ಕರ್ನಾಟಕದ ದತ್ತುಪುತ್ರ ವಿರಾಟ್ ಕೊಹ್ಲಿ; ಆರ್​ಸಿಬಿ ಮಾಜಿ ನಾಯಕನ ಕಂಡರೆ ಕನ್ನಡಿಗರಿಗೇಕೆ ಪ್ರಾಣ?
ಕನ್ನಡ ಸುದ್ದಿ  /  ಕ್ರಿಕೆಟ್  /  ಕರ್ನಾಟಕದ ದತ್ತುಪುತ್ರ ವಿರಾಟ್ ಕೊಹ್ಲಿ; ಆರ್​ಸಿಬಿ ಮಾಜಿ ನಾಯಕನ ಕಂಡರೆ ಕನ್ನಡಿಗರಿಗೇಕೆ ಪ್ರಾಣ?

ಕರ್ನಾಟಕದ ದತ್ತುಪುತ್ರ ವಿರಾಟ್ ಕೊಹ್ಲಿ; ಆರ್​ಸಿಬಿ ಮಾಜಿ ನಾಯಕನ ಕಂಡರೆ ಕನ್ನಡಿಗರಿಗೇಕೆ ಪ್ರಾಣ?

Virat Kohli: ಕರ್ನಾಟಕದ ದತ್ತುಪುತ್ರ ಎಂದು ಕರೆಸಿಕೊಳ್ಳುವ ವಿರಾಟ್ ಕೊಹ್ಲಿ ಅವರೆಂದರೆ ಕನ್ನಡಿಗರಿಗೇಕೆ ಅಷ್ಟೊಂದು ಪ್ರೀತಿ? ಈ ಪ್ರಶ್ನೆ ಸಾಕಷ್ಟು ಮಂದಿ ಕೇಳಿದ್ದುಂಟು. ಅದಕ್ಕೆ ಒಂದೇ ಪದದ ಉತ್ತರ ಅಂದರೆ ನಿಷ್ಠೆ!

ಕರ್ನಾಟಕದ ದತ್ತುಪುತ್ರ ವಿರಾಟ್ ಕೊಹ್ಲಿ; ಆರ್​ಸಿಬಿ ಮಾಜಿ ನಾಯಕನ ಕಂಡರೆ ಕನ್ನಡಿಗರಿಗೇಕೆ ಪ್ರಾಣ?
ಕರ್ನಾಟಕದ ದತ್ತುಪುತ್ರ ವಿರಾಟ್ ಕೊಹ್ಲಿ; ಆರ್​ಸಿಬಿ ಮಾಜಿ ನಾಯಕನ ಕಂಡರೆ ಕನ್ನಡಿಗರಿಗೇಕೆ ಪ್ರಾಣ?

ನಿಷ್ಠೆ ಎನ್ನುವ ಪದಕ್ಕೆ ಉತ್ತಮ ಉದಾಹರಣೆ ಬೇಕು ಎನ್ನುವುದಾದರೆ ವಿರಾಟ್ ಕೊಹ್ಲಿ ಅವರನ್ನು ತೋರಿಸಿದರೆ ಸಾಕು! ಐಶ್ವರ್ಯ, ಸಂಪತ್ತನ್ನು ಇಂದಲ್ಲ, ನಾಳೆ ಸಂಪಾದನೆ ಮಾಡಬಹುದು. ನಿಷ್ಠೆ ಗಳಿಸುವುದು ಇದೆಯಲ್ಲಾ, ಸುಲಭವಲ್ಲ! ಅದೊಂದು ತಪ್ಪಸ್ಸು. ಇಂತಹದ್ದನ್ನೇ ಸೂಪರ್​ಸ್ಟಾರ್​ ಬ್ಯಾಟರ್​ ವಿರಾಟ್ ಕೊಹ್ಲಿ ಮಾಡಿರೋದು! ನಿಜ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರತಿಷ್ಠಿತ ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿ ಗೆದ್ದಿಲ್ಲ! ಹಾಗಂತ ತಂಡವನ್ನೆಂದೂ ಬಿಟ್ಟುಕೊಟ್ಟವರಲ್ಲ. ಸೋತರೂ ಗೆದ್ದರೂ ಆರ್​ಸಿಬಿಯೇ ನನ್ನ ತಂಡ, ಕರ್ನಾಟಕವೇ ನನ್ನೂರು ಎನ್ನುತ್ತಾರೆ ಕಿಂಗ್ ಕೊಹ್ಲಿ!

