ಪೂಜಾ ಹೆಗ್ಡೆ ತುಳು ಹುಡುಗನ ಮದುವೆಯಾಗ್ತಾರ, ಕನ್ನಡ ಸಿನಿಮಾದಲ್ಲಿ ನಟಿಸ್ತಾರ? ಕಣಜಾರು ದೇಗುಲಕ್ಕೆ ಭೇಟಿ ನೀಡಿದ ತುಳುನಾಡಿನ ನಟಿ ಹೀಗಂದ್ರು
ಬಾಲಿವುಡ್ ನಟಿ ಪೂಜಾ ಹೆಗ್ಡೆ ಇತ್ತೀಚೆಗೆ ಕಾರ್ಕಳದ ಕಣಜಾರು ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಸ್ಥಳೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಭದಲ್ಲಿ ತನ್ನ ಬಾಲ್ಯದ ನೆನಪುಗಳನ್ನು ನೆನಪಿಸಿಕೊಂಡಿದ್ದಾರೆ. ತುಳು ಹುಡುಗನ ಮದುವೆಯಾಗುವಿರಾ? ಕನ್ನಡ-ತುಳು ಸಿನಿಮಾಗಳಲ್ಲಿ ನಟಿಸುವಿರಾ? ಎಂಬ ಪ್ರಶ್ನೆಗಳಿಗೂ ಪೂಜಾ ಹೆಗ್ಡೆ ಉತ್ತರಿಸಿದ್ದಾರೆ.
ಮಂಗಳೂರು: ಕಾರ್ಕಳದ ಕಣಜಾರು ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಕರಾವಳಿ ಮೂಲದ ಬಾಲಿವುಡ್ ನಟಿ ಪೂಜಾ ಹೆಗ್ಡೆ ಭೇಟಿ ನೀಡಿದ್ದಾರೆ. ಕಾರ್ಕಳದ ನ್ಯೂಸ್ ವೆಬ್‌ಸೈಟ್ “ನ್ಯೂಸ್‌ಕಾರ್ಕಳ.ಕಾಂ”ಗೆ ಸಂದರ್ಶನ ನೀಡಿದ್ದು, ಹಲವು ವಿಷಯಗಳ ಕುರಿತು ತುಳುವಿನಲ್ಲೇ ಮಾತನಾಡಿದ್ದಾರೆ. ವಿಶೇಷವಾಗಿ ಕಣಜೂರಿನ ತನ್ನ ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಭೂತಾರಾಧನೆ, ದೈವರಾಧನೆ ಕುರಿತೂ ಮಾತನಾಡಿದ್ದಾರೆ. ಮಿಸ್ ಯೂನಿವರ್ಸ್ ಸ್ಪರ್ಧೆಯ ದಿನದಿಂದ, ಪ್ರಮುಖ ಚಿತ್ರಗಳಲ್ಲಿ ನಟಿಸಿದ ಅನುಭವಗಳನ್ನು ನೆನಪಿಸಿಕೊಂಡಿದ್ದಾರೆ. ಕನ್ನಡ ಮತ್ತು ತುಳು ಚಿತ್ರಗಳಲ್ಲಿ ನಟಿಸುವ ಸಾಧ್ಯತೆ ಕುರಿತೂ ಮಾತನಾಡಿದ್ದಾರೆ. ಇದೇ ಸಮಯದಲ್ಲಿ ತುಳು ಹುಡುಗನ ಮದುವೆಯಾಗುವಿರಾ? ಎಂಬ ಪ್ರಶ್ನೆಯೂ ನಟಿಗೆ ಎದುರಾಗಿದೆ.
