ದೇವರು ದೊಡ್ಡೋನು, ನನ್ನನ್ನು ಉಳಿಸಿದ: 2 ತಿಂಗಳು ಹಲ್ಲುಜ್ಜಲು ಸಹ ಆಗುತ್ತಿರಲಿಲ್ಲ; ಅಪಘಾತದ ನೋವು ಮೆಲುಕು ಹಾಕಿದ ಪಂತ್
ಕನ್ನಡ ಸುದ್ದಿ  /  ಕ್ರಿಕೆಟ್  /  ದೇವರು ದೊಡ್ಡೋನು, ನನ್ನನ್ನು ಉಳಿಸಿದ: 2 ತಿಂಗಳು ಹಲ್ಲುಜ್ಜಲು ಸಹ ಆಗುತ್ತಿರಲಿಲ್ಲ; ಅಪಘಾತದ ನೋವು ಮೆಲುಕು ಹಾಕಿದ ಪಂತ್

ದೇವರು ದೊಡ್ಡೋನು, ನನ್ನನ್ನು ಉಳಿಸಿದ: 2 ತಿಂಗಳು ಹಲ್ಲುಜ್ಜಲು ಸಹ ಆಗುತ್ತಿರಲಿಲ್ಲ; ಅಪಘಾತದ ನೋವು ಮೆಲುಕು ಹಾಕಿದ ಪಂತ್

ಅಪಘಾತದಿಂದ ಅನುಭವಿಸಿದ ನೋವು ಹಾಗೂ ಯಾತನೆಯನ್ನು ರಿಷಬ್‌ ಪಂತ್‌ ಹಂಚಿಕೊಂಡಿದ್ದಾರೆ. 15 ತಿಂಗಳ ವಿಶ್ರಾಂತಿ ನಂತರ ಐಪಿಎಲ್ 2024ರಲ್ಲಿ ಆಡುವವರೆಗೆ ಅನುಭವಿಸಿದ ಸಂಕಟದ ಕುರಿತು ಭಾರತ ತಂಡದ ಆಟಗಾರ ಹೇಳಿಕೊಂಡಿದ್ದಾರೆ.

ಅಪಘಾತದ ನೋವನ್ನು ಮೆಲುಕು ಹಾಕಿದ ಪಂತ್
ಅಪಘಾತದ ನೋವನ್ನು ಮೆಲುಕು ಹಾಕಿದ ಪಂತ್

2022ರ ಡಿಸೆಂಬರ್‌ ತಿಂಗಳಲ್ಲಿ ಭಾರತ ಕ್ರಿಕೆಟ್‌ನಲ್ಲಿ ಕರಿಛಾಯೆ ಆವರಿಸಿತ್ತು. ಭೀಕರ ರಸ್ತೆ ಅಪಘಾತದಿಂದಾಗಿ ಭಾರತ ತಂಡದ ಸ್ಟಾರ್ ವಿಕೆಟ್ ಕೀಪರ್ ಹಾಗೂ ಬ್ಯಾಟರ್‌ ರಿಷಭ್ ಪಂತ್ ಗಂಭೀರ ಗಾಯಗೊಂಡರು. ಅದಾಗಿ ಗಾಯದಿಂದ ಚೇತರಿಸಿಕೊಳ್ಳಲು ಪಂತ್‌ಗೆ ಒಂದು ವರ್ಷಕ್ಕೂ ಹೆಚ್ಚು ಕಾಲ ಬೇಕಾದವು. 14 ತಿಂಗಳಿಗೂ ಹೆಚ್ಚು ಕಾಲ ವಿಶ್ರಾಂತಿ ಪಡೆದ ಫೈಟರ್‌, ಕೊನೆಗೂ ಸಂಪೂರ್ಣ ಚೇತರಿಸಿಕೊಂಡು ಮೈದಾನಕ್ಕಿಳಿದರು. ಐಪಿಎಲ್‌ 2024ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಕಣಕ್ಕಿಳಿದು ಮಿಂಚಿದರು. ಆದರೆ, ಆ ಕಂಬ್ಯಾಕ್‌ ಅಷ್ಟು ಸುಲಭವಾಗಿರಲಿಲ್ಲ. ಸಾವು-ಬದುಕಿನ ನಡುವೆ ಹೋರಾಡಿ ಮತ್ತೆ ಮೈದಾನಕ್ಕಿಳಿದ ಪಂತ್‌, ಆ ಒಂದು ವರ್ಷಗಳ ಕಾಲ ನರಕ ಯಾತನೆ ಅನುಭವಿಸಿದ್ದರು.

ಗಂಭೀರ ಗಾಯಗಳಿಂದಾಗಿ ಆರಂಭದ ಕೆಲ ತಿಂಗಳು ಭಾರಿ ಕಷ್ಟವಾಗಿತ್ತು ಎಂದು ಪಂತ್‌ ಹೇಳಿಕೊಂಡಿದ್ದಾರೆ. ಮೊದಲ ಎರಡು ತಿಂಗಳವರೆಗೆ ಹಲ್ಲುಜ್ಜಲು ಕೂಡಾ ಸಾಧ್ಯವಾಗಲಿಲ್ಲ ಎಂದು ಅವರು ನೆನಪಿಸಿಕೊಂಡಿದ್ದಾರೆ.

