ನಾಯಕನಾಗಿದ್ದಾಗ ಕನಸು ಈಡೇರಲಿಲ್ಲ; ಕೋಚ್ ಆಗಿ ವಿಶ್ವ ಕಿರೀಟಕ್ಕೆ ಮುತ್ತಿಕ್ಕಲು ಹೊರಟ ದ್ರಾವಿಡ್!
ಕನ್ನಡ ಸುದ್ದಿ  /  ಕ್ರಿಕೆಟ್  /  ನಾಯಕನಾಗಿದ್ದಾಗ ಕನಸು ಈಡೇರಲಿಲ್ಲ; ಕೋಚ್ ಆಗಿ ವಿಶ್ವ ಕಿರೀಟಕ್ಕೆ ಮುತ್ತಿಕ್ಕಲು ಹೊರಟ ದ್ರಾವಿಡ್!

ನಾಯಕನಾಗಿದ್ದಾಗ ಕನಸು ಈಡೇರಲಿಲ್ಲ; ಕೋಚ್ ಆಗಿ ವಿಶ್ವ ಕಿರೀಟಕ್ಕೆ ಮುತ್ತಿಕ್ಕಲು ಹೊರಟ ದ್ರಾವಿಡ್!

Team India Head Coach Rahul Dravid: ಅಂದು ಭಾರತ ತಂಡದಲ್ಲಿ ಆಟಗಾರನಾಗಿ, ನಾಯಕನಾಗಿ ವಿಶ್ವಕಪ್​ ಟ್ರೋಫಿ ಗೆಲುವು ಸಾಧಿಸಲಾಗದ್ದನ್ನು ಇಂದು ಕೋಚ್ ಆಗಿ ಸಾಧಿಸಲು ರಾಹುಲ್ ದ್ರಾವಿಡ್ ಚಿತ್ತ ಹರಿಸಿದ್ದಾರೆ. 16 ವರ್ಷಗಳ ಬಳಿಕ ನನಸಾಗುತ್ತಾ ಕನಸು?

ಭಾರತ ಕ್ರಿಕೆಟ್ ತಂಡದ ಹೆಡ್​​ಕೋಚ್​ ರಾಹುಲ್ ದ್ರಾವಿಡ್.
ಭಾರತ ಕ್ರಿಕೆಟ್ ತಂಡದ ಹೆಡ್​​ಕೋಚ್​ ರಾಹುಲ್ ದ್ರಾವಿಡ್. (BCCI Twitter)

ಟೀಮ್ ಇಂಡಿಯಾ 140 ಭಾರತೀಯ ಕನಸು ನನಸು ಮಾಡಲು ಇನ್ನೊಂದು ಹೆಜ್ಜೆ ಹಿಂದಿದೆ. 2011ರ ಬಳಿಕ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ (ICC Cricket World Cup 2023) ಫೈನಲ್​ಗೇರಿದ ರೋಹಿತ್ ಸೇನೆ (India vs Australia, Final) ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸದಲ್ಲಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿರುವ (Narendra Modi Stadium, Ahmedabad) ಆಸ್ಟ್ರೇಲಿಯಾ ವಿರುದ್ಧದ ಫೈನಲ್​ನಲ್ಲಿ ಗೆದ್ದು 2003ರ ಸೇಡು ತೀರಿಸಿಕೊಂಡು ಇದರೊಂದಿಗೆ ಭಾರತ 3ನೇ ಏಕದಿನ ವಿಶ್ವಕಪ್​ ಗೆಲ್ಲಲಿ ಎಂಬುದು ಕ್ರಿಕೆಟ್ ಅಭಿಮಾನಿಗಳ ಆಶಯ.

ಟೂರ್ನಿಯುದ್ದಕ್ಕೂ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮೊಹ್ಮಮ್ಮದ್ ಶಮಿ ಹೀಗೆ ಒಬ್ಬರಲ್ಲ, 11 ಆಟಗಾರರೂ ಮೈದಾನದಲ್ಲಿ ಖಡಕ್ ಪ್ರದರ್ಶನ ತೋರಿದ್ದಾರೆ. ತಂಡದ ಯಶಸ್ಸಿನಲ್ಲಿ ಪ್ರತಿಯೊಬ್ಬರೂ ತಮ್ಮದೇಯಾದ ಪಾತ್ರವಹಿಸಿದ್ದಾರೆ. ಆದರೆ ಈ ಆಟಗಾರರ ಯಶಸ್ಸಿಗೆ ಶಿಲ್ಪಿ ಹೆಡ್​ಕೋಚ್ ರಾಹುಲ್ ದ್ರಾವಿಡ್ ಎಂಬುದನ್ನು ಮರೆಯುವಂತಿಲ್ಲ. ಹಾಗೆಯೇ ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂದು ಅಭಿಮಾನಿಗಳು ಹೇಗೆ ರೀತಿ ಕಾಯುತ್ತಿದ್ದಾರೋ, ಅದೇ ರೀತಿ ದ್ರಾವಿಡ್ ಕೂಡ ಅದೇ ಸಮಯಕ್ಕೆ ಕಾಯುತ್ತಿದ್ದಾರೆ.

