IPL 2024: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದ ಮಯಾಂಕ್; ಎಸ್ಆರ್ಎಚ್ಗೆ ಶಹಬಾಜ್ ಅಹ್ಮದ್
Trading Window IPL 2024: ಎಸ್ಆರ್ಎಸ್ಚ್ ಮಯಾಂಕ್ ಡಾಗರ್ ಮತ್ತು ಆರ್ಸಿಬಿ ಶಹಬಾಜ್ ಅಹ್ಮದ್ ಅವರನ್ನು ಟ್ರೇಡ್ ಮಾಡಿಕೊಂಡಿವೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಇಂದು ಪ್ರಕಟವಾಗಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League 2024) 2024ರ ಟ್ರೇಡಿಂಗ್ ವಿಂಡೋ (Trading Window IPL 2024) ಇವತ್ತಿಗೆ ಕೊನೆಯಾಗಲಿದೆ. 10 ಫ್ರಾಂಚೈಸಿಗಳು ಆಟಗಾರರನ್ನು ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಪ್ರಕ್ರಿಯೆ ಇಂದು ಸಂಜೆಯೊಳಗೆ ಕೊನೆಯಾಗಲಿವೆ. ಈ ಮಧ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು (Sunrisers Hyderabad) ತಲಾ ಒಬ್ಬರನ್ನು ಅದಲು ಬದಲು ಮಾಡಿಕೊಂಡಿವೆ.
ಮಯಾಂಕ್ ಡಾಗರ್ (ಎಸ್ಆರ್ಎಸ್ಚ್) ಮತ್ತು ಶಹಬಾಜ್ ಅಹ್ಮದ್ (ಆರ್ಸಿಬಿ) ಅವರನ್ನು ಟ್ರೇಡ್ ಮಾಡಿಕೊಂಡಿವೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಇಂದು ಪ್ರಕಟವಾಗಲಿದೆ ಎಂದು ಕ್ರಿಕ್ಬಜ್ ವರದಿ ತಿಳಿಸಿದೆ. ಹೈದರಾಬಾದ್ ತಂಡವು ಡಾಗರ್ ಅವರನ್ನು ಕಳೆದ ವರ್ಷ 1.8 ಕೋಟಿಗೆ ಖರೀದಿಸಿತ್ತು. ಆರ್ಸಿಬಿ ತಂಡವು ಶಹಬಾಜ್ ಅವರನ್ನು 2022ರ ಮೆಗಾ ಹರಾಜಿನಲ್ಲಿ 2.4 ಕೋಟಿಗೆ ತನ್ನ ಬುಟ್ಟಿಗೆ ಹಾಕಿಕೊಂಡಿತ್ತು.
ಕಳೆದ ಆವೃತ್ತಿಯಲ್ಲಿ ಇಬ್ಬರೂ ವಿಫಲ
ಎಸ್ಆರ್ಎಚ್ ಪರ ಕೇವಲ 3 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಡಾಗರ್, ಕಳೆದ ಆವೃತ್ತಿಯಲ್ಲಿ ಮ್ಯಾಜಿಕ್ ನಡೆಸಲು ವಿಫಲರಾಗಿದ್ದರು. ಇನ್ನು ಶಹಬಾಜ್ 16ನೇ ಆವೃತ್ತಿಯಲ್ಲಿ ಆರ್ಸಿಬಿ ಪರ 10 ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಈ ಋತುವಿನಲ್ಲಿ ಸ್ಪಿನ್ ಆಲ್ರೌಂಡರ್ ವನಿಂದು ಹಸರಂಗ ಮತ್ತು ವೇಗಿ ಹರ್ಷಲ್ ಪಟೇಲ್ರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.
ಶಹಬಾಜ್ ಮತ್ತು ಡಾಗರ್ ಇಬ್ಬರು ಸಹ ನಿಧಾನಗತಿ ಎಡಗೈ ಬೌಲಿಂಗ್ ಮೂಲಕ ಅದ್ಭುತ ಕೌಶಲ್ಯಗಳನ್ನು ಹೊಂದಿದ್ದಾರೆ. ಈ ಟ್ರೇಡಿಂಗ್ ಇಬ್ಬರಿಗೂ ಸಮಾನವಾಗಿದೆ. ಆದರೆ, ಬ್ಯಾಟಿಂಗ್ನಲ್ಲಿ ಡಾಗರ್ಗಿಂತ ಶಹಬಾಜ್ ಹೆಚ್ಚಿನ ಸಾಮರ್ಥ್ಯ ಹೊಂದಿರುವುದು ವಿಶೇಷ. ಆದರೆ ಕಳೆದ ಆವೃತ್ತಿಯಲ್ಲಿ ಇಬ್ಬರಿಂದಲೂ ನಿರೀಕ್ಷಿತ ಪ್ರದರ್ಶನ ಬರದಿದ್ದರೂ, 2024ರ ಆವೃತ್ತಿಯಲ್ಲಿ ಮಿಂಚುವ ವಿಶ್ವಾಸದಲ್ಲಿದ್ದಾರೆ.
ಶಹಬಾಜ್ ಅಹ್ಮದ್ ಈವರೆಗೂ 39 ಐಪಿಎಲ್ ಪಂದ್ಯಗಳಲ್ಲಿ ಆಡಿದ್ದಾರೆ. ಈ ಪಂದ್ಯಗಳಿಂದ 321 ರನ್, 14 ವಿಕೆಟ್ ಪಡೆದಿದ್ದಾರೆ. ಭಾರತೀಯ ಕ್ರಿಕೆಟ್ ಪರ 3 ಏಕದಿನ, 2 ಟಿ20ಐ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಪಶ್ಚಿಮ ಬಗಾಂಳ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ನವೆಂಬರ್ 26 ಕೊನೆಯ ದಿನಾಂಕ
ಐಪಿಎಲ್ನ ಎಲ್ಲಾ 10 ತಂಡಗಳು 17ನೇ ಆವೃತ್ತಿಯ ಟೂರ್ನಿಗೆ ರಿಟೈನ್ ಮತ್ತು ರಿಲೀಸ್ ಮಾಡುವ ಆಟಗಾರರ ಕೊನೆಯ ಪಟ್ಟಿಯನ್ನು ನವೆಂಬರ್ 26 ರೊಳಗೆ ಸಲ್ಲಿಸಬೇಕಿದೆ. ಡಿಸೆಂಬರ್ 19ರಂದು ದುಬೈನಲ್ಲಿ ಮಿನಿ ಹರಾಜು ಜರುಗಲಿದೆ. ಈ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ತಮ್ಮ ಬೇಡಿಕೆಗೆ ತಕ್ಕಂತೆ ಆಟಗಾರರನ್ನು ಖರೀದಿಸಲು ಯೋಜನೆ ಹಾಕಿಕೊಂಡಿವೆ.