ಜಿಯೋ ಸಿನೆಮಾದಲ್ಲಿ ಭಾರತದ ಆರಂಭಿಕ ಬ್ಯಾಟರ್ ಶಿಖರ್ ಧವನ್ ನಡೆಸಿಕೊಡುವ ಟಾಕ್ ಶೋನಲ್ಲಿ ಪಂತ್ ಕಾಣಿಸಿಕೊಂಡರು. ಭಯಾನಕ ಅಪಘಾತದಿಂದ ಗಾಯಕ್ಕೊಳಗಾದ 26 ವರ್ಷದ ಕ್ರಿಕೆಟಿಗ, ಆ ನಂತರದ ದಿನಗಳಲ್ಲಿನ ತಮ್ಮ ಅನುಭವವನ್ನು ಹಂಚಿಕೊಂಡರು. ದೇಹದ ಅನೇಕ ಕಡೆ ಮುರಿತವಾಗಿತ್ತು. ಮೊಣಕಾಲು ಗಾಯಕ್ಕೆ ಅಸ್ಥಿರಜ್ಜು ಚಿಕಿತ್ಸೆಯ ಅಗತ್ಯವಿತ್ತು. ವೃತ್ತಿಜೀವನಕ್ಕೆ ಗಾಯಗಳಿಂದ ಗುಣಮುಖರಾಗುವುದು ನಿರ್ಣಾಯಕವಾಗಿತ್ತು.

ದೇವರು ದೊಡ್ಡವನು, ನನ್ನನ್ನು ಉಳಿಸಿದ

“ಗಾಯದಿಂದ ಚೇತರಿಸಿಕೊಳ್ಳುವಾಗ ಆತ್ಮವಿಶ್ವಾಸ ಬಹಳ ಮುಖ್ಯ. ಏಕೆಂದರೆ ಸುತ್ತಲೂ ಹಲವು ರೀತಿಯ ವಿಷಯಗಳನ್ನು ಹೇಳುವ ಜನರಿರುತ್ತಾರೆ. ಒಬ್ಬ ವ್ಯಕ್ತಿಯಾಗಿ ನಾವು ನಮಗೆ ಯಾವುದು ಒಳ್ಳೆಯದು ಎಂಬುದರ ಬಗ್ಗೆ ಮಾತ್ರ ಯೋಚಿಸಬೇಕು. ಅಪಘಾತವು ನನ್ನ ಜೀವನವನ್ನೇ ಬದಲಾಯಿಸಿದ ಅನುಭವ. ಅಪಘಾತದಿಂದ ಎಚ್ಚರಗೊಂಡಾಗ, ನಾನು ಜೀವಂತವಾಗಿರುತ್ತೇನೆ ಎಂಬುದೇ ನನಗೆ ಖಚಿತವಾಗಿರಲಿಲ್ಲ. ಆದರೆ ದೇವರು ದೊಡ್ಡವನು. ನನ್ನನ್ನು ಉಳಿಸಲು ದಯೆ ತೋರಿದನು. ಆರಂಭದ ಎರಡು ತಿಂಗಳ ಕಾಲ ನನಗೆ ಹಲ್ಲುಜ್ಜಲು ಸಹ ಆಗುತ್ತಿರಲಿಲ್ಲ. ನಂತರ ಆರೇಳು ತಿಂಗಳು ನಾನು ಸಹಿಸಲಾಗದಷ್ಟು ನೋವಿನಿಂದ ಬಳಲುತ್ತಿದ್ದೆ. ಗಾಲಿಕುರ್ಚಿಯಲ್ಲಿ ಹೋಗಬೇಕಿದ್ದ ಕಾರಣ ನನಗೆ ವಿಮಾನ ನಿಲ್ದಾಣಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಏಕೆಂದರೆ ಅಲ್ಲಿ ಜನರನ್ನು ಹೇಗೆ ಎದುರಿಸುವುದು ಎಂಬ ವಿಚಾರವಾಗಿ ತುಂಬಾ ನರ್ವಸ್‌ ಆಗಿದ್ದೆ” ಎಂದು ಪಂತ್‌ ಹೇಳಿದ್ದಾರೆ.

“ಈಗ ನಾನು ಕ್ರಿಕೆಟ್‌ಗೆ ಮರಳಿದ್ದೇನೆ. ಒತ್ತಡ ಅನುಭವಿಸುವುದಕ್ಕಿಂತ ಹೆಚ್ಚಾಗಿ, ನಾನು ಆಡಲು ಉತ್ಸುಕನಾಗಿದ್ದೇನೆ. ನನ್ನ ಪಾಲಿಗೆ ಇದು ಪುನರ್ಜನ್ಮ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

ಐಪಿಎಲ್ 2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ರಿಷಭ್ ಪಂತ್ ಮುನ್ನಡೆಸಿದರು. ಅವರ ನಾಯಕತ್ವದಲ್ಲಿ ತಂಡವು ಏಳು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಉಳಿದ ಏಳರಲ್ಲಿ ಸೋಲು ಕಂಡಿತು. 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಪಡೆಯಿತು. ಆದರೆ, ಕಡಿಮೆ ರನ್‌ ರೇಟ್‌ನಿಂದಾಗಿ ಪ್ಲೇಆಫ್ ಪ್ರವೇಶಿಸಲು ಸಾಧ್ಯವಾಗಲಿಲ್ಲ. ತಂಡದ ಪರ 13 ಪಂದ್ಯಗಳಲ್ಲಿ ಆಡಿದ ಪಂತ್‌ 3 ಅರ್ಧಶತಕಗಳೊಂದಿಗೆ 446 ರನ್ ಗಳಿಸಿದರು. 155ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸುವ ಮೂಲಕ ತಂಡದ ಅಗ್ರ ರನ್ ಸ್ಕೋರರ್ ಆಗಿ ಹೊರಹೊಮ್ಮಿದರು.

ಜೂನ್ 1ರಿಂದ ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ಆರಂಭವಾಗುತ್ತಿರುವ ಐಸಿಸಿ ಟಿ20 ವಿಶ್ವಕಪ್‌ ಮೂಲಕ, ಪಂತ್ ಸುದೀರ್ಘ ಅಂತರದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner