Bigg Boss Kannada 11: ಗೋಲ್ಡ್ ಸುರೇಶ್ ಕುಟುಂಬದಲ್ಲಿ ಏನೂ ತುರ್ತು ಸಮಸ್ಯೆ ಇಲ್ಲ, ಆದ್ರೂ ಬಿಗ್ ಬಾಸ್‌ನಿಂದ ಹೊರ ಕಳಿಸಿದ್ದೇಕೆ?
Bigg boss Kannada 11: ಬಿಗ್ ಬಾಸ್ ಕನ್ನಡ 11ರ ಸ್ಪರ್ಧಿ, ಗೋಲ್ಡ್ ಸುರೇಶ್ ತುರ್ತು ನೆಪದ ಕಾರಣ ಏಕಾಏಕಿ ಹೊರ ನಡೆದಿದ್ದಾರೆ. ಸದಸ್ಯರೊಬ್ಬರ ನಿಕಟ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ಮನೆಯಿಂದ ಆಚೆ ಬಂದಿದ್ದರು. ಆದರೆ, ಸದ್ಯದ ಮಾಹಿತಿ ಪ್ರಕಾರ ಅವರ ಕುಟುಂಬದಲ್ಲಿ ಯಾರಿಗೂ ಯಾವುದೇ ಸಮಸ್ಯೆಯಾಗಿಲ್ಲ.
Bigg Boss Kannada 11: ಬಿಗ್‌ಬಾಸ್ ಕನ್ನಡದ 11ನೇ ಸೀಸನ್‌ನಲ್ಲಿ ಭಾನುವಾರ ಶಿಶಿರ್ ತಮ್ಮ ಆಟವನ್ನು ಮುಗಿಸಿದರು. ಎಲಿಮಿನೇಟ್ ಆಗುವ ಮೂಲಕ ಮನೆಯಿಂದ ನಿರ್ಗಮಿಸಿದರು. ಆದರೆ, ಯಾರೂ ಊಹಿಸದ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಗೋಲ್ಡ್ ಸುರೇಶ್ ಸಹ ಮನೆಯಿಂದ ಹೊರ ನಡೆದರು. "ಸದಸ್ಯರೊಬ್ಬರ ನಿಕಟ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ. ಅವರ ಅವಶ್ಯಕತೆ ಬಿಗ್‌ಬಾಸ್‌ಗಿಂತಲೂ, ಅವರ ಕುಟುಂಬಕ್ಕೆ ಹೆಚ್ಚು ಅಗತ್ಯ. ಈ ಕೂಡಲೇ ಅವರು ಮನೆಯಿಂದ ಹೊರಬರಬೇಕು" ಎಂದು ಬಿಗ್ ಬಾಸ್ ಹೇಳುತ್ತಿದ್ದಂತೆ, ಆತಂಕದಲ್ಲಿಯೇ ಹೊರ ನಡೆದರು. ಆದರೆ, ಅಷ್ಟಕ್ಕೂ ಅವರ ಕುಟುಂಬದಲ್ಲಿ ನಡೆದಿದ್ದೇನು?
ಬಿಗ್ ಬಾಸ್ ಅವರ ಈ ಆದೇಶ ಹೊರಬೀಳುತ್ತಿದ್ದಂತೆ, ಮನೆ ಮಂದಿ ಅರೇ ಕ್ಷಣ ಶಾಕ್ ಆದರು. ಕೊನೆಗೆ ಗೋಲ್ಡ್ ಸುರೇಶ್ ಈ ಕೂಡಲೇ ಹೊರಬನ್ನಿ ಎನ್ನುತ್ತಿದ್ದಂತೆ, ಆಕಾಶವೇ ತಲೆ ಮೇಲೆ ಬಿದ್ದಂತೆ, ಆತಂಕದಲ್ಲಿಯೇ ಮನೆಗೆ ಹೇಗೆ ಬಂದಿದ್ದರೋ ಅದೇ ಅವತಾರದಲ್ಲಿಯೇ ಮನೆಯಿಂದ ನಿರ್ಗಮಿಸಿದರು. ಅವರ ನಿರ್ಗಮನದ ಬಳಿಕ ಕೆಲ ಊಹಾಪೋಹಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಸುರೇಶ್ ಅವರ ತಂದೆ ನಿಧನರಾಗಿದ್ದಾರೆ ಎಂಬ ಸುದ್ದಿ ಮುನ್ನೆಲೆಗೆ ಬಂದಿತ್ತು. ಆದರೆ, ಅಚ್ಚರಿಯ ಸಂಗತಿ ಏನೆಂದರೆ, ಸುರೇಶ್ ಅವರ ತಂದೆ ಶಿವಗೌಡ ಅವರಿಗೆ ಏನೂ ಆಗಿಲ್ಲ. ಇದನ್ನು ಸ್ವತಃ ಅವರೇ ಹೇಳಿದ್ದಾರೆ.
