Sumalatha Ambareesh: ಮಂಡ್ಯ ಜನತೆಗೆ ಬೀಗರ ಔತಣಕೂಟಕ್ಕೆ ಆಹ್ವಾನ ನೀಡಿದ ಸುಮಲತಾ ಅಂಬರೀಶ್
ಕನ್ನಡ ಸುದ್ದಿ  /  ಮನರಂಜನೆ  /  Sumalatha Ambareesh: ಮಂಡ್ಯ ಜನತೆಗೆ ಬೀಗರ ಔತಣಕೂಟಕ್ಕೆ ಆಹ್ವಾನ ನೀಡಿದ ಸುಮಲತಾ ಅಂಬರೀಶ್

Sumalatha Ambareesh: ಮಂಡ್ಯ ಜನತೆಗೆ ಬೀಗರ ಔತಣಕೂಟಕ್ಕೆ ಆಹ್ವಾನ ನೀಡಿದ ಸುಮಲತಾ ಅಂಬರೀಶ್

ಜೂ 16ರಂದು ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಮದುವೆ ನಿಮಿತ್ತ ಮಂಡ್ಯದ ಗೆಜ್ಜಲಗೆರೆಯಲ್ಲಿ ನಡೆಯಲಿರುವ ಬೀಗರ ಔತಣಕೂಟಕ್ಕೆ ಸಂಸದೆ ಸುಮಲತಾ ಅಂಬರೀಶ್‌ ಆಹ್ವಾನ ನೀಡಿದ್ದಾರೆ.

ಮಂಡ್ಯ ಜನತೆಗೆ ಬೀಗರ ಔತಣಕೂಟಕ್ಕೆ ಆಹ್ವಾನ ನೀಡಿದ ಸುಮಲತಾ ಅಂಬರೀಶ್
ಮಂಡ್ಯ ಜನತೆಗೆ ಬೀಗರ ಔತಣಕೂಟಕ್ಕೆ ಆಹ್ವಾನ ನೀಡಿದ ಸುಮಲತಾ ಅಂಬರೀಶ್

Sumalatha Ambareesh: ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಬಿಡಪ ಜೋಡಿಯ ಮದುವೆ ಮುಗಿದು ಹತ್ರತ್ರ ವಾರ ಕಳೆಯಿತು. ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆ, ಆರತಕ್ಷತೆ ಮಾಡಿಕೊಂಡಿದ್ದ ಈ ಜೋಡಿ, ಇದೀಗ ತಂದೆ ಅಂಬರೀಶ್‌ ಹುಟ್ಟೂರಿನಲ್ಲಿ ಬೀಗರ ಊಟ ಆಯೋಜಿಸಿದೆ. ಜೂನ್‌ 16ರಂದು ಮಂಡ್ಯ ಬಳಿಯ ಗೆಜ್ಜಲಗೆರೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ಬೀಗರ ಊಟಕ್ಕೆ ಮಂಡ್ಯದ ಸ್ವಾಭಿಮಾನಿ ಜನತೆಯನ್ನು ಸುಮಲತಾ ಅಂಬರೀಶ್‌ ಮುಕ್ತವಾಗಿ ಆಹ್ವಾನಿಸಿದ್ದಾರೆ.

ಸುಮಲತಾ ಆಹ್ವಾನ ಹೀಗಿದೆ.

ಮಂಡ್ಯ ಜಿಲ್ಲೆಯ ಆತ್ಮೀಯ ಜನತೆಗೆ ನಿಮ್ಮ ಸುಮಲತಾ ಅಂಬರೀಶ್ ಮಾಡುವ ನಮಸ್ಕಾರಗಳು. ತಮ್ಮೆಲ್ಲರ ಆಶೀರ್ವಾದ ಮತ್ತು ಶುಭ ಹಾರೈಕೆಗಳೊಂದಿಗೆ ನನ್ನ ಮಗನಾದ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಮದುವೆಯನ್ನು ಮತ್ತು ಆರತಕ್ಷತೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನೆರವೇರಿಸಿರುತ್ತೇನೆ.

ಮಂಡ್ಯದ ಸ್ವಾಭಿಮಾನಿ ಜನತೆ ಅಂಬರೀಶ್ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ ವಾತ್ಸಲ್ಯ ಅಭಿಮಾನಕ್ಕೆ ನಾವು ಸದಾ ಚಿರಋಣಿಯಾಗಿರುತ್ತೇವೆ.

