ಐಸಿ814 ಕಂದಹಾರ್ ಹೈಜಾಕ್ ವೆಬ್ ಸೀರೀಸ್ ವಿವಾದ; ಬಾಯ್ಕಾಟ್ ನೆಟ್‌ಫ್ಲಿಕ್ಸ್, ಬಾಯ್ಕಾಟ್ ಬಾಲಿವುಡ್ ಎಂದ ಹಿಂದೂಗಳು
Boycott Netflix: ಅನುಭವ್ ಸಿನ್ಹಾ ನಿರ್ದೇಶನದ ಐಸಿ814 ವೆಬ್ಸಿರೀಸ್ ನೆಟ್ಫ್ಲಿಕ್ಸ್ನಲ್ಲಿ ದೊಡ್ಡ ವಿವಾದಕ್ಕೆ ಗುರಿಯಾಗಿದ್ದು, ಹಿಂದೂಗಳನ್ನು ಭಯೋತ್ಪಾದಕಂತೆ ಬಿಂಬಿಸಿರುವುದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ವಿಚಾರವಾಗಿ ಟ್ರೆಂಡ್ ಆಗುತ್ತಿರುತ್ತದೆ. ಈ ಸಲ #BoycottNetflix ಎಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಜನಪ್ರಿಯ ಒಟಿಟಿ ನೆಟ್‌ಫ್ಲಿಕ್ಸ್ ಮತ್ತು ಬಾಲಿವುಡ್ ಅನ್ನು ಬಹಿಷ್ಕರಿಸಲು ನೆಟ್ಟಿಗರು ಎಕ್ಸ್ ಖಾತೆಯಲ್ಲಿ ಬಾಯ್ಕಾಟ್ ಹ್ಯಾಶ್ಟ್ಯಾಗ್ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಈ ಅಭಿಯಾನ ನಡೆಯುತ್ತಿದ್ದು, ಇಂದು (ಸೆಪ್ಟೆಂಬರ್ 3) ಉತ್ತುಂಗಕ್ಕೇರಿದೆ. ನೆಟ್‌ಫ್ಲಿಕ್ಸ್ ಮತ್ತು ಬಾಲಿವುಡ್ ಬಾಯ್ಕಾಟ್ ಟಾಪ್ ಟ್ರೆಂಡ್‌ಗಳಲ್ಲಿವೆ.
ನೆಟ್‌ಫ್ಲಿಕ್ಸ್ ಬಾಯ್ಕಾಟ್ ಕುರಿತು ದೊಡ್ಡ ಪ್ರಮಾಣದಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಇದಕ್ಕೆ ಕಾರಣ ಆ ಒಟಿಟಿಯಲ್ಲಿ ಇತ್ತೀಚೆಗೆ ಬಿಡುಗಡೆಯಾದ ಐಸಿ814 ಕಂದಹಾರ್ ಹೈಜಾಕ್ ವೆಬ್ ಸಿರೀಸ್. ಅನುಭವ್ ಸಿನ್ಹಾ ಅವರು ನಿರ್ದೇಶಿಸಿದ್ದಾರೆ. 2024ರ ಆಗಸ್ಟ್ 29ರಂದು ಬಿಡುಗಡೆಯಾದ ಈ ಸಿರೀಸ್ 1999ರ ಕಂದಹಾರ್ ಹೈಜಾಕ್ ಘಟನೆಯನ್ನು ಆಧರಿಸಿದೆ. ಆದರೆ ಈ ವೆಬ್ ಸಿರೀಸ್ನಲ್ಲಿ ಮುಸ್ಲಿಂ ಭಯೋತ್ಪಾದಕರ ಹೆಸರನ್ನು ಹಿಂದೂ ಎಂದು ಬದಲಾಯಿಸಿ ವಿವಾದ ಸೃಷ್ಟಿಸಿದ್ದಾರೆ. ನೆಟಿಜನ್‌ಗಳು ತೀವ್ರ ಕೋಪಗೊಂಡಿದ್ದು, ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನಿರ್ದೇಶಕ ಅನುಭವ್ ಸಿನ್ಹಾ ಮತ್ತು ಬರಹಗಾರ ತ್ರಿಶಾಂತ್ ಶ್ರೀವಾಸ್ತವ್ ಇದಕ್ಕೆ ಕಾರಣ ಎಂದು ಕೋಪಗೊಂಡಿದ್ದಾರೆ.
