ಆಸ್ಟ್ರೇಲಿಯಾ ನೆಲದಲ್ಲಿ ಯಶಸ್ವಿ ಜೈಸ್ವಾಲ್ ರೆಕಾರ್ಡ್ ಬ್ರೇಕಿಂಗ್ ಶತಕ; 'ಹೊಸ ರಾಜ' ಟ್ಯಾಗ್ ಸಮರ್ಥಿಸಿಕೊಂಡ ಮುಂಬೈಕರ್
ಕನ್ನಡ ಸುದ್ದಿ  /  ಕ್ರಿಕೆಟ್  /  ಆಸ್ಟ್ರೇಲಿಯಾ ನೆಲದಲ್ಲಿ ಯಶಸ್ವಿ ಜೈಸ್ವಾಲ್ ರೆಕಾರ್ಡ್ ಬ್ರೇಕಿಂಗ್ ಶತಕ; 'ಹೊಸ ರಾಜ' ಟ್ಯಾಗ್ ಸಮರ್ಥಿಸಿಕೊಂಡ ಮುಂಬೈಕರ್

ಆಸ್ಟ್ರೇಲಿಯಾ ನೆಲದಲ್ಲಿ ಯಶಸ್ವಿ ಜೈಸ್ವಾಲ್ ರೆಕಾರ್ಡ್ ಬ್ರೇಕಿಂಗ್ ಶತಕ; 'ಹೊಸ ರಾಜ' ಟ್ಯಾಗ್ ಸಮರ್ಥಿಸಿಕೊಂಡ ಮುಂಬೈಕರ್

Yashasvi Jaiswal: ಟೀಮ್ ಇಂಡಿಯಾ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಆಸ್ಟ್ರೇಲಿಯಾ ನೆಲದಲ್ಲಿ ದಾಖಲೆಯ ಶತಕದೊಂದಿಗೆ ಆಸೀಸ್ ಮಾಧ್ಯಮಗಳು ನೀಡಿದ್ದ ಹೊಸ ರಾಜ ಎಂಬ ಟ್ಯಾಗ್ ಅನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆಸ್ಟ್ರೇಲಿಯಾ ನೆಲದಲ್ಲಿ ಯಶಸ್ವಿ ಜೈಸ್ವಾಲ್ ರೆಕಾರ್ಡ್ ಬ್ರೇಕಿಂಗ್ ಶತಕ
ಆಸ್ಟ್ರೇಲಿಯಾ ನೆಲದಲ್ಲಿ ಯಶಸ್ವಿ ಜೈಸ್ವಾಲ್ ರೆಕಾರ್ಡ್ ಬ್ರೇಕಿಂಗ್ ಶತಕ (AP)

ಬಾರ್ಡರ್ ಗವಾಸ್ಕರ್ ಟ್ರೋಫಿಯ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​ನ ಎರಡನೇ ಇನ್ನಿಂಗ್ಸ್​​ನಲ್ಲಿ ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರು ರೆಕಾರ್ಡ್ ಬ್ರೇಕಿಂಗ್ ಸೆಂಚುರಿ ಸಿಡಿಸಿದ್ದಾರೆ. ತನ್ನ ವೃತ್ತಿಜೀವನದಲ್ಲಿ ನಾಲ್ಕನೇ ಶತಕವನ್ನು ಪೂರೈಸಿದ ಜೈಸ್ವಾಲ್, ಆಸ್ಟ್ರೇಲಿಯಾ ನೆಲದಲ್ಲಿ ಇದು ಅವರ ಮೊದಲನೇ ಶತಕ. ಅಲ್ಲದೆ, ಪರ್ತ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನೂರರ ಗಡಿ ದಾಟಿದ 5ನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮೊದಲ ಇನ್ನಿಂಗ್ಸ್​​ನಲ್ಲಿ ಡಕೌಟ್ ಆಗುವ ಮೂಲಕ ನಿರಾಸೆ ಮೂಡಿಸಿದ್ದ ಜೈಸ್ವಾಲ್, ಎರಡನೇ ಇನ್ನಿಂಗ್ಸ್​ ಆಸ್ಟ್ರೇಲಿಯಾ ಬೌಲರ್​​ಗಳನ್ನು ಸುಸ್ತುಗೊಳಿಸಿದರು. ಎರಡನೇ ದಿನದಾಟದಂದು 90 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಯಶಸ್ವಿ, ಮೂರನೇ ದಿನದಂದು 71 ಸೇರ್ಪಡೆಗೊಳಿಸಿದರು. ಇದರೊಂದಿಗೆ ತಂಡದ ಲೀಡ್​ ಅನ್ನು 300ರ ಗಡಿ ದಾಟಿಸಿದರು. 297 ಎಸೆತಗಳಲ್ಲಿ 15 ಬೌಂಡರಿ, 3 ಸಿಕ್ಸರ್ ಸಹಿತ 161 ರನ್ ಬಾರಿಸಿದರು. ಅದ್ಭುತ, ಅಮೋಘ ಶತಕದೊಂದಿಗೆ ಹಲವು ದಾಖಲೆಗಳನ್ನು ನಿರ್ಮಿಸಿದರು.