ಪೂಜಾ ಹೆಗ್ಡೆ ಬಾಲ್ಯದ ನೆನಪು
ಹಳೆಯ ನೆನಪುಗಳು ತುಂಬಾ ಇವೆ. ಪ್ರತಿವರ್ಷ ಊರಿಗೆ ಬಂದಾಗ ಇಲ್ಲಿ ಕಣಜಾರ್‌ನಲ್ಲಿ ನನ್ನ ತಂದೆಯ ತಂದೆ ಅಂದ್ರೆ ಅಜ್ಜನ ಮನೆಗೆ ಭೇಟಿ ನೀಡುತ್ತಿದ್ದೆ. ಇಲ್ಲಿಗೆ ಬಂದಾಗ ಇಲ್ಲೇ ಉಳಿದುಕೊಳ್ಳುತ್ತ ಇದ್ದೇವು. ತುಂಬಾ ಗಮ್ಮತ್ ಮಾಡಿ ಹೋಗ್ತಾ ಇದ್ದೇವು. ಬೇಸಿಗೆ ರಜೆ ಕಳೆದು ಬಾಂಬೆಗೆ ವಾಪಸ್ ಹೋಗುವ ಸಮಯದಲ್ಲಿ ನಾವು ಅಳುತ್ತಾ ಇದ್ದೆವು. ಯಾಕೆಂದರೆ ನಮಗೆ ಊರು ಬಿಟ್ಟು ಹೋಗಲು ಮನಸ್ಸಾಗುತ್ತ ಇರಲಿಲ್ಲ. ರಜೆ ಸಮಯದಲ್ಲಿ ಊರಿಗೆ ಬಂದು ಕಸಿನ್‌ಗಳ ಜತೆ ತುಂಬಾ ಗಮ್ಮತ್ ಆಗುತ್ತ ಇತ್ತು. ಯಾವಾಗಲೂ ಇದು ಒಳ್ಳೆಯ ನೆನಪು" ಎಂದು ತನ್ನ ಬಾಲ್ಯವನ್ನು ಬಾಲಿವುಡ್ ನಟಿ ಪೂಜಾ ಹೆಗ್ಡೆ ನೆನಪಿಸಿಕೊಂಡಿದ್ದಾರೆ.
ಮಿಸ್ ಯೂನಿವರ್ಸ್ ಸ್ಪರ್ಧೆಗೆ ತಯಾರಿ ಹೇಗಿತ್ತು?
ನಟಿ ಪೂಜಾ ಹೆಗ್ಡೆ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಈ ಸಮಯದಲ್ಲಿ ಇವರ ತಯಾರಿ ಹೇಗಿತ್ತೆಂದು ಮಾಹಿತಿ ನೀಡಿದ್ದಾರೆ. "ನಾನು ಮೊದಲ ಬಾರಿಗೆ ಇಂತಹ ಸ್ಪರ್ಧೆಗೆ ಹೋದಾಗ ನನಗೆ ಯಾರೂ ಕೂಡ ಟಿಪ್ಸ್ ನೀಡಿರಲಿಲ್ಲ. ಆ ಅನುಭವದ ನೆನಪು ಬ್ಲರ್ ಆಗಿ ನೆನಪಿದೆ. ಅದು ತುಂಬಾ ಸುಂದರ ಅನುಭವ. ಅಲ್ಲಿಂದ ನನಗೆ ಜೀವನದಲ್ಲಿ ಇನ್ನಷ್ಟು ಅನುಭವ ಹೆಚ್ಚಾಯಿತು." ಎಂದು ಅವರು ಹೇಳಿದ್ದಾರೆ.
ಸಿನಿಮಾ ಆಯ್ಕೆ ಮಾಡಿಕೊಳ್ಳದಿದ್ದರೆ ಬೇರೆ ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದೀರಿ?
ನ್ಯೂಸ್ ಕಾರ್ಕಳದ ಈ ಪ್ರಶ್ನೆಗೆ ನಟಿ ಪೂಜಾ ಹೆಗ್ಡೆ "ಫೋಟೋಗ್ರಫಿ ಅಥವಾ ಯಾವುದಾದರೂ ಕ್ರಿಯೆಟಿವ್ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದೆ" ಎಂದು ಹೇಳಿದ್ದಾರೆ. "ಫೋಟೋಗ್ರಫಿ ಅಥವಾ ಫ್ಯಾಷನ್, ಮರ್ಚೆಂಡೈಸ್ ಮ್ಯಾನೇಜ್‌ಮೆಂಟ್ ಇತ್ಯಾದಿ ಮಾಡುತ್ತಿದ್ದೆ" ಎಂದು ಅವರು ಹೇಳಿದ್ದಾರೆ.
