UI movie review: ಸಿನಿಮಾ ಸರಳ ಮತ್ತು ನೇರ, ಕುಂಬಾರಗೆ ವರ್ಷ, ದೊಣ್ಣೆಗೆ ನಿಮಿಷ, ನನಗಿಷ್ಟವಾದ 5 ಅಂಶ; ಲೇಖಕ ರಂಗಸ್ವಾಮಿ ಮೂಕನಹಳ್ಳಿ ವಿವರಣೆ
UI movie review: ಚಿತ್ರನಟ ಉಪೇಂದ್ರ ಅವರ UI ಸಿನಿಮಾ ಅಭಿಮಾನಿ ಬಳಗವನ್ನು ಹುಚ್ಚೆಬ್ಬಿಸಿದೆ. ಅಂಥದ್ದೇನಿದೆ ಆ ಸಿನಿಮಾದಲ್ಲಿ ಎಂಬ ಕುತೂಹಲ ಸಹಜ. ಲೇಖಕ ರಂಗಸ್ವಾಮಿ ಮೂಕನಹಳ್ಳಿ ಅವರು, UI ಸಿನಿಮಾ ತೀರಾ ಸರಳ ಮತ್ತು ನೇರವಾಗಿದೆ. ಸಿನಿಮಾದಲ್ಲಿ ನನಗಿಷ್ಟವಾದ 5 ಅಂಶಗಳಿವು ಎಂದು ವಿವರಣೆ ಕೂಡ ಕೊಟ್ಟಿದ್ದಾರೆ.
UI movie review: ರಿವರ್ಸ್ ಸೈಕಾಲಜಿ ಯಾವತ್ತಿಗೂ ವರ್ಕ್ ಆಗುತ್ತೆ. ಇಷ್ಟು ವರ್ಷದ ನನ್ನ ಜೀವನದಲ್ಲಿ ನಾನು ಕಂಡು ಕೊಂಡ ಸತ್ಯವಿದು ಎನ್ನುತ್ತ UI ಸಿನಿಮಾ ಜನರಲ್ಲಿ ಸೃಷ್ಟಿಸಿರುವ ಸಂಚಲನದ ಬಗ್ಗೆ ಲೇಖನ ಬರೆದಿದ್ದ ಲೇಖಕ ರಂಗಸ್ವಾಮಿ ಮೂಕನಹಳ್ಳಿ ಅವರು UI ಸಿನಿಮಾ ನೋಡಿದ ಬಳಿಕ ಬಹಳಷ್ಟು ಅಂಶಗಳನ್ನು ಗಮನಿಸಿ, ಆ ಕಡೆಗೂ ಓದುಗರ ಗಮನಸೆಳೆದಿದ್ದಾರೆ. ಲೇಖಕ ರಂಗಸ್ವಾಮಿ ಮೂಕನಹಳ್ಳಿ ಅವರು 5 ಮುಖ್ಯ ಅಂಶಗಳನ್ನು ಉಲ್ಲೇಖಿಸಿ ಪ್ರಸ್ತುತಪಡಿಸಿರುವ UI ಸಿನಿಮಾ ವಿಮರ್ಶೆ ಹೀಗಿದೆ..
UI ಸಿನಿಮಾ ತೀರಾ ಸರಳ ಮತ್ತು ನೇರ
We are prisoners of our own thoughts! -ದಿಸ್ ಇಸ್ ದಿ ಯೂನಿವರ್ಸಲ್ ಟ್ರುಥ್
ಕಾಂತಾರ ನಂತರ ಮತ್ತೆ ಚಿತ್ರ ಮಂದಿರಕ್ಕೆ ಇವತ್ತು ಹೋಗಿದ್ದೆ. ಕಾಂತಾರ ಕ್ರಿಯೇಟ್ ಮಾಡಿದ್ದ ಹೈಪ್ ನೋಡಿ ಅದನ್ನು ನೋಡಲು ಹೋಗಿದ್ದೆ. ಹೈಪಿಗೆ ತಕ್ಕಂತಹ ಚಿತ್ರ ಅದಾಗಿತ್ತು.
