ವಿರಾಟ್ ಫೇವರೆಟ್ ಮೈದಾನದಲ್ಲಿ ಇಂಡೋ-ಅಫ್ಘನ್ 3ನೇ ಟಿ20; ಚಿನ್ನಸ್ವಾಮಿ ಮೈದಾನದಲ್ಲಿ ಭಾರತದ ದಾಖಲೆ ಹೀಗಿವೆ
M Chinnaswamy Stadium Bengaluru: ಬೆಂಗಳೂರಿನಲ್ಲಿ ಆಡಿದ 7 ಟಿ20 ಪಂದ್ಯಗಳಲ್ಲಿ ಭಾರತವು 3ರಲ್ಲಿ ಗೆಲುವು ಸಾಧಿಸಿದೆ. ಕೊನೆಯದಾಗಿ ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಕೊನೆಯ ಪಂದ್ಯವು ಬೆಂಗಳೂರಿನಲ್ಲಿ ನಡೆದಿತ್ತು. ಪಂದ್ಯದಲ್ಲಿ ಭಾರತವು 6 ರನ್‌ಗಳ ರೋಚಕ ಗೆಲುವು ಸಾಧಿಸಿ ಸರಣಿ ತನ್ನದಾಗಿಸಿಕೊಂಡಿತ್ತು.
ಭಾರತ ಕ್ರಿಕೆಟ್ ತಂಡ ಉದ್ಯಾನ ನಗರಿ ಬೆಂಗಳೂರಿಗೆ ಬಂದಿಳಿದಿದೆ. ಅಫ್ಘಾನಿಸ್ತಾನ ವಿರುದ್ದದ ಮೂರು ಪಂದ್ಯಗಳ ಟಿ20 ಸರಣಿಯ ಮೂರನೇ ಮತ್ತು ಅಂತಿಮ ಟಿ20 ಪಂದ್ಯಕ್ಕೆ ಭಾರತ ತಂಡ ಸಜ್ಜಾಗಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣವು ನಿರ್ಣಾಯಕ ಚುಟುಕು ಸಮರಕ್ಕೆ ಆತಿಥ್ಯ ವಹಿಸುತ್ತಿದೆ.
ಜನವರಿ 17ರ ಬುಧವಾರ ನಡೆಯಲಿರುವ ಪಂದ್ಯ ಸವಿಯುವ ಅವಕಾಶವು ಸಿಲಿಕಾನ್ ಸಿಟಿ ಜನರಿಗೆ ಸಿಕ್ಕಿದೆ. ಆರ್‌ಸಿಬಿ ತಂಡದ ಮೂಲಕ ಚಿನ್ನಸ್ವಾಮಿ ಮೈದಾನದಲ್ಲಿ ಹಲವಾರು ಪಂದ್ಯಗಳಲ್ಲಿ ಆಡಿರುವ ಅನುಭವಿ ಆಟಗಾರ ವಿರಾಟ್ ಕೊಹ್ಲಿಗೆ ಇದು ಫೇವರೆಟ್ ಮೈದಾನ. ಭಾರತ ತಂಡವು ಈಗಾಗಲೇ ಸರಣಿಯ ಮೊದಲ ಎರಡು ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿದೆ. ಇದೀಗ ಮೂರನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಇಬ್ರಾಹಿಂ ಜದ್ರಾನ್ ನೇತೃತ್ವದ ಅಫ್ಘನ್ ತಂಡದ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸುವ ಗುರಿ ಭಾರತದ್ದು.
ಪ್ರಸಕ್ತ ವರ್ಷ ಮಹತ್ವದ ಟಿ20 ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿದ್ದು, ಅದಕ್ಕೂ ಮೊದಲು ರೋಹಿತ್ ಬಳಗ ಆಡುತ್ತಿರುವ ಕೊನೆಯ ಟಿ20 ಸರಣಿ ಇದಾಗಿದೆ.
ಇದನ್ನೂ ಓದಿ | ಸಂಜು ಸ್ಯಾಮ್ಸನ್ ಇನ್, ಮೂವರು ಔಟ್; ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20ಗೆ ಭಾರತ ಸಂಭಾವ್ಯ ತಂಡ
ಚಿನ್ನಸ್ವಾಮಿ ಮೈದಾನದಲ್ಲಿ ಭಾರತ ತಂಡವು ಹಲವಾರು ಪಂದ್ಯಗಳಲ್ಲಿ ಆಡಿದೆ. ಆದರೆ, ಟಿ20 ಸ್ವರೂಪದಲ್ಲಿ ಇಲ್ಲಿಯವರೆಗೆ ಆಡಿದ ಏಳು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಹೇಗೆ ಪ್ರದರ್ಶನ ನೀಡಿದೆ ಎಂಬುದನ್ನು ನೋಡೋಣ. ಸಣ್ಣ ಬೌಂಡರಿಗಳನ್ನು ಹೊಂದಿರುವ ಚಿನ್ನಸ್ವಾಮಿ ಅಂಗಳದಲ್ಲಿ ರನ್ ಮಳೆಗೇನೂ ಬರವಿಲ್ಲ. ಆದರೆ, ಇಲ್ಲಿ ಭಾರತ ತಂಡವು ಸೋಲ-ಗೆಲುವುಗಳನ್ನು ಸಮಾನವಾಗಿ ಎದುರಿಸಿದೆ.
ಬೆಂಗಳೂರಿನಲ್ಲಿ ಆಡಿದ 7 ಟಿ20 ಪಂದ್ಯಗಳಲ್ಲಿ ಭಾರತವು 3ರಲ್ಲಿ ಗೆಲುವು ಸಾಧಿಸಿದರೆ, 3 ಪಂದ್ಯಗಳಲ್ಲಿ ಮುಗ್ಗರಿಸಿದೆ. ಕೊನೆಯದಾಗಿ ಇತ್ತೀಚೆಗೆ ಏಕದಿನ ವಿಶ್ವಕಪ್ ಬಳಿಕ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಕೊನೆಯ ಪಂದ್ಯವು ಬೆಂಗಳೂರಿನಲ್ಲಿ ನಡೆದಿತ್ತು. 2023ರ ಡಿಸೆಂಬರ್ 3ರಂದು ನಡೆದ ಪಂದ್ಯದಲ್ಲಿ ಭಾರತವು 6 ರನ್‌ಗಳ ರೋಚಕ ಗೆಲುವು ಸಾಧಿಸಿತ್ತು.
ಬೆಂಗಳೂರಿನಲ್ಲಿ ಭಾರತ ಆಡಿದ ಎಲ್ಲಾ ಪಂದ್ಯಗಳ ಫಲಿತಾಂಶ ಹೀಗಿವೆ
- 2012ರ ಡಿಸೆಂಬರ್ 25: ಪಾಕಿಸ್ತಾನವು ಭಾರತವನ್ನು 5 ವಿಕೆಟ್‌ಗಳಿಂದ ಸೋಲಿಸಿತು.
- 2016ರ ಮಾರ್ಚ್ 23: ಭಾರತವು ಬಾಂಗ್ಲಾದೇಶವನ್ನು 1 ರನ್‌ನಿಂದ ಸೋಲಿಸಿತು.
- 2017ರ ಫೆಬ್ರವರಿ 1: ಭಾರತವು 75 ರನ್‌ಗಳಿಂದ ಇಂಗ್ಲೆಂಡ್ ಅನ್ನು ಸೋಲಿಸಿತು.
- 2019ರ ಫೆಬ್ರವರಿ 27: ಆಸ್ಟ್ರೇಲಿಯಾವು ಭಾರತವನ್ನು 7 ವಿಕೆಟ್‌ಗಳಿಂದ ಸೋಲಿಸಿತು.
- 2019ರ ಸೆಪ್ಟೆಂಬರ್ 22: ದಕ್ಷಿಣ ಆಫ್ರಿಕಾವು ಭಾರತವನ್ನು 9 ವಿಕೆಟ್‌ಗಳಿಂದ ಸೋಲಿಸಿತು.
- 2022ರ ಜೂನ್ 19: ಭಾರತ-ದಕ್ಷಿಣ ಆಫ್ರಿಕಾ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು.
- 2023ರ ಡಿಸೆಂಬರ್ 3: ಭಾರತವು ಆಸ್ಟ್ರೇಲಿಯಾವನ್ನು 6 ರನ್‌ಗಳಿಂದ ಸೋಲಿಸಿತು.
ಚಿನ್ನಸ್ವಾಮಿ ಅಂಗಳದಲ್ಲಿ ಭಾರತದ ದಾಖಲೆಗಳು
- ಭಾರತದ ಗರಿಷ್ಠ ಮೊತ್ತ: ಇಂಗ್ಲೆಂಡ್ ವಿರುದ್ಧ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 202 (2017ರ ಫೆಬ್ರವರಿ 1).
- ಕಡಿಮೆ ಮೊತ್ತ: ಪಾಕಿಸ್ತಾನ ವಿರುದ್ಧ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 133 2012ರ ಡಿಸೆಂಬರ್ 25).
- ದೊಡ್ಡ ಅಂತರದ ಗೆಲುವು: ಇಂಗ್ಲೆಂಡ್ ವಿರುದ್ಧ 75 ರನ್ ಗೆಲುವು (2017ರ ಫೆಬ್ರವರಿ 1)
- ಅತಿ ಹೆಚ್ಚು ರನ್: ವಿರಾಟ್ ಕೊಹ್ಲಿ. ಐದು ಟಿ20 ಪಂದ್ಯಗಳಲ್ಲಿ 116 ರನ್.
- ಅತಿ ಹೆಚ್ಚು ಪಂದ್ಯ: ವಿರಾಟ್ ಕೊಹ್ಲಿ 5.
- ಗರಿಷ್ಠ ವೈಯಕ್ತಿಕ ಸ್ಕೋರ್: ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ 38 ಎಸೆತಗಳಲ್ಲಿ ಅಜೇಯ 72 ರನ್ (2019ರ ಫೆಬ್ರವರಿ 27).
- ಹೆಚ್ಚು ಅರ್ಧಶತಕ 50: ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ, ಸುರೇಶ್ ರೈನಾ ಮತ್ತು ಎಂಎಸ್ ಧೋನಿ (ತಲಾ 1).
- ಅತಿ ಹೆಚ್ಚು ಸಿಕ್ಸರ್: ವಿರಾಟ್ ಕೊಹ್ಲಿ ಮತ್ತು ಸುರೇಶ್ ರೈನಾ (ತಲಾ 7 ಸಿಕ್ಸರ್‌ಗಳು)
- ಗರಿಷ್ಠ ರನ್ ಜೊತೆಯಾಟ: ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ನಡುವೆ 4ನೇ ವಿಕೆಟ್‌ಗೆ 100 ರನ್ (2019ರ ಫೆಬ್ರವರಿ 27)
- ಅತಿ ಹೆಚ್ಚು ವಿಕೆಟ್: ಯುಜ್ವೇಂದ್ರ ಚಾಹಲ್ (3 ಟಿ20 ಪಂದ್ಯಗಳಲ್ಲಿ 6).