ವಿರಾಟ್​​ ಒಬ್ಬ ನಿಜವಾದ ಹೋರಾಟಗಾರ. ಅಷ್ಟೇ ನಿಷ್ಠಾವಂತ! ಅದಕ್ಕೆ ಉತ್ತಮ ಉದಾ; ಒಂದೇ ತಂಡವನ್ನು ಪ್ರತಿನಿಧಿಸುತ್ತಿರುವುದು! ಹುಟ್ಟೂರು ದೆಹಲಿಯಾದರೂ, ಅಪಾರ ಪ್ರೀತಿ ಇರುವುದು ಬೆಂಗಳೂರು ಮೇಲೆ. 2008ರಲ್ಲಿ ನಾಯಕನಾಗಿ ಅಂಡರ್​-19 ವಿಶ್ವಕಪ್​ ಗೆದ್ದಿದ್ದೇ ತವರು ಡೆಲ್ಲಿ ತಂಡಕ್ಕೆ ಕೊಹ್ಲಿ ಹೋಗುವುದು ನಿಶ್ಚಿತ ಎಂದು ಹೇಳಲಾಗಿತ್ತು. ಆದರೆ, ದೇವರು ಯಾವ ರೂಪದಲ್ಲಿ ಬಂದನೋ ಏನೋ ಕರ್ನಾಟಕಕ್ಕೆ ವಿರಾಟ್ ಕೊಹ್ಲಿ ರೂಪದಲ್ಲಿ ದತ್ತುಪುತ್ರನನ್ನು ಕೊಟ್ಟು ಹೋದನು. ಅಂದು ಮೂಲ ಬೆಲೆ 12 ಲಕ್ಷಕ್ಕೆ ತಂಡ ಸೇರಿದ ಕಿಂಗ್ ಕೊಹ್ಲಿ, ಇದುವರೆಗೂ ಹರಾಜಿಗೆ ಪ್ರವೇಶಿಸಿಲ್ಲ!

ಪ್ರಾಣ ಬಿಟ್ಟೆವು ಆರ್​ಸಿಬಿ ಬಿಡಲ್ಲ ಎನ್ನುತ್ತಾರೆ ಫ್ಯಾನ್ಸ್

ವರ್ಷದಿಂದ ವರ್ಷಕ್ಕೆ ರನ್ ಗ್ರಾಫ್ ಏರಿಕೆ ಮಾಡಿಕೊಳ್ಳುತ್ತಲೇ ಹೆಮ್ಮರವಾಗಿ ಬೆಳೆದ. ತಾನೂ ಬೆಳೆದಿದ್ದಲ್ಲದೆ ಆರ್​​ಸಿಬಿ ಎಂಬ ಬ್ರ್ಯಾಂಡ್ ಅನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದ. ಜಗತ್ತಿನ ಯಾವುದೇ ಮೂಲೆಗೋದರೂ ಆರ್​ಸಿಬಿ ಎಂಬ ಹೆಸರು ಕೇಳುತ್ತದೆ. ಇದಕ್ಕೆ ಕೊಹ್ಲಿ ಎಷ್ಟು ಕಾರಣವೋ, ಅಭಿಮಾನಿಗಳು ಅಷ್ಟೇ ಕಾರಣ. ಅದರಲ್ಲೂ ವಿಶೇಷವಾಗಿ ನಮ್ಮ ಕನ್ನಡಿಗರು. ಪ್ರಾಣ ಬಿಟ್ಟೆವು ಆರ್​ಸಿಬಿ ಬಿಡುವ ಮಾತೇ ಇಲ್ಲ ಎನ್ನುತ್ತಾರೆ. ಕೊಹ್ಲಿ ಅವರಂತೆಯೇ ಅಭಿಮಾನಿಗಳೂ ಅಷ್ಟೇ ನಿಷ್ಟಾವಂತರು. ಕೊಹ್ಲಿ ಅಂದರೆ ಕರ್ನಾಟಕದ ಜನರಿಗೆ ಎಲ್ಲಿಲ್ಲದ ಪ್ರೀತಿ. ಈ ಪಾಟಿ ಇಷ್ಟಪಡಲು ನಿಷ್ಠಾವಂತ ಎಂಬ ಕಾರಣಕ್ಕೆ!

