ಲೋಕಸಭಾ ಚುನಾವಣೆ 2024; ಪ್ರಧಾನಿ ಮೋದಿ ಹೊಸ ದಾಖಲೆ, 2019ರ ದಾಖಲೆ ಪುಡಿ, 183 ರ‍್ಯಾಲಿ ಸೇರಿ 206 ಪ್ರಚಾರ ಅಭಿಯಾನ, 80 ಸಂದರ್ಶನ
ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ನಾಳೆ (ಜೂನ್ 1) ನಡೆಯಲಿದೆ. ಲೋಕಸಭಾ ಚುನಾವಣೆ 2024ರ ಪ್ರಚಾರ ಅಭಿಯಾನದಲ್ಲಿ ಪ್ರಧಾನಿ ಮೋದಿ ಹೊಸ ದಾಖಲೆ ನಿರ್ಮಿಸಿದ್ದಾರೆ. 2019ರ ದಾಖಲೆ ಪುಡಿ ಮಾಡಿರುವ ಅವರು, ಈ ಸಲ 183 ರ‍್ಯಾಲಿ ಸೇರಿ 206 ಪ್ರಚಾರ ಅಭಿಯಾನ, 80 ಸಂದರ್ಶನ ನೀಡಿ ಗಮನಸೆಳೆದಿದ್ದಾರೆ.
ನವದೆಹಲಿ: ಲೋಕಸಭೆ ಚುನಾವಣೆಯ ಏಳನೇ ಮತ್ತು ಕೊನೆಯ ಹಂತದ ಮತದಾನ ನಾಳೆ (ಜೂನ್ 1 ರಂದು) ನಡೆಯಲಿದೆ. ನಿನ್ನೆ (ಮೇ 30) ಈ ಹಂತದ ಪ್ರಚಾರ ಕೊನೆಗೊಂಡಿತು. ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಗುರುವಾರ ನಡೆಸಿದ ರ‍್ಯಾಲಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಚುನಾವಣಾ ಪ್ರಚಾರವನ್ನು ಮುಕ್ತಾಯಗೊಳಿಸಿದರು. ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಪ್ರಯತ್ನದ ಭರ್ಜರಿ ಪ್ರಚಾರವನ್ನು ಕೊನೆಗೊಳಿಸಿದರು.
ಸಾರ್ವತ್ರಿಕ ಚುನಾವಣಾ ಪ್ರಚಾರ ಮುಗಿದ ನಂತರ ಪ್ರಧಾನಿ ಮೋದಿ ಅವರು ಧ್ಯಾನಸ್ಥರಾಗಲು ಕನ್ಯಾಕುಮಾರಿಗೆ ತಲುಪಿದ್ದಾರೆ. ಪ್ರಧಾನಿ ಮೋದಿ ಜೂನ್ 1 ರ ಸಂಜೆಯವರೆಗೆ ಕನ್ಯಾಕುಮಾರಿಯಲ್ಲಿ ಉಳಿದುಕೊಂಡು ಧ್ಯಾನ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ವಿವೇಕಾನಂದ ರಾಕ್ ಸ್ಮಾರಕಕ್ಕೆ ಆಗಮಿಸಿ ಇಲ್ಲಿನ ಧ್ಯಾನ ಮಂಟಪದಲ್ಲಿ ಧ್ಯಾನ ಶುರುಮಾಡಿದ್ದಾರೆ. ಸ್ವಾಮಿ ವಿವೇಕಾನಂದರು ಹಿಂದೊಮ್ಮೆ ಧ್ಯಾನ ಮಾಡಿದ ಸ್ಥಳವೂ ಇದುವೇ ಆಗಿದೆ.
ಪ್ರತಿ ಬಾರಿ ಸಾರ್ವತ್ರಿಕ ಚುನಾವಣಾ ಪ್ರಚಾರ ಮುಗಿದ ನಂತರ ಪ್ರಧಾನಿ ಮೋದಿ ಆಧ್ಯಾತ್ಮಿಕ ಪ್ರಯಾಣ ಮಾಡುವುದು ವಾಡಿಕೆ. 2019 ರ ಚುನಾವಣಾ ಪ್ರಚಾರದ ನಂತರ ಅವರು ಕೇದಾರನಾಥಕ್ಕೆ ಹೋಗಿದ್ದರು. 2014 ರಲ್ಲಿ ಅವರು ಶಿವಾಜಿ ಮಹಾರಾಜರಿಗೆ ಸಂಬಂಧಿಸಿದ ಪ್ರತಾಪಗಢಕ್ಕೆ ಹೋಗಿದ್ದರು.
ಲೋಕಸಭಾ ಚುನಾವಣೆ 2024; ಪ್ರಧಾನಿ ಮೋದಿ 183 ರ‍್ಯಾಲಿ ಸೇರಿ 206 ಪ್ರಚಾರ ಅಭಿಯಾನ, 80 ಸಂದರ್ಶನ
ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಗುರುವಾರದ ರ‍್ಯಾಲಿಯೊಂದಿಗೆ ಪ್ರಧಾನಿ ಮೋದಿ ತಮ್ಮ ಚುನಾವಣಾ ಪ್ರಚಾರವನ್ನು ಮುಕ್ತಾಯಗೊಳಿಸಿದರು. ಪ್ರಧಾನಿ ಮೋದಿ ಮಾರ್ಚ್ 16 ರಂದು ಕನ್ಯಾಕುಮಾರಿಯಿಂದ ಚುನಾವಣಾ ಪ್ರಚಾರ ಆರಂಭಿಸಿದ್ದರು. ಕಳೆದ 75 ದಿನಗಳಲ್ಲಿ ಪ್ರಧಾನಿ 183 ರ‍್ಯಾಲಿ ಸೇರಿ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇವುಗಳಲ್ಲಿ ಚುನಾವಣಾ ರ‍್ಯಾಲಿಗಳು ಮತ್ತು ರೋಡ್ ಶೋಗಳು ಸೇರಿವೆ.
