ಸರ್ಫರಾಜ್ vs ಪಾಟೀದಾರ್ vs ಸುಂದರ್; ಕೊಹ್ಲಿ-ಜಡೇಜಾ ಸ್ಥಾನಕ್ಕೆ ಯಾರು? ಎರಡನೇ ಟೆಸ್ಟ್ಗೆ 4 ಗೊಂದಲ
India vs England 2nd Test: ರವೀಂದ್ರ ಜಡೇಜಾ ಮತ್ತು ಕೆಎಲ್ ರಾಹುಲ್ ಹೊರಗುಳಿದ ನಂತರ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ಗೆ ಆಯ್ಕೆ ಮಾಡುವ ಬಗ್ಗೆ ಭಾರತ ತಂಡಕ್ಕೆ ಗೊಂದಲ ಏರ್ಪಟ್ಟಿದೆ. ಸರ್ಫರಾಜ್ ಖಾನ್ ಮತ್ತು ರಜತ್ ಪಾಟೀದಾರ್ ನಡುವೆ ದೊಡ್ಡ ಪೈಪೋಟಿ ನಡೆಯಲಿದೆ. ವಿರಾಟ್ ಕೊಹ್ಲಿ ಸ್ಥಾನಕ್ಕೆ ಸೂಕ್ತ ಯಾರು?
ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ 28 ರನ್ಗಳಿಂದ ಸೋತ ನಂತರ ಟೀಮ್ ಇಂಡಿಯಾ ಗೊಂದಲಕ್ಕೆ ಸಿಲುಕಿದೆ. ಫೆಬ್ರವರಿ 2ರಂದು ವಿಶಾಖಪಟ್ಟಣದಲ್ಲಿ ನಡೆಯುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಆಲ್ರೌಂಡರ್ ರವೀಂದ್ರ ಜಡೇಜಾ ಮತ್ತು ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಹೊರಗುಳಿದಿರುವುದು ಟೀಮ್ ಮ್ಯಾನೇಜ್ಮೆಂಟ್ ಟೆನ್ಶನ್ ಹೆಚ್ಚಿಸಿದೆ. ಈಗಾಗಲೇ ಮೂವರು ಆಟಗಾರರು ತಂಡವನ್ನು ಕೂಡಿದ್ದು, ಹೊರ ಬಿದ್ದ ಆಟಗಾರರ ಸ್ಥಾನವನ್ನು ತುಂಬಲು ಯಾರು ಸೂಕ್ತ ಎಂಬ ಗೊಂದಲ ಉಂಟಾಗಿದೆ.
ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ ಸಹ ತಂಡದ ಭಾಗವಾಗಿಲ್ಲ. ಈ ನಡುವೆ ಪ್ರಮುಖ ಆಟಗಾರರು ಗಾಯಗೊಂಡಿದ್ದಾರೆ. ಈಗಾಗಲೇ ಮೊದಲ ಪಂದ್ಯ ಸೋತಿದೆ. ಹೀಗಿರುವಾಗ ಸಹಜವಾಗಿ ಟೀಮ್ ಮ್ಯಾನೇಜ್ಮೆಂಟ್ಗೆ ಗೊಂದಲ ಹೆಚ್ಚಾಗುತ್ತದೆ. ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಪ್ಲೇಯಿಂಗ್ ಇಲೆವೆನ್ ಬಗ್ಗೆ 4 ಪ್ರಮುಖ ಅಂಶಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ. ಎರಡನೇ ಟೆಸ್ಟ್ಗೂ ಮುನ್ನ ಕಾಡುತ್ತಿರುವ ಪ್ರಮುಖ ಗೊಂದಲಗಳು ಯಾವುವು? ಇಲ್ಲಿದೆ ವಿವರ ನೋಡೋಣ.
ಕೊಹ್ಲಿ ಬದಲಿ ಸ್ಥಾನಕ್ಕೆ ಯಾರು?
