ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ; ಅಂತಿಮ ಘಟ್ಟ ತಲುಪಿದೆ ನಿಟ್ಟೆ ವಿವಿ ತಜ್ಞರ ತಂಡದ ಅಧ್ಯಯನ ಎಂದಿದೆ ವರದಿ
Areca nut: ಐಎಆರ್‌ಸಿ ಅಧ್ಯಯನ ವರದಿ ಅಡಿಕೆ ಕ್ಯಾನ್ಸರ್ ಕಾರಕ ಎಂದು ಹೇಳಿದ್ದು, ಅಡಕೆ ಬೆಳೆಗಾರರು, ವ್ಯಾಪಾರಸ್ಥರ ನಡುವೆ ವ್ಯಾಪಕ ಚರ್ಚೆಗೆ ಒಳಗಾಗಿದೆ. ಈ ನಡುವೆ, ಅಡಿಕೆ (Adike) ಕ್ಯಾನ್ಸರ್ ಕಾರಕ ಅಲ್ಲ. ಅದರಿಂದ ಕ್ಯಾನ್ಸರ್ ಕಣಗಳು ತಟಸ್ಥಗೊಳ್ಳುತ್ತವೆ ಎಂಬ ಮಹತ್ವದ ಅಂಶ ನಿಟ್ಟೆ ವಿಶ್ವವಿದ್ಯಾಲಯದ ತಜ್ಞರ ಅಧ್ಯಯನದಲ್ಲೂ ದೃಢಪಟ್ಟಿದೆ ಎಂದು ವರದಿಯೊಂದು ಹೇಳಿದೆ.
Areca nut: ಕ್ಯಾನ್ಸರ್ ಕಣಗಳನ್ನು ತಟಸ್ಥಗೊಳಿಸುವ ಅಂಶ ಅಡಿಕೆ (Adike) ಯಲ್ಲಿದೆ. ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಎಂಬ ಮಹತ್ವದ ಅಂಶ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ತಂಡ ನಡೆಸಿದ ಅಧ್ಯಯನದಲ್ಲಿ ದೃಢವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಧೀನ ಸಂಸ್ಥೆ ಇಂಟರ್‌ನ್ಯಾಷನಲ್ ಏಜೆನ್ಸಿ ಫಾರ್ ರೀಸರ್ಚ್ ಆನ್ ಕ್ಯಾನ್ಸರ್ (IARC) ಪ್ರಕಟಿಸಿದ ಅಧ್ಯಯನ ವರದಿಯಲ್ಲಿ ಅಡಿಕೆ ಕ್ಯಾನ್ಸರ್ ಕಾರಕ ಎಂದು ನೇರವಾಗಿ ಉಲ್ಲೇಖಿಸಿತ್ತು. ಹೀಗಾಗಿ ನಿಟ್ಟೆ ವಿವಿ ಅಧ್ಯಯನ ಮಹತ್ವ ಪಡೆದುಕೊಂಡಿದೆ ಎಂದು ಉದಯವಾಣಿ ವರದಿ ಮಾಡಿದೆ. ಐಎಆರ್‌ಸಿ ಅಧ್ಯಯನ ವರದಿ ಅಡಿಕೆ ಬೆಳೆಗಾರರಲ್ಲಿ ಬಹಳ ಆತಂಕ ಮೂಡಿಸಿತ್ತು. ಅಡಿಕೆಯನ್ನು ಏಕಾಏಕಿ ಕ್ಯಾನ್ಸರ್ ಕಾರಕ ಎಂದು ವರ್ಗೀಕರಿಸಿದ ಅಧ್ಯಯನ ವರದಿಯಲ್ಲಿ ಪಾನ್, ಪಾನ್ ಮಸಾಲಾ, ಗುಟ್ಖಾ ಇತ್ಯಾದಿ ಸೇವಿಸುವುದರಿಂದ ಉಂಟಾಗುವ ವಿಷಯವನ್ನು ಮುಖ್ಯವಾಗಿಟ್ಟುಕೊಂಡು ಅಧ್ಯಯನ ನಡೆಸಲಾಗಿತ್ತು. ಇದು ಪರಿಪೂರ್ಣ ಅಧ್ಯಯನ ಅಲ್ಲ ಎಂಬ ಅಂಶದ ಕಡೆಗೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಕೂಡ ಗಮನಸೆಳೆದಿದ್ದರು.
