Seetha Rama Serial: ಮಲಯಾಳಂ ಬಳಿಕ ಈ ಭಾಷೆಯ ಪ್ರೇಕ್ಷಕರನ್ನು ಸೆಳೆಯಲು ಡಬ್ ಆಯ್ತು ಕನ್ನಡದ ಸೀತಾ ರಾಮ ಧಾರಾವಾಹಿ
ಕನ್ನಡ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಸೀತಾ ರಾಮ ಧಾರಾವಾಹಿ ಇದೀಗ ಮತ್ತೊಂದು ಭಾಷೆಗೆ ಡಬ್ ಆಗಿ, ಅಲ್ಲಿನ ಪ್ರೇಕ್ಷಕರನ್ನು ಸೆಳೆಯಲು ಹೊರಟು ನಿಂತಿದೆ. ಈಗಾಗಲೇ ಬಿಡುಗಡೆ ಆಗಿರುವ ಪ್ರೋಮೋಗಳಿಂದಲೂ ಮೆಚ್ಚುಗೆ ಪಡೆದಿದೆ. ಇಲ್ಲಿದೆ ನೋಡಿ ಆ ಕುರಿತ ವಿವರ.
Seetha Rama Serial Dubbed: ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಸೀತಾ ರಾಮ ಧಾರಾವಾಹಿ ನೋಡುಗರಿಂದ ಮೆಚ್ಚುಗೆ ಪಡೆದಿದೆ. ಜತೆಗೆ ಟಿಆರ್‌ಪಿಯಲ್ಲಿಯೂ ಮುಂದಡಿ ಇರಿಸಿದೆ. ಟಿಆರ್‌ಪಿಯಲ್ಲಿ ಟಾಪ್ ಐದರಲ್ಲಿ ಕಾಣಿಸಿಕೊಳ್ಳುವ ಈ ಸೀರಿಯಲ್ ಕನ್ನಡದಲ್ಲಿ ಪ್ರಸಾರ ಆರಂಭಿಸಿ ವರ್ಷ ಕಳೆದಿದೆ. ಇದೀಗ ಇದೇ ಸೀರಿಯಲ್ ಇನ್ನೊಂದು ಭಾಷೆಗೆ ಡಬ್ ಆಗಿ , ಅಲ್ಲಿನ ಕಿರುತೆರೆ ಪ್ರೇಕ್ಷಕರನ್ನು ರಂಜಿಸಲು ಹೊರಟು ನಿಂತಿದೆ. ಅದರಂತೆ, ಈಗಾಗಲೇ ಬಿಡುಗಡೆ ಆಗಿರುವ ಪ್ರೋಮೋ ಮೂಲಕ ನೋಡುಗರನ್ನೂ ಸೆಳೆದಿದೆ ಈ ಧಾರಾವಾಹಿ. ಹಾಗಾದರೆ, ಯಾವ ಭಾಷೆಗೆ ಡಬ್ ಆಗಿದೆ? ಎಷ್ಟೊತ್ತಿಗೆ ಪ್ರಸಾರವಾಗುತ್ತಿದೆ? ಇಲ್ಲಿದೆ ನೋಡಿ ಮಾಹಿತಿ.
ಕಿರುತೆರೆಯಲ್ಲಿ ಧಾರಾವಾಹಿಗಳಿಗೆ ಹೆಚ್ಚಿನ ಬೇಡಿಕೆ. ಅದರಲ್ಲೂ ಹಿಟ್ ಆದ ಸೀರಿಯಲ್‌ಗಳಂತೂ ತಮ್ಮದೇ ನೆಟ್‌ವರ್ಕ್‌ನ ಇತರ ಭಾಷೆಗಳಿಗೆ ಡಬ್ ಆಗಿ ಅಲ್ಲಿಯೂ ಮೋಡಿ ಮಾಡಿದ ಉದಾಹರಣೆಗಳಿವೆ. ಹಳೇ ಸೀರಿಯಲ್ ಮುಗಿದ ಮೇಲೆ ಅದೇ ಸ್ಥಾನಕ್ಕೆ ಹೊಸ ಸೀರಿಯಲ್ ಸಹ ಬರುತ್ತಲೇ ಇರುತ್ತವೆ. ಇದೀಗ ಜೀ ತೆಲುಗಿನಲ್ಲಿ ಕನ್ನಡದ ಸೀರಿಯಲ್ ಡಬ್ ಆಗಿ ಪ್ರಸಾರ ಕಾಣುತ್ತಿದೆ. ಆಗಸ್ಟ್ 12ರಿಂದ ತೆಲುಗು ಕಿರುತೆರೆಗೆ ಸೀತಾ ರಾಮ ಸೀರಿಯಲ್ ಎಂಟ್ರಿಕೊಟ್ಟಿದೆ. ಕನ್ನಡದಲ್ಲಿರುವಂತೆ ಅದೇ ಹೆಸರಿನಲ್ಲಿಯೇ ಶುರುವಾಗಿದೆ.
ಮಲಯಾಳಂಗೂ ಡಬ್
ಸೀತಾರಾಮ ಧಾರಾವಾಹಿ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಇದರ ಜತೆಗೆ ಇದೇ ವರ್ಷದ ಮೇ ತಿಂಗಳಲ್ಲಿಯೂ ಇದೇ ಸೀರಿಯಲ್ ಮಲಯಾಳಂ ಭಾಷೆಗೂ ಡಬ್ ಆಗಿ ಪ್ರಸಾರ ಕಾಣುತ್ತಿದೆ. ಈಗ ಜೀ ತೆಲುಗು ಕನ್ನಡದ ಸೀರಿಯಲ್‌ಅನ್ನು ತೆಲುಗು ಕಿರುತೆರೆ ಮಂದಿಗೆ ಅರ್ಪಿಸುತ್ತಿದೆ. ಅಂದಹಾಗೆ ಸೀತಾರಾಮ ಧಾರಾವಾಹಿಯು ಮರಾಠಿ ಧಾರಾವಾಹಿ ಮಾಝಿ ತುಜಿ ರೇಶಿಮಗತ್ ಕಥೆಯನ್ನು ಆಧರಿಸಿದೆ. ಹಿಂದಿ, ಬೆಂಗಾಲಿ ಮತ್ತು ಒಡಿಯಾದಲ್ಲಿ ಇದೇ ಸೀರಿಯಲ್ ರಿಮೇಕ್ ಆಗಿದೆ. ಈಗ ಕನ್ನಡ ರಿಮೇಕ್ ತೆಲುಗು ಡಬ್ಬಿಂಗ್‌ನೊಂದಿಗೆ ಬಂದಿದೆ.
ಟೆಲಿಕಾಸ್ಟ್ ಸಮಯ
ಜೀ ತೆಲುಗು ಟಿವಿ ಚಾನೆಲ್‌ನಲ್ಲಿ ಸೀತಾರಾಮ ಧಾರಾವಾಹಿ ಆಗಸ್ಟ್ 12ರಿಂದ ಪ್ರಸಾರ ಆರಂಭಿಸಿದೆ. ಈ ಧಾರಾವಾಹಿ ಪ್ರತಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 5.30ಕ್ಕೆ ಪ್ರಸಾರವಾಗಲಿದೆ.
ಕಥಾಹಂದರ
ಗಂಡನಿಂದ ಬೇರ್ಪಟ್ಟ ಸೀತಾ ತನ್ನ ಮಧುಮೇಹ ಪೀಡಿತ ಮಗಳ ಜತೆ ಜೀವನ ನಡೆಸುತ್ತಿರುತ್ತಾಳೆ. ಮಗು ತಂದೆಗಾಗಿ ಹಾತೊರೆಯುತ್ತಿದೆ. ಸೀತಾ ಮತ್ತು ಸಿಹಿಗೆ ವಿದೇಶದಿಂದ ಹಿಂದಿರುಗಿದ ಉದ್ಯಮಿ ಶ್ರೀರಾಮ್ ಪರಿಚಯವಾಗುತ್ತದೆ. ಸ್ನೇಹ ಪ್ರೀತಿಯಾಗಿ ಬದಲಾಗುತ್ತದೆ. ರಾಮನು ಸೀತೆಯನ್ನು ಪ್ರೀತಿಸುತ್ತಾನೆ. ಇಬ್ಬರೂ ಒಂದಾಗಲು ಬಯಸುತ್ತಾರೆ. ಇವರ ಮದುವೆಗೆ ಸಿಹಿ ಒಪ್ಪಿಗೆ ಕೊಡ್ತಾಳಾ? ಅದರ ನಂತರ ಏನಾಯಿತು? ಕುಟುಂಬದ ಪರಿಸ್ಥಿತಿಗಳು ಹೇಗಿರುತ್ತವೆ? ಎಂಬ ವಿಷಯಗಳ ಸುತ್ತ ಈ ಸೀರಿಯಲ್ ಸುತ್ತುತ್ತದೆ.
ಸೀರಿಯಲ್‌ನಲ್ಲಿ ಯಾರೆಲ್ಲ ಇದ್ದಾರೆ..
ಸೀತಾರಾಮ ಧಾರಾವಾಹಿಯಲ್ಲಿ ವೈಷ್ಣವಿ ಗೌಡ, ಗಗನ್ ಚಿನ್ನಪ್ಪ ಮತ್ತು ರಿತು ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮುಖ್ಯಮಂತ್ರಿ ಚಂದ್ರು, ಅಶೋಕ ಶರ್ಮಾ, ಪೂಜಾ ಲೋಕೇಶ್, ಮೇಘನಾ ಶಂಕರಪ್ಪ, ವಿಕಾಸ್ ಕಾರ್‌ಗೋಡ್, ಸತೀಶ್ ಚಂದ್ರ, ಪೂರ್ಣಚಂದ್ರ ತೇಜಸ್ವಿ, ಜಯದೇವ್ ಮೋಹನ್ ಸೇರಿ ಇನ್ನೂ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿನ ಸಿಹಿ ಪಾತ್ರವನ್ನು ತೆಲುಗಿನಲ್ಲಿ ಸಿರಿ ಎಂದು ಬದಲಿಸಲಾಗಿದೆ. ಪುಟ್ಟ ಹುಡುಗಿ ಸಿರಿ (ರೀತು) ಸೀತಾ (ವೈಷ್ಣವಿ) ಮತ್ತು ಶ್ರೀರಾಮ್ (ಗಗನ್) ಅವರನ್ನು ಒಂದು ಮಾಡುತ್ತಾಳಾ ಎಂಬಂಥ ಪ್ರೋಮೋಗಳು ತೆಲುಗು ವೀಕ್ಷಕರ ಗಮನ ಸೆಳೆದಿವೆ.