ದಿಗ್ಗಜರ ಪಟ್ಟಿಗೆ ಜೈಸ್ವಾಲ್ ಸೇರ್ಪಡೆ

ಆಸ್ಟ್ರೇಲಿಯಾ ಎದುರಿನ ಯಶಸ್ವಿ ಜೈಸ್ವಾಲ್​ರ ಶತಕ ಪರ್ತ್‌ನಲ್ಲಿ ಸೆಂಚುರಿ ಬಾರಿಸಿದ ಅಪರೂಪದ ಭಾರತೀಯ ಆಟಗಾರರ ಪಟ್ಟಿಗೆ ಸೇರಲು ನೆರವಾಯಿತು. ಜೈಸ್ವಾಲ್‌ಗೂ ಮುನ್ನ ಸುನಿಲ್ ಗವಾಸ್ಕರ್, ಮೊಹಿಂದರ್ ಅಮರನಾಥ್, ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಕೂಡ ಪರ್ತ್‌ನಲ್ಲಿ ಶತಕ ಸಿಡಿಸಿದ್ದರು. ವಿರಾಟ್ ಕೊಹ್ಲಿ ಮತ್ತು ಜೈಸ್ವಾಲ್ ಆಪ್ಟಸ್ ಸ್ಟೇಡಿಯಂನಲ್ಲಿ ಸೆಂಚುರಿ ಬಾರಿಸಿದವರಾಗಿದ್ದಾರೆ. ಗವಾಸ್ಕರ್, ಅಮರನಾಥ್ ಮತ್ತು ತೆಂಡೂಲ್ಕರ್ ಡಬ್ಲ್ಯುಎಸಿಎನಲ್ಲಿ ಶತಕ ಸಿಡಿಸಿದ್ದಾರೆ.

ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ಶತಕ

23ನೇ ವರ್ಷಕ್ಕೆ ಕಾಲಿಡುವ ಮೊದಲು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ಶತಕ ದಾಖಲಿಸಿದವರ ಪಟ್ಟಿಗೂ ಜೈಸ್ವಾಲ್ ಸೇರ್ಪಡೆಯಾಗಿದ್ದಾರೆ. ಸಚಿನ್ ತೆಂಡೂಲ್ಕರ್, ರವಿಶಾಸ್ತ್ರಿ, ಸುನಿಲ್ ಗವಾಸ್ಕರ್, ವಿನೋದ್ ಕಾಂಬ್ಳಿ ನಂತರ ಈ ದಾಖಲೆ ಬರೆದಿದ್ದಾರೆ. ಗವಾಸ್ಕರ್ ಮತ್ತು ಕಾಂಬ್ಳಿ ತಲಾ 4 ಶತಕ, ಜೈಸ್ವಾಲ್ ಸೇರಿ ಉಳಿದವರು ತಲಾ ಮೂರು ಶತಕ ಸಿಡಿಸಿದ್ದಾರೆ. ಆದರೆ ಈ ದಾಖಲೆ ಮುರಿಯುವ ಅವಕಾಶ ಜೈಸ್ವಾಲ್ ಮುಂದಿದೆ. ಏಕೆಂದರೆ ಇದೇ ವರ್ಷ ಇನ್ನೂ 3 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದಾರೆ.

