ಗೆಲುವಿನ ಹೊಸ್ತಿಲಲ್ಲಿ ಎಡವಿದ ಕರ್ನಾಟಕ, ರಣಜಿ ಪಂದ್ಯದಲ್ಲಿ 6 ರನ್‌ಗಳ ಆಘಾತಕಾರಿ ಸೋಲು; ರೋಚಕ ಪಂದ್ಯ ಗೆದ್ದ ಗುಜರಾತ್
ಕನ್ನಡ ಸುದ್ದಿ  /  ಕ್ರಿಕೆಟ್  /  ಗೆಲುವಿನ ಹೊಸ್ತಿಲಲ್ಲಿ ಎಡವಿದ ಕರ್ನಾಟಕ, ರಣಜಿ ಪಂದ್ಯದಲ್ಲಿ 6 ರನ್‌ಗಳ ಆಘಾತಕಾರಿ ಸೋಲು; ರೋಚಕ ಪಂದ್ಯ ಗೆದ್ದ ಗುಜರಾತ್

ಗೆಲುವಿನ ಹೊಸ್ತಿಲಲ್ಲಿ ಎಡವಿದ ಕರ್ನಾಟಕ, ರಣಜಿ ಪಂದ್ಯದಲ್ಲಿ 6 ರನ್‌ಗಳ ಆಘಾತಕಾರಿ ಸೋಲು; ರೋಚಕ ಪಂದ್ಯ ಗೆದ್ದ ಗುಜರಾತ್

Gujarat vs Karnataka: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವು ಮಯಾಂಕ್‌ ಅಗರ್ವಾಲ್‌ ಬಳಗದ ಕೈಯಲ್ಲಿತ್ತು. ಆದರೆ, ಗುಜರಾತ್‌ ಬೌಲರ್‌ ಸಿದ್ಧಾರ್ಥ್‌ ದೇಸಾಯಿ ಕನ್ನಡಿಗರ ಗೆಲುವನ್ನು ಕಸಿದರು.

ಕರ್ನಾಟಕ ರಣಜಿ ತಂಡಕ್ಕೆ ಅಚ್ಚರಿಯ ಸೋಲು
ಕರ್ನಾಟಕ ರಣಜಿ ತಂಡಕ್ಕೆ ಅಚ್ಚರಿಯ ಸೋಲು

ಇನ್ನೇನು ಕರ್ನಾಟಕ ತಂಡ ರಣಜಿ ಟ್ರೋಫಿ ಪಂದ್ಯದಲ್ಲಿ ಗೆದ್ದೇ ಬಿಟ್ಟಿತು ಎನ್ನುವ ಪಂದ್ಯದಲ್ಲಿ ಮಯಾಂಕ್‌ ಅಗರ್ವಾಲ್‌ ಪಡೆ ಅಚ್ಚರಿಯ ಸೋಲು ಕಂಡಿದೆ. ಒಂದು ಹಂತದಲ್ಲಿ ಎಲ್ಲವೂ ಕನ್ನಡಿಗರ ಪರವಾಗಿ ಸಾಗಿದ ಪಂದ್ಯದಲ್ಲಿ ಕೊನೆಗೂ ಕರ್ನಾಟಕ ವಿರುದ್ಧ ಗುಜರಾತ್‌ ತಂಡ ಕೇವಲ 6 ರನ್‌ಗಳಿಂದ ರೋಚಕ ಜಯ ಸಾಧಿಸಿದೆ. ಆ ಮೂಲಕ ಸತತ ಎರಡು ಗೆಲುವುಗಳೊಂದಿಗೆ ರಣಜಿ ಟ್ರೋಫಿ 2023-24ರ ಸಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಕರ್ನಾಟಕ ಇನ್ನಿಂಗ್ಸ್‌ನ ಮಧ್ಯಭಾಗದವರೆಗೂ ಗೆಲುವು ಮಯಾಂಕ್‌ ಅಗರ್ವಾಲ್‌ ಬಳಗದ ಕೈಯಲ್ಲಿತ್ತು. ಆದರೆ, ಗುಜರಾತ್‌ ಬೌಲರ್‌ ಸಿದ್ಧಾರ್ಥ್‌ ದೇಸಾಯಿ ಕನ್ನಡಿಗರ ಗೆಲುವನ್ನು ಕಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್‌ ಪಡೆದು ಮಿಂಚಿದರು. ಗೆಲುವಿಗೆ 110 ರನ್‌ಗಳ ರನ್‌ಗಳ ಅತ್ಯಲ್ಪ ಹಾಗೂ ಸುಲಭ ಗುರಿ ಪಡೆದ ಕರ್ನಾಟಕ ಕೇವಲ 103 ರನ್‌ಗಳಿಗೆ ಆಲೌಟ್‌ ಆಯ್ತು. ಅಚ್ಚರಿಯ ರೀತಿಯಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿ ಸೋಲಿಗೆ ಶರಣಾಯ್ತು.

ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ ಆಡಿದ ಗುಜರಾತ್‌, ಕ್ಷಿತಿಜ್‌ ಕುಮಾರ್‌ ಮತ್ತು ಉಮಾಂಕ್‌ ಕುಮಾರ್‌ ಅರ್ಧಶತಕದ ಹೊರತಾಗಿಯೂ 264 ರನ್‌ಗಳಿಗೆ ಆಲೌಟ್‌ ಆಯ್ತು. ಕರ್ನಾಟಕ ಪರ ಕೌಶಿಲ್‌ 4 ವಿಕೆಟ್‌ ಪಡೆದರು. ಇದಕ್ಕೆ ಪ್ರತಿಯಾಗಿ ಮೊದಲ ಇನ್ನಿಂಗ್ಸ್‌ ಆಡಿದ ಕರ್ನಾಟಕ, ಭರ್ಜರಿ 374 ರನ್‌ ಕಲೆ ಹಾಕಿ ಭಾರಿ ಮುನ್ನಡೆ ಸಾಧಿಸಿತು. ಮೊದಲ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶೂನ್ಯಕ್ಕೆ ಔಟಾಗಿದ್ದ ನಾಯಕ ಮಯಾಂಕ್‌ ಅಗರ್ವಾಲ್‌ (109), ಆಕರ್ಷಕ ಶತಕ ಸಿಡಿಸಿದರು. ಮನೀಶ್ ಪಾಂಡೆ 88 ರನ್‌ ಕೊಡುಗೆ ನೀಡಿದರು.

110 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಗುಜರಾತ್‌ ಮತ್ತೆ ಅಬ್ಬರಿಸುವಲ್ಲಿ ವಿಫಲವಾಯ್ತು. ಮನನ್‌ ಮತ್ತು ಉಮಾಂಗ್‌ ಕುಮಾರ್‌ ತಲಾ ಅರ್ಧಶತಕದ ನೆರವಿಂದ ಅಂತಿಮವಾಗಿ 219 ರನ್‌ ಗಳಿಸಿ ಆಲೌಟ್‌ ಆಯ್ತು. ಆ ಮೂಲಕ 109 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿತು.

ಅಲ್ಪ ಗುರಿ ಮುಟ್ಟಲು ವಿಫಲವಾದ ಕರ್ನಾಟಕ

ಗೆಲುವಿಗೆ ಕೇವಲ 110 ರನ್‌ಗಳ ಸುಲಭ ಗುರಿ ಪಡೆದ ಕರ್ನಾಟಕ, ಕೆಲವೇ ನಿಮಿಷಗಳಲ್ಲಿ ಜಯದ ನಗೆ ಬೀರುವ ವಿಶ್ವಾಸದಲ್ಲಿತ್ತು. ನಾಯಕ ಅಗರ್ವಾಲ್‌ ಮತ್ತು ದೇವದತ್‌ ಪಡಿಕಲ್‌ ಮೊದಲ ವಿಕೆಟ್‌ಗೆ 50 ರನ್‌ಗಳ ಜೊತೆಯಾಟವಾಡಿದರು. ಅಲ್ಲಿಯವರೆಗೂ ಪಂದ್ಯದಲ್ಲಿ ಕರ್ನಾಟಕ ಹಿಡಿತ ಸಾಧಿಸಿತ್ತು. 19 ರನ್‌ ಗಳಿಸಿ ಮಯಾಂಕ್‌ ಮತ್ತು 31 ರನ್ ಗಳಿಸಿ ಪಡಿಕಲ್‌ ಔಟಾಗುತ್ತಿದ್ದಂತೆಯೇ ಕನ್ನಡಿಗರ ಸೋಲಿನ ಕಂಟ್‌ಡೌನ್‌ ಆರಂಭವಾಯ್ತು.

ಸಿದ್ಧಾರ್ಥ್‌ ದೇಸಾಯಿ ಮಾರಕ ದಾಳಿಗೆ ಕರ್ನಾಟಕ ತಂಡದ ವಿಕೆಟ್‌ ತರಗೆಲೆಗಳಂತೆ ಉದುರುತ್ತಾ ಹೋಯ್ತು. ಶುಭಾಂಗ್‌ ಹೆಗ್ಡೆ 27 ರನ್ ಗಳಿಸಿದ್ದನ್ನು ಹೊರತುಪಡಿಸಿದರೆ ಬೇರೆ ಯಾರಿಂದಲೂ ಎರಡಂಕಿ ರನ್‌ ಕಲೆಹಾಕಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 103 ರನ್‌ಗೆ ತಂಡ ಆಲೌಟ್‌ ಆಯ್ತು. ಕೊನೆಯವರಾಗಿ ಔಟಾದ ಬೌಲರ್‌ ಪ್ರಸಿದ್ಧ ಕೃಷ್ಣ, 1 ಸಿಕ್ಸರ್‌ ಸಹಿತ 7 ರನ್‌ ಗಳಿಸಿದರು. ಇನ್ನೇನು ತಂಡವನ್ನು ಗೆಲುವಿನ ದಡ ಸೇರಿಸುತ್ತಾರೆ ಎನ್ನುವಷ್ಟರಲ್ಲಿ ವಘೇಲಾ ಎಸೆತದಲ್ಲಿ ಕ್ಲೀನ್‌ ಬೋಲ್ಡ್‌ ಆದರು.

ಈ ಸೋಲಿನ ಬಳಿಕ ಕರ್ನಾಟಕ ತಂಡವು ಸಿ ಗುಂಪಿನ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕಿಳಿದಿದೆ. ಸತತ ಎರಡು ಗೆಲವು ಸಾಧಿಸಿದ ಗುಜರಾತ್‌ ಅಗ್ರಸ್ಥಾನಕ್ಕೆ ಬಡ್ತಿ ಪಡೆದಿದೆ. ಕರ್ನಾಟಕ ತಂಡವು ಮುಂದೆ ಜನವರಿ 19ರಿಂದ ಆರಂಭವಾಗಲಿರುವ ಪಂದ್ಯದಲ್ಲಿ ಗೋವಾ ತಂಡವನ್ನು ಎದುರಿಸಲಿದೆ.

Whats_app_banner