Shivarajkumar Health: ಶಿವಣ್ಣನಿಗೆ ಕರೆ ಮಾಡಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದ ಸಿಎಂ ಸಿದ್ದರಾಮಯ್ಯ, ಇಂದು ಶಿವರಾಜ್ ಕುಮಾರ್‌ಗೆ ಸರ್ಜರಿ
Shiva Rajkumar Surgery: ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ಗೆ ಇಂದು ಅಮೆರಿಕದ ಮಿಯಾಮಿಯಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ. ಇದೇ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಶಿವಣ್ಣನ ಆರೋಗ್ಯ ವಿಚಾರಿಸಿಕೊಂಡಿದ್ದು, ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ.
ಬೆಂಗಳೂರು: ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ಗೆ ಇಂದು ಅಮೆರಿಕದ ಮಿಯಾಮಿಯಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ. ಶಿವಣ್ಣನಿಗೆ ಸ್ಯಾಂಡಲ್‌ವುಡ್‌ನ ಸಾಕಷ್ಟು ಜನರು ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಇದೇ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಶಿವಣ್ಣನ ಆರೋಗ್ಯ ವಿಚಾರಿಸಿಕೊಂಡಿದ್ದು, ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ.
“ಅನಾರೋಗ್ಯದ ನಿಮಿತ್ತ ಇಂದು (ಡಿಸೆಂಬರ್ 24) ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ ಅವರಿಗೆ ಕರೆಮಾಡಿ ಮಾತನಾಡಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದೇನೆ. ನನಗೆ ತಿಳಿದಂತೆ ಶಿವರಾಜ್ ಕುಮಾರ್ ಅವರ ಆತ್ಮವಿಶ್ವಾಸ, ಧೈರ್ಯ ಮತ್ತು ಸಹೃದಯತೆ ಅವರನ್ನು ಈ ಹೋರಾಟದಲ್ಲಿ ಗೆಲ್ಲಿಸಿಕೊಂಡು ಬರಲಿದೆ ಎಂಬ ವಿಶ್ವಾಸವಿದೆ” ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಬದುಕಿನ ದಾರಿಯಲ್ಲಿ ಎದುರಾಗಿರುವ ಈ ಸಣ್ಣ ಸಂಕಷ್ಟವನ್ನು ನಿವಾರಿಸಿಕೊಂಡು ಆರೋಗ್ಯವಂತರಾಗಿ ಬರಲಿರುವ ಶಿವರಾಜಕುಮಾರ್ ಅವರ ಆಗಮನವನ್ನು ಎದುರು ನೋಡುತ್ತಿರುವ ಅವರ ಹಿತೈಷಿಗಳಲ್ಲಿ ನಾನೂ ಒಬ್ಬ. ನಾಡಿನ ಹಿರಿಯರ ಆಶೀರ್ವಾದ ಮತ್ತು ಕಿರಿಯರ ಶುಭಹಾರೈಕೆ ಶಿವರಾಜಕುಮಾರ್ ಅವರ ಜೊತೆಗಿದ್ದು ಅವರನ್ನು ಕಾಪಾಡಲಿದೆ” ಎಂದು ಮುಖ್ಯಮಂತ್ರಿಗಳು ಟ್ವೀಟ್ ಮಾಡಿದ್ದಾರೆ.
ಕನ್ನಡ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ಗೆ ಅಮೆರಿಕದ ಮಿಯಾಮಿಯಲ್ಲಿ ಡಿಸೆಂಬರ್ 24ರಂದು ಶಸ್ತ್ರಚಿಕಿತ್ಸೆ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ. ಅಮೆರಿಕದ ಸಮಯದ ಪ್ರಕಾರ ಬೆಳಗ್ಗೆ 9-10 ಗಂಟೆಗೆ ಶಸ್ತ್ರಚಿಕಿತ್ಸೆ ನಡೆಯಲಿದೆ. ಭಾರತದ ಕಾಲಮಾನದಲ್ಲಿ ನೋಡುವುದಾದರೆ ರಾತ್ರಿ 8 ಗಂಟೆ ಆಸುಪಾಸಿನಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ ಎನ್ನಲಾಗಿದೆ.
ಇದೇ ಸಮಯದಲ್ಲಿ ಶಿವರಾಜ್ ಕುಮಾರ್ ಅಭಿಮಾನಿಗಳು ಶಿವಣ್ಣನ ಆರೋಗ್ಯಕ್ಕಾಗಿ ಹೋಮ ಹವನ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದಾರೆ. ಮೈಸೂರಿನ ಅಗ್ರಹಾರದಲ್ಲಿರುವ 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಅರ್ಚನೆ ಮಾಡಲಾಗಿದೆ. ಇದೇ ರೀತಿ ಕರ್ನಾಟಕದ ನಾನಾ ಕಡೆಗಳಲ್ಲಿ ಶಿವಣ್ಣನ ಆರೋಗ್ಯಕ್ಕಾಗಿ ಪೂಜೆ ಪುನಸ್ಕಾರ, ವಿಶೇಷ ಪೂಜೆಗಳನ್ನು ಮಾಡುತ್ತಿದ್ದಾರೆ. ಮಲೆ ಮಹದೇಶ್ವರನಿಗೆ ಅಭಿಮಾನಿಗಳು ಮುಡಿ ಅರ್ಪಿಸಿದ್ದಾರೆ.