ಉಪ್ಪಿಯ UI ಸಿನಿಮಾ ನೋಡಿಕೊಂಡು ಬಂದೆ. ಚಿತ್ರದಲ್ಲಿ ಯಾವ ಸೀನ್, ಕಥೆ ಡಿಕೋಡ್ ಮಾಡುವುದಕ್ಕೆ ಅವರು ಯಾವುದನ್ನು ಮುಚ್ಚಿಟ್ಟಿಲ್ಲ. ತೀರಾ ಸರಳವಾಗಿ ಮತ್ತು ನೇರವಾಗಿ ಹೇಳಿದ್ದಾರೆ. ಎಂತಹ ದಡ್ಡನಿಗೂ ಅರ್ಥವಾಗುತ್ತೆ. ಹೀಗಾಗಿ ಬುದ್ದಿವಂತರಾಗಿದ್ದರೆ ಎದ್ದು ಹೋಗಿ ಎಂದಿದ್ದಾರೆ. ಏಕೆಂದರೆ ಅವರಿಗೆ ಚಿತ್ರ ಖಂಡಿತ ಬೋರ್ ಹೊಡೆಸುತ್ತೆ. ತಲೆ ಚಿಟ್ಟು ಹಿಡಿಸುತ್ತೆ. ಅದದೇ ವಿಕ್ಷಿಪ್ತತೆ, ಸಮಾಜದ ಜನರೆಲ್ಲರೂ ಒಳಗೊಂದು, ಹೊರಗೊಂದು ಎನ್ನುವ ತಥಾಕಥಿತ ಉಪ್ಪಿ ಫಾರ್ಮುಲ. ಬೇಕಿಲ್ಲದ ಕೆಲವು ಸೀನ್‌ಗಳು ಅದು ಹೇಗೆ ಜನರಿಗೆ ಇಷ್ಟವಾಗುತ್ತೆ ಎಂದು ಉಪ್ಪಿ ಅಂದುಕೊಂಡರು ಎನ್ನಿಸುವಂತಿದೆ.
ಉಳಿದಂತೆ : ಸಿನಿಮಾ ಮೂರು ಬಾರಿ ನೋಡಬೇಕು, ಐದು ಬಾರಿ ನೋಡಬೇಕು ಅರ್ಥ ಆಗೋಕ್ಕೆ ಎನ್ನುವುದೆಲ್ಲಾ ಹೈಪ್ ಕ್ರಿಯೇಟ್ ಮಾಡಲು ತೇಲಿ ಬಿಟ್ಟಿರುವ ಅಂಶ ಅಷ್ಟೆ. ಆದರೆ ಸರಳವಾಗಿ ಮತ್ತು ನೇರವಾಗಿ ಅರ್ಥವಾಗುವಂತೆ ಸಿನಿಮಾದಲ್ಲಿ ಹೇಳಿರುವ ಒಂದಷ್ಟು ಅಂಶ ಇಷ್ಟವಾಯ್ತು :
UI ಸಿನಿಮಾ: ನನಗಿಷ್ಟವಾದ ಐದು ಅಂಶಗಳು
೧) ನಾವೆಲ್ಲರೂ ನಮ್ಮ ಆಲೋಚನೆಗಳ ಬಂಧಿಗಳು. ಇದರಿಂದ ನಮ್ಮನ್ನು ಯಾರೂ ಹೊರತರಲಾರರು. ಶತಶತಮಾನಗಳಿಂದ ಬುದ್ಧ, ರಾಮ, ಕೃಷ್ಣ, ಬಸವ, ಜೀಸಸ್ ಹೀಗೆ ನೂರಾರು ದಾರ್ಶನಿಕರು ಎಷ್ಟೇ ಕಷ್ಟಪಟ್ಟರೂ ನಮ್ಮನ್ನು ಇದರಿಂದ ಮುಕ್ತಗೊಳಿಸಲು ಆಗಿಲ್ಲ. ಇದರಿಂದ ಹೊರಬರುವುದಕ್ಕೆ ನಮ್ಮಿಂದ ಮಾತ್ರ ಸಾಧ್ಯ. ನಮಗೆ ನಾವೇ ದಾರಿದೀಪ.
೨)“In a country well governed, poverty is something to be ashamed of. In a country badly governed, wealth is something to be ashamed of” - ಲಕ್ಷಾಂತರ ಕೋಟ್ಯಧಿಪತಿಗಳಿರುವುದಕ್ಕಿಂತ , ಕೋಟ್ಯಂತರ ಲಕ್ಷಾಧಿಪತಿಗಳಿರುವುದು ಸಮಾಜಕ್ಕೆ ಒಳ್ಳೆಯದು. ಭಾರತ ಅಂತಲ್ಲ ಎಲ್ಲೆಡೆ ಅಸಮಾನತೆಯ ಕರಿಮೋಡ ಹಬ್ಬಿದೆ. ನಾವು ಎಚ್ಚರಗೊಳ್ಳದೆ ಇದ್ದರೆ ದಿ ಎಂಡ್ ಅಷ್ಟೆ. ನಾವು ಬಯಸುವ ಬದಲಾವಣೆ ಭಗವಂತನಿಂದಲೂ ತರಲು ಸಾಧ್ಯವಿಲ್ಲ.
೩) ನಾವು ನಮ್ಮನ್ನು ಸೃಷ್ಟಿಸಿದ ದೇವರನ್ನು (ಪ್ರಕೃತ್ತಿ ) ಕೀಳಾಗಿ ನಡೆಸಿಕೊಂಡಿದ್ದೇವೆ. ನಾವು ಸೃಷ್ಟಿಸಿದ ದೇವರು ದೊಡ್ಡವನು ಎನ್ನುವ ಜಗಳಕ್ಕೆ ಬಿದ್ದಿದ್ದೇವೆ.
