Drone Prathap: ತಾಳ್ಮೆಗೆ ಮಿತಿ ಇದೆ; ಯೂಟ್ಯೂಬರ್‌ ಮಧು, ಉಡಾಳ್‌ ಪವ್ಯಾ ಇತರರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಿದ ಡ್ರೋಣ್‌ ಪ್ರತಾಪ್‌
ಕನ್ನಡ ಸುದ್ದಿ  /  ಮನರಂಜನೆ  /  Drone Prathap: ತಾಳ್ಮೆಗೆ ಮಿತಿ ಇದೆ; ಯೂಟ್ಯೂಬರ್‌ ಮಧು, ಉಡಾಳ್‌ ಪವ್ಯಾ ಇತರರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಿದ ಡ್ರೋಣ್‌ ಪ್ರತಾಪ್‌

Drone Prathap: ತಾಳ್ಮೆಗೆ ಮಿತಿ ಇದೆ; ಯೂಟ್ಯೂಬರ್‌ ಮಧು, ಉಡಾಳ್‌ ಪವ್ಯಾ ಇತರರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಿದ ಡ್ರೋಣ್‌ ಪ್ರತಾಪ್‌

ನನ್ನ ಕಂಪನಿಯ ಪ್ರತಿಷ್ಠೆ ಹಾಳು ಮಾಡಿದ್ದಕ್ಕೆ 10 ಲಕ್ಷ, ಮಾನಸಿಕವಾಗಿ ನನ್ನನ್ನು ಹಿಂಸೆ ಮಾಡಿದ್ದಕ್ಕೆ 10 ಲಕ್ಷ, ಬ್ಯುಸ್ನೆಸ್‌ನಲ್ಲಿ ಲಾಸ್‌ ಮಾಡಿದ್ದಕ್ಕೆ 10 ಲಕ್ಷ ಒಟ್ಟು 30 ಲಕ್ಷ ರೂಪಾಯಿಗೆ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದೇನೆ ಎಂದು ಪ್ರತಾಪ್‌ ಇನ್‌ಸ್ಟಾಗ್ರಾಮ್‌ ಲೈವ್‌ನಲ್ಲಿ ಹೇಳಿದ್ದಾರೆ.

ದಿವ್ಯಾ ವಸಂತ್‌, ಉಡಾಳ್‌ ಪವ್ಯಾ, ಮಧು, ಸಂದೀಪ್‌ ಎಂಬುವರ ಮೇಲೆ ಪ್ರತಾಪ್‌ ಕೇಸ್‌
ದಿವ್ಯಾ ವಸಂತ್‌, ಉಡಾಳ್‌ ಪವ್ಯಾ, ಮಧು, ಸಂದೀಪ್‌ ಎಂಬುವರ ಮೇಲೆ ಪ್ರತಾಪ್‌ ಕೇಸ್‌ (PC: Drone Pratap)

ಡ್ರೋನ್‌ ಪ್ರತಾಪ್‌ ಯಾರಿಗೆ ತಾನೇ ಗೊತ್ತಿಲ್ಲ. ಕೆಲವು ದಿನಗಳ ಹಿಂದೆ ಪ್ರತಾಪ್‌ ಬಹಳ ಸುದ್ದಿಯಾಗಿದ್ದರು. ನಾನು ಯುವ ವಿಜ್ಞಾನಿ, ಡ್ರೋಣ್‌ ತಯಾರಿಸಿದ್ದೇನೆ ಎಂದು ಅನೇಕ ಸಂದರ್ಶನಗಳಲ್ಲಿ ಪ್ರತಾಪ್‌ ಹೇಳಿದ್ದರು. ಆದರೆ ಪ್ರತಾಪ್‌ ಹೇಳುತ್ತಿರುವುದು ಸುಳ್ಳು ಎಂದು ಕೆಲವರು ವಾದಿಸಿದ್ದರು. ನಾನು ಆ ಯುವಕನ ಮಾತನ್ನು ನಂಬಿದ್ದೆ ಎಂದು ನಟ ಜಗ್ಗೇಶ್‌ ಕೂಡಾ ಬೇಸರ ವ್ಯಕ್ತಪಡಿಸಿದ್ದರು.

ಯೂಟ್ಯೂಬರ್‌, ಮಾಧ್ಯಮಗಳ ವಿರುದ್ಧ ಪ್ರತಾಪ್‌ ಅಸಮಾಧಾನ

ಮಾಧ್ಯಮಗಳಲ್ಲಿ ಬಹಳ ಸುದ್ದಿಯಾದ ಬಳಿಕ ಪ್ರತಾಪ್‌ ಬಹಳ ಟ್ರೋಲ್‌ ಆಗಿದ್ದರು. ಇದಾದ ನಂತರ ಕೆಲವು ದಿನಗಳಿಂದ ಪ್ರತಾಪ್‌ ಸುದ್ದಿಯಲ್ಲಿರಲಿಲ್ಲ. ಈಗ ಅವರು ಮತ್ತೆ ವಾಪಸಾಗಿದ್ದಾರೆ. ಇತ್ತೀಚೆಗೆ ಪ್ರತಾಪ್‌ ತಾವೇ ತಯಾರಿಸಿದ ಡ್ರೋಣ್‌ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಡ್ರೋಣ್‌ಗೆ ಪೂಜೆ ಮಾಡುವ ವಿಡಿಯೋ ಹಂಚಿಕೊಂಡಿದ್ದ ಪ್ರತಾಪ್‌ ''ನಮ್ಮ ಡ್ರೋನಾರ್ಕ್ ಏರೋಸ್ಪೇಸ್ ಸಂಸ್ಥೆ ವತಿಯಿಂದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತಾಳಗವಡಿ ಗ್ರಾಮದಲ್ಲಿ ದ್ರೋಣ್‌ ಯಾತ್ರೆ ಆರಂಭವಾಯಿತು ಎಂದು ಬರೆದುಕೊಂಡಿದ್ದರು''. ಆದರೆ ಬುಧವಾರ ಇನ್‌ಸ್ಟಾಗ್ರಾಮ್‌ ಲೈವ್‌ಗೆ ಬಂದಿದ್ದ ಪ್ರತಾಪ್‌ ಕೆಲವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಯೂಟ್ಯೂಬರ್‌ ಮಧು ವಿರುದ್ಧ ಮಾನನಷ್ಟ ಮೊಕದ್ದಮೆ

''ಕೆಲವೊಂದು ಮಾಧ್ಯಮಗಳು, ಯೂಟ್ಯೂಬ್‌ ವಾಹಿನಿಗಳು ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಕಪೋಲಕಲ್ಪಿತ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ನಾನು ಸುಳ್ಳುಗಾರ, ಫ್ರಾಡ್‌, ಫೇಕ್‌ ಎಂದೆಲ್ಲಾ ಹೇಳುತ್ತಿದ್ದಾರೆ. ನನ್ನ ತಾಳ್ಮೆಗೂ ಒಂದು ಮಿತಿ ಇದೆ. ಜನಪ್ರತಿನಿಧಿಗಳನ್ನಂತೂ ಯಾರೂ ಪ್ರಶ್ನಿಸುವುದಿಲ್ಲ. ಆದರೆ ನನ್ನ ಪಾಡಿಗೆ ನಾನು ಏನೋ ಮಾಡಿಕೊಂಡಿದ್ದರೂ ನನ್ನ ಬಗ್ಗೆ ಇಲ್ಲಸಲ್ಲದ ಸುದ್ದಿ ಪ್ರಸಾರ ಮಾಡುತ್ತಿದ್ದಾರೆ. ಮಧು ಎಂಬ ಯೂಟ್ಯೂಬರ್ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದೇನೆ.''

