ಬಿಗ್‌ಬಾಸ್‌ 11ರ ಮೊದಲ ಸ್ಪರ್ಧಿ ರಿವೀಲ್; ಸತ್ಯ ಧಾರಾವಾಹಿ ನಟಿ ಗೌತಮಿ ಜಾಧವ್ ಸ್ವರ್ಗಕ್ಕಾ, ನರಕಕ್ಕಾ?-kannada television news bigg boss kannada season 11 gouthami jadav first contestant of bbk 11 candidates list jra ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ಬಾಸ್‌ 11ರ ಮೊದಲ ಸ್ಪರ್ಧಿ ರಿವೀಲ್; ಸತ್ಯ ಧಾರಾವಾಹಿ ನಟಿ ಗೌತಮಿ ಜಾಧವ್ ಸ್ವರ್ಗಕ್ಕಾ, ನರಕಕ್ಕಾ?

ಬಿಗ್‌ಬಾಸ್‌ 11ರ ಮೊದಲ ಸ್ಪರ್ಧಿ ರಿವೀಲ್; ಸತ್ಯ ಧಾರಾವಾಹಿ ನಟಿ ಗೌತಮಿ ಜಾಧವ್ ಸ್ವರ್ಗಕ್ಕಾ, ನರಕಕ್ಕಾ?

ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಮೊದಲ ಸ್ಪರ್ಧಿಯನ್ನು ಕಲರ್ಸ್‌ ಕನ್ನಡ ಬಹಿರಂಗಪಡಿಸಿದೆ. ಸೀಸನ್‌ ಅದ್ಧೂರಿ ಓಪನಿಂಗ್‌ ಆರಂಭವಾಗುವ ಮುನ್ನವೇ ಪ್ರೇಕ್ಷಕರಿಗೆ ವೋಟಿಂಗ್‌ ಅವಕಾಶ ನೀಡಲಾಗಿದೆ. ಸತ್ಯ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಗೌತಮಿ ಜಾಧವ್ ದೊಡ್ಮನೆಗೆ ಹೋಗಲು ಕಾಯುತ್ತಿದ್ದಾರೆ.

ಬಿಗ್‌ಬಾಸ್‌ 11ರ ಮೊದಲ ಸ್ಪರ್ಧಿ ರಿವೀಲ್; ಸತ್ಯ ಧಾರಾವಾಹಿ ನಟಿ ಗೌತಮಿ ಜಾಧವ್ ವೈಟಿಂಗ್
ಬಿಗ್‌ಬಾಸ್‌ 11ರ ಮೊದಲ ಸ್ಪರ್ಧಿ ರಿವೀಲ್; ಸತ್ಯ ಧಾರಾವಾಹಿ ನಟಿ ಗೌತಮಿ ಜಾಧವ್ ವೈಟಿಂಗ್

ಬಿಗ್‌ಬಾಸ್‌ ಕನ್ನಡ 11ನೇ ಸೀಸನ್‌ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ನಾಳೆ, ಅಂದರೆ ಸೆಪ್ಟೆಂಬರ್‌ 29ರ ಭಾನುವಾರ ಸಂಜೆ 6 ಗಂಟೆಯಿಂದ ಬಹುನಿರೀಕ್ಷಿತ ಆವೃತ್ತಿಯ ಅದ್ಧೂರಿ ಓಪನಿಂಗ್‌ ನಡೆಯಲಿದೆ. ಅದಕ್ಕೂ ಮುನ್ನ ಇಂದು (ಸೆಪ್ಟೆಂಬರ್‌ 28)ನಡೆಯುತ್ತಿರುವ ರಾಜಾ-ರಾಣಿ ಫೈನಲ್‌ ನಡುವೆ ಬಿಗ್‌ಬಾಸ್‌ ಸ್ಪರ್ಧಿಗಳ ಅನಾವರಣವಾಗುತ್ತಿದೆ. ಮೊದಲ ಸ್ಪರ್ಧಿಯನ್ನು ಈಗಾಗಲೇ ರಿವೀಲ್‌ ಮಾಡಲಾಗಿದೆ. ಜೀ ಕನ್ನಡದಲ್ಲಿ ಪ್ರಾಸಾರವಾಗುತ್ತಿದ್ದ ಸತ್ಯ ಧಾರವಾಹಿಯ ನಾಯಕಿ ನಟಿ ಗೌತಮಿ ಜಾಧವ್ ಬಿಗ್‌ಬಾಸ್‌ ಮನೆಗೆ ಹೋಗುವುದು ಬಹುತೇಕ ಖಚಿತವಾಗಿದೆ.