ಅಭಿಷೇಕ್ ಹಾಗೂ ಅವಿವಾ ಮದುವೆಯ ಸಂಭ್ರಮವನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಇದೇ ಶುಕ್ರವಾರ, ದಿನಾಂಕ 16/06/2023 ರಂದು ಬೆಳಿಗ್ಗೆ 11:30ರಿಂದ ಬೀಗರ ಔತಣವನ್ನು ಏರ್ಪಡಿಸಲಾಗಿದೆ. ಇದಕ್ಕಾಗಿ ಮಂಡ್ಯ ಬಳಿಯ ಗೆಜ್ಜಲಗೆರೆಯಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

ಮದುವೆ ಕಾರ್ಯಕ್ರಮಗಳು ಮತ್ತು ಇನ್ನಿತರೆ ಕಾರ್ಯದ ಒತ್ತಡದಿಂದ ನಾನು ಖುದ್ದಾಗಿ ಬಂದು ಬೀಗರ ಔತಣಕ್ಕೆ ತಮ್ಮನ್ನು ಆಹ್ವಾನಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತಾವೆಲ್ಲರೂ ಅನ್ಯತಾ ಭಾವಿಸದೆ ತಮ್ಮ ಕುಟುಂಬ ಸಮೇತರಾಗಿ ಬೀಗರ ಔತಣಕ್ಕೆ ಆಗಮಿಸಿ ನಮ್ಮ ಆತಿಥ್ಯವನ್ನು ಸ್ವೀಕರಿಸಿ, ವಧು ವರರನ್ನು ಆಶೀರ್ವದಿಸಬೇಕಾಗಿ ಈ ಮೂಲಕ ಕೋರುತ್ತೇನೆ.

ಈ ಸಂದೇಶವನ್ನು ನನ್ನ ವೈಯಕ್ತಿಕ ಆಹ್ವಾನವೆಂದು ಭಾವಿಸಿ, ತಮ್ಮ ಕುಟುಂಬ ಸಮೇತರಾಗಿ ಬೀಗರ ಔತಣಕ್ಕೆ ಆಗಮಿಸಲು ಮತ್ತೊಮ್ಮೆ ಕೋರುತ್ತೇನೆ.

ಅಂಬರೀಶ್ ಅವರ ಕುಟುಂಬಕ್ಕೆ ತಾವು ಇಲ್ಲಿಯವರೆಗೆ ತೋರಿದ ಪ್ರೀತಿ ವಿಶ್ವಾಸ ಮತ್ತು ಆಶೀರ್ವಾದವನ್ನು, ಇನ್ನು ಮುಂದೆಯೂ ಸಹ ನೀಡಲು ತಮ್ಮನ್ನು ಕೋರುತ್ತೇನೆ.

ತಮ್ಮೆಲ್ಲರ ಆಗಮನದ ನಿರೀಕ್ಷೆಯಲ್ಲಿ,

ಸುಮಲತಾ ಅಂಬರೀಶ್, ಸಂಸದರು, ಮಂಡ್ಯ ಲೋಕಸಭಾ ಕ್ಷೇತ್ರ.

ಅವಿವಾ & ಅಭಿಷೇಕ್ ಅಂಬರೀಶ್

ಜೂನ್‌ 5ರಂದು ನಡೆದ ವಿವಾಹ

ಜೂನ್ 5ರಂದು ಬೆಂಗಳೂರಿನ ಮಾಣಿಕ್ಯ ವಜ್ರ ಮಂಟಪದಲ್ಲಿ ಗೌಡರ ಸಂಪ್ರದಾಯಂತೆ ಬೆಳಗ್ಗೆ 9.30 ರಿಂದ 10.30ರ ನಡುವಿನ ಶುಭ ಮುಹೂರ್ತದಲ್ಲಿ ನಟ ಅಭಿಷೇಕ್‌ ತಮ್ಮ ಪ್ರೇಯಸಿ ಅವಿವಾಗೆ ಮಾಂಗಲ್ಯಧಾರಣೆ ಮಾಡಿದ್ದರು. ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಸೂಪರ್‌ ಸ್ಟಾರ್‌ ರಜನಿಕಾಂತ್‌, ಟಾಲಿವುಡ್‌ ಖ್ಯಾತ ನಟ ಮೋಹನ್‌ ಬಾಬು, ಯಶ್‌, ಉಪೇಂದ್ರ, ನರೇಶ್‌, ಪವಿತ್ರಾ ಲೋಕೇಶ್‌, ಸುಂದರ್‌ ರಾಜ್‌, ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌, ಸಚಿವ ಮಧು ಬಂಗಾರಪ್ಪ, ಅನಿಲ್‌ ಕುಂಬ್ಳೆ ಸೇರಿದಂತೆ ಅನೇಕ ಗಣ್ಯರು ಅಭಿಷೇಕ್‌ ಅವಿವಾ ಮದುವೆಗೆ ಆಗಮಿಸಿ ನೂತನ ವಧು ವರರನ್ನು ಹಾರೈಸಿದ್ದಾರೆ.

Whats_app_banner