30 ಲಕ್ಷಕ್ಕೆ ಮಾನನಷ್ಟ ಮೊಕದ್ದಮೆ

''ನನ್ನ ಕಂಪನಿಯ ಪ್ರತಿಷ್ಠೆ ಹಾಳು ಮಾಡಿದ್ದಕ್ಕೆ 10 ಲಕ್ಷ, ಮಾನಸಿಕವಾಗಿ ನನ್ನನ್ನು ಹಿಂಸೆ ಮಾಡಿದ್ದಕ್ಕೆ 10 ಲಕ್ಷ, ಬ್ಯುಸ್ನೆಸ್‌ನಲ್ಲಿ ಲಾಸ್‌ ಮಾಡಿದ್ದಕ್ಕೆ 10 ಲಕ್ಷ ಒಟ್ಟು 30 ಲಕ್ಷ ರೂಪಾಯಿಗೆ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದೇನೆ. ನೀವು ಸುಳ್ಳಾ , ನಾನು ಸುಳ್ಳಾ ನೋಡೋಣ, ಬನ್ನಿ ಕೋರ್ಟಿನಲ್ಲಿ ಎಲ್ಲಾ ನಿರ್ಧಾರ ಆಗುತ್ತೆ. ಇನ್ಮುಂದೆ ನ್ಯಾಯಾಲಯದಲ್ಲಿ ಭೇಟಿ ಆಗೋಣ. ನಮ್ಮ ರಾಜ್ಯದ ರೈತರಿಗೆ ಸಹಾಯ ಆಗಲಿ ಎಂದು ನಾನು ಅಗ್ರಿಕಲ್ಚರ್‌ ಡ್ರೋಣ್‌ ತಯಾರಿಸುತ್ತಿದ್ದೇನೆ. ಇಷ್ಟಾದರೂ ನನಗೆ ವೈಜ್ಞಾನಿಕ ಜ್ಞಾನ ಇಲ್ಲ ಎಂದೆಲ್ಲಾ ಆರೋಪ ಮಾಡುತ್ತಿದ್ದಾರೆ.''ʼ

ಉಡಾಳ್‌ ಪವ್ಯಾ, ದಿವ್ಯಾ ವಸಂತ್‌ ಮೇಲೆ ಕೂಡಾ ಕೇಸ್

''ಇವರೊಂದಿಗೆ ಯೂಟ್ಯೂಬರ್‌ ಸಂದೀಪ್‌, ಉತ್ತರ ಕರ್ನಾಟಕದ ಉಡಾಳ್‌ ಪವ್ಯಾ, ಖಾಸಗಿ ವಾಹಿನಿಯ ದಿವ್ಯಾ ವಸಂತ ಎಂಬುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಫೈಲ್‌ ಮಾಡುತ್ತಿದ್ದೇನೆ. ನಿಮ್ಮೆಲ್ಲರ ಸಪೋರ್ಟ್‌ ನನಗೆ ಬೇಕು'' ಎಂದು ಡ್ರೋಣ್‌ ಪ್ರತಾಪ್‌ ಮನವಿ ಮಾಡಿದ್ದಾರೆ. ಪ್ರತಾಪ್‌ ವಿಡಿಯೋಗೆ ಪರ ವಿರೋಧ ಕಾಮೆಂಟ್‌ ವ್ಯಕ್ತವಾಗುತ್ತಿದೆ. ನಿಮ್ಮ ಪರವಾಗಿ ನಾವು ನಿಲ್ಲುತ್ತೇವೆ ಎಂದು ಕೆಲವರು ಕಾಮೆಂಟ್‌ ಮಾಡಿದರೆ ಇನ್ನೂ ಕೆಲವರು ಮತ್ತೆ ಪ್ರತಾಪ್‌ ಕಾಲೆಳೆದಿದ್ದಾರೆ.

Whats_app_banner