ಹೀಗಾಗಿ ಈ ವೆಬ್ ಸಿರೀಸ್ ಅನ್ನು ಸ್ಟ್ರೀಮ್ ಮಾಡುತ್ತಿರುವ ನೆಟ್‌ಫ್ಲಿಕ್ಸ್ ಅನ್ನು ಬಹಿಷ್ಕರಿಸಲು ಕರೆ ನೀಡಿದ್ದಾರೆ. ಈ ಸಿರೀಸ್ನಲ್ಲಿ 1999ರಲ್ಲಿ ಕಂದಹಾರ್ ಹೈಜಾಕ್ ಘಟನೆಯನ್ನು ತೋರಿಸಲಾಗಿದೆ. ಹೈಜಾಕ್ ಆದ ಭಯೋತ್ಪಾದಕರ ಹೆಸರು ಇಬ್ರಾಹಿಂ ಅಥರ್, ಶಾಹಿದ್ ಅಖ್ತರ್, ಸನ್ನಿ ಅಹ್ಮದ್, ಜಹೂರ್ ಮಿಸ್ತ್ರಿ, ಶಾಕಿರ್. ಆದರೆ ಈ ಸರಣಿಯಲ್ಲಿ ಭೋಲಾ ಮತ್ತು ಶಂಕರ್ ಎಂದು ಹೆಸರಿಟ್ಟಿದ್ದಕ್ಕೆ ಕೆಲವರು ಸಿಟ್ಟಾಗಿದ್ದಾರೆ. 1999ರ ಡಿಸೆಂಬರ್ ತಿಂಗಳಲ್ಲಿ ಇಂಡಿಯನ್ ಏರ್ಲೈನ್ಸ್ ವಿಮಾನ ಹೈಜಾಕ್ ಮಾಡಿದ್ದ ಭಯೋತ್ಪಾದಕರ ವೈಟ್ವಾಶಿಂಗ್ ಟೆರರಿಸಂ ಉದ್ದೇಶವನ್ನು ಕಾನೂನುಬದ್ಧವೆಂದು ತೋರಿಸಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.
ಪಾಕಿಸ್ತಾನಿ ಅಪಹರಣಕಾರರ ಮುಸ್ಲಿಮೇತರ ಹೆಸರುಗಳನ್ನು ಬಳಿಸಿಕೊಡಿದ್ದಾರೆ. ಮುಸ್ಲಿಮರು ಅಪಹರಣ ಮಾಡಿದ್ದರೆ, ಹಿಂದೂಗಳ ಹೆಸರನ್ನು ಎಳೆದು ತಂದಿದ್ದಾರೆ. ಇದು ಹಿಂದೂಫೋಬಿಯಾ (ಹಿಂದೂಗಳ ಬಗ್ಗೆ ಅನಗತ್ಯ ಭೀತಿ ಹುಟ್ಟಿಸುವುದು) ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಪಾಕಿಸ್ತಾನದ ಭಯೋತ್ಪಾದಕರು ಮಾಡಿದ ಹೇಯ ಕೃತ್ಯವನ್ನು ಹಿಂದೂಗಳು ಮಾಡಿರುವಂತೆ ಬಿಂಬಿಸಿರುವುದು ಎಷ್ಟು ಸರಿ? ನೈಜ ಘಟನೆಯನ್ನು ನೈಜವಾಗಿಯೇ ತೋರಿಸಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ದಾಖಲೆಗಳ ಪ್ರಕಾರ - ಭಯೋತ್ಪಾದಕರ ನಿಜವಾದ ಹೆಸರುಗಳು
ಇಬ್ರಾಹಿಂ ಅಥರ್ - ಬಹವಲ್ಪುರ್
ಶಾಹಿದ್ ಅಖ್ತರ್ ಸೈಯದ್, ಗುಲ್ಶನ್ ಇಕ್ಬಾಲ್ - ಕರಾಚಿ
ಸನ್ನಿ ಅಹ್ಮದ್ ಖಾಜಿ, ರಕ್ಷಣಾ ಪ್ರದೇಶ - ಕರಾಚಿ
ಮಿಸ್ತ್ರಿ ಜಹೂರ್ ಇಬ್ರಾಹಿಂ, ಅಖ್ತರ್ ಕಾಲೋನಿ - ಕರಾಚಿ
ಶಾಕಿರ್ - ಸುಕ್ಕೂರು ನಗರ
ಈ ಹೆಸರುಗಳನ್ನು 1999ರಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು ಅನುಮೋದಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಈ ದಾಖಲೆಗಳು ಲಭ್ಯವಿವೆ.