ಮೂರು ವರ್ಷ ಹಿಂದೆಯೇ ಅಧ್ಯಯನ ಶುರುಮಾಡಿದೆ ನಿಟ್ಟೆ ವಿವಿ; ಗಮನಸೆಳೆದ 4 ಅಂಶಗಳಿವು
1) ಅಡಿಕೆ ಕ್ಯಾನ್ಸರ್ ಕಾರಕ ಹೌದಾ ಅಥವಾ ಅಲ್ಲವೇ ಎಂಬುದನ್ನು ದೃಢಪಡಿಸುವುದಕ್ಕಾಗಿ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞ ಸಂಶೋಧಕರ ತಂಡ ಮೂರು ವರ್ಷ ಹಿಂದೆಯೇ ಅಧ್ಯಯನ ಶುರುಮಾಡಿದೆ. ಇದಕ್ಕಾಗಿ ಕ್ಯಾಂಪ್ಕೊ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ನಿಟ್ಟೆ ವಿವಿ ನಡುವೆ ತಿಳಿವಳಿಕೆ ಒಪ್ಪಂದ (ಎಂಒಯು) ಏರ್ಪಟ್ಟಿದೆ.
2) ಅಡಿಕೆ ಸಾರರಿಂದ ಝೀಬ್ರಾ ಮೀನಿನ ಮೇಲೆ ಪರಿಣಾಮ ಏನು, ಅಡಿಕೆ ಹಣ್ಣಿನ ನೊಣದ ಮೇಲೆ ಏನು ಪರಿಣಾಮ, ಅಡಿಕೆ ರಸದಿಂದ ಕ್ಯಾನ್ಸರ್ ಕಣಗಳ ಮೇಲಿನ ಪರಿಣಾಮ, ಅಡಿಕೆ ಜಗಿಯುವವರ ವೈಜ್ಞಾನಿಕ ಸಮೀಕ್ಷೆ - ಹೀಗೆ ನಾಲ್ಕು ಹಂತದ ಅಧ್ಯಯನ ನಡೆಸುವುದಕ್ಕೆ ಒಪ್ಪಂದ ಆಗಿತ್ತು. ಈ ಪೈಕಿ 3 ವಿಭಾಗಗಳ ಸಂಶೋಧನೆಗಳನ್ನು ನಿಟ್ಟೆ ವಿ.ವಿ.ಯ ವಿಜ್ಞಾನಿ ಪ್ರೊ| ಇಡ್ಯಾ ಕರುಣಾಸಾಗರ್ ಮತ್ತವರ ತಂಡ ಪೂರ್ಣಗೊಳಿಸಿದೆ. ಅಂತಾರಾಷ್ಟ್ರೀಯ ಜರ್ನಲ್‌ನಲ್ಲಿ ಪ್ರಕಟವಾಗಬೇಕಷ್ಟೆ.
3) ಅಡಿಕೆ ಕ್ಯಾನ್ಸರ್ ಕಾರಕ ಎಂಬ ಆರೋಪ ಇರುವ ಕಾರಣ, ಅಡಿಕೆಯ ಸಾರವು ಕ್ಯಾನ್ಸರ್ ಕಣಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಅರಿಯಲು ಪ್ರತ್ಯೇಕ ಅಧ್ಯಯನ ನಡೆಸಲಾಗಿತ್ತು. ನಿಟ್ಟೆ ವಿವಿಯ ಪ್ರಯೋಗಾಲಯದ ಪೆಟ್ರಿಪ್ಲೇಟ್‌ಗಳಲ್ಲಿ ಕ್ಯಾನ್ಸರ್ ಕಣಗಳನ್ನು ಬೆಳೆಸಿ, ಅವುಗಳ ಮೇಲೆ ಅಡಿಕೆಯ ಸಾರವನ್ನು ಪ್ರಯೋಗಿಸಲಾಗಿದೆ. ಆಗ ಅದು ಕ್ಯಾನ್ಸರ್ ಕಣಗಳ ಬೆಳವಣಿಗೆಯನ್ನು ಪ್ರತಿಬಂಧಿಸುತ್ತಿರುವುದನ್ನು ತಜ್ಞರು ಗುರುತಿಸಿದ್ದಾರೆ. ಇದನ್ನು ಅಧ್ಯಯನ ವರದಿಯಲ್ಲಿ ಉಲ್ಲೇಖಿಸುವುದಕ್ಕೆ ಸಂಶೋಧಕರು ಮುಂದಾಗಿದ್ದಾರೆ.