ಇದೇ ಸಮಯದಲ್ಲಿ ಪ್ರಮುಖ ನಟರ ಜತೆಗಿನ ನಟನೆಯ ಅನುಭವವನ್ನು ಹಂಚಿಕೊಂಡಿದ್ದಾರೆ. ನನಗೆ ಪ್ರಮುಖ ನಟರ ಜತೆ ನಟಿಸುವ ಸಂದರ್ಭದಲ್ಲಿ ನಾನಿನ್ನೂ ಚಿಕ್ಕ ಮಗು ಎಂಬ ಫೀಲ್ ಆಗುತ್ತಿತ್ತು. ಅವರೆಲ್ಲರು ಹೇಗೆ ನಟಿಸ್ತಾರೆ ಎಂದು ಗಮನಿಸುತ್ತ ಇದ್ದೆ. ನನ್ನ ನಟನೆಯನ್ನು ಇನ್ನು ಹೇಗೆ ಉತ್ತಮಪಡಿಸಬಹುದು ಎಂದು ಯೋಚಿಸುತ್ತ ಇದ್ದೆ ಎಂದು ಹೇಳಿದ್ದಾರೆ.
ಗ್ಲಾಮರ್ ಗೊಂಬೆಯಾಗಿ ನಟಿಸಲು ಬಯಸುವಿರಾ?
ಈಗಿನ ಚಿತ್ರಗಳಲ್ಲಿ ಸಿನಿಮಾ ನಟಿಯರನ್ನು ಗ್ಲಾಮರ್ ಗೊಂಬೆಯಾಗಿ ಸಿನಿಮಾಗಳಲ್ಲಿ ತೋರಿಸ್ತಾರೆ. ನಿಮಗೆ ಯಾವ ರೀತಿಯ ಪಾತ್ರ ಇಷ್ಟ ಎಂಬ ಪ್ರಶ್ನೆಗೂ ಉತ್ತರಿಸಿದ್ದಾರೆ. "ನಿಜ ಹೇಳಬೇಕೆಂದರೆ ಈಗ ತುಂಬಾ ಬದಲಾವಣೆಯಾಗುತ್ತಿದೆ. ಮೋಸ್ಟ್ ಎಲಿಜಬೆಲ್ ಬ್ಯಾಚುಲರ್ ತೆಲುಗು ಸಿನಿಮಾದಲ್ಲಿ ನಾನು ಸ್ಟಾಂಡಪ್ ಕಾಮಿಡಿಯನ್ ರೋಲ್ ಮಾಡಿದ್ದೆ. ಈಗ ಚಿತ್ರರಂಗದಲ್ಲಿ ಪರಿಸ್ಥಿತಿ ಬದಲಾಗುತ್ತಿದೆ" ಎಂದು ಅವರು ಹೇಳಿದ್ದಾರೆ.