ಯಾರೆಲ್ಲಾ ನಟಿಸಿದ್ದಾರೆ ಈ ವೆಬ್ಸಿರೀಸ್ನಲ್ಲಿ?
ವಿಜಯ್ ವರ್ಮಾ, ಮನೋಜ್ ಪಹ್ವಾ, ಪಂಕಜ್ ಕಪೂರ್, ಕುಮುದ್ ಮಿಶ್ರಾ, ನಾಸಿರುದ್ದೀನ್ ಶಾ ಮತ್ತು ಅರವಿಂದ್ ಸ್ವಾಮಿ ಸೇರಿ ಬಾಲಿವುಡ್ನ ಸ್ಟಾರ್ ನಟರೇ ನಟಿಸಿರುವ ಈ ಸಿರೀಸ್ ಅನ್ನು ಬಹಿಷ್ಕರಿಸಬೇಕು. ಇದು ‘ತುಕ್ಡೆ ತುಕ್ಡೆ ಗ್ಯಾಂಗ್ ಒಂದು ಭಾಗ’ ಎಂದೂ ನೆಟ್ಟಿಗರು ಕರೆದಿದ್ದಾರೆ.
ಬಾಲಿವುಡ್ ಬಹಿಷ್ಕಾರಕ್ಕೂ ಕರೆ
ವಿಮಾನ ಹೈಜಾಕ್ ಮಾಡಿದವರು ಇಬ್ರಾಹಿಂ ಮತ್ತು ಶಾಹೀದ್ ಮುಂತಾದವರು. ಆದರೆ ಅನುಭವ್ ಸಿನ್ಹಾ ನಿರ್ದೇಶನದ IC814 ಸಿರೀಸ್ನಲ್ಲಿ ಭೋಲಾ ಮತ್ತು ಶಂಕರ್ ಎಂದು ಹೆಸರಿಡಲಾಗಿದೆ. ಅವರು ತುಕ್ಡೆ ತುಕ್ಡೆ ಗ್ಯಾಂಗ್‌ನ ಭಾಗವಾಗಿದ್ದು, ಮುಸ್ಲಿಮರು ಮಾಡಿದ ತಪ್ಪಿಗೆ ಹಿಂದೂಗಳ ಹೆಸರನ್ನು ಎಳೆದು ತಂದಿದ್ದಾರೆ. ಹಲವು ಹಿಂದಿ ಸಿನಿಮಾಗಳಲ್ಲಿ ಹಿಂದೂಗಳನ್ನು ತುಂಬಾ ಕೆಟ್ಟದಾಗಿ ತೋರಿಸಲಾಗಿದೆ. ಮುಸ್ಲಿಮರನ್ನು ಶ್ರೇಷ್ಠ ಎಂದು ಬಿಂಬಿಸಲಾಗಿದೆ ಎಂದು ಕೆಲವರು ಉದಾಹರಣೆ ಸಹಿತ ಪೋಸ್ಟ್ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಇನ್ನೂ ಕೆಲವರು ಪಿಕೆ ಚಿತ್ರದಲ್ಲಿ ಅಮೀರ್ ಖಾನ್ ಹಿಂದೂಗಳನ್ನು ಅವಮಾನಿಸಿದ ದೃಶ್ಯವನ್ನು ಹಂಚಿಕೊಳ್ಳುತ್ತಿದ್ದಾರೆ.
'ಐಸಿ814 ಅಪಹರಣಕಾರರ ಹೆಸರುಗಳನ್ನು ಶಂಕರ್ ಮತ್ತು ಭೋಲಾ ಎಂದು ಬದಲಾಯಿಸಲಾಗಿದೆ. ಅನುಭವ್ ಸಿನ್ಹಾ ಬಾಲಿವುಡ್ ಭಯೋತ್ಪಾದಕರನ್ನು ಗೆಲ್ಲಲು ಈ ರೀತಿ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಬಳಕೆದಾರರೊಬ್ಬರು ಚಾಟಿ ಬೀಸಿದ್ದರೆ, ಮತ್ತೊಬ್ಬರು ಬಾಲಿವುಡ್ ಅನ್ನು ಬಹಿಷ್ಕರಿಸುವ ಕರೆಯ ಮಧ್ಯೆ, #BoycottNetflix ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನೂ ಕೆಲವು ಬಳಕೆದಾರರು ಬಾಲಿವುಡ್ ಅನ್ನು "ಉರ್ದುವುಡ್" ಎಂದು ಕರೆದಿದ್ದಾರೆ.
