Allu Arjun: ಸಂಧ್ಯಾ ಚಿತ್ರಮಂದಿರದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ವಿಚಾರಣೆ; ಪೊಲೀಸರು ಕೇಳಿದ ಪ್ರಶ್ನೆ ಏನು?
Allu Arjun: ಡಿಸೆಂಬರ್ 4 ರಂದು ‘ಪುಷ್ಪ 2’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ದುರ್ಘಟನೆಗೆಯಲ್ಲಿ ಮಹಿಳೆಯೊಬ್ಬರು ಮೃತರಾಗಿದ್ದರು. ಇದೇ ಕೇಸ್‌ನಲ್ಲಿ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು ಇದೀಗ ವಿಚಾರಣೆ ನಡಿಸಿ ಘಟನೆಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.
Allu Arjun: ಡಿಸೆಂಬರ್ 4 ರಂದು ಸಂಧ್ಯಾ ಥಿಯೇಟರ್‌ನಲ್ಲಿ ಪುಷ್ಪ 2 ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿತ್ತು. ಅದೇ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತರಾಗಿದ್ದರು. ಇದೇ ಕೇಸ್‌ನಲ್ಲಿ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಒಂದು ರಾತ್ರಿ ಜೈಲಿನಲ್ಲಿ ಕಳೆದಿದ್ದ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇಂದು ಕೂಡ ವಿಚಾರಣೆ ನಡೆದಿದ್ದು, ಆ ವೇಳೆ ಅಲ್ಲು ಅರ್ಜುನ್ ಅವರಿಗೆ ಕೆಲವು ಕಠಿಣ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ.
ಎಸಿಪಿ ರಮೇಶ್ ಕುಮಾರ್ ನೇತೃತ್ವದ ಹಿರಿಯ ಪೊಲೀಸ್ ಅಧಿಕಾರಿಗಳು ಅಲ್ಲು ಅರ್ಜುನ್ ಅವರನ್ನು ಅವರ ವಕೀಲರೊಂದಿಗೆ ಪ್ರತ್ಯೇಕ ಕೋಣೆಗೆ ಕರೆದೊಯ್ದು ಪ್ರಶ್ನೆಗಳನ್ನು ಕೇಳಿದ್ದಾರೆ. ಪೊಲೀಸರು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ವರದಿಯಾಗಿದೆ. ಕೆಲವು ಪ್ರಶ್ನೆಗಳು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅಲ್ಲು ಅರ್ಜುನ್ ಅವರ ಹೇಳಿಕೆಗಳಿಗೆ ಸಂಬಂಧಿಸಿದ್ದವು ಎಂದು ಹೇಳಲಾಗಿದೆ.
ಅತಿದೊಡ್ಡ ಚಲನಚಿತ್ರ ತಾರೆಯರಲ್ಲಿ ಒಬ್ಬರಾದ ಅಲ್ಲು ಅರ್ಜುನ್ ಅವರು ಡಿಸೆಂಬರ್ 4 ರಂದು ಹೈದರಾಬಾದ್‌ನ ಥಿಯೇಟರ್‌ನ ಹೊರಗೆ ಅನಿಯಂತ್ರಿತವಾಗಿ ಕಾಣಿಸಿಕೊಂಡಿದ್ದರಿಂದ ಕಾಲ್ತುಳಿತ ಸಂಭವಿಸಿದೆ ಎಂಬ ಕಾರಣಕ್ಕಾಗಿ ಅವರನ್ನು ಬಂಧಿಸಲಾಗಿತ್ತು. ಅವರು ಈ ದುರಂತ ಘಟನೆಯಲ್ಲಿ ನೇರವಾಗಿ ಭಾಗಿ ಎಂಬ ಆರೋಪವನ್ನು ನಿರಾಕರಿಸಿದ್ದರು.