ಭೂತಾರಾಧನೆ ನಂಬಿಕೆ ಕುರಿತಾದ ಪ್ರಶ್ನೆಗೂ ಉತ್ತರಿಸಿದ್ದಾರೆ. ಮನೆಯವರು ಭೂತಾರಾಧನೆಯ ಕುರಿತು ನಿಮಗೆ ಗೈಡ್ ಮಾಡುತ್ತ ಇದ್ದಾರ ಎಂಬ ಪ್ರಶ್ನೆಗೆ "ಭೂತ ದೈವಗಳು ನಮಗೆ ಗೈಡ್ (ಮಾರ್ಗದರ್ಶನ) ಮಾಡುತ್ತ ಇರುತ್ತವೆ. ಬಾಲ್ಯದಿಂದಲೇ ಭೂತದೈವಗಳನ್ನು ನಾನು ನೋಡುತ್ತಿದ್ದೇನೆ. ನಮ್ಮ ಕುಟುಂಬ ಈ ಆರಾಧನೆ ಮಾಡುತ್ತ ಬಂದಿದೆ. ಇದು ನಮ್ಮ ಸಂಸ್ಕೃತಿಯ ಭಾಗವಾಗಿ ಜತೆಯಾಗಿ ಇದೆ. ಇದು ನಮಗೆ ಯಾವುದೂ ಹೊಸತಲ್ಲ. ನಾನು ಜೀವನದಲ್ಲಿ ಇಷ್ಟು ಸಾಧನೆ ಮಾಡಲು ಎಲ್ಲಾ ಆ ದೈವಗಳ ಆಶೀರ್ವಾದವೇ ಕಾರಣ" ಎಂದು ಹೇಳಿದ್ದಾರೆ.
ಕಣಜಾರು ಬ್ರಹ್ಮಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ನಟಿ ಪೂಜಾ ಹೆಗ್ಡೆ ಆಗಮಿಸಿದ್ದರು. ದೇವರ ಅನುಗ್ರಹ ಇಲ್ಲದೆ ಏನೂ ಸಾಧನೆ ಮಾಡಲಾಗದು. ಸಿನಿಮಾ ಕುಟುಂಬವಲ್ಲದ ಕಡೆಯಿಂದ ನಾನು ಈ ಕ್ಷೇತ್ರಕ್ಕೆ ಬಂದಿದ್ದೇನೆ. ನಾನು ಸಾಧನೆ ಮಾಡಲು ದೇವರ ಅನುಗ್ರಹವೇ ಕಾರಣ ಎಂದು ಹೇಳಿದ್ದಾರೆ.
ತುಳು ಕನ್ನಡ ಸಿನಿಮಾಗಳಲ್ಲಿ ಪೂಜಾ ಹೆಗ್ಡೆ ನಟಿಸುತ್ತಾರ?
ಎಲ್ಲಾದರೂ ತುಳು ಕನ್ನಡ ಸಿನಿಮಾಗಳಲ್ಲಿ ಅವಕಾಶ ಬಂದರೆ ನಟಿಸುವಿರಾ ಎಂಬ ಪ್ರಶ್ನೆಗೆ ಪೂಜಾ ಹೆಗ್ಡೆ "ಹೌದು ನಟಿಸುವೆ" ಎಂದಿದ್ದಾರೆ. "ಅವಕಾಶ ಬರಬೇಕು, ನಾನು ನಟಿಸುವೆ" ಎಂದು ನಗುತ್ತಾ ಹೇಳಿದ್ದಾರೆ. ಇದೇ ಸಮಯದಲ್ಲಿ ಪೂಜಾ ಹೆಗ್ಡೆ ಮದುವೆ ಯಾವಾಗ ಆಗುತ್ತಾರೆ? ತುಳು ಹುಡುಗನನ್ನೇ ಮದುವೆಯಾಗುತ್ತಾರ? ಎಂಬ ಪ್ರಶ್ನೆಯನ್ನು ಕೇಳಲಾಯಿತು. " ಆ ವಿಷಯದಲ್ಲಿ ದೇವರು ನನ್ನ ಹಣೆಯಲ್ಲಿ ಏನು ಬರೆದಿದ್ದಾರೆ ಗೊತ್ತಿಲ್ಲ. ನೀವು ಈ ದೇವಸ್ಥಾನಕ್ಕೆ ಹೋದಾಗ ದೇವರಲ್ಲಿ ಸ್ವಲ್ಪ ಕೇಳಿನೋಡಿ ಪ್ಲೀಸ್" ಎಂದು ನಗುತ್ತಾ ಉತ್ತರಿಸಿದ್ದಾರೆ. (ಸಂದರ್ಶನ ಕೃಪೆ: ನ್ಯೂಸ್ ಕಾರ್ಕಳ ಯೂಟ್ಯೂಬ್ ಚಾನೆಲ್)