ಚೊಚ್ಚಲ ಟೆಸ್ಟ್ ಸೆಂಚುರಿ ಸಿಡಿಸಿದ ಸರ್ಫರಾಜ್ ಖಾನ್; ಒತ್ತಡದಲ್ಲಿ ಶತಕ ಬಾರಿಸಿ ಕೊಹ್ಲಿ, ಸಚಿನ್ ಎಲೈಟ್ ಪಟ್ಟಿ ಸೇರಿದ ಬ್ಯಾಟರ್
Sarfaraz Khan: ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಸಿಡಿಸಿದ ಟೀಮ್ ಇಂಡಿಯಾ ಬ್ಯಾಟರ್ ಸರ್ಫರಾಜ್ ಖಾನ್ ಅವರು ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಸೇರಿದಂತೆ ದಿಗ್ಗಜ ಆಟಗಾರರ ಎಲೈಟ್ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡದ ಸರ್ಫರಾಜ್ ಖಾನ್ ಅವರು ದೀರ್ಘಸ್ವರೂಪದ ಕ್ರಿಕೆಟ್ನಲ್ಲಿ ಚೊಚ್ಚಲ ಸೆಂಚುರಿ ಸಿಡಿಸಿ ಸಂಭ್ರಮಿಸಿದ್ದಾರೆ. 3ನೇ ದಿನದಾಟದಂದು 78 ಬಾಲ್ಗಳಲ್ಲಿ 70 ರನ್ ಗಳಿಸಿ ಅಜೇಯರಾಗಿದ್ದ ಬಲಗೈ ಬ್ಯಾಟರ್, ನಾಲ್ಕನೇ ದಿನದಂದು 110 ಎಸೆತಗಳಲ್ಲಿ ಶತಕ ಪೂರೈಸಿದರು. 57ನೇ ಓವರ್‌ನ 3ನೇ ಎಸೆತದಲ್ಲಿ ಬೌಂಡರಿಯೊಂದಿಗೆ ಸರ್ಫರಾಜ್ ಶತಕ ಪೂರ್ಣಗೊಳಿಸಿ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ.
ಗಾಯದ ಕಾರಣ ಅವಕಾಶ ಪಡೆಯಲು ವಿಫಲವಾದ ಶುಭ್ಮನ್ ಗಿಲ್ ಬದಲಿಗೆ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದ ಸರ್ಫರಾಜ್ ಖಾನ್ ಮೊದಲ 100 ಬಾರಿಸಿ ದಿಗ್ಗಜರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್, ವಿರಾಟ್ ಕೊಹ್ಲಿ ಅವರ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಸರ್ಫರಾಜ್ ಡಕೌಟ್ ಆಗಿದ್ದ, 90ರ ಸ್ಟ್ರೈಕ್ ರೇಟ್‌ನಲ್ಲಿ 2ನೇ ಇನ್ನಿಂಗ್ಸ್‌ನಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಡಕೌಟ್ ಆಗಿ, 2ನೇ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದ 9ನೇ ಭಾರತೀಯ ಬ್ಯಾಟರ್ ಎನಿಸಿದ್ದಾರೆ.
ಡಕೌಟ್ ಆಗಿ ನಂತರ ಶತಕ ಸಿಡಿಸಿದವರು
ಮಾಧವ್ ಆಪ್ಟೆ- 0 ಮತ್ತು 163 (ವೆಸ್ಟ್ ಇಂಡೀಸ್ ವಿರುದ್ಧ, 1953)
ಸುನಿಲ್ ಗವಾಸ್ಕರ್- 0 ಮತ್ತು 118 (ಆಸ್ಟ್ರೇಲಿಯಾ ವಿರುದ್ಧ, 1977)
ದಿಲೀಪ್ ವೆಂಗ್‌ಸರ್ಕರ್- 0 ಮತ್ತು 103 (ಇಂಗ್ಲೆಂಡ್ ವಿರುದ್ಧ, 1979)
ಮೊಹಮ್ಮದ್ ಅಜರುದ್ದೀನ್- 0 ಮತ್ತು 109 (ಪಾಕಿಸ್ತಾನ ವಿರುದ್ಧ, 1989)
ಸಚಿನ್ ತೆಂಡೂಲ್ಕರ್- 0 ಮತ್ತು 136 (ಪಾಕಿಸ್ತಾನ ವಿರುದ್ಧ, 1999)
ಶಿಖರ್ ಧವನ್- 0 ಮತ್ತು 114 (ನ್ಯೂಜಿಲೆಂಡ್ ವಿರುದ್ಧ, 2014)
ವಿರಾಟ್ ಕೊಹ್ಲಿ- 0 ಮತ್ತು 104 (ಶ್ರೀಲಂಕಾ ವಿರುದ್ಧ, 2017)
ಶುಭ್ಮನ್ ಗಿಲ್- 0 ಮತ್ತು 119 (ಬಾಂಗ್ಲಾದೇಶ ವಿರುದ್ಧ, 2024)
ಸರ್ಫರಾಜ್ ಖಾನ್- 0 ಮತ್ತು 114* (ನ್ಯೂಜಿಲೆಂಡ್ ವಿರುದ್ಧ, 2024)*
16ನೇ ಶತಕ ಸಿಡಿಸಿದ ಸರ್ಫರಾಜ್
ಇದು ಸರ್ಫರಾಜ್ ಖಾನ್ ಅವರ 16ನೇ ಪ್ರಥಮ ದರ್ಜೆ ಶತಕವಾಗಿದೆ. ಅಂತಾರಾಷ್ಟ್ರೀಯ ಮತ್ತು ರಣಜಿ ಸೇರಿದಂತೆ ದೇಶೀಯ ಕ್ರಿಕೆಟ್ನ ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ಸಿಡಿಸಿದ 16 ಶತಕಗಳ ಪೈಕಿ 4 ಡಬಲ್ ಸೆಂಚುರಿ, 10 ಬಾರಿ 150 ಪ್ಲಸ್ ಸ್ಕೋರ್ ಮಾಡಿದ್ದಾರೆ. ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಚೊಚ್ಚಲ ಶತಕವನ್ನು ದಾಖಲಿಸಿದ್ದಾರೆ.
ಕೊಹ್ಲಿ, ಪಂತ್ ಜೊತೆ ಶತಕದ ಜೊತೆಯಾಟ
2ನೇ ಇನ್ನಿಂಗ್ಸ್‌ನಲ್ಲಿ ಆರಂಭಿಕರು ಬೇಗನೇ ವಿಕೆಟ್ ಕಳೆದುಕೊಂಡ ಬೆನ್ನಲ್ಲೇ ಒಂದಾದ ಸರ್ಫರಾಜ್-ಕೊಹ್ಲಿ 3ನೇ ವಿಕೆಟ್ಗೆ 136 ರನ್ಗಳ ಪಾಲುದಾರಿಕೆ ನೀಡಿದ್ದಾರೆ. ಆದರೆ 3ನೇ ದಿನದ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಅವರು 70 ರನ್ ಸಿಡಿಸಿ ಲಯಕ್ಕೆ ಮರಳಿದರು. ಮತ್ತೊಂದೆಡೆ, ಪಂತ್ ಜೊತೆಗೆ 4ನೇ ದಿನದಾಟ ಆರಂಭಿಸಿದ ಸರ್ಫರಾಜ್, 4ನೇ ವಿಕೆಟ್ಗೆ ಅಜೇಯ 113 ರನ್ (ಸುದ್ದಿ ಪಬ್ಲಿಷ್ ಆದ ತನಕ) ಜೊತೆಯಾಟವಾಡಿದ್ದಾರೆ. ಇದೇ ವೇಳೆ ಪಂತ್ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.