ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್;‌ ಆತಿಥೇಯ ವೆಸ್ಟ್ ಇಂಡೀಸ್ ಮಣಿಸಿ ಸೆಮಿಫೈನಲ್‌ ಲಗ್ಗೆ ಇಟ್ಟ ದಕ್ಷಿಣ ಆಫ್ರಿಕಾ

ಟಿ20 ವಿಶ್ವಕಪ್;‌ ಆತಿಥೇಯ ವೆಸ್ಟ್ ಇಂಡೀಸ್ ಮಣಿಸಿ ಸೆಮಿಫೈನಲ್‌ ಲಗ್ಗೆ ಇಟ್ಟ ದಕ್ಷಿಣ ಆಫ್ರಿಕಾ

West Indies vs South Africa: ಟಿ20 ವಿಶ್ವಕಪ್‌ 2024ರಿಂದ ಆತಿಥೇಯ ವೆಸ್ಟ್ ಇಂಡೀಸ್ ಹೊರಬಿದ್ದಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸೋತ ವಿಂಡೀಸ್‌, ನಿರಾಶೆ ಅನುಭವಿಸಿದೆ. ಅತ್ತ ಗೆದ್ದ ಹರಿಣಗಳು ಸೆಮಿಫೈನಲ್‌ ಟಿಕೆಟ್‌ ಪಡೆದಿದೆ.

ಆತಿಥೇಯ ವೆಸ್ಟ್ ಇಂಡೀಸ್ ಮಣಿಸಿ ಸೆಮಿಫೈನಲ್‌ ಲಗ್ಗೆ ಇಟ್ಟ ದಕ್ಷಿಣ ಆಫ್ರಿಕಾ
ಆತಿಥೇಯ ವೆಸ್ಟ್ ಇಂಡೀಸ್ ಮಣಿಸಿ ಸೆಮಿಫೈನಲ್‌ ಲಗ್ಗೆ ಇಟ್ಟ ದಕ್ಷಿಣ ಆಫ್ರಿಕಾ (AP)

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಸೆಮಿಫೈನಲ್‌ಗೆ ಲಗ್ಗೆ ಹಾಕಿದೆ. ಆಂಟಿಗುವಾದ ನಾರ್ತ್ ಸೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ವೆಸ್ಟ್‌ ಇಂಡೀಸ್ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದ ಹರಿಣಗಳು ಎರಡನೇ ತಂಡವಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ಕೊನೆಯ ಹಂತದಲ್ಲಿ ಭಾರಿ ರೋಚಕತೆ ಮೂಡಿಸಿದ್ದ ಪಂದ್ಯದಲ್ಲಿ ಮಾರ್ಕೊ ಜಾನ್ಸೆನ್ ಮತ್ತು ಕಗಿಸೊ ರಬಾಡ ದಕ್ಷಿಣ ಆಫ್ರಿಕಾವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ಆತಿಥೇಯರ ಬೆಂಬಲದೊಂದಿಗೆ ತವರಿನಲ್ಲಿ ಮೂರನೇ ಟಿ20 ವಿಶ್ವಕಪ್‌ ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿದ್ದ ಕೆರಿಬಿಯನ್ ಪಡೆಗೆ ಭಾರಿ ನಿರಾಶೆಯಾಗಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ವೆಸ್ಟ್‌ ಇಂಡಿಸ್‌, ದಕ್ಷಿಣ ಆಫ್ರಿಕಾ ಗೆಲುವಿಗೆ 136 ರನ್‌ಗಳ ಸಾಧಾರಣ ಗುರಿ ನೀಡಿತು. ಚೇಸಿಂಗ್‌ಗಿಳಿದ ದಕ್ಷಿಣ ಆಫ್ರಿಕಾ, ಎರಡನೇ ಓವರ್‌ನಲ್ಲಿಯೇ ರೀಜಾ ಹೆಂಡ್ರಿಕ್ಸ್ ಮತ್ತು ಕ್ವಿಂಟನ್ ಡಿ ಕಾಕ್ ಅವರ ವಿಕೆಟ್‌ ಕಳೆದುಕೊಂಡಿತು. ನಡುವೆ ಮಳೆ ಸುರಿದ ಕಾರಣದಿಂದಾಗಿ ಪಂದ್ಯವು 75 ನಿಮಿಷಗಳ ಕಾಲ ನಿಂತಿತು. ಹೀಗಾಗಿ ಡಿಎಲ್‌ಎಸ್‌ ನಿಯಮದ ಪ್ರಕಾರ ಆಫ್ರಿಕಾ ಇನ್ನಿಂಗ್ಸ್‌ ಅನ್ನು 17 ಓವರ್‌ಗಳಿಗೆ ಇಳಿಸಲಾಯ್ತು. ಅದರಂತೆ ದಕ್ಷಿಣ ಆಫ್ರಿಕಾ 123 ರನ್‌ ಗುರಿ ಪಡೆಯಿತು. ಜಾನ್ಸೆನ್‌ ಸಿಕ್ಸರ್‌ನೊಂದಿಗೆ, ಹರಿಣಗಳು 16.1 ಓವರ್‌ಗಳಲ್ಲಿ ಗುರಿ ತಲುಪಿದರು.

