ಸಾಕಷ್ಟು ಬಾರಿ ಈ ಬಣ್ಣದ ಲೋಕ ಬಿಟ್ಟು ಹೋಗೋಣ ಅಂತ ಅನಿಸಿದ್ದುಂಟು: ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ರಮ್ಯಾ ರಾಜು ಸಂದರ್ಶನ
ಕನ್ನಡ ಸುದ್ದಿ  /  ಮನರಂಜನೆ  /  ಸಾಕಷ್ಟು ಬಾರಿ ಈ ಬಣ್ಣದ ಲೋಕ ಬಿಟ್ಟು ಹೋಗೋಣ ಅಂತ ಅನಿಸಿದ್ದುಂಟು: ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ರಮ್ಯಾ ರಾಜು ಸಂದರ್ಶನ

ಸಾಕಷ್ಟು ಬಾರಿ ಈ ಬಣ್ಣದ ಲೋಕ ಬಿಟ್ಟು ಹೋಗೋಣ ಅಂತ ಅನಿಸಿದ್ದುಂಟು: ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ರಮ್ಯಾ ರಾಜು ಸಂದರ್ಶನ

ಸಂದರ್ಶನ - ಪದ್ಮಶ್ರೀ ಭಟ್‌ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಈ ರಾಧಾ ಪಾತ್ರ ಮಾಡ್ತಿರುವ ನಟಿ ರಮ್ಯಾ ರಾಜು ಅವರಿಗೆ ರಿಯಲ್‌ ಲೈಫ್‌ನಲ್ಲಿ ಮದುವೆ ಅಂದ್ರೆ ಇಷ್ಟ ಇಲ್ಲ. ಯಾವ ಕಾರಣಕ್ಕೆ ಅವರು ಮದುವೆ ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ? ಹೀಗಿದೆ ಉತ್ತರ.

ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ರಮ್ಯಾ ರಾಜು ಸಂದರ್ಶನ
ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ರಮ್ಯಾ ರಾಜು ಸಂದರ್ಶನ

Puttakkana Makkalu Serial: ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಕಂಠಿಯನ್ನು ಮದುವೆ ಆಗಲು ಬಂಗಾರಮ್ಮಳನ್ನು ಸಾಯಿಸಲು ಪ್ರಯತ್ನಪಟ್ಟಿದ್ದ ರಾಧಾ ತನ್ನ ಸ್ವಾರ್ಥಕ್ಕಾಗಿ ಏನು ಬೇಕಿದ್ರೂ ಮಾಡಲು ರೆಡಿ ಆಗಿರುತ್ತಾಳೆ. ಆದರೆ ರಾಧಾ ಪಾತ್ರಧಾರಿ ರಮ್ಯಾ ರಾಜು ಅವರಿಗೆ ರಿಯಲ್‌ ಲೈಫ್‌ನಲ್ಲಿ ಮದುವೆ ಬಗ್ಗೆ ಆಸಕ್ತಿ ಇಲ್ಲವಂತೆ. ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಕಾರಣಕ್ಕೆ ಅವರು ಅಷ್ಟಾಗಿ ಮದುವೆ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ. ಈ ಬಗ್ಗೆ ಸ್ವತಃ ರಮ್ಯಾ ರಾಜು ಮಾತನಾಡಿದ್ದಾರೆ.

ಪ್ರ: ಮದುವೆ ಆಗಿ ಗಂಡನ ಮನೆಗೆ ಹೋಗೋದು ಹೆಣ್ಣು ಮಕ್ಕಳಿಗೆ ಕಷ್ಟದ ಸಂದರ್ಭ. ನಿಮ್ಮ ಮನೆಯಲ್ಲಿ ತಾಯಿ ಮಾತ್ರ ಇರೋದಿಕ್ಕೆ ತಾಯಿಯನ್ನು ಕೂಡ ನೋಡಿಕೊಳ್ಳುವ ಹುಡುಗ ನಿಮಗೆ ಗಂಡನಾಗಿ ಸಿಗಬೇಕು.