ರೋಹಿತ್ ಶರ್ಮಾ ನಂತರ ಭಾರತ ತಂಡಕ್ಕೆ ಬೇರೆ ಯಾವುದೇ ಅನುಭವಿ ಬ್ಯಾಟ್ಸ್ಮನ್ ಇಲ್ಲದಿರುವ ಕಾರಣ ಈ ವಿಷಯ ಅತ್ಯಂತ ನಿರ್ಣಾಯಕವಾಗಿದೆ. ಮೊದಲ ಟೆಸ್ಟ್ನಲ್ಲಿ ಕೊಹ್ಲಿ ನಾಲ್ಕನೇ ಕ್ರಮಾಂಕವನ್ನು ತುಂಬಿದ್ದ ರಾಹುಲ್ 86 ರನ್ ಗಳಿಸಿದ್ದರು. ಆದರೀಗ ಅವರು ಗಾಯಗೊಂಡಿರುವ ಕಾರಣ ಶ್ರೇಯಸ್ ಅಯ್ಯರ್ ಅವರನ್ನು ಈ ಸ್ಥಾನದಲ್ಲಿ ಆಡಿಸುವ ಸಾಧ್ಯತೆ ಇದೆ. ಸ್ಪಿನ್ನರ್ಸ್ ವಿರುದ್ಧ ಅಯ್ಯರ್ ಅದ್ಧುತ ಪ್ರದರ್ಶನ ನೀಡುತ್ತಾರೆ ಎಂದು ಮ್ಯಾನೇಜ್ಮೆಂಟ್ ನಂಬುತ್ತದೆ. ಅಲ್ಲದೆ, ಬೇರೆ ಆಯ್ಕೆಗೂ ಇಲ್ಲ.
ಶುಭ್ಮನ್ ಗಿಲ್ ಮುಂದುವರಿಯುತ್ತಾರೆಯೇ?
ಕೊಹ್ಲಿಯ ಉತ್ತರಾಧಿಕಾರಿ ಮತ್ತು ಭಾರತೀಯ ಕ್ರಿಕೆಟ್ನ ಮುಂದಿನ ಸೂಪರ್ಸ್ಟಾರ್ ಎಂದು ಕರೆಸಿಕೊಳ್ಳುವ ಶುಭ್ಮನ್ ಗಿಲ್, ಸದ್ಯ ರೆಡ್ಬಾಲ್ನಲ್ಲಿ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಹೈದರಾಬಾದ್ ಟೆಸ್ಟ್ನ 2 ಇನ್ನಿಂಗ್ಸ್ಗಳಲ್ಲಿ 23 ಮತ್ತು 0 ರನ್ ಗಳಿಸಿದ್ದರು. ಭಾರತಕ್ಕೆ ಆಯ್ಕೆಗಳ ಕೊರತೆ ಇರುವುದರಿಂದ, ಗಿಲ್ ಬಹುಶಃ ವೈಜಾಗ್ ಟೆಸ್ಟ್ನಲ್ಲಿ ಆಡುವುದು ಖಚಿತ. ರಾಹುಲ್ ಮತ್ತು ಕೊಹ್ಲಿ ತಂಡಕ್ಕೆ ಮರಳಿದರೆ ಉಳಿದ ಟೆಸ್ಟ್ಗಳಲ್ಲಿ ಅವಕಾಶ ಸಿಗುವುದು ಮರೀಚಿಕೆಯಾಗಬಹುದು.
ಸರ್ಫರಾಜ್ ಖಾನ್ vs ರಜತ್ ಪಾಟೀದಾರ್
ಕೆಲವು ವರ್ಷಗಳಿಂದ ದೇಶೀಯ ಕ್ರಿಕೆಟ್ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಸರ್ಫರಾಜ್ ಖಾನ್ ಕೊನೆಗೂ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ವಾರ ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ ನಡುವಿನ ಅನಧಿಕೃತ 4 ದಿನಗಳ ಟೆಸ್ಟ್ನಲ್ಲೂ ಆತ 161 ಎಸೆತಗಳಲ್ಲಿ 160 ರನ್ ಗಳಿಸಿದ್ದರು. ಅಲ್ಲದೆ, ಅದಕ್ಕೂ ಹಿಂದಿನ ಟೆಸ್ಟ್ನಲ್ಲಿ 96 ರನ್ ಸಿಡಿಸಿದ್ದರು. ಮತ್ತೊಂದೆಡೆ ರಜತ್ ಪಾಟೀದಾರ್ ಕೂಡ ಅದೇ ರೀತಿ ಫಾರ್ಮ್ನಲ್ಲಿದ್ದು, ಆಯ್ಕೆಯ ಪೈಪೋಟಿಯಲ್ಲಿದ್ದಾರೆ. ತಾನು ಕೂಡ ಸಮರ್ಥ ಎನ್ನುತ್ತಿದ್ದಾರೆ.
