸ್ಪೋರ್ಟ್ಸ್ ಬ್ರಾ ಆಯ್ಕೆ ಮಾಡಿಕೊಳ್ಳಿ. ಎದೆಯ ಗಾತ್ರದ ಹೊರತಾಗಿಯೂ, ಇದು ಅಹಿತಕರ ಪರಿಸ್ಥಿತಿಯಿಂದ ನಿಮ್ಮನ್ನು ಕಾಪಾಡುತ್ತದೆ.

ಜಿಮ್ ತರಬೇತುದಾರರ ಆಯ್ಕೆ: ಜಿಮ್‌ಗೆ ಆಯ್ಕೆಮಾಡಿಕೊಳ್ಳುವಾಗ ಜಾಗರೂಕರಾಗಿರಿ. ಸುರಕ್ಷಿತ ಜಿಮ್ ಅನ್ನು ಆಯ್ಕೆ ಮಾಡುವುದರ ಜತೆಗೆ, ತರಬೇತುದಾರರು ಉತ್ತಮವಾಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅಲ್ಲದೆ, ನೀವು ಮೊದಲ ಬಾರಿಗೆ ಜಿಮ್‌ಗೆ ಹೋಗುತ್ತಿದ್ದರೆ ಮುಜಗರವಾಗುವ ಅನುಭವದಿಂದ ದೂರವಿರಲು, ಯಾವಾಗಲೂ ಮಹಿಳೆಯರ ಸಮಯ ಮತ್ತು ಮಹಿಳೆಯರ ವಿಭಾಗವನ್ನೇ ಆಯ್ಕೆಮಾಡಿಕೊಳ್ಳಿ. ಆಗ ನಿಮ್ಮ ಗಮನವನ್ನು ಸಂಪೂರ್ಣವಾಗಿ ವ್ಯಾಯಾಮದ ಮೇಲೆ ಕೇಂದ್ರೀಕರಿಸಬಹುದು. ಯಾವುದೇ ರೀತಿಯ ಅನಾನುಕೂಲ ಉಂಟಾಗುವುದಿಲ್ಲ.

ಸಾಮಾಜಿಕ ಮಾಧ್ಯಮಗಳಿಂದ ಮಾಹಿತಿ ಪಡೆಯಿರಿ: ಮೊದಲ ಬಾರಿಗೆ ಜಿಮ್‌ನಲ್ಲಿ ವ್ಯಾಯಾಮ ಮಾಡಲು ಬಯಸಿದರೆ, ಜಿಮ್‌ನಲ್ಲಿ ವೈಯಕ್ತಿಕ ತರಬೇತುದಾರರನ್ನು ಹೊಂದಿರುವುದು ಉತ್ತಮ. ಹೀಗೆ ಮಾಡುವುದರಿಂದ ಎಲ್ಲಾ ಯಂತ್ರಗಳನ್ನು ಬಳಸುವುದರ ಜತೆಗೆ ಸರಿಯಾದ ತಂತ್ರಗಳನ್ನು ತಿಳಿದುಕೊಳ್ಳಬಹುದು. ಆದರೆ, ವೈಯಕ್ತಿಕ ತರಬೇತುದಾರರನ್ನು ಹೊಂದಿಲ್ಲದಿದ್ದರೆ ಅದಕ್ಕೆ ಯೂಟ್ಯೂಬ್‌ನಂತಹ ಸಾಮಾಜಿಕ ಮಾಧ್ಯಮದ ನೆರವು ಪಡೆದುಕೊಳ್ಳಿ. ಅಲ್ಲಿ ನಿಮಗೆ ಬೇಕಾಗಿರುವ ಅಗತ್ಯ ಮಾಹಿತಿಗಳನ್ನು ಹುಡುಕಿ, ತಿಳಿದುಕೊಳ್ಳಬಹುದು. ಮಾಹಿತಿಯಿಲ್ಲದೆ ಜಿಮ್‌ಗೆ ಹೋಗಿ ಸಮಯ ವ್ಯರ್ಥವಾಗುವುದನ್ನು ತಡೆಯಬಹುದು.

ಸ್ನೇಹಿತರು ಅಥವಾ ಪರಿಚಯಸ್ಥರೊಂದಿಗೆ ಭೇಟಿ ನೀಡಿ: ಇತರರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂದು ಯೋಚಿಸುವ ಬದಲು, ಫಿಟ್ನೆಸ್ ಗುರಿಯನ್ನು ಸಾಧಿಸುವತ್ತ ನಿಮ್ಮ ಗಮನವನ್ನು ಸಂಪೂರ್ಣವಾಗಿ ಕೇಂದ್ರೀಕರಿಸಿ. ಒತ್ತಡದಿಂದ ಮುಕ್ತವಾಗಿರಲು, ಜಿಮ್‌ಗೆ ಹೋದಾಗಲೆಲ್ಲಾ ನಿಮ್ಮೊಂದಿಗೆ ನಿಮ್ಮ ಆಪ್ತ ಸ್ನೇಹಿತರನ್ನು ಕರೆದುಕೊಂಡು ಹೋಗಲು ಪ್ರಯತ್ನಿಸಿ. ಹೀಗೆ ಮಾಡುವುದರಿಂದ ಜಿಮ್‍ನಲ್ಲಿ ನಿಮಗೆ ಜತೆಗಾರರು ಸಿಗುತ್ತಾರೆ. ನೀವು ಮೊದಲ ಬಾರಿಗೆ ಜಿಮ್‌ಗೆ ಹೋಗುವಾಗ ಇರುವ ಭಯವೂ ಹೊರಟು ಹೋಗುತ್ತದೆ. ಜಿಮ್‌ನಲ್ಲಿ ಏನಾದರೂ ಸಮಸ್ಯೆ ಎದುರಾದರೆ ಅಥವಾ ಜಿಮ್ ಟ್ರೈನರ್ ಬಳಿ ಸಮಸ್ಯೆ ಉಂಟಾದರೆ, ಮತ್ತೇನನ್ನೂ ಆಲೋಚಿಸದೆ ಜಿಮ್ ಬದಲಾಯಿಸುವುದು ಉತ್ತಮ. ನೀವು ಸುರಕ್ಷಿತ ಎಂದು ಭಾವಿಸುವ ಜಿಮ್‌ಗೆ ಸೇರುವುದು ಉತ್ತಮ.

Whats_app_banner