ಉ: ನಮ್ಮ ಮನೆಯಲ್ಲಿ ಮದುವೆ ವಿಚಾರಕ್ಕೆ ಗಲಾಟೆ ಆಗುತ್ತದೆ. ಎಲ್ಲರೂ ಮದುವೆ ಆಗಲ್ವಾ ಅಂತ ಪ್ರಶ್ನೆ ಮಾಡ್ತಾರೆ, ಮದುವೆ ಅನ್ನೋದು ನನಗೆ ದೊಡ್ಡ ವಿಚಾರ. ಮದುವೆಯಾದ ಮೇಲೆ ನನ್ನ ಜೀವನ ಚೆನ್ನಾಗಿರುತ್ತದೆ, ಚೆನ್ನಾಗಿರೋದಿಲ್ವಾ ಅಥವಾ ಹೇಗಿರುತ್ತದೆ ಅಂತ ನನಗೆ ಗೊತ್ತಿಲ್ಲ. ನಾನು ಮದುವೆಯಾದ ಮೇಲೆ ನನ್ನ ತಾಯಿ ಮಾತ್ರ ಮನೆಯಲ್ಲಿ ಏಕಾಂಗಿಯಾಗಿ ಇರುತ್ತಾರೆ. ಇನ್ನು ನಾನು ಚಿತ್ರರಂಗದಲ್ಲಿ ಇರುವುದರಿಂದ, ಚಿತ್ರರಂಗದ ಬಗ್ಗೆ ಎಲ್ಲರಿಗೂ ಒಳ್ಳೆಯ ಅಭಿಪ್ರಾಯ ಇರೋದಿಲ್ಲ.

ಪ್ರ: ನಿಮ್ಮನ್ನು ಅರ್ಥ ಮಾಡಿಕೊಂಡು, ನಿಮ್ಮನ್ನು ಗೌರವಿಸುವ ಹುಡುಗ ಸಿಕ್ಕರೆ ಮದುವೆ ಆಗ್ತೀರಾ?

ಉ: ನನ್ನ ತಾಯಿಯನ್ನು ಅವನ ತಾಯಿ ಅಂತ ಅಂದುಕೊಳ್ಳುವ ಹುಡುಗ ಸಿಗೋದು ಕಷ್ಟ. ನನ್ನ ಹೆಂಡ್ತಿ ತಾಯಿ, ನನ್ನ ತಾಯಿ ಅಂತ ಹೇಳಬಹುದು, ಆದರೆ ಮನಸಾರೆ ನನ್ನ ತಾಯಿಯನ್ನು ಕೂಡ ಅವನ ತಾಯಿ ಅಂತ ತಿಳಿದುಕೊಳ್ಳೋದು ತುಂಬ ಕಷ್ಟ. ಈ ಥರ ಸಿಗೋದು ಕಷ್ಟ, ಸಿಕ್ಕಿದ್ರೆ ಮದುವೆ ಆಗ್ತೀನಿ. ಇನ್ನೊಂದು ಕಡೆ ತವರು ಮನೆ ತವರು ಮನೆಯೇ, ಗಂಡನ ಮನೆ ಗಂಡನ ಮನೆಯೇ. ತಾಯಿ ಪ್ರೀತಿ ಗಂಡನ ಮನೆಯಲ್ಲಿ ಸಿಗೋದು ತುಂಬ ಕಷ್ಟ. ಸದ್ಯಕ್ಕೆ ಮದುವೆ ಬಗ್ಗೆ ಯೋಚನೆಯೇ ಇಲ್ಲ. ನಾನು ಬಯಸುವ ಹುಡುಗ ಕೆಲ ವರ್ಷಗಳ ಬಳಿಕ ಸಿಗಲಿ.

ಪ್ರ: ಒಂದು ಸಂಬಂಧ ಹೇಗಿರಬೇಕು?