ಇಲ್ಲಿದೆ ಕೆಲವು ಪ್ರಶ್ನೆಗಳು
ಪುಷ್ಪ2ರ ಪ್ರೀಮಿಯರ್ ಸಮಯದಲ್ಲಿ ಥಿಯೇಟರ್ ಹೊರಗೆ ಕಾಣಿಸುವುದಕ್ಕೆ ಅಲ್ಲು ಅರ್ಜುನ್ ಅವರಿಗೆ ಅನುಮತಿ ಇರಲಿಲ್ಲ. ಅಧಿಕಾರಿಗಳು ಅನುಮತಿ ಕೊಟ್ಟಿರಲಿಲ್ಲ ಎಂಬ ಮಾಹಿತಿ ನಿಮಗೆ ತಿಳಿದಿತ್ತೇ ಎಂದು ಅಲ್ಲು ಅರ್ಜುನ್ ಅವರನ್ನು ಹೈದರಾಬಾದ್ ಪೊಲೀಸರು ಪ್ರಶ್ನಿಸಿದ್ದಾರೆ. ಪೊಲೀಸರು ಅನುಮತಿ ನಿರಾಕರಿಸಿದರೂ ಯಾಕೆ ನೀವು ಅಲ್ಲಿಗೆ ಹೋಗಿದ್ದಿರಿ? ಹಾಗೆ ಹೋಗುವ ಯೋಜನೆಯನ್ನು ರೂಪಿಸಿದ್ದು ಯಾರು? ಅವರ ಹೆಸರನ್ನು ಹೇಳಿ ಎಂದು ಪೊಲೀಸರು ಅಲ್ಲು ಅರ್ಜುನ್ ಅವರನ್ನು ಕೇಳಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ ಬಗ್ಗೆ ಅವರಿಗೆ ಮಾಹಿತಿ ಯಾವಾಗ ಲಭ್ಯವಾಯ್ತು? ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಸಂಧ್ಯಾ ಥಿಯೇಟರ್‌ನ ಆಡಳಿತ ಮಂಡಳಿಯು ಪ್ರದರ್ಶನದ ಸಮಯದಲ್ಲಿ ಸ್ಥಳಕ್ಕೆ ಬಾರದಂತೆ ನಿಮಗೆ ಮಾಹಿತಿ ನೀಡಿತ್ತೇ ಎಂದು ಪೊಲೀಸರು ಪ್ರಶ್ನಿಸಿದ್ದಾರೆ ಎಂದು ಇಂಡಿಯಾ ಟುಡೆ ವರದಿಮಾಡಿದೆ.
ಭದ್ರತಾ ತಂಡ, ಥಿಯೇಟರ್ ಆಡಳಿತ ವ್ಯವಸ್ಥೆ ಬಗ್ಗೆ ಪ್ರಕರಣ ದಾಖಲು
ಥಿಯೇಟರ್ ಬಳಿ ಹೋಗುವಾಗ ಎಷ್ಟು ಬೌನ್ಸರ್‌ಗಳ ವ್ಯವಸ್ಥೆ ಮಾಡಲಾಗಿತ್ತು? ಎಂಬ ಪ್ರಶ್ನೆ ಕೇಳಲಾಗಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಅಲ್ಲು ಅರ್ಜುನ್ ಉತ್ತರಿಸಿದ ನಂತರದಲ್ಲಿ ಚಿಕ್ಕಡಪಲ್ಲಿ ಪೊಲೀಸರು ಬಿಟ್ಟುಕೊಟ್ಟರು. ಪೊಲೀಸರು ಅಲ್ಲು ಅರ್ಜುನ್, ಅವರ ಭದ್ರತಾ ತಂಡ ಮತ್ತು ಥಿಯೇಟರ್ ಆಡಳಿತದ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲು ಅರ್ಜುನ್‌ಗೆ ಜಾಮೀನು ಸಿಕ್ಕಿತ್ತು
ಡಿಸೆಂಬರ್ 13 ರಂದು ಅಲ್ಲು ಅರ್ಜುನ್ ಅವರನ್ನು ಅವರ ನಿವಾಸದಿಂದ ಪೊಲೀಸರು ಬಂಧಿಸಿದ್ದರು. ಡಿಸೆಂಬರ್ 14 ರಂದು ಅವರು ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದರು.