Year End 2024: ಸ್ಯಾಂಡಲ್‌ವುಡ್ ನಟಿಯರ ವಾರ್ಷಿಕ ವರದಿ; ಮರ ಸುತ್ತುವುದಕ್ಕಷ್ಟೇ ಅಲ್ಲ, ಈ ವರ್ಷ ಗಮನ ಸೆಳೆದ ನಾಯಕಿಯರು ಇವರೇ
Year End 2024: ಈ ವರ್ಷ ಬಿಡುಗಡೆಯಾದ ಬಹಳಷ್ಟು ಚಿತ್ರಗಳಲ್ಲಿ ನಾಯಕಿಯರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದರು. ಈ ನಡುವೆ ನಾಯಕಿಯರೆಂದರೆ ಬರೀ ಮರ ಸುತ್ತುವುದಕ್ಕಷ್ಟೇ ಸೀಮಿತ ಎಂಬ ಅಪವಾದದ ನಡುವೆಯೇ ಒಂದಿಷ್ಟು ನಟಿಯರು ಈ ವರ್ಷ ತಮ್ಮ ಅಭಿನಯ ಮತ್ತು ಚೆಲುವಿನಿಂದ ಗಮನಸೆಳೆದರು.
Sandalwood Leading Actresses: ಈ ವರ್ಷ ಕನ್ನಡ ಚಿತ್ರರಂಗಕದಲ್ಲಿ 220ಕ್ಕೂ ಹೆಚ್ಚು ಚಿತರಗಳು ಬಿಡುಗಡೆಯಾಗಿವೆ. ಈ ಪೈಕಿ ಬೆರಳಣಿಕೆಯಷ್ಟು ಚಿತ್ರಗಳು ಗಳಿಕೆ ಮಾಡಿದ್ದು ಬಿಟ್ಟರೆ, ಮಿಕ್ಕಂತೆ ಹೆಚ್ಚು ಯಶಸ್ಸುಗಳು ಸಿಗುವುದಿಲ್ಲ. ಅದರಲ್ಲೂ ಸ್ವಲ್ಪ ಗಳಿಕೆ ಮಾಡಿದ ಚಿತ್ರಗಳೆಲ್ಲವೂ ಸ್ಟಾರ್ ಚಿತ್ರಗಳೇ ಎಂಬುದು ಗಮನಾರ್ಹ. ಶಿವರಾಜಕುಮಾರ್, ಶ್ರೀಮುರಳಿ, ಗಣೇಶ್, ‘ದುನಿಯಾ’ ವಿಜಯ್ ತಮ್ಮ ಚಿತ್ರಗಳಿಂದ ಗಮನಸೆಳೆದರು. ಇನ್ನು, ನಾಯಕಿಯರು ವಿಷಯದ ಬಗ್ಗೆ ಹೇಳುವುದಾದರೆ, ಬಿಡುಗಡೆಯಾದ ಬಹಳಷ್ಟು ಚಿತ್ರಗಳಲ್ಲಿ ನಾಯಕಿಯರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದರು. ನಾಯಕಿಯರೆಂದರೆ ಬರೀ ಮರ ಸುತ್ತವುದಕ್ಕಷ್ಟೇ ಸೀಮಿತ ಎಂಬ ಅಪವಾದದ ನಡುವೆಯೇ ಒಂದಿಷ್ಟು ನಟಿಯರು ಈ ವರ್ಷ ತಮ್ಮ ಅಭಿನಯ ಮತ್ತು ಚೆಲುವಿನಿಂದ ಗಮನಸೆಳೆದರು.
ರುಕ್ಮಿಣಿಗೆ ಯಾಕೋ ನಾಯಕರೇ ಸಿಗುವುದಿಲ್ಲ
ಈ ವರ್ಷ ಪ್ರಮುಖವಾಗಿ ಎರಡು ದೊಡ್ಡ ಚಿತ್ರಗಳಲ್ಲಿ ನಟಿಸಿದ ನಟಿ ಎಂದರೆ ರುಕ್ಮಿಣಿ ವಸಂತ್. ಶಿವರಾಜಕುಮಾರ್ ಅಭಿನಯದ ‘ಭೈರತಿ ರಣಗಲ್’ ಮತ್ತು ಶ್ರೀಮುರಳಿ ಅಭಿನಯದ ‘ಬಘೀರ’ ಚಿತ್ರಗಳಲ್ಲಿ ರುಕ್ಮಿಣಿ ವಸಂತ್ ನಟಿಸಿದ್ದರು. ಎರಡೂ ಚಿತ್ರಗಳಲ್ಲಿ ಅವರು ವೈದ್ಯರಾಗಿ ಕಾಣಿಸಿಕೊಂಡಿದ್ದರು ಮತ್ತು ಎರಡೂ ಚಿತ್ರಗಳಿಗೆ ನಾಯಕರು ಸಿಗುವುದಿಲ್ಲ. ಕಳೆದ ವರ್ಷ ಬಿಡುಗಡೆಯಾದ ‘ಸಪ್ತ ಸಾಗರದಾಚೆ ಎಲ್ಲೋ’ ಮತ್ತು ‘ಬಾನದಾರಿಯಲ್ಲಿ’ ಚಿತ್ರಗಳಲ್ಲೂ ನಾಯಕ ಸಿಕ್ಕಿರಲಿಲ್ಲ. ಈ ಪೈಕಿ ‘ಬಾನದಾರಿಯಲ್ಲಿ’ ಅವರದ್ದು ದುರಂತ ಅಂತ್ಯವಾದರೆ, ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಗಳಲ್ಲಿ ನಾಯಕನನ್ನು ಬೇರೊಬ್ಬರಿಗೆ ಬಿಟ್ಟು ಕೊಡುತ್ತಾರೆ. ಅದು ಈ ವರ್ಷ ಸಹ ರಿಪೀಟ್ ಆಯಿತು. ಈ ವರ್ಷ ‘ಭೈರತಿ ರಣಗಲ್’ ಚಿತ್ರದಲ್ಲಿ ಅವರು ನಾಯಕನನ್ನು ಬಿಟ್ಟು ಬೇರೊಬ್ಬರನ್ನು ಮದುವೆಯಾದರೆ, ‘ಬಘೀರ’ ಚಿತ್ರದಲ್ಲಿ ದುರಂತ ಅಂತ್ಯವನ್ನು ಕಾಣುತ್ತಾರೆ. ಈ ವರ್ಷ ಎರಡು ಚಿತ್ರಗಳು ಬಿಡುಗಡೆಯಾಗವ ಮೂಲಕ ರುಕ್ಮಿಣಿ ವಸಂತ್ ಖಾತೆಯಲ್ಲಿದ್ದ ಎಲ್ಲಾ ಕನ್ನಡ ಚಿತ್ರಗಳು ಮುಗಿದಂತಾಗಿವೆ. ಸದ್ಯ ಅವರು ತೆಲುಗು ಮತ್ತು ತಮಿಳಿನಲ್ಲಿ ಬ್ಯುಸಿಯಾಗಿದ್ದಾರೆ.