ಕೊಹ್ಲಿ ಜನಿಸಿದ್ದು ದೆಹಲಿಯಲ್ಲಿ, ನೆಲೆಸಿರುವುದು ಮುಂಬೈನಲ್ಲಿ. ಆದರೆ ಕರ್ನಾಟಕದ ಜನರೆಂದರೆ ಅವರಿಗೆ ಬೆಲೆ ಕಟ್ಟಲಾಗದ ಪ್ರೀತಿ. ಕೆಲವೊಂದು ತಂಡಗಳ ಆಟಗಾರರು ಹಣಕ್ಕಾಗಿ ತಂಡಗಳನ್ನೇ ಬದಲಾಯಿಸಿದ್ದಾರೆ. ಆದರೆ, ಕೊಹ್ಲಿ ಹರಾಜಿಗೆ ಬಂದರೆ ಪ್ರತಿ ವರ್ಷವೂ ಅವರೇ ಟಾಪ್ ಬೈಯರ್​ ಆಗುತ್ತಾರೆ. ಅಂತಹ ವ್ಯಕ್ತಿ ಫ್ರಾಂಚೈಸಿ ಕೊಟ್ಟಿದ್ದನ್ನೇ ಪಡೆದು ಒಂದೇ ತಂಡದ ಪರ ಆಡುತ್ತಿದ್ದಾರೆ ಎಂದರೆ ನೀವೇ ಊಹಿಸಿ. ಆತನಿಗೆ ತಂಡದ ಮೇಲೆ ನಿಷ್ಠೆ ಇರಬೇಡ, ಅಭಿಮಾನಿಗಳು ಎಂದರೆ ಎಷ್ಟು ಪ್ರೀತಿ ಇರಬೇಡ. ಬೆಂಗಳೂರು ತಂಡದೊಂದಿಗೆ ನನ್ನ ಕೊನೆಯ ಪಂದ್ಯ ಎಂದು ಹೇಳಿದ್ದು ಈಗಲೂ ನೆನಪಾಗುತ್ತದೆ.

ದೊಡ್ಡ ದೊಡ್ಡ ಆಫರ್​ಗಳನ್ನೇ ಕೈಬಿಟ್ಟ ಕೊಹ್ಲಿ

2008ರಿಂದ ಇಲ್ಲಿಯತನಕ ಒಂದೇ ಫ್ರಾಂಚೈಸಿ ಪರ ಆಡುತ್ತಿರುವ ವಿಶ್ವದ ಏಕೈಕ ಆಟಗಾರ ಎಂಬ ದಾಖಲೆ ವಿರಾಟ್ ಹೆಸರಿನಲ್ಲಿದೆ. ಬೇರೆ ಬೇರೆ ಫ್ರಾಂಚೈಸ್​ಗಳಿಂದ ದೊಡ್ಡ ಆಫರ್ ಬಂದಿದ್ದರೂ ಎಲ್ಲವನ್ನೂ ತಿರಸ್ಕರಿಸಿ ಆರ್​ಸಿಬಿಗೆ ನಿಷ್ಠೆ ತೋರಿದ್ದಾರೆ. ನಮ್ಮ ತಂಡಕ್ಕೆ ಬಂದರೆ ಖಾಲಿ ಚೆಕ್ ಕೊಡುತ್ತೇವೆ ಎಂದು ಫ್ರಾಂಚೈಸಿಗಳ ಮಾಲೀಕರು ಆಫರ್​ ಕೊಟ್ಟಿದ್ದ ಬಗ್ಗೆಯೂ ವರದಿಗಳಿವೆ. ಅದ್ಯಾವುದನ್ನೂ ಒಪ್ಪಿಲ್ಲ, ಅವುಗಳಿಂದ ಮನಸ್ಸು ಬದಲಿಸಿಲ್ಲ ಎಂದರೆ ಕೊಹ್ಲಿ ನಿಷ್ಠೆ ಇನ್ನೆಷ್ಟಿರಬೇಡ ನೀವೇ ಯೋಚಿಸಿ ನೋಡಿ. ಆರ್​ಸಿಬಿ ಮಾಜಿ ನಾಯಕನನ್ನು ಅಭಿಮಾನಿಗಳು ಹೆಚ್ಚು ಇಷ್ಟಪಡಲು ಇದಕ್ಕಿಂತ ಕಾರಣ ಬೇಕೆ ಹೇಳಿ?

ಕೊಹ್ಲಿ ಆಕ್ರಮಣಕಾರಿ ವರ್ತನೆ, ತಂಡ ಗೆಲ್ಲಿಸಬೇಕೆಂಬ ಗುರಿ, ಚುರುಕುತನ, ಹೋರಾಟ ಎಲ್ಲರಿಗೂ ತುಂಬಾ ಇಷ್ಟ. ವಿಶ್ವದ ಬ್ಯಾಟಿಂಗ್ ಸೂಪರ್​ ಸ್ಟಾರ್ ಕೊಹ್ಲಿ ತಲೆ ಬಾಗುವುದು ಅಭಿಮಾನಿಗಳಿಗೆ ಮಾತ್ರ. ಅಭಿಮಾನಿಗಳು ಇಲ್ಲದಿದ್ದರೆ ನಾನಿಲ್ಲ ಎಂದು ಈ ಹಿಂದೆ ಸಾಕಷ್ಟು ಬಾರಿ ಹೇಳಿದ್ದಾರೆ. ಅದಕ್ಕೆ ತಕ್ಕಂತೆ ಅವರನ್ನು ತುಂಬಾ ಗೌರವಿಸುತ್ತಾರೆ. ಎಷ್ಟೇ ಒತ್ತಡದಲ್ಲಿದ್ದರೂ ಫ್ಯಾನ್ಸ್​ಗೆ ಒಂದಿಷ್ಟು ಸಮಯ ಮೀಸಲಿಡುತ್ತಾರೆ. ಅಗೌರವವಾಗಿ ನಡೆದುಕೊಂಡವರಲ್ಲ. . ಮೈದಾನದಲ್ಲಿ ಎಷ್ಟೇ ಆಕ್ರಮಣಕಾರಿ ಆಗಿದ್ದರೂ ಮೈದಾನದ ಹೊರಗೆ ಅವರು ತುಂಬಾ ಸರಳ ಜೀವಿ.