ಆಟಗಾರ, ನಾಯಕನಾಗಿ 3, ಕೋಚ್​ ಆಗಿ 1 ವಿಶ್ವಕಪ್​

ಹೌದು, ಆಟಗಾರನಾಗಿ ಮತ್ತು ನಾಯಕನಾಗಿ ಮೂರು ವಿಶ್ವಕಪ್​​ಗಳಲ್ಲಿ ಕಣಕ್ಕಿಳಿದಿದ್ದಾರೆ. ಈಗ ಹೆಡ್​​ಕೋಚ್​ ಆಗಿ ಪ್ರತಿಷ್ಠಿತ ಟೂರ್ನಿಯನ್ನು ಆಡುತ್ತಿದ್ದಾರೆ. ಈ ಹಿಂದೆ ಅವರು 1999, 2003 ಮತ್ತು 2007ರ ವಿಶ್ವಕಪ್​​ಗಳಲ್ಲಿ​ ತಂಡದ ಭಾಗವಾಗಿದ್ದರು. ಅಂದು ಆಟಗಾರ ಮತ್ತು ನಾಯಕನಾಗಿ ಸಾಧಿಸದ ಚಾಂಪಿಯನ್ ಪಟ್ಟವನ್ನು ಒಂದು ಸಾಧಿಸಲು ಹೊರಟಿದ್ದಾರೆ. ತಮ್ಮ ಕನಸು ಈಡೇರಿಸಿಕೊಳ್ಳಲು ಇನ್ನೊಂದೇ ಹೆಜ್ಜೆ ಬಾಕಿದೆ. ಆದರೆ ಆಟಗಾರರಿಗೆ ಎಷ್ಟು ಒತ್ತಡ ಇದೆಯೋ ಅಷ್ಟೇ ಒತ್ತಡ ದ್ರಾವಿಡ್ ಮೇಲೂ ಅಷ್ಟೇ ಇದೆ.

ವಿಶ್ವಕಪ್​ನಲ್ಲಿ ದ್ರಾವಿಡ್ ಪ್ರದರ್ಶನ

1999ರಲ್ಲಿ ಏಕದಿನ ವಿಶ್ವಕಪ್​ಗೆ ದ್ರಾವಿಡ್​ ಡೆಬ್ಯೂ ಮಾಡಿದ್ದರು. ಇಂಗ್ಲೆಂಡ್​​ನಲ್ಲಿ ನಡೆದ ಈ ವಿಶ್ವಕಪ್​​​ನಲ್ಲಿ 8 ಪಂದ್ಯಗಳನ್ನಾಡಿ 65ರ ಸರಾಸರಿಯಲ್ಲಿ 461 ರನ್​ ಗಳಿಸಿದ್ದರು. ಆ ಮೂಲಕ ಟೂರ್ನಿಯಲ್ಲಿ ಅಧಿಕ ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದರು. 2003ರ ವಿಶ್ವಕಪ್​ನಲ್ಲಿ ಭಾರತ ಫೈನಲ್ ಪ್ರವೇಶಿಸಲು ದ್ರಾವಿಡ್ ತಮ್ಮದೇಯಾದ ಕೊಡುಗೆ ನೀಡಿದ್ದರು. ಆ ಟೂರ್ನಿಯಲ್ಲಿ ಭಾರತ ಪರ 318 ರನ್ ಕಲೆ ಹಾಕಿದ್ದರು. ಆದರೆ, ಫೈನಲ್​​ನಲ್ಲಿ ಕಾಣಿಕೆ ನೀಡಲು ವಿಫಲರಾದರು.

ಅಂದು ಆಸ್ಟ್ರೇಲಿಯಾ ವಿರುದ್ಧ ಫೈನಲ್​ನಲ್ಲಿ ಸೋತು ರನ್ನರ್​ಅಪ್​ಗೆ ತೃಪ್ತಿಪಟ್ಟುಕೊಂಡಿತ್ತು. ಈಗ ಭಾರತ-ಆಸ್ಟ್ರೇಲಿಯಾ ತಂಡಗಳೇ ಮತ್ತೆ ಫೈನಲ್​​ನಲ್ಲಿ ಮುಖಾಮುಖಿಯಾಗಿವೆ. ಅಂದು ಆಟಗಾರನಾಗಿ ಆಸೀಸ್ ವಿರುದ್ಧ ಗೆಲ್ಲಲಾಗದ ದ್ರಾವಿಡ್, ಈಗ ಕೋಚ್​ ಆಗಿ ಸೇಡು ತೀರಿಸಿಕೊಳ್ಳಲು ಇದೇ ಸರಿಯಾದ ಸಮಯ.