ಈ ಬಾರಿಯ ಬಿಗ್‌ಬಾಸ್‌ ಸ್ವರ್ಗ ಮತ್ತು ನರಕ ಎಂಬ ಥೀಮ್‌ ಮೇಲೆ ನಡೆಯುತ್ತಿದೆ ಎಂಬುದನ್ನು ಈಗಾಗಲೇ ಕಲರ್ಸ್‌ ಕನ್ನಡ ತಂಡ ತಿಳಿಸಿದೆ. ಪ್ರೋಮೋಗಳೂ ಕೂಡಾ ನೋಡುಗರ ಗಮನ ಸೆಳೆದಿವೆ. ಸ್ಪರ್ಧಿಗಳಿಗೆ ಸ್ವರ್ಗ ಮತ್ತು ನರಕದ ದರ್ಶನ ಮಾಡಿಸಲು ಬಿಗ್‌ಬಾಸ್‌ ತಂತ್ರ ಹೆಣೆಯುತ್ತಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಒಂದಷ್ಟು ಸ್ಪರ್ಧಿಗಳ ಹೆಸರುಗಳೂ ಹರಿದಾಡುತ್ತಿವೆ. ಅದರಂತೆಯೇ ಈಗಾಗಲೇ ಹೆಸರು ಕೇಳಿಬರುತ್ತಿದ್ದ ಗೌತಮಿ ಜಾಧವ್ ಅವರಿಗೆ ವೋಟಿಂಗ್‌ ಆರಂಭವಾಗಿದೆ.

ಸದ್ಯ ಗೌತಮಿ ಅವರು, ನಾಳೆಯ ಗ್ರ್ಯಾಂಡ್‌ ಓಪನಿಂಗ್‌ನಲ್ಲಿ ಬಿಗ್‌ ಬಾಸ್‌ ಮನೆಗೆ ಪ್ರವೇಶಿಸುತ್ತಾರಾ ಎಂಬುದು ಖಚಿತವಾಗಿಲ್ಲ. ಇಂದಿನಿಂದ ನಾಳೆ ಸಂಜೆಯವರೆಗೆ ವೋಟಿಂಗ್‌ ನಡೆಯಲಿದೆ. ಆ ಬಳಿಕ ಬಿಗ್‌ಬಾಸ್‌ ತಂಡವು ಇವರನ್ನು ಒಳಗೆ ಕರೆಸಿಕೊಳ್ಳುವ ಅಥವಾ ಹೊರಗಿಡುವ ನಿರ್ಧಾರ ಮಾಡಲಿದೆ. ಒಂದು ವೇಳೆ ಮನೆ ಒಳಗೆ ಪ್ರವೇಶಿಸಿದರೂ, ಗೌತಮಿ ಅವರಿಗೆ ಸ್ವರ್ಗದ ಬಾಗಿಲು ತೆರೆಯುತ್ತಾ ಇಲ್ಲಾ ನರಕಕ್ಕೆ ಹೋಗುತ್ತಾರಾ ಎನ್ನುವುದನ್ನು ಬಂದ ವೋಟ್‌ ಆಧಾರದ ಮೇಲೆ ನಿರ್ಧಾರ ಮಾಡಲಾಗುತ್ತದೆ.

ಸತ್ಯ ಧಾರಾವಾಹಿ ಜನಪ್ರಿಯತೆ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿ ‘ಸತ್ಯ’ ಭಾರಿ ಜನಪ್ರಿಯವಾಗಿತ್ತು. ಈ ಸೀರಿಯಲ್ ಇತ್ತೀಚೆಗಷ್ಟೇ‌ ಮುಕ್ತಾಯ ಕಂಡಿತ್ತು. ಧಾರಾವಾಹಿಯ ಕಥಾನಾಯಕಿ, ಟಾಮ್ ಬಾಯ್‌ಯಾಗಿ ಗುರುತಿಸಿಕೊಂಡಿದ್ದ ಸತ್ಯ, ತಮ್ಮ ನಿಜರೂಪದಲ್ಲಿ ಈಗ ಬಿಗ್‌ಬಾಸ್‌ ಮನೆಗೆ ಕಾಲಿಡುವ ಸುಳಿವು ಸಿಕ್ಕಿದೆ. ಧಾರಾವಾಹಿಯಲ್ಲಿ ಅವರು ಅಮುಲ್‌ ಬೇಬಿಯ ಮಡದಿ ಸತ್ಯ ಖಡಕ್‌ ಸತ್ಯ ಪಾತ್ರದಲ್ಲಿ ಮಿಂಚಿದ್ದರು. ಕೆಲವೊಂದು ಸಿನಿಮಾಗಳಲ್ಲೂ ನಟಿಸಿದ್ದ ಗೌತಮಿ ಜಾಧವ್, ಜನರ ಮನಗೆದ್ದಿದ್ದು ಸತ್ಯ ಧಾರಾವಾಹಿ ಮೂಲಕವೇ.