4) ಈ ಹಿಂದೆ ವೀಳ್ಯದೆಲೆ ಮತ್ತು ಅಡಿಕೆ ಜಗಿಯುವವರ ಸಮೀಕ್ಷೆ ನಡೆಸಿದ್ದು, ಅವರಲ್ಲಿ ಅಡಿಕೆ ಸೇವನೆ ಕ್ಯಾನ್ಸರ್ ಕಾರಕವಲ್ಲ ಎಂಬುದು ದೃಢಪಟ್ಟಿರುವುದನ್ನು ಅಧ್ಯಯನ ವರದಿಗಳು ಉಲ್ಲೇಖಿಸಿವೆ. ಅಂತೆಯೇ ಈಗ ಅಡಿಕೆ ಮಾತ್ರ ಜಗಿಯುವವರ ಸಂಶೋಧನೆ ನಡೆಸುವ ಕೆಲಸ ಪ್ರಗತಿಯಲ್ಲಿದೆ. ನಿಟ್ಟೆ ವಿವಿಯ ಸಮುದಾಯ ದಂತ ಆರೋಗ್ಯ ವಿಭಾಗದವರು ಈ ಕೆಲಸ ಮಾಡುತ್ತಿದ್ದಾರೆ ಎಂದು ವರದಿ ವಿವರಿಸಿದೆ.
ಅಡಿಕೆ ಹಾನಿಕಾರಕವಲ್ಲ ಎಂದಿವೆ ಹಳೆಯ ಅಧ್ಯಯನಗಳು
ಅಡಿಕೆ ಬೆಳೆಯ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಅಂಗ ಸಂಸ್ಥೆ ಇಂಟರ್‌ನ್ಯಾಷನಲ್ ಏಜೆನ್ಸಿ ಫಾರ್ ರೀಸರ್ಚ್ ಆನ್ ಕ್ಯಾನ್ಸರ್ ಇತ್ತೀಚೆಗೆ ಪ್ರಕಟಿಸಿದ ವರದಿಯಲ್ಲಿ ಅಡಿಕೆಯನ್ನು ಕ್ಯಾನ್ಸರ್ ಕಾರಕ ಎಂಬರ್ಥ ಬರುವ ರೀತಿಯಲ್ಲಿ ಉಲ್ಲೇಖಿಸಿದೆ. ಇದು ಅಡಕೆ ಬೆಳೆಗಾರರಲ್ಲಿ ಆತಂಕ ಮೂಡುವಂತೆ ಮಾಡಿದೆ. ಆದರೆ, ಈ ಕುರಿತು ಹಿರಿಯ ವಿಜ್ಞಾನಿ ಹಾಗೂ ಕ್ಯಾಂಪ್ಕೊದ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಸಂಯೋಜಕ ಡಾ. ಸರ್ಪಂಗಳ ಕೇಶವ ಭಟ್ ಅವರು ಹಲವು ವೈಜ್ಞಾನಿಕ ಸಂಶೋಧನೆ ಕುರಿತು ಬೆಳಕು ಚೆಲ್ಲಿದ್ದು, ತಾಂಬೂಲ ಜಗಿಯುವುದರಿಂದ ತೊಂದರೆ ಇಲ್ಲ. ಅಡಿಕೆ ಕೂಡ ಹಾನಿಕಾರಕವಲ್ಲ ಎಂದು ವಿವರಿಸಿದ್ದಾರೆ. ವಿವರ ವರದಿಗೆ - ಅಡಕೆ ಹಾನಿಕಾರಕವಲ್ಲ, ತಾಂಬೂಲ ಜಗಿದರೆ ಏನೂ ಆಗಲ್ಲ ಎಂದಿವೆ 5 ವೈಜ್ಞಾನಿಕ ಅಧ್ಯಯನ ವರದಿ, ಅನುಮಾನಕ್ಕೀಡಾಯಿತು ಐಎಆರ್‌ಸಿ ಅಧ್ಯಯನ ವರದಿ