Year Ender 2024: ಹಾಕಿದ ಹಣ ವಾಪಸ್ಸು ಬಂದರೆ ಅದೇ ಲಾಭ; ಮಿಕ್ಕಂತೆ ಲಾಭದ ಪ್ರಶ್ನೆಯೇ ಇಲ್ಲ - ಇದು ಈ ವರ್ಷದ ಕನ್ನಡ ಚಿತ್ರರಂಗದ ಪಾಡು
ಈ ಬಾರಿ ಸ್ಯಾಂಡಲ್‌ವುಡ್‌ನಲ್ಲಿ ಬಿಡುಗಡೆಯಾದ ಎಲ್ಲ ಚಿತ್ರಗಳ ಪಾಡೂ ಒಂದೇ ಆಗಿದೆ. ಯಾವ ಸಿನಿಮಾಗಳೂ ಅಷ್ಟೇನೂ ಲಾಭ ಕಂಡಿಲ್ಲ. ಹಾಕಿದ ಹಣ ವಾಪಸ್ಸು ಬಂದರೆ ಅದೇ ಲಾಭ.ಮಿಕ್ಕಂತೆ ಲಾಭದ ಪ್ರಶ್ನೆಯೇ ಇಲ್ಲ ಎಂಬ ಪ್ರಸಂಗ ಎದುರಾಗಿದೆ.
2024 ಮುಗಿಯುವುದಕ್ಕೆ ಕೇವಲ ಇನ್ನೊಂದು ವಾರವಿದೆ. ಅಷ್ಟೇ ಅಲ್ಲ, ಬಿಡುಗಡೆ ಆಗುವುದಕ್ಕೆ ಇನ್ನೆರಡು ಚಿತ್ರಗಳು ಮಾತ್ರ ಬಾಕಿ ಇದೆ. ಒಂದು ಸುದೀಪ್ ಅಭಿನಯದ ‘ಮ್ಯಾಕ್ಸ್’. ಇನ್ನೊಂದು ಪ್ರದೀಪ್ ದೊಡ್ಡಯ್ಯ ಅಭಿನಯದ ‘ಔಟ್ ಆಫ್ ಸಿಲಬಸ್’. ಈಗಾಗಲೇ 220ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿದ್ದು, ಆ ಪಟ್ಟಿಗೆ ಈ ಎರಡು ಚಿತ್ರಗಳು ಸೇರ್ಪಡೆಯಾಗುತ್ತವೆ ಅಷ್ಟೇ.
ಈ 220 ಪ್ಲಸ್ ಚಿತ್ರಗಳಲ್ಲಿ ಗೆದ್ದ ಅಥವಾ ದೊಡ್ಡ ಲಾಭ ಮಾಡಿದ ಚಿತ್ರಗಳೆಷ್ಟು? ಇಂಥದ್ದೊಂದು ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ, ಆಘಾತವಾಗುತ್ತದೆ. ಮಲಯಾಳಂ ಚಿತ್ರ ‘ಮಂಜುಮ್ಮೆಲ್ ಬಾಯ್ಸ್’ ಚಿತ್ರವು 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಯ್ತು ಎಂದು ಹೇಳಲಾಗುತ್ತದೆ. ಅದೇ ಅದು ವಾಪಸ್ಸು ಗಳಿಸಿದ್ದು 242 ಕೋಟಿ ರೂ. ಅಂದರೆ, ಹಾಕಿದ ದುಡ್ಡಿಗಿಂತ 12 ಪಟ್ಟು ಹೆಚ್ಚು ಲಾಭ ಬಂದ ಹಾಗಾಯ್ತು. ಅದೇ ತರಹ ‘ಪ್ರೇಮುಲು’ ಎಂಬ ಒಂಬತ್ತು ಕೋಟಿ ರೂ. ಬಜೆಟ್‍ನ ಚಿತ್ರವು 136 ಕೋಟಿ ರೂ. ಗಳಿಸಿರುವ ಸುದ್ದಿ ಇದೆ. ಹಾಕಿದ ದುಡ್ಡಿಗಿಂತ 15 ಪಟ್ಟು ಹೆಚ್ಚನ್ನು ನಿರ್ಮಾಪಕರು ದುಡಿದಿದ್ದಾರೆ.
