ದುಬಾರಿ ಬೆಲೆಯ ಲ್ಯಾಂಡ್ ರೋವರ್ ಕಾರು ಖರೀದಿಸಿದ ಮೊಹಮ್ಮದ್ ಸಿರಾಜ್; ಟೀಮ್ ಇಂಡಿಯಾ ವೇಗಿಯ ಡ್ರೀಮ್ ಕಾರ್ ಹೀಗಿದೆ ನೋಡಿ
ಮೊಹಮ್ಮದ್ ಸಿರಾಜ್ ತಮ್ಮ ಕಾರು ಕಲೆಕ್ಷನ್‌ಗೆ ಮತ್ತೊಂದು ಹೊಸ ಕಾರನ್ನು ಸೇರ್ಪಡೆ ಮಾಡಿದ್ದಾರೆ. ಕುಟುಂಬದ ಬಳಕೆಗಾಗಿ ಡ್ರೀಮ್ ಕಾರು ಖರೀದಿ ಮಾಡಿದ್ದಾರೆ. ತಮ್ಮ ತವರು ಹೈದರಾಬಾದ್‌ನಲ್ಲಿ ಕಾರು ಖರೀದಿಸಿ ಕುಟುಂಬದೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಟೀಮ್ ಇಂಡಿಯಾ ವೇಗಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ಮೊಹಮ್ಮದ್ ಸಿರಾಜ್, ಹೊಸ ಕಾರು ಖರೀದಿ ಮಾಡಿದ್ದಾರೆ. ಕುಟುಂಬದ ಬಳಕೆಗಾಗಿ ತಮ್ಮ ಕನಸಿನ ಕಾರು ಖರೀದಿ ಮಾಡಿದ ಕುರಿತಾಗಿ ವೇಗದ ಬೌಲರ್ ಸೋಷಿಯಲ್ ಮೀಡಿಯಾದಲ್ಲಿ ಫೋಟೊ ಹಂಚಿಕೊಂಡಿದ್ದಾರೆ. ದುಬಾರಿ ಬೆಲೆಯ ಲ್ಯಾಂಡ್ ರೋವರ್ ಕಾರನ್ನು ಮಿಯಾನ್ ಖರೀದಿಸಿದ್ದು, ಇದನ್ನು ತಮ್ಮ 'ಡ್ರೀಮ್ ಕಾರ್' ಎಂದು ಹೇಳಿಕೊಂಡಿದ್ದಾರೆ. ಹೊಸ ಕಾರಿನ ಮುಂದೆ ತಮ್ಮ ತಾಯಿ ಹಾಗೂ ಕುಟುಂಬದೊಂದಿಗೆ ನಿಂತು ಸಿರಾಜ್ ಫೋಟೊಗೆ ಪೋಸ್ ಕೊಟ್ಟಿದ್ದಾರೆ.
ಭಾರತ ಕ್ರಿಕೆಟ್ ತಂಡದಲ್ಲಿ ವೇಗದ ಬೌಲರ್ ಆಗಿ ಬಹುತೇಕ ಕಾಯಂ ಸದಸ್ಯನಾಗಿರುವ ಸಿರಾಜ್, ಹೊಸ ಕಾರಿನೊಂದಿಗೆ ನಿಂತಿರುವ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ಸಿರಾಜ್, ಸದ್ಯ ಭಾರತ ಹಾಗೂ ಆರ್‌ಸಿಬಿ ತಂಡದ ಪರ ಆಡುತ್ತಿದ್ದಾರೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಪಂದ್ಯಾವಳಿ ವೇಳೆ ಸಿರಾಜ್ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದರು.
ಕನಸಿನ ಕಾರು ಖರೀದಿಸಿರುವ ಸಿರಾಜ್, ಈ ಸಾಮರ್ಥ್ಯ ಕೊಟ್ಟ ಸರ್ವಶಕ್ತನಿಗೆ ಧನ್ಯವಾದ ಅರ್ಪಿಸಿದ್ದಾರೆ. ಮನಸ್ಸಿದ್ದರೇ ಏನನ್ನೂ ಸಾಧಿಸಬಹುದು ಎಂಬುದಾಗಿ ಸ್ಪೂರ್ತಿಯ ಮಾತುಗಳನ್ನಾಡಿದ್ದಾರೆ.