ಇವುಗಳಲ್ಲದೆ, ಪ್ರಧಾನಿ ಮೋದಿ ಅವರು ವಿವಿಧ ಮಾಧ್ಯಮ ಸಂಸ್ಥೆಗಳಿಗೆ ಸುಮಾರು 80 ಸಂದರ್ಶನಗಳನ್ನು ನೀಡಿದರು. ಅದರಲ್ಲಿ ಅವರು ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿದರು. ಅಲ್ಲದೆ, ಧರ್ಮದ ಆಧಾರದ ಮೇಲೆ ಮೀಸಲಾತಿ, ಸಿಎಎ, ಅಯೋಧ್ಯೆಯಲ್ಲಿ ರಾಮಮಂದಿರ ಮತ್ತು 370 ನೇ ವಿಧಿ ಮುಂತಾದ ವಿವಿಧ ವಿಷಯಗಳಲ್ಲಿ ವಿರೋಧ ಪಕ್ಷಗಳ ಟೀಕೆಗಳನ್ನು ತಣ್ಣಗಾಗಿಸಿತ್ತು.
2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 149 ರ‍್ಯಾಲಿಗಳಲ್ಲಿ ಭಾಗವಹಿಸಿದ್ದರು.
ಲೋಕಸಭಾ ಚುನಾವಣೆ; ಪ್ರಚಾರ ಅಭಿಯಾನದ ಗಮನ ಈ ರಾಜ್ಯಗಳ ಮೇಲಿತ್ತು ನೋಡಿ
ಪ್ರಧಾನಿ ಮೋದಿ ಹೆಚ್ಚು ಪ್ರಚಾರ ಮಾಡಿದ ರಾಜ್ಯಗಳಲ್ಲಿ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಒಡಿಶಾ ಪ್ರಮುಖವಾಗಿವೆ. ಈ ಸಾರ್ವತ್ರಿಕ ಚುನಾವಣೆಯಲ್ಲಿ ಬಂಗಾಳದಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡಲಿದೆ ಮತ್ತು ರಾಜ್ಯದಲ್ಲಿ ಗರಿಷ್ಠ ಸ್ಥಾನಗಳನ್ನು ಗೆಲ್ಲಲಿದೆ ಎಂದು ಪ್ರಧಾನಿ ಮೋದಿ ತಮ್ಮ ವಿವಿಧ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಸಂವಿಧಾನವನ್ನು ಬದಲಾಯಿಸುವ ಪ್ರತಿಪಕ್ಷಗಳ ಆರೋಪಗಳ ಕುರಿತು, ಪ್ರಧಾನಿ ಮೋದಿ ಅವರು ಜೀವಂತವಾಗಿರುವವರೆಗೆ ಸಂವಿಧಾನದ ಮೂಲ ತತ್ವಗಳೊಂದಿಗೆ ಯಾರೂ ಆಟವಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಸಂವಿಧಾನ ತಿದ್ದುಪಡಿ ವಿಚಾರದಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್‌ನ್ನು ಕೆಣಕಿದರು.
ಈ ನಡುವೆ, 'ಪ್ರತಿ ಮತಗಟ್ಟೆಯಲ್ಲೂ ಯುವೋತ್ಸಾಹ ಕಾಣಬೇಕು. ತಪ್ಪದೇ ಮತದಾನ ಮಾಡಿ' ಎಂದು ಪ್ರಧಾನಿ ನರೇಂದ್ರ ಮೋದಿ ವಾರಾಣಸಿಯ ಮತದಾರರಿಗೆ ಕರೆ ನೀಡಿದ್ದಾರೆ. ಸ್ವಕ್ಷೇತ್ರ ವಾರಾಣಸಿಯ ಯುವ ಮತದಾರರಿಗೆ ಪತ್ರ ಬರೆದಿರುವ ಅವರು, 'ನಿಮ್ಮ ಮತವು ಕಾಶಿ ಮತ್ತು ರಾಷ್ಟ್ರದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದಿದ್ದಾರೆ. ವಾರಾಣಸಿ ಕ್ಷೇತ್ರದಲ್ಲಿ 31,538 ಯುವಕ-ಯುವತಿಯರು ಮೊದಲ ಬಾರಿ ಮತಹಕ್ಕು ಚಲಾಯಿಸಲಿದ್ದಾರೆ. ವಾರಾಣಸಿ ಕ್ಷೇತ್ರಕ್ಕೆ ಜೂನ್ 1ರಂದು ಮತದಾನ ನಡೆಯಲಿದ್ದು, ಕಾಂಗ್ರೆಸ್‌ನಿಂದ ಅಜಯ್ ರಾಯ್ ಸ್ಪರ್ಧಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.