ಕಠಿಣ ಪರಿಶ್ರಮ, ಬದ್ಧತೆ, ಶಿಸ್ತು - ಅಭಿಮಾನಿಗಳಿಗೆ ಇಷ್ಟ!

ಒಬ್ಬ ಕ್ರೀಡಾಪಟು ಹೇಗಿರಬೇಕೆಂಬುದಕ್ಕೆ ವಿರಾಟ್​ ಅತ್ಯುತ್ತಮ ಉದಾಹರಣೆ. ವಯಸ್ಸು 36 ಆಗಿದ್ದರೂ ಈಗ ಚಿರಯುವಕನಂತಿದ್ದಾರೆ. ಅದಕ್ಕೆ ಕಾರಣ ಅವರ ಫಿಟ್ನೆಸ್ ಮತ್ತು ಡಯೆಟ್ ಪ್ಲಾನ್. ಗಂಟೆಗಟ್ಟಲ್ಲೆ ಜಿಮ್​​​ನಲ್ಲಿ ಕಳೆಯುವುದರ ಜತೆಗೆ ಆಹಾರ ಕ್ರಮವನ್ನು ಅಚ್ಚುಕಟ್ಟಾಗಿ ಅನುಕರಿಸುತ್ತಿದ್ದಾರೆ. ಮಾಂಸವನ್ನೇ ತಿನ್ನುವುದನ್ನೇ ಬಿಟ್ಟಿದ್ದಾರೆ. ಗಂಟೆಗಟ್ಟಲೇ ನೆಟ್​ ಪ್ರಾಕ್ಟೀಸ್ ಮಾಡುತ್ತಾರೆ. ಬೇರೆ ಆಟಗಾರರು ಪಂದ್ಯಗಳಲ್ಲಿ ಪದೆಪದೇ ಇಂಜುರಿಯಾದರೆ, ವಿರಾಟ್​ ಗಾಯಗೊಂಡ ಇತಿಹಾಸವೇ ಇಲ್ಲ. ಕಠಿಣ ಪರಿಶ್ರಮ, ಬದ್ಧತೆ, ಶಿಸ್ತು ಎಲ್ಲವೂ ಕೊಹ್ಲಿ ಯಶಸ್ಸಿಗೆ ಕಾರಣವಾಗಿದೆ.

ಆರ್​ಸಿಬಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಲು ಪ್ರಮುಖ ಕಾರಣ ಕೊಹ್ಲಿ. ಪ್ರಸ್ತುತ ಕ್ರಿಕೆಟ್​ ಜಗತ್ತಿನಲ್ಲಿ ಕೊಹ್ಲಿಗೆ ಇರುವಷ್ಟು ಫ್ಯಾನ್ಸ್​, ಯಾವ ಕ್ರಿಕೆಟರ್​ಗೂ ಇಲ್ಲ. ಇದರಿಂದ ಕೊಹ್ಲಿ ಅಭಿಮಾನಿಗಳೆಲ್ಲಾ ಆರ್​ಸಿಬಿಗೆ ಬೆಂಬಲ ಕೊಡುತ್ತಾರೆ. ಆರ್​ಸಿಬಿ ಕರ್ನಾಟದ ತಂಡ, ಅದರಲ್ಲೂ ಬೆಂಗಳೂರನ್ನ ಪ್ರತಿನಿಧಿಸುವ ತಂಡ. ಕನ್ನಡಿಗರದ್ದು ನಿಯತ್ತು ಅಂದರೆ ನಿಯತ್ತು. ಅಂತಹ ರಾಜ್ಯದ ಫ್ರಾಂಚೈಸಿ ಪ್ರತಿನಿಧಿಸುತ್ತಿರುವ ಕೊಹ್ಲಿಯೂ ಅಷ್ಟೇ ನಿಯತ್ತಾಗಿ ತನ್ನ ಫ್ರಾಂಚೈಸಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಿದ್ದಾಗ ಕೊಹ್ಲಿಯನ್ನು ಬಿಟ್ಟು ಕೊಡಲು ಸಾಧ್ಯವೇ, ನೀವೇ ಹೇಳಿ.

Whats_app_banner