ವರ್ಷವಿಡೀ ಸ್ವಲ್ಪವೂ ವ್ಯಾಯಾಮ ಮಾಡದೆ ತೂಕ ಇಳಿಸಿಕೊಂಡ ವಿದ್ಯಾ ಬಾಲನ್; ಡಯೆಟ್ ಕುರಿತು ನಟಿ ಹೇಳಿದ್ದು ಹೀಗೆ
Vidya Balan: ಯಾವುದೇ ವ್ಯಾಯಾಮ ಮಾಡದೆಯೂ ತೂಕ ಇಳಿಸಿಕೊಳ್ಳಬಹುದೇ? ಇದಕ್ಕೆ ಹೌದು ಎನ್ನುತ್ತಾರೆ ಬಾಲಿವುಡ್ ನಟಿ ವಿದ್ಯಾ ಬಾಲನ್. ಸೂಕ್ತ ಆಹಾರಕ್ರಮದೊಂದಿಗೆ, ಜಿಮ್ ಹೋಗದೆಯೂ ತೂಕ ಕಡಿಮೆ ಮಾಡಬಹುದು ಎನ್ನುವುದಕ್ಕೆ ವಿದ್ಯಾ ಬಾಲನ್ ಉದಾಹರಣೆಯಾಗಿದ್ದಾರೆ.
ಪ್ರತಿಭಾವಂತ ನಟಿ ವಿದ್ಯಾ ಬಾಲನ್ ಭಾರಿ ಪ್ರಮಾಣದಲ್ಲಿ ತೂಕ ಇಳಿಸಿಕೊಂಡಿದ್ದಾರೆ. ಈ ವರ್ಷ ಬಾಲನ್ ತೂಕ ಇಳಿಸಿಕೊಂಡು ತೆಳ್ಳಗೆ ಆಗಿರುವುದು ಅಭಿಮಾನಿಗಳಿಗೂ ಅಚ್ಚರಿಯಾಗಿದೆ. ಹೀಗಾಗಿ, ಸ್ಲಿಮ್ ಆಗಲು ಪ್ರಖ್ಯಾತ ನಟಿ ಏನ್ ಮಾಡಿದ್ರು ಎಂಬುದು ಸದ್ಯದ ಕುತೂಹಲ. ತಮ್ಮ ಆಹಾರಕ್ರಮದ ಬಗ್ಗೆ ತೀರಾ ಕಾಳಜಿ ವಹಿಸಿದ ನಟಿ, ಯಾವುದೇ ವ್ಯಾಯಾಮಗಳನ್ನು ಮಾಡದೆ ತೂಕ ಕಳೆದುಕೊಂಡಿದ್ದಾರೆ. ಇತೀಚೆಗೆ ಗಲಾಟಾ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ, ತೂಕ ಇಳಿಕೆ ಕುರಿತ ವದಂತಿಗಳಿಗೆ ತೆರೆ ಎಳೆದಿದ್ದಾರೆ. ದಪ್ಪಗಾಗಿರುವುದರ ಕುರಿತು ಸಾಕಷ್ಟು ಟೀಕೆಗಳನ್ನು ಎದುರಿಸಿ ಬೆಳೆದಿರುವ ನಟಿ, ಇದೀಗ ಸ್ಲಿಮ್ ಆಗಿರುವುದರ ಕುರಿತು ಮಾತನಾಡಿದ್ದಾರೆ.
ನಿಮಗೆ ತಿಳಿದಿರುವಂತೆ ನಾನು ನನ್ನ ಜೀವನದುದ್ದಕ್ಕೂ ತೆಳ್ಳಗಾಗಲು ಸಾಕಷ್ಟು ಹೆಣಗಾಡಿದ್ದೇನೆ. ನಾನು ಹುಚ್ಚಿಯಂತೆ ಡಯಟ್ ಮಾಡಿದ್ದೇನೆ. ನಿರಂತರವಾಗಿ ವ್ಯಾಯಾಮ ಮಾಡಿದ್ದೇನೆ. ಆ ಸಂದರ್ಭದಲ್ಲಿ ಕೆಲವೊಮ್ಮೆ ನಾನು ತೂಕ ಕಳೆದುಕೊಳ್ಳುತ್ತೇನೆ. ಆದರೆ ಮತ್ತೆ ದಪ್ಪ ಆಗುತ್ತಿದ್ದೆ. ಈ ವರ್ಷದ ಆರಂಭದಲ್ಲಿ, ನಾನು ಚೆನ್ನೈನಲ್ಲಿ ಅಮುರಾ (ಅಮುರಾ ಹೆಲ್ತ್) ಎಂಬ ನ್ಯೂಟ್ರಿಷನ್ ಗ್ರೂಪ್ ಅನ್ನು ಭೇಟಿಯಾದೆ. ಅವರು ನನ್ನ ದೇಹದ ಬಗ್ಗೆ 'ಇದು ಕೇವಲ ಉರಿಯೂತ ಅಷ್ಟೇ; ಅದು ಕೊಬ್ಬು ಅಲ್ಲ' ಎಂದು ಹೇಳಿದರು. ಹೀಗಾಗಿ ಉರಿಯೂತವನ್ನು ತೊಡೆದುಹಾಕಲು, ಅವರು ನನ್ನ ದೇಹಕ್ಕೆ ಬೇಕಾದ ಆಹಾರಕ್ರಮ ತಿಳಿಸಿದರು. ಅದು ನನ್ನ ದೇಹಕ್ಕೆ ಸರಿಯಾಗಿ ಹೊಂದಿಕೆ ಆಯ್ತು. ತೂಕವು ಕಾಡಿಮೆಯಾಯಿತು. ಏಕೆಂದರೆ ಅವರು ನನಗೆ ಸೂಕ್ತ ಅಲ್ಲದ ಆಹಾರವನ್ನು ನನ್ನ ಆಹಾರಕ್ರಮದಿಂದ ತೆಗೆದುಹಾಕಿದರು ಎಂದಿದ್ದಾರೆ.