ಇಲ್ಲಿನ ಉರ್ದು ಜನರು ಹಿಂದೂ ದೇವರುಗಳನ್ನೇ ಟಾರ್ಗೆಟ್ ಮಾಡಿ ಗೇಲಿ ಮಾಡುತ್ತಾರೆ. ಬೇರೆ ಧರ್ಮದವರ ಕುರಿತು ಉಸಿರೇ ಎತ್ತುವುದಿಲ್ಲ. ಆದರೆ ನಮ್ಮ ಹಿಂದೂಗಳೇ ಈ ಬಾಲಿವುಡ್ ಮಂದಿಯನ್ನು ಸ್ಟಾರ್ಗಳನ್ನಾಗಿ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಎಲ್ಲಾ ಬಾಲಿವುಡ್ ತಾರೆಯರು ಊಸರವಳ್ಳಿ ಕಾಲಕ್ಕೆ ಅನುಗುಣವಾಗಿ ತಮ್ಮ ಬಣ್ಣಗಳನ್ನು ಬದಲಾಯಿಸುತ್ತಾರೆ ಎಂದು ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ.
ಅನುಭವ್ ಸಿನ್ಹಾ ಅವರೇ ಚಿತ್ರದಲ್ಲಿ ಭಯೋತ್ಪಾದಕರು ಹಿಂದೂ ಶಂಕರ್ ಮತ್ತು ಭೋಲಾ ಎಂದು ಏಕೆ ಹೆಸರಿಸಿರೋದೇಕೆ? ಹಿಂದೂಗಳು ಭಯೋತ್ಪಾದಕರು ಎಂದರ್ಥ ನೀಡಲು ಹೊರಟಿದ್ದೀರಾ? ಆದರೆ ಭಯೋತ್ಪಾದಕ ದಾಳಿ ನಡೆಸಿದ ಮುಸ್ಲಿಮರು ನಿರಪರಾಧಿಗಳು ಎಂದು ನೀವು ಹೇಳಲು ಬಯಸುವಿರಾ? ಎಂದು ನಿರ್ದೇಶಕರಿಗೆ ಮತ್ತೊಬ್ಬ ನೆಟ್ಟಿಗ ಪ್ರಶ್ನಿಸಿದ್ದಾರೆ.
ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ ಎಂಬ ಪರಿಕಲ್ಪನೆಯನ್ನು ಉದಾರವಾದಿಗಳು ಈ ರೀತಿ ಮರೆಮಾಚುತ್ತಾರೆ. ಹೊಸ ನೆಟ್‌ಫ್ಲಿಕ್ಸ್ ವೆಬ್ ಸರಣಿ ಐಸಿ814 ದಿ ಕಂದಹಾರ್ ಹೈಜಾಕ್ ಹಿಂದಿರುವ ಅನುಭವ್ ಸಿನ್ಹಾ ಇತಿಹಾಸದ ಈ ನಿರ್ಣಾಯಕ ಘಟನೆಯ ಸುತ್ತಲಿನ ಸತ್ಯಗಳನ್ನು ಏಕೆ ಬದಲಾಯಿಸುತ್ತಿದ್ದಾರೆ. ಮಹತ್ವದ ಐತಿಹಾಸಿಕ ಘಟನೆಯ ತಿರುಚುವುದರಿಂದ ಉಂಟಾಗುವ ಪರಿಣಾಮದ ಕುರಿತು ನಿಮಗೆ (ನೆಟ್‌ಫ್ಲಿಕ್ಸ್) ಕಾಳಜಿ ಇಲ್ಲವೇ? ಅನುಭವ್ ಸಿನ್ಹಾ ಅವರೇ ತಲೆಯಲ್ಲಿ ಏನನ್ನು ಯೋಚಿಸಿದ್ದೀರಿ? ನಿಮ್ಮ ಮೇಲೆ ಒತ್ತಡ ಇತ್ತೇ? ವೆಬ್ ಸಿರೀಸ್ನಲ್ಲಿ ಹೈಜಾಕ್ ಮಾಡಿದವರ ಹೆಸರನ್ನು ಶಂಕರ್ ಮತ್ತು ಭೋಲಾ ಎಂದು ಬದಲಾಯಿಸಿದ್ದೇಕೆ? ಎಂದು ಕೆಲವರು ಪ್ರಶ್ನಿಸಿದ್ದಾರೆ. ಪಿಎಂಒ, ಎನ್ಐಎ, ಪಿಐಬಿ ಸೇರಿದಂತೆ ಹಲವರಿಗೆ ಟ್ಯಾಗ್ ಮಾಡಿ, ಸತ್ಯ ತಿರುಚಿದವರ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.