ಚೆಲುವು ಮತ್ತು ಅಭಿನಯದಿಂದ ಗಮನಸೆಳೆದ ಮಾಳವಿಕಾ
‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಮಾಳವಿಕಾ ನಾಯರ್, ಈ ವರ್ಷ ಗಮನ ಸೆಳೆದ ಮತ್ತೊಬ್ಬ ನಟಿ. ಮೂಲತಃ ಮಲಯಾಳಿಯಾದ ಮಾಳವಿಕಾಗೆ ಕನ್ನಡದಲ್ಲಿ ಇದು ಮೊದಲನೆಯ ಚಿತ್ರ. ಕಳೆದ 12 ವರ್ಷಗಳಿಂದ ಮಲಯಾಳಂ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದ ಮಾಳವಿಕಾ, ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಮೂಲಕ ಕನ್ನಡಕ್ಕೆ ಬಂದರು. ಈ ಚಿತ್ರದಲ್ಲಿ ಪ್ರಣಯ ಎಂಬ ಪಾತ್ರದಲ್ಲಿ ನಟಿಸಿದ್ದ ಮಾಳವಿಕಾ ತಮ್ಮ ಚೆಲುವು ಮತ್ತು ಅಭಿನಯದಿಂದ ಗಮನಸೆಳೆದರು. ಜೊತೆಗೆ ಅವರು ಹೆಜ್ಜೆ ಹಾಕಿದ ‘ಚಿನ್ನಮ್ಮ …’ ಮತ್ತು ‘ದ್ವಾಪರಾ …’ ಹಾಡುಗಳು ಜನಪ್ರಿಯವಾಗಿ ಅವರಿಗೆ ಇನ್ನಷ್ಟು ಜನಪ್ರಿಯತೆ ತಂದುಕೊಟ್ಟಿತು. ಕನ್ನಡದ ಮೊದಲ ಚಿತ್ರದಲ್ಲಿ ಮಾಳವಿಕಾ ಗಮನಸೆಳೆದಿದ್ದರೂ, ಆ ನಂತರ ಯಾವೊಂದು ಚಿತ್ರದಲ್ಲೂ ನಟಿಸುತ್ತಿರುವ ಸುದ್ದಿ ಇಲ್ಲ.
ಸ್ವಲ್ಪ ಮುಗ್ಧತೆ, ಸ್ವಲ್ಪ ಪ್ರೌಢಿಮೆಯ ಸ್ವಾತಿಷ್ಟ
‘ಒಂದು ಸರಳ ಪ್ರೇಮಕಥೆ’ ಚಿತ್ರದಲ್ಲಿ ವಿನಯ್ ರಾಜಕುಮಾರ್ ಅವರಿಗಿಂತ ಗಮನಸೆಳೆದವರೆಂದರೆ ನಾಯಕಿ ಸ್ವಾತಿಷ್ಟ ಕೃಷ್ಣನ್. ತಮಿಳಿನ ‘ಹಾಫ್ ಬಾಯ್ಲ್’ ಚಿತ್ರದ ಮೂಲಕ ಏಳು ವರ್ಷಗಳ ಹಿಂದೆ ಚಿತ್ರರಂಗಕ್ಕೆ ಬಂದ ಸ್ವಾಧಿಷ್ಟಗೆ ‘ಒಂದು ಸರಳ ಪ್ರೇಮಕಥೆ’ ಕನ್ನಡದ ಮೊದಲ ಚಿತ್ರವಾಗಿದೆ. ಈ ಚಿತ್ರದಲ್ಲಿನ ಅನುರಾಗ ಎಂಬ ಪಾತ್ರದಲ್ಲಿ ಅವರು ತೋರಿಸಿದ ಮುಗ್ಧತೆ ಮತ್ತು ಪ್ರೌಢಿಮೆಗೆ ಪ್ರೇಕ್ಷಕರು ಖುಷಿಯಾಗಿದ್ದರು. ಈ ಚಿತ್ರದ ನಂತರ ಸ್ವಾಧಿಷ್ಟ, ರಾಜ್ ಬಿ. ಶೆಟ್ಟಿ ಅಭಿನಯದ ‘ರಕ್ಕಸಪುರದೊಳ್’ ಚಿತ್ರದಲ್ಲೂ ನಾಯಕಿಯಾಗಿ ನಟಿಸುತ್ತಿರುವುದು ವಿಶೇಷ.