೪) ಸಾಮಾನ್ಯ ಜನತೆ ಮೀನಿನಂತೆ ಗಾಳ ಎನ್ನುವುದರ ಅರಿವಿರುವುದಿಲ್ಲ, ಆಹಾರ ಎನ್ನುವ ಭ್ರಮೆಯಲ್ಲಿ ಬಾಯಿ ಹಾಕಿ ಸಾವು ತಂದುಕೊಳ್ಳುತ್ತದೆ. ಇಂತಹ ಮೀನು ಬೇರೆ ಮೀನನ್ನು ಎಚ್ಚರಿಸಲು ಹೇಗೆ ಸಾಧ್ಯ.
೫) ಕೊನೆಗೆ ಬದಲಾವಣೆ ಆಯ್ತು ಎಂದು ಕೊಂಡು ನಿಟ್ಟಿಸಿರು ಬಿಡುವಂತಿಲ್ಲ. ಸಮಾಜವನ್ನು ಕದಡಲು ಕ್ಷಣ ಸಾಕು. ಒಳ್ಳೆಯ ಬದಲಾವಣೆಗೆ ನೂರಾರು ವರ್ಷ ಬೇಕು. ಕುಂಬಾರನಿಗೆ ವರ್ಷ, ದೊಣ್ಣೆಗೆ ನಿಮಿಷ.
ಒಟ್ಟಾರೆ ಸಾರಾಂಶ ಕೂಡ ಅವರೇ ಹೇಳಿದ್ದಾರೆ. ಬುದ್ಧ , ಬಸವರಿಂದ ಕೂಡ ನಮ್ಮ ಸಮಾಜವನ್ನು ಬದಲಿಸಲಾಗಲಿಲ್ಲ ಎಂದು. ಹುಷಾರು ಅವರು ಹಣೆದಿರುವ ಬಲೆಗೆ ಬಿದ್ದು ನಾಳೆ ಅವರು ಚುನಾವಣೆಗೆ ಬಂದರೆ ಓಟು ಹಾಕಬೇಡಿ. ನೆನಪಿರಲಿ, ಚಿತ್ರದ ಸಾರಾಂಶವೇ ಅದು ನಮಗೆ ಬೇಕಾದ ಬದಲಾವಣೆ ನಾವೇ ಮಾಡಿಕೊಳ್ಳಬೇಕು. ಯಾರೋ ಬರುತ್ತಾರೆ ಸಮಾಜ ಬದಲಿಸುತ್ತಾರೆ ಎನ್ನುವುದು ಮೂರ್ಖತನ. ನಮ್ಮ ಕಲೆಕ್ಟಿವ್ ಮನಸ್ಥಿತಿ ಮಾತ್ರ ಬದಲಾವಣೆ ತರಬಲ್ಲದು. ಆದರೆ ಮನಸ್ಸಿನ ಈ ಟ್ರ್ಯಾಪ್ನಿಂದ ಹೊರಬರಲು ಅದೆಷ್ಟು ಜನರಿಗೆ ಸಾಧ್ಯ?
UI ಸಿನಿಮಾ ಒಂದು ಬಾರಿ ನೋಡಲು ಅಡ್ಡಿಯಿಲ್ಲ. ಆದರೆ ಮಕ್ಕಳನ್ನು ಖಂಡಿತ ಕರೆದುಕೊಂಡು ಹೋಗಬೇಡಿ. ಉಪ್ಪಿಯ ಎಲ್ಲಾ ಚಿತ್ರಗಳಲ್ಲಿರುವ ವಿಕ್ಷಿಪ್ತತೆ, ಬೇಕಿಲ್ಲದ ಸಂಭಾಷಣೆ, ದೃಶ್ಯಗಳು ನನಗೆ ಇಷ್ಟವಾಗಲಿಲ್ಲ. ನಾನು ಈ ವಿಷಯದಲ್ಲಿ ಓಲ್ಡ್ ಸ್ಕೂಲ್. ಸ್ಟ್ರಿಕ್ ನೋ ಅಂದರೆ ನೋ . ಅಸಹ್ಯ ತರಿಸುವ ಹಿನ್ನಲೆ ಮುಲುಕಾಟದ ಅವಶ್ಯಕತೆ ಏನಿತ್ತು ಎನ್ನುವುದನ್ನು ಉಪ್ಪಿ ಹೇಳಬೇಕು. ಒಂದೊಳ್ಳೆ ಮೆಸ್ಸೇಜ್ ಕೊಡುತ್ತ ಕೊಡುತ್ತ ಹಾಳುಗೆಡವಿ ಬಿಡುತ್ತಾರೆ.
- ರಂಗಸ್ವಾಮಿ ಎನ್ ಆರ್ ಮೂಕನಹಳ್ಳಿ, ಲೇಖಕರು