ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಶ್ರೀಲಂಕಾಗೆ ಭಾರಿ ಹೊಡೆತ; ಆಲ್‌ರೌಂಡರ್‌ ವನಿಂದು ಹಸರಂಗ ಸರಣಿಯಿಂದ ಹೊರಕ್ಕೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಶ್ರೀಲಂಕಾಗೆ ಭಾರಿ ಹೊಡೆತ; ಆಲ್‌ರೌಂಡರ್‌ ವನಿಂದು ಹಸರಂಗ ಸರಣಿಯಿಂದ ಹೊರಕ್ಕೆ

ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಶ್ರೀಲಂಕಾಗೆ ಭಾರಿ ಹೊಡೆತ; ಆಲ್‌ರೌಂಡರ್‌ ವನಿಂದು ಹಸರಂಗ ಸರಣಿಯಿಂದ ಹೊರಕ್ಕೆ

ಶ್ರೀಲಂಕಾ ಆಲ್‌ರೌಂಡರ್ ವನಿಂದು ಹಸರಂಗ ಸ್ನಾಯು ಸೆಳೆತದಿಂದಾಗಿ ಭಾರತದ ವಿರುದ್ಧದ ಏಕದಿನ ಸರಣಿಯಿಂದ‌ ಹೊರಬಿದ್ದಿದ್ದಾರೆ. ಅವರ ಬದಲಿಗೆ ಹಸರಂಗ ಬದಲಿಗೆ ಜೆಫ್ರಿ ವಾಂಡರ್ಸೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ

 ಆಲ್‌ರೌಂಡರ್‌ ವನಿಂದು ಹಸರಂಗ ಸರಣಿಯಿಂದ ಹೊರಕ್ಕೆ
ಆಲ್‌ರೌಂಡರ್‌ ವನಿಂದು ಹಸರಂಗ ಸರಣಿಯಿಂದ ಹೊರಕ್ಕೆ (AFP)

ಭಾರತ ಮತ್ತು ಶ್ರೀಲಂಕಾ (Sri Lanka vs India 2nd ODI) ತಂಡಗಳ ನಡುವಿನ ಸರಣಿಯ ಎರಡನೇ ಏಕದಿನ ಪಂದ್ಯ ಇಂದು (ಆಗಸ್ಟ್‌ 4, ಭಾನುವಾರ) ನಡೆಯುತ್ತಿದೆ. ಮೊದಲ ಏಕದಿನ ಪಂದ್ಯವು ರೋಚಕ ಟೈನಲ್ಲಿ ಅಂತ್ಯವಾಯ್ತು. ಇದೀಗ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಆತಿಥೇಯ ಲಂಕಾ ತಂಡಕ್ಕೆ ಭಾರಿ ಹೊಡೆತ ಬಿದ್ದಿದೆ. ಶ್ರೀಲಂಕಾದ ಸ್ಟಾರ್ ಸ್ಪಿನ್ನರ್ ಹಾಗೂ ಆಲ್‌ರೌಂಡರ್‌ ವನಿಂದು ಹಸರಂಗ ಎಡಗೈ ಸ್ನಾಯುಸೆಳೆತದಿಂದಾಗಿ ಸರಣಿಯ ಉಳಿದ ಪಂದ್ಯಗಳಿಂದ ಹೊರಬಿದ್ದಿದ್ದಾರೆ.‌ ಹೀಗಾಗಿ ಇಂದು ಕೊಲಂಬೊದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಅವರು ಆಡುತ್ತಿಲ್ಲ. ಇದು ಭಾರತ ತಂಡಕ್ಕೆ ಲಾಭವಾಗಲಿದೆ.

ಕೊಲಂಬೊದಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ಹಸರಂಗ ಭಾರತ ತಂಡದ ಪ್ರಮುಖ ಮೂರು ವಿಕೆಟ್ ಪಡೆದು ಮಿಂಚಿದ್ದರು. ಆ ಮೂಲಕ ತಂಡವು ಗೆಲ್ಲದಿದ್ದರೂ ಪಂದ್ಯವನ್ನು ಟೈ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆರ್‌ಸಿಬಿ ತಂಡದಲ್ಲಿದ್ದಾಗ ಸಹ ಆಟಗಾರನಾಗಿದ್ದ ಅಪಾಯಕಾರಿ ಬ್ಯಾಟರ್‌ ವಿರಾಟ್ ಕೊಹ್ಲಿ (24) ಅವರನ್ನು ಔಟ್ ಮಾಡಿದ್ದ ಹಸರಂಗ, ಆ ಬಳಿಕ ಕೆಎಲ್ ರಾಹುಲ್ ಅವರನ್ನು 31 ರನ್‌ ಗಳಿಸಿದ್ದಾಗ ವಿಕೆಟ್‌ ಕಬಳಿಸಿದ್ದರು. ಕೊನೆಯಲ್ಲಿ ಕುಲ್ದೀಪ್ ಯಾದವ್ ಅವರನ್ನು ಕೂಡಾ 2 ರನ್‌ಗಳಿಗೆ ಔಟ್ ಮಾಡಿದ್ದರು.

ಇದೇ ಪಂದ್ಯದಲ್ಲಿ ಶ್ರೀಲಂಕಾದ ನಾಯಕ ಚರಿತ್ ಅಸಲಂಕಾ 48ನೇ ಓವರ್‌ನಲ್ಲಿ ಶಿವಂ ದುಬೆ ಮತ್ತು ಅರ್ಷದೀಪ್ ಸಿಂಗ್ ಇಬ್ಬರನ್ನೂ ಸತತ 2 ಎಸೆತಗಳಲ್ಲಿ ಔಟ್ ಮಾಡುವ ಮೂಲಕ ಪಂದ್ಯ ರೋಚಕವಾಗಿ ಸಮಬಲದಲ್ಲಿ ಅಂತ್ಯವಾಯ್ತು. ಇದೀಗ ಮುಂದಿನ ಪಂದ್ಯದಲ್ಲಿ ಹಸರಂಗ ಅವರ ಕೊಡುಗೆಯನ್ನು ಲಂಕಾ ಕಳೆದುಕೊಳ್ಳಲಿದೆ.

ಅಲ್ಲದೆ ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲೂ ಅವರು ತಂಡಕ್ಕೆ ಕೊಡುಗೆ ನೀಡಿದ್ದರು. ಕೆಳ ಕ್ರಮಾಂಕದಲ್ಲಿ 35 ಎಸೆತಗಳಲ್ಲಿ 24 ರನ್ ಗಳಿಸುವ ಮೂಲಕ ಶ್ರೀಲಂಕಾ ಮೊತ್ತವನ್ನು ಐವತ್ತು ಓವರ್‌ಗಳ ವೇಳೆಗೆ 230 ರನ್‌ಗಳಿಗೆ ಕೊಂಡೊಯ್ದಿದ್ದರು.

ಉಳಿದ ಪಂದ್ಯಗಳಿಗೆ ಅಲಭ್ಯ

“ಎಡ ಸ್ನಾಯು ಸೆಳೆತಕ್ಕೆ ಒಳಗಾಗಿರುವ ಕಾರಣ ವನಿಂದು ಹಸರಂಗ ಏಕದಿನ ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

"ಹಸರಂಗ ಮೊದಲ ಏಕದಿನ ಪಂದ್ಯದ ವೇಳೆ 10ನೇ ಓವರ್‌ನ ಕೊನೆಯ ಎಸೆತದ ಸಮಯದಲ್ಲಿ ಎಡ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಎಂಆರ್‌ಐ ಪರೀಕ್ಷೆಯಲ್ಲಿ ಗಾಯವು ದೃಢಪಟ್ಟಿದೆ. ಹೀಗಾಗಿ ಹಸರಂಗ ಬದಲಿಗೆ ಜೆಫ್ರಿ ವಾಂಡರ್ಸೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ" ಎಂದು ಲಂಕಾ ಕ್ರಿಕೆಟ್‌ ಮಂಡಳಿ ತಿಳಿಸಿದೆ.

2ನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್, ಶಿವಂ ದುಬೆ/ರಿಷಭ್ ಪಂತ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

ಶ್ರೀಲಂಕಾ ಸಂಭಾವ್ಯ ತಂಡ

ಅವಿಷ್ಕ ಫೆರ್ನಾಂಡೋ, ಪಾತುಂ ನಿಸ್ಸಾಂಕ, ಕುಸಲ್ ಮೆಂಡಿಸ್, ಸದೀರ ಸಮರವಿಕ್ರಮ, ಚರಿತ್ ಅಸಲಂಕ (ನಾಯಕ), ಜನಿತ್ ಲಿಯಾನಗೆ, ದುನಿತ್ ವೆಲ್ಲಲಾಗೆ, ಜೆಫ್ರಿ ವಾಂಡರ್ಸೆ, ಅಕಿಲ ದನಂಜಯ, ಮೊಹಮ್ಮದ್ ಶಿರಾಜ್/ಮಹೀಶ್ ತೀಕ್ಷಣ, ಅಸಿತ ಫೆರ್ನಾಂಡೋ.

Whats_app_banner