ಯಾರಾದ್ರೂ ನನ್ನ ಜತೆ ಫೋಟೋ ತಗೊಂಡ್ರೆ, 1 ಲೀಟರ್ ಪೆಟ್ರೋಲ್ ಫ್ರೀ ಸಿಗುತ್ತಾ? ಭಾಗ್ಯಲಕ್ಷ್ಮೀ ಧಾರಾವಾಹಿ ನಟ ಸುದರ್ಶನ್ ರಂಗಪ್ರಸಾದ್ ಸಂದರ್ಶನ
Sudarshan Rangaprasad Interview: ಕಲರ್ಸ್ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಕಂಡರೆ ವೀಕ್ಷಕರಿಗೆ ಇಷ್ಟವೇ ಆಗೋದಿಲ್ಲ. ಹೆಂಡ್ತಿ ಭಾಗ್ಯಳನ್ನು ನಿಂದಿಸುತ್ತಾನೆ ಅಂತ ತಾಂಡವ್ ಕಂಡರೆ ವೀಕ್ಷಕರು ಉರಿದುಬೀಳ್ತಾರೆ. ಆದರೆ ತಾಂಡವ್ ಯಾಕೆ ಹೀಗೆ ಇದ್ದಾನೆ ಅಂತ ನಟ ಸುದರ್ಶನ್ ಮಾತನಾಡಿದ್ದಾರೆ.- ಸಂದರ್ಶನ ಪದ್ಮಶ್ರೀ ಭಟ್
Bhagyalakshmi serial Sudarshan Rangaprasad Interview: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್‌ಗೆ ಪತ್ನಿ ಭಾಗ್ಯ ಕಂಡರೆ ಇಷ್ಟವೇ ಇಲ್ಲ. ಹೆಂಡ್ತಿಗೆ ಡಿವೋರ್ಸ್ ಕೊಟ್ಟು ಶ್ರೇಷ್ಠಳನ್ನು ಮದುವೆ ಆಗುವ ಪ್ಲ್ಯಾನ್ ಅವನದ್ದು. ಮನೆಯಲ್ಲಿ ಸುಂದರವಾದ, ಸುಶೀಲೆ, ಸುಗುಣವಂತೆ ಹೆಂಡ್ತಿ ಇದ್ದರೂ ಕೂಡ ಬೇರೆ ಹುಡುಗಿಯ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ ಅಂತ ಪ್ರೇಕ್ಷಕರು ಬೈಯ್ಯುತ್ತಿದ್ದಾರೆ. ಆದರೆ ತಾಂಡವ್ ಈ ರೀತಿ ವರ್ತಿಸಲು ಕಾರಣ ಏನು ಎಂದು ಯಾರೂ ಯೋಚಿಸೋದಿಲ್ಲ. ಈ ಬಗ್ಗೆ ನಟ ಸುದರ್ಶನ್ ರಂಗಪ್ರಸಾದ್ ಅವರು ಪಂಚಮಿ ಟಾಕ್ಸ್ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಉತ್ತರ ನೀಡಿದ್ದಾರೆ.
- ತಾಂಡವ್ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಕಷ್ಟಪಟ್ಟು ಓದಿದ್ದಾನೆ, ತಂದೆ-ತಾಯಿ ಹೇಳಿದಂಗೆ ಕೇಳಿದ್ದಾನೆ. ಆದರೆ ಅವನಿಗೆ ಐದು ಪರ್ಸಂಟೇಜ್ ಸ್ವಾತಂತ್ರ್ಯ ಕೊಟ್ಟಿಲ್ಲ. ಯಾರೇ ಆಗಿರಲಿ ದುಡ್ಡು, ಹೆಸರಿಗಿಂತ ಜಾಸ್ತಿ ಸ್ವಾತಂತ್ರ್ಯ ಬೇಕಿರುತ್ತದೆ. ತನಗೆ ಬೇಕಾದ ನಿರ್ಧಾರವನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ಮನುಷ್ಯನಿಗೆ ಬೇಕೇ ಬೇಕು. ನಾನು ಇಷ್ಟುದಿನಗಳ ಕಾಲ ತಾಂಡವ್ ಪಾತ್ರದಲ್ಲಿ ಜೀವನ ಮಾಡಿದೀನಿ, ಹೀಗಾಗಿ ಇದನ್ನು ತುಂಬ ಆಳವಾಗಿ ನೋಡಿದೀನಿ. ತಾಂಡವ್‌ಗೆ ಇಷ್ಟೆಲ್ಲ ಒರಟುತನ, ದ್ವೇಷ ಎಲ್ಲ ಬಂದಿರೋದಿಕ್ಕೆ ತಂದೆ-ತಾಯಿ ಅಂತ ಹೇಳಬಹುದು..
- ತಾಂಡವ್‌ನ ಈ ವರ್ತನೆಗೆ ಕಾರಣ ಏನಿರಬಹುದು?
ವಿಷ ಹಾಕಿದಕೂಡಲೇ ಹಾಲು ಹೇಗೆ ಕಪ್ಪಾಗುತ್ತದೆಯೋ ಹಾಗೆ ತಾಂಡವ್‌ಗೆ ಹಾಕಿರುವ ನೀತಿ-ನಿರ್ಬಂಧಗಳಿಂದ ಅವನು ಹೀಗಾಗಿದ್ದಾನೆ. ಮನುಷ್ಯನಿಗೆ ಬೇಕಾದ ಬೇಸಿಕ್ ವಿಷಯವನ್ನು ತಾಂಡವ್‌ನಿಂದ ಕಿತ್ತುಕೊಳ್ಳಲಾಗಿದೆ. ಭಾಗ್ಯ ಯಾಕೆ ಆ ಥರ ಇರಬೇಕು ಎನ್ನೋದು ತಪ್ಪು. ಆದರೆ ಇಲ್ಲಿ ತಪ್ಪು-ಸರಿ ಎನ್ನುವ ವಿಷಯ ಬರೋದಿಲ್ಲ. ಆದರೆ ಇಲ್ಲಿ ಬೆಳೆಸಿರೋದು ತಪ್ಪಾಗಿರುತ್ತದೆ. ಆ ನಂತರ ಮದುವೆ ಆಗುವ ಟೈಮ್‌ನಲ್ಲಿ ಭಾಗ್ಯಳನ್ನು ಮದುವೆ ಆಗಲ್ಲ ಅಂತ ಹೇಳಬೇಕಿತ್ತು. ಭಾಗ್ಯಳನ್ನು ಅವನು ಬಲಿಪಶು ಮಾಡಿದ್ದಾನೆ. ಭಾಗ್ಯ ಬದಲಾಗಬೇಕು ಅಂತ ಹೇಳೋದು ತಪ್ಪು. ತಾಂಡವ್‌ಗೋಸ್ಕರ ಯಾಕೆ ಭಾಗ್ಯಲಕ್ಷ್ಮೀ ಬದಲಾಗಬೇಕು? ಗಂಗಾ ನಾಗವಲ್ಲಿ ಆದಹಾಗೆ ಹೇಗೆ ಆಡ್ತಿದ್ದಳೋ ಹಾಗೆ ತಾಂಡವ್ ಈಗ ನಾಗವಲ್ಲಿ ಕಂಟ್ರೋಲ್‌ನಲ್ಲಿದ್ದಾನೆ.
- ಇಂದು ಕೂಡ ಹೆಂಡ್ತಿ ಅಥವಾ ಹೆಣ್ಣು ತನಗೆ ಬೇಕಿರುವ ಹಾಗೆ ಇರುವ ಸ್ವಾತಂತ್ರ್ಯ ಇಲ್ವಲ್ಲ..
ಇತ್ತೀಚೆಗೆ ಈ ಮನಸ್ಥಿತಿ ಅಷ್ಟು ಇಲ್ಲ. ಇಂದು ಇರುವ ಪೀಳಿಗೆ ಸ್ವಲ್ಪ ಬದಲಾಗಿದೆ. ಹೆಂಡ್ತಿಯ ಕರಿಯರ್‌ಗೋಸ್ಕರ ಕೆಲ ಹುಡುಗರು ತುಂಬ ಸಪೋರ್ಟ್ ಮಾಡ್ತಿದ್ದಾರೆ. 1980-1990ರಲ್ಲಿ ಈ ಥರದವರು ಇದ್ದರು. ಕೀಳರಿಮೆ ಭಾವನೆಯಿಂದ ಇದೆಲ್ಲ ಆಗತ್ತೆ ಅಂತ ನನಗೆ ಅನಿಸುತ್ತದೆ. ಪೊಸೆಸ್ಸಿವ್ ಗುಣಗಳು ಇರುತ್ತವೆ. ಹೆಂಡ್ತಿ ನನಗಿಂತ ಜಾಸ್ತಿ ಯಶಸ್ವಿ ಆದಾಗ ಅದನ್ನು ಪುರುಷನಿಗೆ ಸಹಿಸಲು ಕಷ್ಟ ಆಗಲೂಬಹುದು, ನನ್ನನ್ನು ಹಿಂದಿಕ್ಕಿ ಹೋಗಲೂಬಹುದಾ ಎಂಬ ಪ್ರಶ್ನೆ ಬರುತ್ತದೆ.