ಗೋಲ್ಡ್ ಸುರೇಶ್ ತಂದೆಯ ಪ್ರತಿಕ್ರಿಯೆ
"ನನಗೆ ಏನೂ ಸಮಸ್ಯೆ ಆಗಿಲ್ಲ. ಇದು ಸುಮ್ನೆ ಹವಾ ಎದ್ದಿದೆ. ಮನೆಯಲ್ಲಿ ಏನೂ ಸಮಸ್ಯೆ ಇಲ್ಲ. ಬೆಂಗಳೂರಿನ ಮನೆಯಲ್ಲೂ ಏನೂ ಸಮಸ್ಯೆ ಇಲ್ಲ. ಚಂದ ಆಟ ಆಡುತ್ತಿದ್ದಾನೆ. ಒಳ್ಳೆಯ ಹೆಸರು ಮಾಡಬೇಕು ಅನ್ನೋದು ಅವನ ತಲೆಯಲ್ಲಿದೆ. ಈಗ ಹಿಂಗೆ ದಿಢೀರ್ ಎಂದು ಹೊರಗೆ ಬಂದಿದ್ದು ಬೇಸರ ತರಿಸಿದೆ. ನನಗೆ ಅನಿಸಿದ ಮಟ್ಟಿಗೆ ಕಾಲಿನ ನೋವಿನಿಂದ ಅವನನ್ನು ತೆಗೆದಿರಬಹುದು. ಉಳಿದ ಏನೂ ಸಮಸ್ಯೆ ಇಲ್ಲ" ಎಂದಿದ್ದಾರೆ ಶಿವಗೌಡ ಕಾಶಿರಾಮ್ ನಾರಪ್ಪಗೌಡ್ರ.
ತುರ್ತು ನೆಪವೇ ಸುಳ್ಳಾ?
ಗೋಲ್ಡ್ ಸುರೇಶ್ ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದು ಏಕೆ ಎಂಬುದಕ್ಕೆ ಈ ವರೆಗೆ ಕಂಡಿದ್ದು ಒಂದೇ ಒಂದು ಪ್ರೋಮೋ. ಆದರೆ, ಬಹುತೇಕರು ಭಾನುವಾರದ ಏಪಿಸೋಡ್‌ನಲ್ಲೇ ಇದಕ್ಕೆ ಉತ್ತರ ಸಿಗಬಹುದು ಎಂದು ಎಲ್ಲರೂ ಕಾದು ಕೂತಿದ್ದರು. ಆದರೆ, ಭಾನುವಾರದ ಸಂಚಿಕೆಯಲ್ಲಿ ಸುರೇಶ್ ಮನೆಯಿಂದ ನಿರ್ಗಮಿಸಿದ ಸಂಚಿಕೆ ಪ್ರಸಾರವಾಗಿಲ್ಲ. ಸೋಮವಾರವಾದ ಇಂದು ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಈ ನಡುವೆ ಕೆಲವರು ಬಿಗ್ ಬಾಸ್‌ನವರೇ ಬೇಕು ಅಂತಲೇ ಗಿಮಿಕ್ ಮಾಡ್ತಿದ್ದಾರಾ? ಎಂದೂ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಸಿಗದ ಸ್ಪಷ್ಟತೆ, ಗೊಂದಲದಲ್ಲಿ ವೀಕ್ಷಕ
ಕಳೆದ ಕೆಲ ವಾರಗಳ ಹಿಂದೆಯೇ ಗೋಲ್ಡ್ ಸುರೇಶ್ ಅವರ ಕಾಲಿಗೆ ನೋವಾಗಿದೆ. ಆ ನೋವಿನಲ್ಲಿಯೂ ಫಿಸಿಕಲ್ ಟಾಸ್ಕ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಉತ್ತಮ ಅನ್ನೋ ಪಟ್ಟವನ್ನೂ ಪಡೆದು, ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಹೀಗಿರುವಾಗಲೇ, ತುರ್ತು ಕಾರಣದಲ್ಲಿ ಮನೆಯಿಂದ ಹೊರ ನಡೆದಿದ್ದಾರೆ. ಬಿಗ್ ಬಾಸ್‌ನ ಈ ನಡೆ ಏನಿರಬಹುದು? ಎಂಬ ಗೊಂದಲದ ಜತೆಗೆ ಕುತೂಹಲವೂ ವೀಕ್ಷಕರಲ್ಲಿದೆ. ಇದಕ್ಕೆ ಇಂದಿನ ಏಪಿಸೋಡ್‌ನಲ್ಲಿ ಸ್ಪಷ್ಟತೆ ಸಿಗಲಿದೆ.