ಡಿಸೆಂಬರ್ 18ರಂದು ಶಿವರಾಜ್ ಕುಮಾರ್ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದರು. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್̧ ಬಿಸಿ ಪಾಟೀಲ್, ಮಧು ಬಂಗಾರಪ್ಪ ಮುಂತಾದವರು ಶಿವಣ್ಣನ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಶಿವರಾಜ್ ಕುಮಾರ್ ಅನಾರೋಗ್ಯದ ಕುರಿತು ಕಳೆದ ಕೆಲವು ಸಮಯದಿಂದ ವದಂತಿಗಳಿದ್ದವು. ಇದೇ ಸಮಯದಲ್ಲಿ ತನ್ನ ಅನಾರೋಗ್ಯದ ಕುರಿತು ಪರೋಕ್ಷವಾಗಿ ಶಿವರಾಜ್ ಕುಮಾರ್ ಮಾತನಾಡಿದ್ದಾರೆ. ತಮ್ಮ ಕಾಯಿಲೆಗೆ ಸಂಬಂಧಪಟ್ಟಂತೆ ಅತ್ಯುತ್ತಮ ಚಿಕಿತ್ಸೆ ಪಡೆಯುವ ಸಲುವಾಗಿ ಅಮೆರಿಕಕ್ಕೆ ಹೋಗಿ ಬರುವುದಾಗಿ ಹೇಳಿದ್ದರು.
ಕರುನಾಡ ಚಕ್ರವರ್ತಿ ನಟ ಶಿವರಾಜ್‌ಕುಮಾರ್ ತಾವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕುರಿತು ಈ ಹಿಂದೆಯೇ ತಿಳಿಸಿದ್ದರು. ಭೈರತಿ ರಣಗಲ್ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ಈ ಕುರಿತು ಮಾಹಿತಿ ನೀಡಿದ್ದರು. "ಕೆಲವು ತಿಂಗಳ ಹಿಂದೆ ನನ್ನ ಅನಾರೋಗ್ಯದ ಬಗ್ಗೆ ತಿಳಿಯಿತು. ಈ ಸಮಯದಲ್ಲಿಯೇ ಶೂಟಿಂಗ್ ಮುಗಿಸಿದೆ. ಸಾಹಸ ಸನ್ನಿವೇಶ ಕೂಡ ಮಾಡಿದ್ದೆ. ಡ್ಯಾನ್ಸ್ ಕರ್ನಾಟಕ ಶೋನಲ್ಲೂ ಭಾಗವಹಿಸಿದ್ದೆ. ನಾನು ಎಲ್ಲಾ ನಿರ್ಮಾಪಕರಿಗೂ ಈ ಕುರಿತು ಮಾಹಿತಿ ನೀಡಿದ್ದೇನೆ. ಯಾರಲ್ಲಿಯೂ ಅನಾರೋಗ್ಯದ ಕುರಿತು ವಿಷಯ ಮುಚ್ಚಿಟ್ಟಿಲ್ಲ" ಎಂದು ಶಿವಣ್ಣ ಹೇಳಿದ್ದರು.
"ಅನಾರೋಗ್ಯಕ್ಕೆ ಸಂಬಂಧಪಟ್ಟಂತೆ ಚಿಕಿತ್ಸೆ ಕಳೆದ ಹಲವು ಸಮಯದಿಂದ ನಡೆಯುತ್ತಿದೆ. ನನಗೆ ನಿಮ್ಮೆಲ್ಲರ ಆಶೀರ್ವಾದ ಇದ್ದರೆ ಸಾಕು. ನನಗೆ ಈ ಅನಾರೋಗ್ಯಕ್ಕೆ ನಾಲ್ಕು ಹಂತಗಳಲ್ಲಿ ಟ್ರೀಟ್ ಮೆಂಟ್ ನಡೆಯಲಿದೆ. ಇನ್ನೆರಡು ಸೆಷನ್ ಬಾಕಿ ಇದೆ. ಒಂದು ಶಸ್ತ್ರಚಿಕಿತ್ಸೆ ಕೂಡ ಆಗಬೇಕಿದೆ. ಇದಕ್ಕಾಗಿ ಡಿಸೆಂಬರ್ ತಿಂಗಳಿನಲ್ಲಿ ಅಮೆರಿಕಕ್ಕೆ ಹೋಗಬೇಕಿದೆ. ಅಲ್ಲಿ ಒಂದು ತಿಂಗಳ ಕಾಲ ಟ್ರೀಟ್‌ಮೆಂಟ್ ಪಡೆಯಬೇಕಿದೆ. ಮುಂದಿನ ಸಂಕ್ರಾಂತಿ ತಿಂಗಳ ವೇಳೆಗೆ ಭಾರತಕ್ಕೆ ಮರಳುವ ಆಲೋಚನೆ ಇದೆ. ಫೆಬ್ರವರಿಯಿಂದ ನಿಮ್ಮೆಲ್ಲರ ಆಶೀರ್ವಾದದಿಂದ ಫುಲ್ ಫಾರ್ಮ್‌ನಲ್ಲಿರುವ ಶಿವಣ್ಣ ನಿಮ್ಮ ಮುಂದೆ ಇರಲಿದ್ದಾರೆ " ಎಂದು ಶಿವಣ್ಣ ಮಾಹಿತಿ ನೀಡಿದ್ದರು.