ರಾಹುಲ್-ಜೈಸ್ವಾಲ್ ಜೋಡಿ ದಾಖಲೆ

ಪರ್ತ್‌ನಲ್ಲಿ ಜೈಸ್ವಾಲ್ ಮತ್ತು ರಾಹುಲ್ ಮೊದಲ ವಿಕೆಟ್‌ಗೆ 201 ರನ್​​ಗಳ ಜೊತೆಯಾಟವಾಡಿದರು. ಈ ಜೋಡಿಯು ಆಸೀಸ್ ಬೌಲರ್​​ಗಳಿಗೆ ಮೂಗುದಾರ ಹಾಕಿತು. ಇದರೊಂದಿಗೆ ನೂತನ ದಾಖಲೆ ಬರೆಯಿತು. ಆಸ್ಟ್ರೇಲಿಯಾ ಮಣ್ಣಿನಲ್ಲಿ ಅತಿ ಹೆಚ್ಚು ರನ್​ಗಳ​ ಜೊತೆಯಾಟವಾಡಿದ ಭಾರತ ತಂಡದ ಆರಂಭಿಕ ಜೋಡಿ ಎಂಬ ಕೀರ್ತಿಗೆ ಪಾತ್ರವಾಗಿದೆ. ಆ ಮೂಲಕ ಈ ಹಿಂದೆ 191 ರನ್ ಬಾರಿಸಿದ್ದ ಆರಂಭಿಕರಾದ ಸುನಿಲ್ ಗವಾಸ್ಕರ್, ಕ್ರಿಸ್ ಶ್ರೀಕಾಂತ್ ದಾಖಲೆ ಮುರಿದಿದ್ದಾರೆ. ಕೆಎಲ್ ರಾಹುಲ್ 176 ಎಸೆತಗಳಲ್ಲಿ 77 ರನ್ ಗಳಿಸಿ ಔಟಾದರು.

‘ಹೊಸ ರಾಜ’ ಟ್ಯಾಗ್​ ಉಳಿಸಿಕೊಂಡ ಜೈಸ್ವಾಲ್

ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಶತಕ ಗಳಿಸಿದ ಜೈಸ್ವಾಲ್ 'ಹೊಸ ರಾಜ' ಎಂಬ ಟ್ಯಾಗ್ ಸಮರ್ಥಿಸಿಕೊಂಡಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಗೂ ಮುನ್ನ ಆಸೀಸ್ ಮಾಧ್ಯಮಗಳು ಜೈಸ್ವಾಲ್ ಅವರನ್ನು ‘ನ್ಯೂ ಕಿಂಗ್-ಹೊಸ ರಾಜ’ನ ಆಗಮನ ಎಂದು ಬರೆದುಕೊಂಡಿದ್ದವು. ಆದಾಗ್ಯೂ, ಮೊದಲ ಇನ್ನಿಂಗ್ಸ್‌ನ ವೈಫಲ್ಯವು ಗುಣಮಟ್ಟದ ಬೌಲಿಂಗ್ ದಾಳಿಯ ವಿರುದ್ಧ ಕಠಿಣ ಪರಿಸ್ಥಿತಿಯಲ್ಲಿ ಯಶಸ್ವಿಯಾಗಲಿದ್ದಾರೆಯೇ ಎಂಬ ಅನುಮಾನ ಹುಟ್ಟು ಹಾಕಿತ್ತು. ಆದರೆ ಜೈಸ್ವಾಲ್ ಅದೆಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಯಶಸ್ಸು ಕಂಡಿದ್ದು, ಹೊಸ ರಾಜ ಎಂಬ ಟ್ಯಾಗ್ ಅನ್ನು ಉಳಿಸಿಕೊಂಡಿದ್ದಾರೆ.

Whats_app_banner