ಆದರೆ, ಕನ್ನಡದಲ್ಲಿ ಈ ವರ್ಷ ಹಾಗಿಲ್ಲ. 2024ರಲ್ಲಿ ಕನ್ನಡ ಚಿತ್ರಗಳ ಮೇಲೆ ಹಾಕಿದ ಬಂಡವಾಳ ಬಂದರೆ, ಅದೇ ದೊಡ್ಡ ಲಾಭ ಎನ್ನುವಂತಿತ್ತು. ಲಾಭ ಎನ್ನುವುದು ಮರೀಚೆಕ್ಕೆ ಎನ್ನುವಂತಹ ವಾತಾವಾರಣವಿತ್ತು. ಈ ವರ್ಷ ಐದು ಚಿತ್ರಗಳು 20 ಕೋಟಿ ರೂ.ವರೆಗೂ ಗಳಿಕೆ ಮಾಡಿವೆ. ಮಿಕ್ಕಂತೆ ಬಹಳಷ್ಟು ಚಿತ್ರಗಳು ಎರಡಂಕಿ (10 ಕೋಟಿ ರೂ.) ಗಳಿಕೆ ಮಾಡಿದ್ದೂ ಕಷ್ಟ ಎದುರಿಸಬೇಕಾಯಿತು. ಇಷ್ಟಕ್ಕೂ ಎರಡಂಕಿ ಕ್ಲಬ್ ಸೇರಿದ ಕನ್ನಡ ಚಿತ್ರಗಳ್ಯಾವುವು ಎಂಬ ಪ್ರಶ್ನೆ ಸಹಜ. ಅದಕ್ಕೆ ಉತ್ತರ ಇಲ್ಲಿದೆ.
ಈ ವರ್ಷದ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ‘UI’
ಈ ವರ್ಷ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರವೆಂದರೆ, ಅದು ಉಪೇಂದ್ರ ಅಭಿನಯದ ‘UI’. ಈ ಚಿತ್ರವು ಮೂರು ದಿನಗಳಲ್ಲಿ ಒಟ್ಟು 20 ಕೋಟಿ ರೂ. ಗಳಿಕೆ ಮಾಡಿದೆ ಎಂದು ಬಾಕ್ಸ್ ಆಫೀಸ್ ಟ್ರಾಕರ್ ಸಚ್ನಿಕ್ ಡಾಟ್‍ಕಾಮ್ ಹೇಳುತ್ತದೆ. ಈ ಪೈಕಿ ಕನ್ನಡದ ಅವತರಣಿಯು 18.85 ಕೋಟಿ ರೂ. ಗಳಿಕೆ ಮಾಡಿದರೆ, ತೆಲುಗು ಅವತರಣಿಕೆಯು 2.5 ಕೋಟಿ ರೂ. ಗಳಿಕೆ ಮಾಡಿದೆಯಂತೆ. ತೆಲುಗು ಅವತರಣಿಕೆಯನ್ನು ಪಕ್ಕಕ್ಕಿಟ್ಟು, ಬರೀ ಕನ್ನಡ ಅವತರಣಿಕೆಯನ್ನು ತೆಗೆದುಕೊಂಡರೂ, ಅಗ್ರಸ್ಥಾನದಲ್ಲಿ ‘UI’ ನಿಲ್ಲುತ್ತದೆ. ಈ ವರ್ಷ ಇಷ್ಟೊಂದು ಗಳಿಕೆ ಮಾಡಿದ ಮತ್ತು ಅದರಲ್ಲೂ ಮೊದಲ ಮೂರು ದಿನಗಳಲ್ಲಿ ಇಷ್ಟೊಂದು ಗಳಿಕೆ ಮಾಡಿದ ಯಾವೊಂದು ಚಿತ್ರ ಸಹ ಸಿಗುವುದಿಲ್ಲ. ಮುಂದೆ ಇನ್ನೂ ಸಮಯವಿರುವುದರಿಂದ, ಈ ಚಿತ್ರವು 30ರಿಂದ 40 ಕೋಟಿ ರೂ.ವರೆಗೂ ಗಳಿಕೆ ಮಾಡಬಹುದು ಎಂಬ ನಿರೀಕ್ಷೆ ಇದೆ. ಸದ್ಯಕ್ಕಂತೂ ಈ ವರ್ಷದ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ‘UI’ ಇದೆ. ಈ ದಾಖಲೆಯನ್ನು ಸುದೀಪ್ ಅಭಿನಯದ ‘ಮ್ಯಾಕ್ಸ್’ ಮುರಿಯುತ್ತದಾ? ಎಂಬ ಕುತೂಹಲ ಎಲ್ಲರಿಗೂ ಇದೆ.
ಚಿತ್ರರಂಗಕ್ಕೆ ಬಲ ತಂದುಕೊಟ್ಟ ‘ಭೀಮ’
‘UI’ ಹೊರತುಪಡಿಸಿದರೆ, ಈ ವರ್ಷ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರವೆಂದರೆ, ಅದು ‘ದುನಿಯಾ’ ವಿಜಯ್ ಅಭಿನಯದ ‘ಭೀಮ’. ಈ ಚಿತ್ರವು ಎರಡು ವಾರಗಳಲ್ಲಿ 19.55 ಕೋಟಿ ರೂ. ಗಳಿಕೆ ಮಾಡಿದೆ ಎಂಬ ಸುದ್ದಿ ಇದೆ. ‘ಭೀಮ’ ಚಿತ್ರವು ಆಗಸ್ಟ್ 09ರಂದು ರಾಜ್ಯಾದ್ಯಂತ ಬಿಡುಗಡೆಯಾಯಿತು. ಅದಕ್ಕೂ ಮುನ್ನ ಈ ವರ್ಷ ಯಾವೊಂದು ಚಿತ್ರವೂ ಗೆದ್ದಿಲ್ಲ ಎನ್ನುವುದು ಒಂದು ಕಡೆಯಾದರೆ, ಜನ ಚಿತ್ರಮಂದಿರದತ್ತ ಸುಳಿಯಲಿಲ್ಲ ಎಂಬುದು ಚಿತ್ರರಂಗಕ್ಕೆ ಚಿಂತೆಗೀಡು ಮಾಡಿತ್ತು. ಆದರೆ, ‘ಭೀಮ’ ಚಿತ್ರಕ್ಕೆ ಜನ ಚಿತ್ರಮಂದಿರದತ್ತ ಹರಿದು ಬಂದರು. ಈ ವರ್ಷ ಸೋಲು ಮತ್ತು ನಷ್ಟವನ್ನೇ ಹೆಚ್ಚು ಕಂಡಿದ್ದ ಕನ್ನಡ ಚಿತ್ರರಂಗಕ್ಕೆ, ಈ ಚಿತ್ರದಿಂದ ಒಂದಿಷ್ಟು ಹೊಸ ಗಾಳಿ ಸಿಕ್ಕಂತಾಗಿತ್ತು.
ಮೂರನೇ ಸ್ಥಾನಕ್ಕೆ ಕೃಷ್ಣ ಮತ್ತು ಆತನ ಪ್ರಣಯ ಸಖಿ
ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರವು 50 ಕೋಟಿ ರೂ. ಗಳಿಕೆ ಮಾಡಿದೆಯಂತೆ, ಈ ವರ್ಷ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಅದು ಎಂಬ ಸುದ್ದಿಗಳಿವೆಯಾದರೂ, ಅವೆಲ್ಲವೂ ಸುಳ್ಳು. ಚಿತ್ರವು 19 ಕೋಟಿಯವರೆಗೂ ಗಳಿಕೆ ಮಾಡಿದೆ ಎಂದು ಸಚ್ನಿಕ್ ಡಾಟ್‍ಕಾಮ್ ಹೇಳುತ್ತದೆ. ‘ಗಾಳಿಪಟ 2’ ಚಿತ್ರವನ್ನು ಹೊರತುಪಡಿಸಿದರೆ, ಮಿಕ್ಕಂತೆ ಗಣೇಶ್ ಅಭಿನಯದ ಹಿಂದಿನ ಚಿತ್ರಗಳ್ಯಾವುವೂ ಎರಡಂಕಿ ಗಳಿಕೆ ಮಾಡಿದ ಉದಾಹರಣೆಯೇ ಇರಲಿಲ್ಲ. ಅದನ್ನು ಮುರಿದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರವು ಒಂದಿಷ್ಟು ಗಳಿಕೆ ಮಾಡಿತು. ‘ಭೀಮ’ ಚಿತ್ರದಿಂದ ಪ್ರೇಕ್ಷಕರು ಚಿತ್ರಮಂದಿರದತ್ತ ಬಂದರೆ, ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಮೂಲಕ ಫ್ಯಾಮಿಲಿ ಪ್ರೇಕ್ಷಕರು ಚಿತ್ರಮಂದಿರಗಳ ಕಡೆಗೆ ಬಂದರು.
ನಾಲ್ಕನೇ ಸ್ಥಾನದಲ್ಲಿ ಸೂಪರ್ ಹೀರೋ ‘ಬಘೀರ’
ಕನ್ನಡದ ಮೊದಲ ಸೂಪರ್ ಹೀರೋ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶ್ರೀಮುರಳಿ ಅಭಿನಯದ ‘ಬಘೀರ’ ಚಿತ್ರವು ಈ ವರ್ಷದ ಎರಡನೇ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂದು ಹೇಳಲಾಗುತ್ತದೆ. ಈ ಚಿತ್ರವು ಒಟ್ಟಾರೆ 20.55 ಕೋಟಿ ರೂ. ಗಳಿಕೆ ಮಾಡಿದೆಯಂತೆ. ಇದರಲ್ಲಿ 18.5 ಕೋಟಿ ರೂ ಕರ್ನಾಟಕದಿಂದ ಬಂದರೆ, ಕೇವಲ 1.5 ಕೋಟಿ ರೂ ಆಂಧ್ರ ಮತ್ತು ತೆಲಂಗಾಣದಿಂದ ಬಂದಿದೆ. ಈ ಚಿತ್ರವು ಮೊದಲ ವಾರ 16.5 ಕೋಟಿ ರೂ. ಗಳಿಕೆ ಮಾಡಿತ್ತು ಎಂದು ಹೇಳಲಾಗುತ್ತದೆ. ಎರಡನೇ ವಾರದ ಹೊತ್ತಿಗೆ ಅಬ್ಬರ ಕಡಿಮೆಯಾಗಿ, ಮೂರನೆಯ ವಾರದ ಹೊತ್ತಿಗೆ ತಣ್ಣಗಾಗಿದೆ. ಮೂರು ವಾರಗಳಲ್ಲಿ ಚಿತ್ರವು ಒಟ್ಟು 18.5 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಗಿದೆ.
ಶಿವಣ್ಣ ಅಭಿನಯದ ‘ಭೈರತಿ ರಣಗಲ್’ ಐದನೇ ಸ್ಥಾನದಲ್ಲಿ
ಈ ವರ್ಷ 18 ಕೋಟಿ ರೂ. ಗಳಿಕೆ ಮಾಡುವ ಮೂಲಕ ಶಿವರಾಜಕುಮಾರ್ ಅಭಿನಯದ ಮೂರನೇ ಸ್ಥಾನದಲ್ಲಿದೆ. ನವೆಂಬರ್ 15ರಂದು ಬಿಡುಗಡೆಯಾದ ಈ ಚಿತ್ರವು, ಮೊದಲ ವಾರ 13 ಕೋಟಿ ರೂ. ಗಳಿಕೆ ಮಾಡಿತ್ತು ಎಂದು ಹೇಳಲಾಗುತ್ತದೆ. ಎರಡನೆಯ ವಾರ ಇನ್ನೈದು ಕೋಟಿ ರೂ. ಗಳಿಕೆ ಮಾಡಿ ವ್ಯಾಪಾರ ಮುಗಿಸಿದೆ. ಚಿತ್ರವು ತೆಲುಗು ಮತ್ತು ತಮಿಳಿಗೆ ಡಬ್ ಆಗಿ ಬಿಡುಗಡೆಯಾದರೂ, ಅಲ್ಲಿಂದ ಹೆಚ್ಚೇನೂ ನಿರೀಕ್ಷಿಸುವಂತಿರಲಿಲ್ಲ. ಈ ವರ್ಷ ಶಿವರಾಜಕುಮಾರ್ ಅಭಿನಯದ ‘ಕರಟಕ ದಮನಕ’ ಮತ್ತು ‘ಭೈರತಿ ರಣಗಲ್’ ಚಿತ್ರಗಳು ಬಿಡುಗಡೆಯಾದವು. ಈ ಪೈಕಿ ‘ಭೈರತಿ ರಣಗಲ್’ ಗಳಿಕೆ ಪರವಾಗಿರಲಿಲ್ಲ. ಮಿಕ್ಕಂತೆ ‘ಕರಟಕ ದಮನಕ’ ಚಿತ್ರದ ಗಳಿಕೆ ಐದು ಕೋಟಿ ರೂ. ಗಳಿಕೆ ದಾಟಲಿಲ್ಲ. ಶಿವರಾಜಕುಮಾರ್ ಮತ್ತು ಪ್ರಭುದೇವರಂತಹ ನಟರಿದ್ದರೂ, ಚಿತ್ರ ದೊಡ್ಡ ಸೋಲು ಕಂಡಿತು.