“ಕನಸು ಕಾಣಲು ಯಾವುದೇ ಮಿತಿ ಬೇಡ. ಕನಸುಗಳು ನಿಮ್ಮನ್ನು ಹೆಚ್ಚು ಶ್ರಮಿಸಲು ಮತ್ತು ಮುನ್ನುಗ್ಗಲು ಪ್ರೇರೇಪಿಸುತ್ತವೆ. ಜೀವನದಲ್ಲಿ ನೀವು ಸ್ಥಿರವಾಗಿ ಮಾಡುವ ಪ್ರಯತ್ನವೇ ನಿಮ್ಮನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ನನ್ನನ್ನು ಆಶೀರ್ವಾದಕ್ಕಾಗಿ ಮತ್ತು ಕನಸನ್ನು ನನಸಾಗಿಸಲು ಸಮರ್ಥನನ್ನಾಗಿ ಮಾಡಿದ್ದಕ್ಕಾಗಿ ಸರ್ವಶಕ್ತನಿಗೆ ಕೃತಜ್ಞನಾಗಿರುತ್ತೇನೆ. ನಿಮ್ಮ ಮೇಲೆ ನಿಮಗೆ ನಂಬಿಕೆ ಇದ್ದರೆ, ನೀವು ಬಯಸಿದ ಏನನ್ನಾದರೂ ಸಾಧಿಸಬಹುದು,” ಎಂದು ಸಿರಾಜ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಸಿರಾಜ್ ಹೊಸ ಕಾರಿನ ಬೆಲೆ ಎಷ್ಟು?
ಕಾರ್‌ವಾಲೆ ಡಾಟ್ ಕಾಮ್ ಪ್ರಕಾರ, ಹೈದರಾಬಾದ್ ನಗರದಲ್ಲಿ ರೇಂಜ್ ರೋವರ್ ಕಾರಿನನ ಆನ್ ರೋಡ್ ಬೆಲೆ ಅಂದಾಜು 2.98 ಕೋಟಿ ರೂಪಾಯಿಯಿಂದ ಆರಂಭವಾಗುತ್ತದೆ. ಈ ಕಾರಿನ ಟಾಪ್ ಮಾಡೆಲ್ ಬೆಲೆ ಸುಮಾರು 5.19 ಕೋಟಿ ರೂಪಾಯಿ.
ವರದಿಗಳ ಪ್ರಕಾರ, ಮೊಹಮ್ಮದ್ ಸಿರಾಜ್ ಅವರ ಬಳಿ ಈಗಾಗಲೇ ಮರ್ಸಿಡೀಸ್ ಬೆಂಜ್ S-ಕ್ಲಾಸ್, ಬಿಎಂಡಬ್ಲ್ಯು 5-ಸೀರೀಸ್, ಟೊಯೋಟಾ ಫಾರ್ಚುನರ್, ಮಹೀಂದ್ರ ಥಾರ್ ಮತ್ತು ರೇಂಜ್ ರೋವರ್ ವೋಗ್ ಕಾರುಗಳಿವೆ.
ಇತ್ತೀಚೆಗೆ ನಡೆದ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ ಆಡಿದ್ದರು. ಸರಣಿಯಲ್ಲಿ ಭಾರತವು 0-2 ಅಂತರದಿಂದ ಹೀನಾಯ ಸೋಲು ಕಂಡಿತ್ತು. ಸರಣಿಯಲ್ಲಿ ಮೂರು ಪಂದ್ಯಗಳಲ್ಲಿ ಸಿರಾಜ್ ತಲಾ ಒಂದು ವಿಕೆಟ್ ಪಡೆದರು. ಸರಣಿ ಮುಗಿಸಿ ಭಾರತೀಯ ಆಟಗಾರರ ತವರಿಗೆ ಮರಳಿದ್ದಾರೆ. ಅದಕ್ಕೂ ಹಿಂದೆ ಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿಯೂ ವೇಗಿ ಆಡಿದ್ದರು. ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಭಾರತ 3-0 ಅಂತರದಿಂದ ಸರಣಿ ಕ್ಲೀನ್ ಸ್ವೀಪ್ ಮಾಡಿತ್ತು.
ಭಾರತ ಕ್ರಿಕೆಟ್ ತಂಡದ ಕುರಿತ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡದ್ದು ಇದೆಂಥಾ ತಯಾರಿ? ಅರ್ಥವಾಗುತ್ತಿಲ್ಲ ಬಿಸಿಸಿಐ ಪ್ಲಾನ್