ಮೊದಲ ಚಿತ್ರದಲ್ಲೇ ಪ್ರಶಸ್ತಿ ಸಿಗಲಿ ಎಂಬ ಹಾರೈಕೆ
ಕಿರುತೆರೆಯಲ್ಲಿ ತಮ್ಮ ಪ್ರತಿಭೆ ಮತ್ತು ಚೆಲುವಿನಿಂದ ದೊಡ್ಡ ಹೆಸರು ಮಾಡಿದವರು ಅಂಕಿತಾ ಅಮರ್. ‘ಇಬ್ಬನಿ ತಬ್ಬಿದ ಇಳೆಯಲಿ’ ಅವರು ಹಿರಿತೆರೆಯಲ್ಲಿ ನಟಿಸಿದ ಮೊದಲ ಚಿತ್ರವಾದರೂ, ಮೊದಲು ಬಿಡುಗಡೆಯಾಗಿದೆ ‘ಮೈ ಹೀರೋ’ ಎಂಬ ಹೊಸಬರ ಚಿತ್ರ. ಈ ಎರಡೂ ಚಿತ್ರಗಳಲ್ಲಿ ಅಂಕಿತಾ ತಮ್ಮ ಅಭಿನಯದಿಂದ ಗಮನಸೆಳೆದಿದ್ದಾರೆ. ಈ ಪೈಕಿ ‘ಮೈ ಹೀರೋ’ ಚಿತ್ರದಲ್ಲಿ ಅವರದ್ದು ಒಂದು ಪುಟ್ಟ ಪಾತ್ರ. ಆದರೆ, ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದಲ್ಲಿ ಅವರದ್ದು ಅನಾಹಿತ ಎಂಬ ಕ್ಯಾನ್ಸರ್ ರೋಗಿಯ ಪಾತ್ರ. ಈ ಪಾತ್ರವನ್ನು ಅವರು ಅದೆಷ್ಟು ಅದ್ಭುತವಾಗಿ ನಿಭಾಯಿಸಿದ್ದರೆಂದರೆ, ಅವರ ಅಭಿನಯಕ್ಕೆ ಪ್ರಶಸ್ತಿ ಗ್ಯಾರಂಟಿ ಎಂದು ನಿರ್ಮಾಪಕ ರಕ್ಷಿತ್ ಶೆಟ್ಟಿ ಸಹ ಭವಿಷ್ಯ ನುಡಿದಿದ್ದರು. ಅದಕ್ಕೆ ಪೂರಕವಾಗಿ ಅಂಕಿತಾ ಸಹ ನೆನಪಿನಲ್ಲುಳಿಯುವಂತಹ ಅಭಿನಯ ನೀಡಿದ್ದರು. ಈ ಚಿತ್ರದ ನಂತರ ಅವರು ಒಂದಿಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಚಿತ್ರ ಬಿಡುಗಡೆಯಾಗಿ ಮೂರ್ನಾಲ್ಕು ತಿಂಗಳಾದರೂ, ಅವರು ಯಾವೊಂದು ಹೊಸ ಚಿತ್ರ ಒಪ್ಪಿದ ಸುದ್ದಿ ಇಲ್ಲ.
ಮೊದಲ ಚಿತ್ರದಲ್ಲೇ ನಾಲ್ಕು ಶೇಡ್‍ಗಳು
‘ಜೂನಿ’ ಚಿತ್ರ ನೋಡಿದವರೆಲ್ಲಾ, ಆ ಚಿತ್ರದ ನಾಯಕಿ ರಿಷಿಕಾ ನಾಯಕ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಮೊದಲ ಚಿತ್ರದಲ್ಲೇ ನಾಲ್ಕು ಶೇಡ್‍ಗಳಲ್ಲಿ ನಟಿಸುವುದು ಸುಲಭದ ಕೆಲಸವೇನಲ್ಲ. ಇಂಥದ್ದೊಂದು ಸವಾಲಿನ ಕೆಲಸವನ್ನು ರಿಷಿಕಾ ಸ್ವೀಕರಿಸಿದ್ದಷ್ಟೇ ಅಲ್ಲ, ಅದನ್ನು ಚೆನ್ನಾಗಿ ನಿಭಾಯಿಸಿದ್ದು ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಇದಾದ ಮೇಲೆ ಬಿಡುಗಡೆಯಾದ ‘ಪುರುಷೋತ್ತಮನ ಪ್ರಸಂಗ’ ಚಿತ್ರದಲ್ಲೂ ರಿಷಿಕಾ ತಮ್ಮ ಪಾತ್ರದ ಮೂಲಕ ಗಮನಸೆಳೆದು ಭರವಸೆ ಮೂಡಿಸಿದ್ದರು. ಕೆಲವು ಆ್ಯಂಗಲ್‍ಗಳಲ್ಲಿ ರಾಗಿಣಿಯನ್ನು ನೆನಪಿಸುವ ರಿಷಿಕಾ, ಮೂಲತಃ ಮಂಗಳೂರಿನವರು. ಈ ಎರಡು ಚಿತ್ರಗಳಲ್ಲದೆ, ಅವರು ’ನಿದ್ರಾದೇವಿ Next Door’ ಎಂಬ ಚಿತ್ರದಲ್ಲೂ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಈ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬಬೇಕಿದೆ.
ಲೇಡಿ ಪೊಲೀಸ್ ಪಾತ್ರಕ್ಕೆ ಸಿಕ್ಕ ಪ್ರಿಯಾ
‘ಭೀಮ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದವರು ಅಶ್ವಿನಿ ಅಂಬರೀಶ್. ಆದರೆ, ಅವರಿಗಿಂದ ಹೆಚ್ಚು ಗಮನಸೆಳೆದಿದ್ದು ಪ್ರಿಯಾ ಶಟಮರ್ಷನ್. ಇನ್‍ಸ್ಪೆಕ್ಟರ್ ಗಿರಿಜಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾ ಶಟಮರ್ಷನ್, ಆ ನಂತರ ‘ಕಸ್ಟಡಿ’ ಎಂಬ ಚಿತ್ರದಲ್ಲೂ ಪೊಲೀಸ್ ಪಾತ್ರದಲ್ಲಿ ನಟಿಸುವುದಕ್ಕೆ ಮುಂದಾಗಿದ್ದರು. ಇದೀಗ ಇನ್ನೊಂದು ಚಿತ್ರದಲ್ಲಿ ಅವರು ಮತ್ತೆ ಪೊಲೀಸ್ ಯೂನಿಫಾರ್ಮ್ ತೊಟ್ಟಿದ್ದಾರೆ. ಚಿತ್ರಕ್ಕೆ ‘ಕುಂಭ ಸಂಭವ’ ಎಂಬ ಹೆಸರಿಡಲಾಗಿದ್ದು, ಚಿತ್ರದ ಮುಹೂರ್ತ ಇತ್ತೀಚೆಗೆ ಸದ್ದಿಲ್ಲದೆ ಮುಗಿದಿದೆ. ಅಲ್ಲಿಗೆ ಪ್ರಿಯಾ, ಕನ್ನಡದಲ್ಲಿ ಲೇಡಿ ಪೊಲೀಸ್ ಪಾತ್ರಗಳಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚುಹೆಚ್ಚು ಬ್ರಾಂಡ್ ಆಗುತ್ತಿದ್ದಾರೆ.
ಇದು ಈ ವರ್ಷ ಗಮನಸೆಳೆದ ಕೆಲವು ನಾಯಕಿಯರ ಪಟ್ಟಿ. ಇದಲ್ಲದೆ ‘ಉಪಾಧ್ಯಕ್ಷ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಮಲೈಕಾ ವಸುಪಾಲ್, ‘ಗೌರಿ’ ಚಿತ್ರದ ಮೂಲಕ ಬಂದ ಸಾನ್ಯಾ ಅಯ್ಯರ್, ‘ಬ್ಲಿಂಕ್’ ಚಿತ್ರದ ಮಂದಾರ ಬಟ್ಟಲಹಳ್ಳಿ, ‘ಲೈನ್‍ಮ್ಯಾನ್’, ‘ಮೇಘ’ ಮತ್ತು ‘ಕೆಟಿಎಂ’ ಚಿತ್ರಗಳಲ್ಲಿ ನಟಿಸಿದ ಕಾಜಲ್ ಕುಂದರ್ ಮುಂತಾದವರು ತಮ್ಮದೇ ರೀತಿಯಲ್ಲಿ ಗಮನಸೆಳೆದಿದ್ದಾರೆ.
ಬರಹ: ಚೇತನ್ ನಾಡಿಗೇರ್
ವಿಭಾಗ