ಪ್ರೋಮೋದಲ್ಲಿ ಏನಿದೆ?

ಬಿಗ್‌ಬಾಸ್‌ನಲ್ಲಿ 11ರ ಪ್ರೊಮೊ ಜನರ ಗಮನ ಸೆಳೆದಿದೆ. ಮನೆಯೊಳಗೆ ಒಂದಲ್ಲ ಎರಡು ಮನೆ ಇರಲಿದೆ. ಅದುವೇ ಸ್ವರ್ಗ ಮತ್ತು ನರಕ. "ಬಿಗ್‌ಬಾಸ್‌ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಅಸಲಿ ಆಟ ನಿಮ್ಮಿಂದ ಶುರುವಾಗುತ್ತದೆ. ಮನೆ ಒಳಗಡೆ ಹೋಗುವ ಸ್ಪರ್ಧಿಗಳ ಹೆಸರನ್ನ ನಾವ್‌ ಹೇಳ್ತಿವಿ, ಅವರು ಸ್ವರ್ಗಕ್ಕೆ ಹೋಗಬೇಕಾ? ನರಕಕ್ಕೆ ಹೋಗಬೇಕಾ ಎಂಬ ನಿರ್ಧಾರ ನಿಮ್ಮ ಕೈಯಲ್ಲಿ. ಇನ್ನೂ ಡಿಟೇಲ್ಸ್‌ ಬೇಕು ಅಂದ್ರೆ ರಾಜಾ ರಾಣಿ ಫೈನಲ್‌ ಏಪಿಸೋಡ್‌ ನೋಡಿ" ಎಂದು ಪ್ರೋಮೋದಲ್ಲಿ ಕಿಚ್ಚ ಸುದೀಪ್‌ ಹೇಳಿದ್ದಾರೆ. ಯಾರಿಗೆ ಸ್ವರ್ಗ? ಯಾರಿಗೆ ನರಕ? ಅಸಲಿ ಆಟದ ಆಟಗಾರರ ಆಯ್ಕೆ ನಿಮ್ಮ ಕೈಯಲ್ಲಿ! ಇದೇ ಶನಿವಾರ 'ರಾಜಾ-ರಾಣಿ' ಗ್ರಾಂಡ್ ಫಿನಾಲೆ ನೋಡಿ, ಬಿಗ್ ಬಾಸ್ ಕನ್ನಡ ಸೀಸನ್ 11ರ ಕಂಟೆಸ್ಟೆಂಟ್ಸ್‌ಗೆ ವೋಟ್ ಮಾಡಿ ಎಂದು ಪೋಸ್ಟ್‌ ಹಂಚಿಕೊಂಡಿದೆ ಕಲರ್ಸ್‌ ಕನ್ನಡ.

ಸದ್ಯ ಬಿಡುಗಡೆ ಆಗಿರುವ ಪ್ರೋಮೋದಲ್ಲಿ ನೀವು ಗಮನಿಸಿರುವಂತೆ ಸಣ್ಣ ಝಲಕ್‌ವೊಂದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಹೊಸ ಅಧ್ಯಾಯಕ್ಕೆ ತಕ್ಕಂತೆ ಅಚ್ಚರಿಯ ಹೆಸರುಗಳೇ ಈ ಶೋನಲ್ಲಿ ಇವೆ. ಪ್ರೋಮೋವನ್ನು ಕೊಂಚ ಸೂಕ್ಷ್ಮ ಕಣ್ಣಿನಿಂದ ನೋಡಿದಾಗ ಅಲ್ಲಿ ಕಂಡ ಮುಖಗಳು ಹೀಗಿವೆ. ಹರಿಪ್ರಿಯಾ, ಕಿರಣ್‌ ರಾಜ್, ಭಾವನಾ ಮೆನನ್‌, ಗೌತಮಿ ಜಾದವ್‌, ಪ್ರೇಮಾ, ಪಂಕಜ್, ಭೂಮಿಕಾ ಬಸವರಾಜ್‌ ಮನೆಗೆ ಬರುವ ನಿರೀಕ್ಷೆ ಇದೆ.

mysore-dasara_Entry_Point