ನಾಯಕ ಐಡೆನ್‌ ಮರ್ಕ್ರಾಮ್‌ 18 ರನ್‌ ಗಳಿಸಿದರೆ, ಕ್ಲಾಸೆನ್‌ 22 ರನ್‌ ಪೇರಿಸಿದರು. ಮಿಲ್ಲರ್‌ 4 ರನ್‌ ಗಳಿಸಿದ್ದಾಗ ಚೇಸ್‌ ಎಸೆತದಲ್ಲಿ ಕ್ಲೀನ್‌ ಬೋಲ್ಡ್‌ ಆದರು. ತಂಡ ಒಂದು ಹಂತದಲ್ಲಿ 7 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿತ್ತು. ಮುಂದಿನ ಮೂರು ಎಸೆತಗಳಲ್ಲಿ ಎರಡು ಸಿಂಗಲ್ಸ್ ಮತ್ತು ಎರಡು ಬೈಗಳು ಬಂದವು. ಕೊನೆಯ ಏಳು ಎಸೆತಗಳಲ್ಲಿ ಒಂಬತ್ತು ರನ್‌ಗಳ ಅಗತ್ಯವಿತ್ತು. ಮೂರು ವಿಕೆಟ್ ಕಬಳಿಸಿದ್ದ ರೋಸ್ಟನ್ ಚೇಸ್ ಅವರ ಓವರ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ರಬಾಡ ಪಂದ್ಯವನ್ನು ತಮ್ಮತ್ತ ತಿರುಗಿಸಿದರು. ಅಂತಿಮ ಓವರ್‌ನ ಮೊದಲ ಎಸೆತದಲ್ಲಿ, ಜಾನ್ಸೆನ್ ಒಬೆಡ್ ಮೆಕಾಯ್ ಅವರ ಎಸೆತವನ್ನು ಲಾಂಗ್ ಆನ್ ಕಡೆಗೆ ಹೊಡೆದು ಸಿಕ್ಸರ್‌ನೊಂದಿಗೆ ಪಂದ್ಯ ಗೆಲ್ಲಿಸಿದರು.‌

ಟ್ರೆಂಡಿಂಗ್​ ಸುದ್ದಿ

ವಿಂಡೀಸ್‌ ನೀರಸ ಬ್ಯಾಟಿಂಗ್

ಮೊದಲು ಬ್ಯಾಟಿಂಗ್‌ ನಡೆಸಿದ ವೆಸ್ಟ್ ಇಂಡೀಸ್ ಅನ್ನು 135 ರನ್‌ಗಳಿಗೆ 8 ವಿಕೆಟ್‌ ಕಳೆದುಕೊಂಡಿತು. ಅನ್ರಿಚ್ ನಾರ್ಟ್ಜೆ ಹೊರತುಪಡಿಸಿ ದಕ್ಷಿಣ ಆಫ್ರಿಕಾದ ಎಲ್ಲಾ ಬೌಲರ್‌ಗಳು ಕನಿಷ್ಠ ಒಂದು ವಿಕೆಟ್ ಪಡೆದರು. ಎಡಗೈ ಸ್ಪಿನ್ನರ್ ತಬ್ರೈಜ್ ಶಮ್ಸಿ 3 ಪ್ರಮುಖ ವಿಕೆಟ್‌ ಪಡೆದು ಪಂದ್ಯಶ್ರೇಷ್ಠರಾದರು. ವಿಂಡೀಸ್ ಪರ ಮೂರನೇ ವಿಕೆಟ್‌ಗೆ ಕೈಲ್ ಮೇಯರ್ಸ್ ಮತ್ತು ಚೇಸ್ 81 ರನ್‌ಗಳ ಜೊತೆಯಾಟವಾಡಿದರು. 5 ರನ್‌ ವೇಳೆಗೆ 2 ವಿಕೆಟ್‌ ಕಳೆದುಕೊಂಡಿದ್ದ ತಂಡ ಚೇತರಿಸಿಕೊಂಡೊತು. ತಂಡದ ಇತರ ಬ್ಯಾಟರ್‌ಗಳಿಂದ ಉತ್ತಮ ಕೊಡುಗೆ ಬರಲಿಲ್ಲ. ಸ್ಫೋಟಿಸುವ ಸಾಧ್ಯತೆಯಿದ್ದ ಆಡ್ರೆ ರಸೆಲ್‌, ರನೌಟ್‌ಗೆ ಬಲಿಯಾದರು.

ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್‌ ಸೆಮಿಫೈನಲ್‌ಗೆ ಲಗ್ಗೆ ಹಾಕಿದೆ. ಅತ್ತ ವೆಸ್ಟ್‌ ಇಂಡೀಸ್‌ ಟೂರ್ನಿಯಿಂದ ಹೊರಬಿದ್ದಿದೆ.