Bhagyalakshmi Serial: ಪತಿಗೆ ತನ್ನ ಲೋಕಜ್ಞಾನ ತೋರಿಸಿದ ಭಾಗ್ಯಾ; ಹ್ಯಾಂಡಿಕಾಮ್‌ ನೋಡಿ ಗಾಬರಿಯಾದ ತಾಂಡವ್‌
ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ಪತಿಗೆ ತನ್ನ ಲೋಕಜ್ಞಾನ ತೋರಿಸಿದ ಭಾಗ್ಯಾ; ಹ್ಯಾಂಡಿಕಾಮ್‌ ನೋಡಿ ಗಾಬರಿಯಾದ ತಾಂಡವ್‌

Bhagyalakshmi Serial: ಪತಿಗೆ ತನ್ನ ಲೋಕಜ್ಞಾನ ತೋರಿಸಿದ ಭಾಗ್ಯಾ; ಹ್ಯಾಂಡಿಕಾಮ್‌ ನೋಡಿ ಗಾಬರಿಯಾದ ತಾಂಡವ್‌

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ 'ಭಾಗ್ಯಲಕ್ಷ್ಮಿ' ಧಾರಾವಾಹಿ ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿದೆ. ನವೆಂಬರ್‌ 22 ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ.

ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ 326ನೇ ಎಪಿಸೋಡ್‌
ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ 326ನೇ ಎಪಿಸೋಡ್‌ (PC: Colors Kannada)

Bhagyalakshmi Kannada Serial: ಮನೆಯಲ್ಲಿ ಎಲ್ಲರೂ ನನಗಾಗಿ ಕಾಯುತ್ತಿದ್ದಾರೆ ಎಂದು ತಿಳಿದೂ ಬೇಕಂತಲೇ ಲೇಟಾಗಿ ಬರುವ ತಾಂಡವ್‌ನನ್ನು ನೋಡಿ ಮಕ್ಕಳು ಕೋಪಗೊಳ್ಳುತ್ತಾರೆ. ತಮ್ಮ ರೂಮ್‌ಗೆ ಬರುವ ಅಪ್ಪನನ್ನು ತನ್ವಿ ತನ್ಮಯ್‌ ಇಬ್ಬರೂ ಹೊರ ದಬ್ಬುತ್ತಾರೆ. ತನಗಾದ ಅವಮಾನವನ್ನು ತಾಂಡವ್‌ ಭಾಗ್ಯಾ ಮೇಲೆ ತೋರುತ್ತಾನೆ.

ಭಾಗ್ಯಾಗೆ ಲೋಕಜ್ಞಾನ ಇಲ್ಲ ಎಂದು ಹೀಯಾಳಿಸಿದ ತಾಂಡವ್‌

ಮಕ್ಕಳಿಗೆ ಎಲ್ಲಾ ಗೊತ್ತಾಗಿದೆ ಅವರು ಈಗ ಚಿಕ್ಕವರಲ್ಲ, ನಿಮ್ಮ ಪ್ರತಿ ಹೆಜ್ಜೆಯನ್ನು ಅವರು ಗಮನಿಸುತ್ತಿದ್ದಾರೆ. ಅದೇ ರೀತಿ ತನ್ವಿಗೆ ನೀವು ಮಾಡುತ್ತಿರುವುದು ನಾಟಕ ಎಂದು ಗೊತ್ತಾಗಿದೆ. ನಿಮ್ಮನ್ನೇ ಸ್ಫೂರ್ತಿಯಾಗಿಸಿಕೊಂಡು ತನ್ವಿ ಕೂಡಾ ಸುಳ್ಳು ಹೇಳಲು ಆರಂಭಿಸಿದ್ಧಾಳೆ, ದಾರಿ ತಪ್ಪುತ್ತಿದ್ಧಾಳೆ ಎಂದು ಭಾಗ್ಯಾ ಹೇಳಿದಾಗ ತಾಂಡವ್‌ ತಾನು ತಪ್ಪಿಸಿಕೊಳ್ಳಲು ಮಗಳ ಬಗ್ಗೆ ಮತ್ತೊಂದು ಸುಳ್ಳು ಹೇಳುತ್ತಾನೆ. ಮಕ್ಕಳ ಮಾತು ಕೇಳಿಕೊಂಡು ನೀನು ದಡ್ಡಿ ರೀತಿ ವರ್ತಿಸಬೇಡ ತನ್ವಿ ಎಷ್ಟು ಚಾಲಾಕಿ ಅಂತ ನಿನಗೆ ಗೊತ್ತಲ್ವಾ? ಅವಳು ತಾನು ತಪ್ಪಿಸಿಕೊಳ್ಳಲು ಹೀಗೆ ಸುಳ್ಳು ಹೇಳುತ್ತಿದ್ದಾಳೆ. ಇದೇನು ಮೊದಲಲ್ಲ. ಮನೆಯಲ್ಲಿ ಕೂತೂ ಕೂತು ನಿನ್ನ ಬುದ್ದಿ ಮಣ್ಣು ತಿಂತಿದೆ, ಹೆಂಗಸರಿಗೆ ಲೋಕಜ್ಞಾನ ಇಲ್ಲ ಎಂದರೆ ನಿನ್ನಂತೆಯೇ ಆಗೋದು ಎನ್ನುತ್ತಾನೆ.

ಮಗಳ ಬಗ್ಗೆಯೇ ತಾಂಡವ್‌ ಸುಳ್ಳು ಹೇಳುವುದು ತನ್ನ ಬಗ್ಗೆ ಕೀಳಾಗಿ ಮಾತನಾಡುವುದನ್ನು ನೋಡಿ ಭಾಗ್ಯಾ ಕೋಪಗೊಳ್ಳುತ್ತಾಳೆ. ನಿಮಗೆ ಯಾವ ರೀತಿ ಲೋಕಜ್ಞಾನ ಬೇಕು? ನನ್ನ ಗಂಡ ಎಷ್ಟು ಚೆನ್ನಾಗಿ ಸುಳ್ಳು ಹೇಳುತ್ತಾರೆ, ಎಷ್ಟು ಚೆನ್ನಾಗಿ ನಾಟಕ ಮಾಡುತ್ತಾರೆ ಎಂಬುದರ ಬಗ್ಗೆ ಲೋಕಜ್ಞಾನ ಬೇಕಾ? ಸರಿ ನನಗೆಷ್ಟು ಲೋಕಜ್ಞಾನ ಇದೆ ತೋರಿಸುತ್ತೇನೆ ಎಂದು ಲಾಕರ್‌ ಕೀ ಕೇಳುತ್ತಾಳೆ. ಅನುಮಾನದಿಂದಲೇ ತಾಂಡವ್‌ ಕೀ ಕೊಡುತ್ತಾನೆ. ಆದರೆ ಲಾಕರ್‌ನಿಂದ ಭಾಗ್ಯಾ ಹ್ಯಾಂಡಿಕಾಮ್‌ ನೋಡಿ ಶಾಕ್‌ ಆಗುತ್ತಾನೆ. ಆದರೆ ಮೊಮೊರಿ ಕಾರ್ಡ್‌ ತನ್ನ ಬಳಿ ಇರುವುದನ್ನು ನೆನಪಿಸಿಕೊಂಡು ಸಮಾಧಾನ ಮಾಡಿಕೊಳ್ಳುತ್ತಾನೆ. ತಾಂಡವ್‌ ಏನು ಯೋಚನೆ ಮಾಡುತ್ತಿರಬಹುದು ಎಂದು ಭಾಗ್ಯಾಗೆ ಅರ್ಥವಾಗುತ್ತದೆ.

ಹ್ಯಾಂಡಿಕಾಮ್‌ ನೋಡಿ ಗಾಬರಿಯಾದ ತಾಂಡವ್‌

ಮೊಮೊರಿ ಕಾರ್ಡ್‌ ನನ್ನ ಬಳಿಯೇ ಇದೆ ಅಂತ ಸಮಾಧಾನ ಮಾಡಿಕೊಳ್ಳುತ್ತಿದ್ದೀರಲ್ಲ, ಆದರೆ ಅದು ನನ್ನ ಬಳಿಯೇ ಇದೆ. ನೀವು ಮಾಡಿದ ಕೆಲಸವನ್ನು ನಿಮಗೆ ತೋರಿಸುತ್ತೇನೆ ನೋಡಿ ಎಂದು ಅಕ್ಷರಾಭ್ಯಾಸದ ದಿನ ತಾಂಡವ್‌, ಸಾಂಬಾರ್‌ಗೆ ಉಪ್ಪು ಹಾಕಿದ ವಿಡಿಯೋ ತೋರಿಸುತ್ತಾಳೆ. ತನ್ನ ಗುಟ್ಟು ರಟ್ಟಾದ ಬಗ್ಗೆ ತಾಂಡವ್‌ ಗಾಬರಿ ಆಗುತ್ತಾನೆ. ಇದೊಂದೇ ಅಲ್ಲ, ಆ ದಿನ ನೀವು ನನಗೆ ಸೀರೆ ಒಡವೆ ಕೊಡಿಸುತ್ತೇನೆಂದು ನನ್ನ ಬ್ಯಾಗಿನಲ್ಲಿ ಒಡವೆ ಬೀಳಿಸಿದ್ದು, ಪಕ್ಕದ ಮನೆ ಕಾಂಪೌಂಡ್‌ಗೆ ಬಾಟಲ್‌ ಹೊಡೆದದ್ದು, ತಿಪ್ಪೆಯಲ್ಲಿ ಬಿದ್ದಿದ್ದ ಹೂವು ತಂದುಕೊಟ್ಟಿದ್ದು ಎಲ್ಲವೂ ನನಗೆ ಗೊತ್ತು. ಇಷ್ಟೆಲ್ಲಾ ಗೊತ್ತಿದ್ದರೂ ಮಕ್ಕಳ, ಮನೆಯವರ ಮುಂದೆ ನೀವು ಕೆಟ್ಟವರಾಗಬಾರದು ಎಂದು ಸುಮ್ಮನಿದ್ದೆ ಎಂದು ಭಾಗ್ಯಾ ಹೇಳುತ್ತಾಳೆ.

ಭಾಗ್ಯಾ ರೌದ್ರಾವತಾರ ನೋಡಿ ತಾಂಡವ್‌ ಗಾಬರಿ ಆಗುತ್ತಾನೆ. ಇನ್ನಾದರೂ ತಾಂಡವ್‌ ತನ್ನ ತಪ್ಪನ್ನು ಅರಿತು ಭಾಗ್ಯಾ ಜೊತೆ ಚೆನ್ನಾಗಿರುತ್ತಾನಾ? ಅಥವಾ ಮೊದಲಿನಂತೆ ಭಾಗ್ಯಾಳನ್ನು ದ್ವೇಷಿಸುತ್ತಾನಾ ಎಂಬುದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

Whats_app_banner