ನಾನು ನನ್ನ ಜೀವನದುದ್ದಕ್ಕೂ ಸಸ್ಯಾಹಾರಿಯಾಗಿದ್ದೇನೆ. ಆದರೂ ಪಾಲಕ್ ಮತ್ತು ಸೋರೆಕಾಯಿ ನನ್ನ ದೇಹಕ್ಕೆ ಸರಿಹೊಂದುವುದಿಲ್ಲ ಎಂದು ನನಗೆ ತಿಳಿದಿರಲಿಲ್ಲ. ನಾವು ಸಾಮಾನ್ಯವಾಗಿ ಎಲ್ಲಾ ತರಕಾರಿಗಳು ನಮಗೆ ಒಳ್ಳೆಯದು ಎಂದು ಭಾವಿಸುತ್ತೇವೆ. ಆದರೆ ಅದು ಹಾಗಲ್ಲ. ನಿಮ್ಮ ದೇಹಕ್ಕೆ ನಿರ್ದಿಷ್ಟವಾಗಿ ಯಾವುದು ಒಳ್ಳೆಯದು ಎಂಬುದನ್ನು ನೀವು ಕಂಡುಕೊಳ್ಳಬೇಕು. ಬೇರೊಬ್ಬರಿಗೆ ಅದು ಒಳ್ಳೆಯದಾದರೂ, ನಿಮಗೆ ಅದು ಒಳ್ಳೆಯದಲ್ಲ ಎಂದು ವಿದ್ಯಾ ಬಾಲನ್ ಹೇಳಿಕೊಂಡಿದ್ದಾರೆ.
ವ್ಯಾಯಾಮ ಮಾಡುವುದನ್ನೇ ನಿಲ್ಲಿಸಿದ ವಿದ್ಯಾ
ವಿದ್ಯಾ ಬಾಲನ್ ಮಾಡಿದ ಎರಡನೇ ಕೆಲಸವೆಂದರೆ ವ್ಯಾಯಾಮ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿರುವುದು. ಅಮುರಾ ಹೆಲ್ತ್ ನನ್ನನ್ನು ವರ್ಕೌಟ್ ಮಾಡುವುದನ್ನು ನಿಲ್ಲಿಸುವಂತೆ ಹೇಳಿದರು. ಈಗ ಎಲ್ಲರೂ ನನಗೆ 'ಓ ದೇವರೇ, ನೀವು ತುಂಬಾ ತೆಳ್ಳಗಿದ್ದೀರಿ' ಎಂದು ಹೇಳುತ್ತಿದ್ದಾರೆ. ಆದರೆ ಈ ಒಂದು ವರ್ಷ ನಾನು ವರ್ಕೌಟ್ ಮಾಡೇ ಇಲ್ಲ. ನಾನು ವ್ಯಾಯಾಮ ಮಾಡದ ಮೊದಲ ವರ್ಷ ಇದು. ಹೀಗಾಗಿ ಜನರು ನನ್ನನ್ನು 'ಹಾಗಾದರೆ ನೀವು ಈಗ ಏನು ಮಾಡುತ್ತಿದ್ದೀರಿ?' ಎಂದು ಕೇಳುತ್ತಾರೆ. ಅದಕ್ಕೆ ನಾನು, 'ಇಲ್ಲ, ನಾನು ಏನನ್ನೂ ಮಾಡುವುದಿಲ್ಲ' ಎಂದು ಹೇಳುತ್ತೇನೆ. ನಾನು ನನ್ನನ್ನು ಆನಂದಿಸುತ್ತಿದ್ದೇನೆ. ಎಂದಿಗಿಂತಲೂ ಆರೋಗ್ಯಕರವಾಗಿದ್ದೇನೆ. ನೀವು ವ್ಯಾಯಾಮ ಮಾಡಬಾರದು ಎಂದು ನಾನು ಹೇಳುತ್ತಿಲ್ಲ. ಆದರೆ ಯಾವುದೇ ಇಬ್ಬರು ವ್ಯಕ್ತಿಗಳು ಒಂದೇ ಅಲ್ಲ ಎಂಬುದನ್ನು ನೆನಪಿಡಿ. ನಾವು ನಮ್ಮ ವ್ಯಕ್ತಿತ್ವವನ್ನು ಗೌರವಿಸಬೇಕು ಎಂದು ಅವರು ಹೇಳಿಕೊಂಡಿದ್ದಾರೆ.