- ಪತ್ನಿ ಸಂಗೀತಾ ಭಟ್ ಯಶಸ್ಸು ಪಡೆದಾಗ ನಿಮಗೆ ಕೀಳರಿಮೆ ಆಗಿಲ್ವಾ?
ಆಗಿತ್ತು, ಆದರೆ ಸಂಗೀತಾಳ ಯಶಸ್ಸು ನೋಡಿ ಖುಷಿಯಾಗುತ್ತಿದೆ, ಅದೇ ಸಮಯಕ್ಕೆ ನಾನು ಕೂಡ ಕಲಾವಿದ, ನನಗೆ ಅವಕಾಶ ಸಿಕ್ಕಿಲ್ಲ ಅಂತ ಬೇಸರ ಇದ್ದೇ ಇತ್ತು. ನನಗೆ ಪ್ರೌಢಿಮೆ ಇದ್ದಿದ್ದಕ್ಕೆ ನಾನು ಸಂಗೀತಾಳ ಬೆಳವಣಿಗೆಗೆ ನಾನು ಅಡ್ಡಗಾಲು ಹಾಕಲಿಲ್ಲ. ಈಗ ಭಾಗ್ಯಲಕ್ಷ್ಮೀ ಧಾರಾವಾಹಿ ನೋಡಿ ಕೆಲ ಪ್ರೇಕ್ಷಕರು ನನ್ನ ಜೊತೆ ಫೋಟೋ ತಗೊಳ್ಳಲು ಬರುತ್ತಾರೆ. ಆಗ ಸಂಗೀತಾ ಸ್ವಲ್ಪ ಮೂಲೆಯಾಗ್ತಾಳೆ. ಆದರೂ ಕೂಡ ಅವಳು ನನ್ನ ಯಶಸ್ಸಿನ ಬಗ್ಗೆ ತುಂಬ ಖುಷಿಪಡ್ತಾಳೆ. ನನಗಿಂತ ಜಾಸ್ತಿ ಭಾಗ್ಯಲಕ್ಷ್ಮೀ ಬಗ್ಗೆ ಅವಳೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಾಳೆ.
- ಈ ಯಶಸ್ಸಿನ ಬಗ್ಗೆ ಏನು ಹೇಳ್ತೀರಿ..
ನಾವು ಏನೂ ಆಗದಿರುವಾಗ ಯಶಸ್ಸು ಬೇಕು ಎನಿಸುತ್ತದೆ. ಆಮೇಲೆ ಒಂದು ವಿಷಯ ಅರ್ಥ ಆಗುವುದು. ಕೊನೆಯಲ್ಲಿ ನಮಗೆ ಬೇಕಾಗಿರೋದು ದುಡ್ಡು. ನನಗೆ ಯಶಸ್ಸು ಇದೆ, ಎಲ್ಲರೂ ಬಂದು ಫೋಟೋ ತಗೊಳ್ತಾರೆ. ಆದರೆ ಯಾರಾದರೂ ನನಗೆ ಒಂದು ಲೀಟರ್ ಪೆಟ್ರೋಲ್ ಫ್ರೀ ಕೊಡ್ತಾರಾ? ಆರ್ಥಿಕವಾಗಿ ನನ್ನನ್ನು ಚೆನ್ನಾಗಿಟ್ಟುಕೊಂಡು ಜೀವನವನ್ನು ಬ್ಯಾಲೆನ್ಸ್ ಆಗಿಡುತ್ತಾ ಎನ್ನೋದು ಮುಖ್ಯ ಆಗುತ್ತದೆ. ಫೋಟೋ ತಗೊಂಡ್ರು, ನಾನೇ ದೊಡ್ಡವನು ಅಂತ ಹೇಳಿಕೊಂಡು ತಿರುಗೋ ವಯಸ್ಸು ಕೂಡ ನಂದಲ್ಲ.
ಸಂದರ್ಶನ: ಪದ್ಮಶ್ರೀ ಭಟ್