ದೆಹಲಿ ಅಬಕಾರಿ ನೀತಿ ಕೇಸ್‌; ಅರವಿಂದ ಕೇಜ್ರಿವಾಲ್ ವಿಚಾರಣೆಗೆ ಇಡಿಗೆ ಅನುಮತಿ ನೀಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ದೆಹಲಿ ಅಬಕಾರಿ ನೀತಿ ಕೇಸ್‌; ಅರವಿಂದ ಕೇಜ್ರಿವಾಲ್ ವಿಚಾರಣೆಗೆ ಇಡಿಗೆ ಅನುಮತಿ ನೀಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

ದೆಹಲಿ ಅಬಕಾರಿ ನೀತಿ ಕೇಸ್‌; ಅರವಿಂದ ಕೇಜ್ರಿವಾಲ್ ವಿಚಾರಣೆಗೆ ಇಡಿಗೆ ಅನುಮತಿ ನೀಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

Delhi Excise Policy Case: ದೆಹಲಿ ಅಬಕಾರಿ ನೀತಿ ಕೇಸ್‌ನಲ್ಲಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ, ಎಎಪಿ ಸಂಚಾಲಕ ಅರವಿಂದ ಕೇಜ್ರೀವಾಲ್ ಅವರ ವಿಚಾರಣೆ ನಡೆಸುವುದಕ್ಕೆ ಇಡಿಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನುಮತಿ ನೀಡಿದ್ದಾರೆ.

ದೆಹಲಿ ಅಬಕಾರಿ ನೀತಿ ಕೇಸ್‌; ಅರವಿಂದ ಕೇಜ್ರಿವಾಲ್ ವಿಚಾರಣೆಗೆ ಇಡಿಗೆ ಅನುಮತಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ನೀಡಿದ್ದಾರೆ. (ಕಡತ ಚಿತ್ರ)
ದೆಹಲಿ ಅಬಕಾರಿ ನೀತಿ ಕೇಸ್‌; ಅರವಿಂದ ಕೇಜ್ರಿವಾಲ್ ವಿಚಾರಣೆಗೆ ಇಡಿಗೆ ಅನುಮತಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ನೀಡಿದ್ದಾರೆ. (ಕಡತ ಚಿತ್ರ) (HT News )

Delhi Excise Policy Case: ಮುಂಬರುವ 2025 ರ ದೆಹಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ದೆಹಲಿ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ವಿಕೆ ಸಕ್ಸೇನಾ ಅವರು ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಎಎಪಿ ಮುಖ್ಯಸ್ಥ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಒಳಪಡಿಸುವುದಕ್ಕೆ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಅನುಮತಿ ನೀಡಿದ್ದಾರೆ. ಡಿಸೆಂಬರ್ 5 ರಂದು ಜಾರಿ ನಿರ್ದೇಶನಾಲಯ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ಕೋರಿತ್ತು. ವಿವಾದ ಮತ್ತು ಭ್ರಷ್ಟಾಚಾರದ ಆರೋಪಗಳ ಕೇಂದ್ರಬಿಂದುವಾಗಿರುವ ದೆಹಲಿ ಸರ್ಕಾರದ ಅಬಕಾರಿ ನೀತಿಯ ಬಗ್ಗೆ ತಿಂಗಳ ತನಿಖೆಯ ನಂತರ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅವರ ಈ ನಡೆ ಕಂಡುಬಂದಿದೆ.

ದೆಹಲಿ ಅಬಕಾರಿ ನೀತಿ ಹಗರಣ; ಶುಕ್ರವಾರ ದೆಹಲಿ ಹೈಕೋರ್ಟ್‌ನಲ್ಲಿ ಏನಾಯಿತು

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ದೆಹಲಿ ಹೈಕೋರ್ಟ್‌ನಲ್ಲಿ ದಾವೆಯೊಂದರ ವಿಚಾರಣೆ ನಡೆಯಿತು. ಅದರಲ್ಲಿ ದೆಹಲಿ ಹೈಕೋರ್ಟ್, ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಸಲ್ಲಿಸಿದ ಅರ್ಜಿಗೆ ಉತ್ತರವನ್ನು ಸಲ್ಲಿಸಲು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಹೆಚ್ಚುವರಿ ಸಮಯವನ್ನು ನೀಡಿದೆ. ದೆಹಲಿ ಅಬಕಾರಿ ನೀತಿ ಹಗರಣದ ಚಾರ್ಜ್‌ಶೀಟ್‌ಗಳ ಮಾಹಿತಿ ಪಡೆಯುವ ವಿಚಾರಣಾ ನ್ಯಾಯಾಲಯದ ನಿರ್ಧಾರವನ್ನು ಆರೋಪಿಗಳು ಸಲ್ಲಿಸಿರುವ ಅರ್ಜಿಯು ಪ್ರಶ್ನಿಸಿದೆ. ನ್ಯಾಯಮೂರ್ತಿ ಮನೋಜ್ ಕುಮಾರ್ ಓಹ್ರಿ ಅವರ ಪೀಠವು ಈ ವಿಷಯದ ವಿಚಾರಣೆಯನ್ನು ಮುಂದಿನ ವರ್ಷ ಫೆಬ್ರವರಿ 5 ಕ್ಕೆ ನಿಗದಿಪಡಿಸಿದೆ.

ಇದಕ್ಕೆ ಹೊರತಾಗಿ, ಆಪಾದಿತ ಅಬಕಾರಿ ನೀತಿ ಹಗರಣದಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರ ವಿರುದ್ಧ ಜಾರಿ ನಿರ್ದೇಶನಾಲಯದ ಆರೋಪಪಟ್ಟಿಯನ್ನು ಪರಿಗಣಿಸುವ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ ಅರ್ಜಿ ವಿಚಾರಣೆಗೆ ಸಂಬಂಧಿಸಿ ದೆಹಲಿ ಹೈಕೋರ್ಟ್ ಇತ್ತೀಚೆಗೆ ನೋಟಿಸ್ ಜಾರಿಗೊಳಿಸಿತ್ತು.

ಜಾಮೀನು ಪಡೆದು ಹೊರಗಿದ್ದಾರೆ ಅರವಿಂದ ಕೇಜ್ರೀವಾಲ್, ಮನಿಶ್ ಸಿಸೋಡಿಯಾ

ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ರದ್ದುಗೊಂಡಿರುವ ಅಬಕಾರಿ ನೀತಿಗೆ ಸಂಬಂಧಿಸಿದ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ಎರಡೂ ಪ್ರಕರಣಗಳಲ್ಲಿ ಆರೋಪಿಗಳು. ಅವರು ಪ್ರಸ್ತುತ ಜಾಮೀನು ಪಡೆದು ಜೈಲಿನಿಂದ ಹೊರಗಿದ್ದಾರೆ.

ಜಾರಿ ನಿರ್ದೇಶನಾಲಯದ (ಇಡಿ) ಪ್ರಕಾರ, ಎಎಪಿ ನಾಯಕರಿಗೆ ಅನುಕೂಲವಾಗುವಂತೆ ಮತ್ತು ಕಾರ್ಟೆಲ್ ರಚನೆಗಳನ್ನು ಉತ್ತೇಜಿಸಲು ಅಬಕಾರಿ ನೀತಿಯನ್ನು ಉದ್ದೇಶಪೂರ್ವಕವಾಗಿ ಲೋಪದೋಷಗಳೊಂದಿಗೆ ವಿನ್ಯಾಸಗೊಳಿಸಲಾಗಿತ್ತು. ಅದರಲ್ಲಿ ರಿಯಾಯಿತಿಗಳು, ಪರವಾನಗಿ ಶುಲ್ಕ ವಿನಾಯಿತಿಗಳನ್ನು ಮದ್ಯ ಉದ್ಯಮಿಗಳಿಗೆ ನೀಡಿದ್ದಾರೆ. ಇದಲ್ಲದೆ, ಕೋವಿಡ್ -19 ಅಡೆತಡೆಗಳ ಸಮಯದಲ್ಲಿ ಪರಿಹಾರ ಸೇರಿ ಆದ್ಯತೆಯ ಚಿಕಿತ್ಸೆ ಉಲ್ಲೇಖಿಸಲಾಗಿತ್ತು. ಇದಕ್ಕೆ ಬದಲಾಗಿ ಎಎಪಿ ನಾಯಕರು ಮದ್ಯದ ವ್ಯವಹಾರಗಳಿಂದ ಕಿಕ್‌ಬ್ಯಾಕ್ ಸ್ವೀಕರಿಸಿದ್ದರು ಎಂದು ಇಡಿ ಆರೋಪಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.

ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿ ಪ್ರಕಾರ, ಸಗಟು ವ್ಯಾಪಾರದ ಮೇಲೆ ಶೇಕಡ 12ರ ಮಾರ್ಜಿನ್ ಅನ್ನು ಉದ್ಯಮಿಗಳಿಗೆ ನೀಡಲಾಗಿದೆ. ಇದರಲ್ಲಿ ಶೇಕಡ 6 ಕಿಕ್‌ಬ್ಯಾಕ್ ನೀಡುವಂತೆ ಸೂಚಿಸಲಾಗಿತ್ತು. ಇದು ಹಗರಣವಾಗಿದ್ದು, ಇದರಲ್ಲಿ ಬಂದ ಕಿಕ್ ಬ್ಯಾಕ್ ಹಣವನ್ನು ಎಎಪಿ ನಾಯಕರು ಹಲವೆಡೆ ವಿನಿಯೋಗಿಸಿದ್ದಾರೆ. ಮುಖ್ಯವಾಗಿ ಈ ಹಣವನ್ನು 2022ರಲ್ಲಿ ಎಎಪಿ ನಾಯಕರು ಪಂಜಾಬ್ ಮತ್ತು ಗೋವಾ ವಿಧಾನ ಸಭಾ ಚುನಾವಣೆಗಳಿಗೆ ಬಳಸಿದ್ದರು ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.