ಮೇಲೆ ಹೇಳಿದ ಯಾವುದೇ ಚಿತ್ರವೂ ಬಾಕ್ಸ್ ಆಫೀಸ್‍ವೊಂದರಲ್ಲಿ ದೊಡ್ಡ ಗಳಿಕೆ ಮಾಡಿದವು, ಲಾಭ ಕಂಡವು ಎಂದರೆ ತಪ್ಪಾದೀತು. ಈ ಐದೂ ಚಿತ್ರಗಳಲ್ಲಿ ಯಾವುದೋ ದೊಡ್ಡ ಯಶಸ್ಸು ಅಥವಾ ಲಾಭ ಕಂಡಂತಹ ಚಿತ್ರಗಳು ಎಂದು ಹೇಳಲಾಗದು ಏಕೆಂದರೆ, ಮೇಲಿನ ಐದು ಚಿತ್ರಗಳು ದೊಡ್ಡ ಬಜೆಟ್‍ನ ಚಿತ್ರಗಳಾಗಿದ್ದವು. ಎಲ್ಲದರ ಬಜೆಟ್ 15ರಿಂದ 20 ಕೋಟಿ ರೂ. ಮೀರಿವೆ. ಬಾಕ್ಸ್ ಆಫೀಸ್ ಗಳಿಕೆಯಿಂದ ಅರ್ಧ ದುಡ್ಡು ಬಂದಂತಾಗುತ್ತದೆ. ಮಿಕ್ಕ ಹಣವು ಸ್ಯಾಟಿಲೈಟ್, ಡಿಜಿಟಲ್ ಮತ್ತು ಡಬ್ಬಿಂಗ್ ಹಕ್ಕುಗಳಿಂದ ಬರಬೇಕು. ಅಲ್ಲಿಂದ ಬರುವ ಹಣ ಮಿಕ್ಕ ಬಂಡವಾಳವನ್ನು ತೂಗಿಸಿ, ಆ ನಂತರ ಲಾಭ ಕಾಣಬೇಕು. ಈ ವರ್ಷ ಸ್ಯಾಟಿಲೈಟ್ ಮತ್ತು ಡಿಜಿಟಲ್ ಮಾರುಕಟ್ಟೆ ಹೇಗಿತ್ತು ಎಂದು ಗೊತ್ತೇ ಇದೆ. ಟಿವಿ ಚಾನಲ್‍ಗಳು ಮತ್ತು ಓಟಿಟಿಯವರು ಚಿತ್ರದ ಹಕ್ಕುಗಳನ್ನು ಕೊಳ್ಳುವುದನ್ನು ಬಹುತೇಕ ನಿಲ್ಲಿಸಿದ್ದರು. ಹಾಗಾಗಿ, ಈ ಐದು ಚಿತ್ರಗಳು ದೊಡ್ಡ ಲಾಭ ನೋಡುವುದಕ್ಕೆ ಸಾಧ್ಯವಿಲ್ಲ. ಹಾಕಿದ ಬಂಡವಾಳ ಸರಿದೂಗುವುದರ ಜೊತೆಗೆ ಒಂದೆರಡು ಕೋಟಿ ಲಾಭ ಬಂದರೆ, ಅದೇ ಹೆಚ್ಚು ಎನ್ನುವ ಪರಿಸ್ಥಿತಿ ಇದೆ. ಹಾಗಾಗಿ, ಈ ವರ್ಷ ಕನ್ನಡದಲ್ಲಿ ದೊಡ್ಡ ಲಾಭ ಕಂಡ ಚಿತ್ರಗಳು ಸಿಗುವುದು ಕಷ್ಟ. ಮೊದಲೇ ಹೇಳಿದಂತೆ, ಹಾಕಿದ ಹಣ ವಾಪಸ್ಸು ಬಂದರೆ ಅದೇ ಲಾಭ ಎನ್ನುವಂತಾಗಿದೆ.
ವರದಿ: ಚೇತನ್ ನಾಡಿಗೇರ್
ಇದನ್ನೂ ಓದಿ: UI ಸೆಲೆಬ್ರಿಟಿ ಶೋನಲ್ಲಿ ಎದುರಾದ ಸ್ಯಾಂಡಲ್ವುಡ್ ಸ್ಟಾರ್ಸ್; ಯಶ್ ಮತ್ತು ಸುದೀಪ್ ಅಪ್ಪುಗೆಯ ವಿಡಿಯೋ ಎಲ್ಲೆಡೆ ವೈರಲ್
ವಿಭಾಗ