ಉ: ಗಂಡ-ಹೆಂಡತಿ ಇಬ್ಬರೂ ಪರಸ್ಪರ ಅರ್ಥಮಾಡಿಕೊಳ್ಳುವ ಮನಸ್ಸು ಹೊಂದಿರಬೇಕು. ಇವರಿಬ್ಬರಲ್ಲಿ ಯಾರೇ ತಪ್ಪು ಮಾಡಿದರೂ ಕೂಡ ಪರಸ್ಪರ ಕ್ಷಮೆ ಕೇಳಿ, ತಪ್ಪು ತಿದ್ದಿಕೊಂಡು ಮುಂದೆ ಸಾಗಬೇಕು.

ಪ್ರ: ನಿಮ್ಮ ಫೇವರಿಟ್‌ ನಟ ಯಾರು?

ಉ: ನನಗೆ ʼರಾಕಿಂಗ್‌ ಸ್ಟಾರ್ʼ‌ ಯಶ್‌ ಅಂದ್ರೆ ತುಂಬ ಇಷ್ಟ. ಯಶ್‌ ಅವರ ಹೇರ್‌ಸ್ಟೈಲ್‌, ಮ್ಯಾನರಿಸಂ ಎಲ್ಲವೂ ನನಗೆ ಇಷ್ಟ.

ಪ್ರ: ಪುಟ್ಟಕ್ಕನ ಮಕ್ಕಳು ಧಾರಾವಾಹಿ ಬಿಟ್ಟು ಯಾವ ಧಾರಾವಾಹಿ ಇಷ್ಟ?

ಉ: ಅಮೃತಧಾರೆ ಧಾರಾವಾಹಿಯಲ್ಲಿ ಛಾಯಾ ಸಿಂಗ್‌ ಅವರ ಪಾತ್ರ ನನಗೆ ತುಂಬ ಇಷ್ಟ. ಇತ್ತೀಚೆಗೆ ʼಅಮೃತಧಾರೆʼ ಧಾರಾವಾಹಿಯಲ್ಲಿ ಭೂಮಿಕಾ ತನ್ನ ತಂದೆ ಬಗ್ಗೆ ಹೇಳುವ ಎಪಿಸೋಡ್‌ ತುಂಬ ಇಷ್ಟ ಆಯ್ತು. ತಂದೆ- ಹೆಣ್ಣು ಮಕ್ಕಳ ಬಾಂಡಿಂಗ್‌ ತುಂಬ ಸುಂದರ ಆಗಿರುತ್ತದೆ. ಇನ್ನು ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ಉಮಾಶ್ರೀ, ಮಂಜುಭಾಷಿಣಿ, ರಮೇಶ್‌ ಪಂಡಿತ್‌ ಸರ್‌ ಪಾತ್ರ ನನಗೆ ಇಷ್ಟ ಆಗುತ್ತದೆ.

ಪ್ರ: ನಿಮಗೇನು ತೆರೆ ಮೇಲೆ ನೀವು ಕಾಣಿಸ್ತೀರಾ, ಆದರೆ ತೆರೆ ಹಿಂದಿನ ಕಷ್ಟ ಗೊತ್ತಿರೋದಿಲ್ಲ, ಸೀರಿಯಲ್‌ ಮಾಡ್ತೀರಾ, ದುಡ್ಡಿರತ್ತೆ ಅಂತ ಮಾತಾಡ್ತಾರೆ…!

: ಹೌದು, ಚಿತ್ರರಂಗದಲ್ಲಿ, ಧಾರಾವಾಹಿಯಲ್ಲಿ ನಾವು ಪಡುವ ಕಷ್ಟ, ಹಿಂದಿನ ಶ್ರಮ ನಮಗೆ ಮಾತ್ರ ಗೊತ್ತಿರುತ್ತದೆ, ನಮಗೂ ಕಷ್ಟಗಳಿವೆ.

ಪ್ರ: ಕಾಸ್ಟ್ಯೂಮ್‌ ಸಮಸ್ಯೆ ಸೇರಿ ಸಾಕಷ್ಟು ಸವಾಲುಗಳು ಇರುತ್ತವೆ.