ವಿಶ್ವಕಪ್​​ನಲ್ಲಿ ನಾಯಕನಾಗಿ ದ್ರಾವಿಡ್​​​

ಬದಲಾದ ಕಾಲಮಾನದಲ್ಲಿ ತಂಡದಲ್ಲಿ ಆಟಗಾರನಾಗಿದ್ದ ರಾಹುಲ್ ದ್ರಾವಿಡ್, 2007ರ ವಿಶ್ವಕಪ್​ಗೆ ನಾಯಕನಾಗಿ ಬಡ್ತಿ ಪಡೆದರು. ದುರಾದೃಷ್ಟವೆಂಬಂತೆ ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ, ಲೀಗ್​ ಹಂತದಿಂದಲೇ ಹೊರಬಿತ್ತು. ವಿಶ್ವಕಪ್ ಮುಗಿದ ಕೆಲವೇ ತಿಂಗಳ ನಂತರ ನಾಯಕತ್ವದಿಂದಲೂ ಕೆಳಗಿಳಿದರು. ಬಳಿಕ 2011ರ ವಿಶ್ವಕಪ್ ತಂಡದ ಭಾಗವಾಗಿರಲಿಲ್ಲ. ಈಗ 16 ವರ್ಷಗಳ ನಂತರ ಕೋಚ್​ ಆಗಿ ಏಕದಿನ ವಿಶ್ವಕಪ್​​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ತನ್ನ ಕನಸು ನನಸು ಮಾಡಿಕೊಳ್ಳಲು ಹೊರಟಿದ್ದಾರೆ.

ಕೋಚ್​ ಆಗಿ ವಿಶ್ವಕಪ್​ ಗೆಲ್ಲುತ್ತಾರಾ?

2021ರ ಟಿ20 ವಿಶ್ವಕಪ್​ ಮುಕ್ತಾಯದ ನಂತರ ಅದೇ ವರ್ಷ ನವೆಂಬರ್​​ನಲ್ಲಿ ರಾಹುಲ್ ದ್ರಾವಿಡ್ ಭಾರತದ ಹೆಡ್​ಕೋಚ್ ಆಗಿ ಚುಕ್ಕಾಣಿ ಹಿಡಿದರು. 2022ರಲ್ಲಿ ನಡೆದ ಟಿ20 ವಿಶ್ವಕಪ್​​ನಲ್ಲಿ ಅವರ ಮಾರ್ಗದರ್ಶನದಲ್ಲಿ ಭಾರತ ತಂಡವು ಸೆಮಿಫೈನಲ್​ನಲ್ಲಿ ಹೊರ ಬಿದ್ದಿತು. 2023ರ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ನಲ್ಲೂ ಭಾರತ ಸೋತು ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಯಾಗಿತ್ತು. ಇದೀಗ ದ್ರಾವಿಡ್ ಕೋಚ್​ ಆಗಿ ಏಕದಿನ ವಿಶ್ವಕಪ್​ ಗೆಲ್ಲುತ್ತಾರಾ? ಮತ್ತೊಂದೆಡೆ ದ್ರಾವಿಡ್ ಭವಿಷ್ಯವು ಈ ಗೆಲುವಿನ ಮೇಲೆ ನಿಂತಿದೆ ಎಂಬುದು ವಿಶೇಷ.

ದ್ರಾವಿಡ್​ ಕೋಚಿಂಗ್ ಅಡಿ ಅಂಡರ್​-19 ಚಾಂಪಿಯನ್

ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿದ ನಂತರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕರಾಗಿದ್ದರು. 2016 ಮತ್ತು 2018ರ ಅಂಡರ್​-19 ವಿಶ್ವಕಪ್​​ಗಳಲ್ಲಿ ಭಾರತ ತಂಡದ ಕೋಚ್​ ಆಗಿದ್ದರು. ಪೃಥ್ವಿ ಶಾ ನೇತೃತ್ವದ ತಂಡವು 2018ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಇಶಾನ್ ಕಿಶನ್ ನೇತೃತ್ವದ 2016ರ ಅಂಡರ್​​​-19 ವಿಶ್ವಕಪ್​​ ಫೈನಲ್​​ನಲ್ಲಿ ಭಾರತ ಸೋತಿತ್ತು. ಆದರೀಗ ದ್ರಾವಿಡ್ ಮೇಲೆ ನಿರೀಕ್ಷೆ ಹೆಚ್ಚಿದೆ. ದ್ರಾವಿಡ್ ಮಾರ್ಗದರ್ಶನದಲ್ಲಿ ಮೆನ್ ಇನ್ ಬ್ಲೂ ವಿಶ್ವಕಿರೀಟಕ್ಕೆ ಮುತ್ತಿಕ್ಕಲಿ, ಭಾರತ ವಿಶ್ವ ಚಾಂಪಿಯನ್ ಆಗಲಿ ಎಂಬುದೇ ನಮ್ಮ ನಿಮ್ಮೆಲ್ಲರ ಆಶಯ.

Whats_app_banner