ಕೊಹ್ಲಿ ಬದಲಿ ಆಟಗಾರನಾಗಿ ಸೇರಿಕೊಂಡ ಪಾಟೀದಾರ್ ಮತ್ತು ಸರ್ಫರಾಜ್ ನಡುವೆ ಯಾರಿಗೆ ಮಣೆ ಹಾಕಬೇಕೆಂಬ ಗೊಂದಲ ಹೆಚ್ಚಾಗಿದೆ. ಸದ್ಯ ಮೊದಲ ಆಯ್ಕೆ ಇರುವುದು ರಜತ್ ಪಾಟೀದಾರ್ ಎಂದು ಹೇಳಲಾಗುತ್ತಿದೆ. ಕೊಹ್ಲಿ ಸ್ಥಾನ ತುಂಬಿದ್ದ ರಾಹುಲ್ ಇಲ್ಲದ ಕಾರಣ ಈ ಇಬ್ಬರಲ್ಲಿ ಒಬ್ಬರಿಗೆ ಮಣೆ ಹಾಕುವುದು ಖಚಿತ. ಇಂಗ್ಲೆಂಡ್ನಂತೆ ಭಾರತ ಒಬ್ಬ ವೇಗದ ಬೌಲರ್ ಆಯ್ಕೆ ಮಾಡಿದರೆ, ಬಹುಶಃ 2 ಇನ್ನಿಂಗ್ಸ್ಗಳಲ್ಲಿ 11 ಓವರ್ ಎಸೆದ ಸಿರಾಜ್ಗೆ ವಿಶ್ರಾಂತಿ ನೀಡಿ ಕುಲ್ದೀಪ್ಗೆ ಸ್ಥಾನ ನೀಡಬಹುದು.
ರವೀಂದ್ರ ಜಡೇಜಾ ಸ್ಥಾನ ತುಂಬುವವರು ಯಾರು?
2ನೇ ಟೆಸ್ಟ್ನಲ್ಲಿ ರವೀಂದ್ರ ಜಡೇಜಾ ಬದಲಿಗೆ ಯಾರನ್ನಾಡಿಸಬೇಕೆಂಬುದು ಭಾರತಕ್ಕೆ ಕಾಡುತ್ತಿರುವ ಪ್ರಮುಖ ಚಿಂತೆಯಾಗಿದೆ. 2016 ರಿಂದೀಚೆಗೆ ಟೆಸ್ಟ್ ಕ್ರಿಕೆಟ್ನಲ್ಲಿ 53 ಪಂದ್ಯಗಳಲ್ಲಿ ಬ್ಯಾಟ್ನೊಂದಿಗೆ 40ಕ್ಕಿಂತ ಹೆಚ್ಚು ಮತ್ತು ಚೆಂಡಿನೊಂದಿಗೆ 25ಕ್ಕಿಂತ ಕಡಿಮೆ ಸರಾಸರಿ ಹೊಂದಿರುವ ಜಡ್ಡು ಬದಲಿಗೆ ವಾಷಿಂಗ್ಟನ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಸೌರಭ್ ಕುಮಾರ್ ಸಹ ಈ ಪೈಪೋಟಿಯಲ್ಲಿದ್ದಾರೆ. ಇಂಗ್ಲೆಂಡ್ ಲಯನ್ಸ್ ವಿರುದ್ಧ ಅಬ್ಬರಿಸಿದ್ದ ಸೌರಭ್ 5 ವಿಕೆಟ್ ಉರುಳಿಸಿದ್ದರು. ಬ್ಯಾಟಿಂಗ್ನಲ್ಲೂ ಕಾಣಿಕೆ ನೀಡುತ್ತಾರೆ. ಆದರೆ ಯಾರಿಗೆಲ್ಲಾ ಅವಕಾಶ ಸಿಗುತ್ತದೆ ಎಂಬುದೇ ಸದ್ಯ ಕುತೂಹಲ.