ಉ: ಇಲ್ಲಿಯೂ ಸವಾಲುಗಳಿವೆ, ಎಲ್ಲ ಟೈಮ್‌ನಲ್ಲಿ ಪ್ರಾಜೆಕ್ಟ್‌ಗಳು ಸಿಗೋದಿಲ್ಲ, ಸಂಭಾವನೆ ಸಮಸ್ಯೆ ಆಗುತ್ತದೆ. ಹೀಗಾಗಿ ತುಂಬ ಸಲ ಚಿತ್ರರಂಗ ಬಿಟ್ಟು ಹೊರಗಡೆ ಹೋಗೋಣ ಅಂತ ನನಗೆ ಅನಿಸುತ್ತದೆ. ಆದರೆ ಇಲ್ಲಿ ಕಾಲಿಟ್ಟಿದ್ದಕ್ಕೆ ಏನಾದರೂ ಸಾಧನೆ ಮಾಡೋಣ ಅಂತ ಅನಿಸುತ್ತದೆ. ಸೀರಿಯಲ್‌ನಲ್ಲಿ ನಾವು ತಿಂಗಳುಪೂರ್ತಿ ಕಾಣಿಸಿದರೂ ಕೂಡ, ಶೂಟಿಂಗ್‌ ಮಾಡೋಕೆ ದಿನಗಳು ಸಿಗೋದು ಕಮ್ಮಿ. ನಾನು ಕಷ್ಟದಲ್ಲಿದ್ದಾಗ ನನ್ನ ತಾಯಿ, ಸ್ನೇಹಿತರು ಬೆಂಬಲ ಕೊಡ್ತಾರೆ, ಧೈರ್ಯ ತುಂಬ್ತಾರೆ. ದೇವಸ್ಥಾನಕ್ಕೆ ಹೋದಾಗ ನನ್ನ ತಾಯಿ ನನ್ನ ಬಗ್ಗೆಯೇ ಕೇಳಿಕೊಳ್ತಾರೆ.

ಪ್ರ: ದೇವರು, ಆಧ್ಯಾತ್ಮ ಬಗ್ಗೆ ನಿಮ್ಮ ಕಲ್ಪನೆ ಏನು?

ಉ: ನಾನು ಮಾಡಿರುವ ಪಾಪ-ಪುಣ್ಯದ ಬಗ್ಗೆ ಗೊತ್ತಿಲ್ಲ. ಆದರೆ ನನ್ನ ತಂದೆ ಮಾಡಿದ ಸಹಾಯದಿಂದ ನಮ್ಮ ಬದುಕು ಚೆನ್ನಾಗಿದೆ ಅಂತ ನಾನು ಭಾವಿಸುತ್ತೇನೆ. ನಾನು ಗುರುವಾರ ಉಪವಾಸ ಮಾಡ್ತೀನಿ, ಸಮಯ ಸಿಕ್ಕಾಗ, ಹಬ್ಬ ಇದ್ದಾಗ ನಾನು ದೇವಸ್ಥಾನಕ್ಕೆ ಹೋಗುತ್ತೇನೆ. ಬೆಂಗಳೂರಿನಲ್ಲಿರುವ ಕಾರ್ಯಸಿದ್ಧಿ ಆಂಜನೇಯನಿಗೆ ಕಾಯಿ ಕಟ್ಟುತ್ತೇನೆ. ಸಾಯಿಬಾಬಾ ಅಂದ್ರೆ ನನಗೆ ತುಂಬ ಇಷ್ಟ. ನಾನು ಎಷ್ಟೇ ಕಷ್ಟಬಂದರೂ ಕೂಡ ಸಾಯಿಬಾಬಾ ಅಂತ ನಾನು ಹೇಳುವೆ.

(ಸಂದರ್ಶನ: ಪದ್ಮಶ್ರೀ ಭಟ್‌, ಪಂಚಮಿ ಟಾಕ್ಸ್‌)

Whats_app_banner